ಇಷ್ಟಕ್ಕೂ ಈ ಎಂಎಲ್ಸಿ ಹುದ್ದೆಯಲ್ಲಿರೋದಾದ್ರು ಏನು? ಎಲೆಕ್ಷನ್ ಗೆ ಕೋಟಿ, ಕೋಟಿ ಸುರಿಯೋದಾದ್ರೂ ಏಕೆ..?

 

author-thyagarajಒಂದು ಕಾಲ ಇತ್ತು. ಚುನಾವಣೆ ಅಂದರೆ ಜನ ಸಂಭ್ರಮಿಸೋರು. ಅದು ತಮಗೇ ಗೌರವ ತರುವ ಪ್ರಕ್ರಿಯೆ, ಚುನಾವಣೆಗೆ ನಿಲ್ಲೋರು ಪೂಜನೀಯರು ಅಂತ. ಯಾರೋ ಮೇಷ್ಟು, ತಿಳಿದವರು, ಕಲಿತವರು, ಸೇವಾ ಮನೋಭಾವದವರನ್ನು ಜನರೇ ಗುರುತಿಸಿ, ಬಲವಂತ ಮಾಡಿ ನಿಲ್ಲಿಸಿ, ತಮ್ಮ ಕೈಯಿಂದಲೇ ದುಡ್ಡು ಹಾಕಿ, ಅವರಿಗೆ ಹೊಸ ಬಟ್ಟೆ ಹೊಲಿಸಿ, ಊರೂರ ತುಂಬ ಎತ್ತಿನ ಗಾಡೀಲೋ, ಜಟಕಾ ಬಂಡೀಲೋ ಮೆರವಣಿಗೆ ಮಾಡಿಸಿ, ಭಾಷಣ ಕುಟ್ಟಿಸಿ, ಚಪ್ಪಾಳೆ ತಟ್ಟಿಸಿ, ಮತದಾನದ ದಿನ ಗುಡೀಲಿ ಪೂಜೆ ಮಾಡಿಸಿ, ಜನರನ್ನು ಕರ್ಕೊಂಡ್ ಹೋಗಿ ವೋಟು ಹಾಕಿಸಿ, ತಮ್ಮವರು ಗೆದ್ದಾಗ ಹಿರಿಹಿರಿ ಹಿಗ್ಗಿ, ಸೋತಾಗ ಬೆನ್ನು ನೇವರಿಸಿ ಸಮಾಧಾನ ಹೇಳಿ – ಹೀಗೆ ಇಡೀ ಪ್ರಕ್ರಿಯೆಯಲ್ಲಿ ತಮ್ಮನ್ನು ಪರಿಪೂರ್ಣವಾಗಿ ಅರ್ಪಿಸಿಕೊಂಡು ಬಿಡುತ್ತಿದ್ದರು. ಅಲ್ಲಿ ಭಾವನೆಗಳು ಪುಟಿಯುತ್ತಿದ್ದವು. ಅವರತನ ಮೆರೆಯುತ್ತಿದ್ದವು.

ಆದರೆ ಈಗ..?!

ನಿಜ, ಈಗಲೂ ಚುನಾವಣೆ ಅಂದರೆ ಜನ ಸಂಭ್ರಮಿಸ್ತಾರೆ. ಅದು ತಮಗೆ ‘ಗೌರವಧನ’ ತರುವ ಪ್ರಕ್ರಿಯೆ, ಚುನಾವಣೆಗೆ ನಿಲ್ಲೋರು ಕುಬೇರ ಸಮಾನರು ಅಂತ. ಯಾರೋ ದುಡ್ಡಿರುವ ಪುಣ್ಯಾತ್ಮರು, ರಿಯಲ್ ಎಸ್ಟೇಟ್ ನಲ್ಲೋ, ಸಿನಿಮಾದಲ್ಲೋ, ಬಿಸಿನೆಸ್ ನಲ್ಲೋ ಕಾಸು ಮಾಡಿರುವವರು, ಇನ್ನೂ ಕಾಸು ಮಾಡಬೇಕೆಂದಿರುವವರು ಚುನಾವಣೆಗೆ ನಿಲ್ಲುತ್ತಾರೆ. ಕೊಡ್ತಾರೆ ಬಿಡು ಅಂತಾರೆ. ಚುನಾವಣೆಗೆ ನಿಲ್ಲೋರು ಅಷ್ಟೇ. ಪಕ್ಷಕ್ಕಾಗಿ ಹತ್ತಾರು ವರ್ಷಗಳಿಂದ ದುಡಿದ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿ, ಟಿಕೆಟ್ ಗಿಟ್ಟಿಸಬೇಕಲ್ಲ. ಪಕ್ಷದ ಮುಖಂಡರಿಗೇ ಒಂದಷ್ಟು ‘ದಾನಧರ್ಮ’ ಮಾಡುತ್ತಾರೆ. ವೋಟು ಮಾಡುವವರನ್ನು ಥೇಟು ಮದುಮಕ್ಕಳಂತೆ ಕಾಣುತ್ತಾರೆ. ವಾಚು, ಚಿನ್ನದ ಚೈನು, ಓಲೆ, ಉಂಗುರ, ಬಳೆ, ಬೈಕು ಮೇಲೋಂದಿಷ್ಟು ವರದಕ್ಷಿಣೆಯೋ, ವಧುದಕ್ಷಿಣೆಯೋ ಅಂತ ಹಣ. ಮದುವೇಲಿ ಈ ಸಿಟಿ ಮಕ್ಕಳು ಮತ್ತು ಹಳ್ಳಿ ಮಕ್ಕಳ ನಡುವೆ ಇರುವ ‘ಪ್ರಮಾಣ ವ್ಯತ್ಯಾಸ’ ಇಲ್ಲೂ ಇರುತ್ತದೆ. ಕೊಡು-ಕೊಳ್ಳುವ ಇಬ್ಬರಿಗೂ ಈ ವಿಚಾರದಲ್ಲಿ ತಗಾದೆ ಇಲ್ಲ. ದೇವರ ಹೆಸರಲ್ಲಿ ಆಣೆ-ಪ್ರಮಾಣ ನಡೆಯುತ್ತದೆ. ವೋಟು ಮೋಸ ಮಾಡುವುದಿಲ್ಲ ಅಂತ. ಇಲ್ಲಿ ಯಾವುದೇ ಭಾವನೆಗಳಿಲ್ಲ, ಸಂಬಂಧಗಳಿಗೆ ಬೆಲೆ ಇಲ್ಲ, ಮರ್ಯಾದೆ ಅಂತೂ ಮೊದಲೇ ಇಲ್ಲ. ಇಲ್ಲಿ ಕುಣಿಯುವುದು, ಮೆರೆಯುವುದು ಬರೀ ದುಡ್ಡೊಂದೇ!

ಮತದಾರರು ಬದಲಾದರೋ, ಜನನಾಯಕರು ಅವರನ್ನು ಬದಲು ಮಾಡಿದರೋ ಅನ್ನೋದು ಚರ್ಚೆಯ ವ್ಯಾಪ್ತಿಯನ್ನೇ ನುಂಗಿರುವ ಪ್ರಶ್ನೆ. ಆದರೆ ಇಬ್ಬರಿಗೂ ಗೌರವ ಇಲ್ಲ ಅನ್ನುವುದನ್ನು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದಿರುವ ಚುನಾವಣೆ ಶೈಲಿ ಮತ್ತೆ ರುಜುವಾತುಪಡಿಸಿದೆ. ಇಲ್ಲಿ ವೋಟು ಹಾಕಿದವರು ಜನ ಸಾಮಾನ್ಯರಲ್ಲ. ಬದಲಿಗೆ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಗಳು. ಬನ್ನೂರು ಕುರಿಗಳ ಹರಾಜು ಸ್ವರೂಪದಲ್ಲಿ ಇವರು ಬಿಕರಿ ಆಗಿದ್ದಾರೆ. ಇವರನ್ನು ಹರಾಜು ಕೂಗಿದವರಲ್ಲಿಯೂ ಪೈಪೋಟಿ ಇತ್ತು. ಈಗ ವಿಧಾನ ಪರಿಷತ್ ಪ್ರವೇಶಿಸುವವರೇ higher bidder  ಎಂದೆನಿಸುತ್ತಾರೆ. ಚಿಂತಕರ ಚಾವಡಿ, ಬುದ್ಧಿಜೀವಿಗಳ ಮನೆ ಎಂದೆನಿಸಿದ್ದ ಪರಿಷತ್ ಪರಿಸ್ಥಿತಿ ಏನಾಗುತ್ತಿದೆ? ಅಲ್ಲಿಗೆ ಎಂತೆಂಥವರು ಬರುತ್ತಿದ್ದಾರೆ ಎಂಬುದಕ್ಕೆ ಇದೊಂದು ಪರಿವಿಡಿ ಅಷ್ಟೇ.

ಹೌದು, ಹಣವಂತರಿಗೆ ಪ್ರತಿಷ್ಠೆ ಬೇಕಿದೆ. ಆ ಪ್ರತಿಷ್ಠೆ ಕೂಡ ಮತ್ತಷ್ಟು ದುಡ್ಡು ಮಾಡುವ, ಸಮಾಜದಲ್ಲಿ ಗೌರವ ಕಸಿಯುವ ಹುನ್ನಾರದಿಂದ ಕೂಡಿದೆ. ಹೀಗಾಗಿ ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ನಿಲ್ಲಲಾಗದವರು, ಗೆಲ್ಲಲಾಗದವರು ರಾಜ್ಯಸಭೆ, ವಿಧಾನ ಪರಿಷತ್ ಪ್ರವೇಶಿಸಲು ಹಣವನ್ನೇ ಮೆಟ್ಟಿಲು ಮಾಡಿಕೊಂಡಿದ್ದಾರೆ. ರಿಯಲ್ ಎಸ್ಟೇಟ್ ಕುಳಗಳು, ಉದ್ಯಮಿಗಳು, ಚಿತ್ರೋದ್ಯಮಿಗಳ ಹಣದ ಥೈಲಿ ಮುಂದೆ ಶಾಸನಸಭೆಗಳ ಗೌರವ-ಘನತೆಗಳು ನಜ್ಜುಗುಜ್ಜಾಗುತ್ತಿವೆ. ಈಗಿನ ಚುನಾವಣೆಯಲ್ಲಿ ಗಟ್ಟಿ ಅಭ್ಯರ್ಥಿಗಳು ಸುಮಾರು ಹತ್ತು ಕೋಟಿಯಿಂದ ಮೂವತ್ತು ಕೋಟಿ ರುಪಾಯಿವರೆಗೂ ಖರ್ಚು ಮಾಡಿದ್ದಾರೆ. ಹಾಗಾದರೆ ಇಷ್ಟೆಲ್ಲ ಖರ್ಚು ಮಾಡುವ ದರ್ದಾದರೂ ಏನು? ಯಾಕಾಗಿ ಇಷ್ಟೆಲ್ಲ ಖರ್ಚು ಮಾಡಬೇಕು? ಇದರಿಂದ ಅವರಿಗೆ ಏನು ಪ್ರಯೋಜನ? ಈ ಸ್ಥಾನದಲ್ಲಿ ಅಂಥಾದ್ದೇನಿದೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ.

ಖಂಡಿತಾ.., ಪ್ರಯೋಜನ ಇಲ್ಲದೇ ಯಾರೂ ಅಷ್ಟೊಂದು ದುಡ್ಡು ಸುರಿಯುವುದಿಲ್ಲ. ಅದು ಬೆಂಗಳೂರು ನಗರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ದಯಾನಂದರೆಡ್ಡಿ ಇರಲಿ, ಅಧಿಕೃತ ಅಭ್ಯರ್ಥಿ ನಾರಾಯಣಸ್ವಾಮಿ ಇರಲಿ, ಬೆಂಗಳೂರಿಂದ ಚಿತ್ರದುರ್ಗಕ್ಕೆ ಕಣವಲಸೆ ಹೋಗಿರುವ ರಘು ಆಚಾರ್ ಇರಲಿ, ಬೆಂಗಳೂರಿನ ಗ್ರಾಮಾಂತರದ ಇ. ಕೃಷ್ಣಪ್ಪ ಇರಲಿ, ಅವರ ಎದಿರು ನಿಂತಿರುವ ಎಸ್. ರವಿ ಇರಲಿ, ಬಳ್ಳಾರಿಯ ಕೊಂಡಯ್ಯ, ಕೋಲಾರದ ಮನೋಹರ್, ತುಮಕೂರಿನ ಕಾಂತರಾಜು, ಮೈಸೂರಿನ ಸಂದೇಶ್ ನಾಗರಾಜ್ – ಹೀಗೆ ಬಹುತೇಕ ಮಂದಿ ರಿಯಲ್ ಎಸ್ಟೇಟ್ ಹಿನ್ನೆಲೆಯವರು. ಭೂಪರಿವರ್ತನೆ, ಡಿನೋಟಿಫಿಕೇಷನ್, ಲೇಔಟ್, ಅಪಾರ್ಟ್ ಮೆಂಟ್, ವಾಣಿಜ್ಯ ಮಹಲುಗಳ ನಿರ್ಮಾಣಕ್ಕೆ ನಾನಾ ರೀತಿಯ ಅನುಮತಿ – ರಿಯಲ್ ಎಸ್ಟೇಟ್ ವ್ಯವಹಾರದಡಿ ಬರುವ ಇವೆಲ್ಲವೂ ಕೋಟ್ಯಂತರ ರುಪಾಯಿಗಳ ಲಂಚ-ರುಷುವತ್ತು ಬಂಡವಾಳ ಬೇಡುತ್ತವೆ. ಸಂಬಂಧಪಟ್ಟ ಖಾತೆಯ ಮಂತ್ರಿಗೋ, ಏರಿಯಾ ಶಾಸಕರಿಗೋ ‘ಸೇವಾರ್ಥ’ ಮಾಡಿಯೇ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಕೊಡುವುದರ ಜತೆಗೆ ಸಲಾಮು ಹೊಡೆಯಬೇಕು. ಕೊಡದವರನ್ನು ಕೊಡುವಂತೆ, ಕೊಡುವವರನ್ನು ಮತ್ತಷ್ಟು ಕೊಡುವಂತೆ ಮಾಡುವ ಈ ‘ಅಧಿಕಾರ’ಕ್ಕೆ ಎಲ್ಲೆ ಎಂಬುದೇ ಇಲ್ಲ. ತಮ್ಮ ವ್ಯಾಪಾರ ವಹಿವಾಟಿನ ಅನುಕೂಲಕ್ಕೆ ಖರ್ಚಾಗುವ ಹಣದ ಪ್ರಮಾಣ ಹಾಗೂ ಮೇಲ್ಮನೆ ಚುನಾವಣೆಗೆ ಖರ್ಚು ಮಾಡಬೇಕಿರುವ ಪ್ರಮಾಣ ಎರಡನ್ನೂ ತುಲನೆ ಮಾಡಿ ನೋಡಿರುವ ರಿಯಲ್ ಎಸ್ಟೇಟ್ ಮತ್ತಿತರ ಉದ್ಯಮಿಗಳಿಗೆ ಎರಡನೆಯದರ ಪ್ರಮಾಣವೇ ಕಡಿಮೆ ಎಂದು ಮನವರಿಕೆ ಆಗಿದೆ. ಹೀಗಾಗಿ ಟಿಕೆಟ್ ಗಿಟ್ಟಿಸಲು ನಾಯಕರಿಗೆ, ವೋಟು ಗಿಟ್ಟಿಸಲು ಮತದಾರರಿಗೆ ಕೋಟಿ, ಕೋಟಿ ಸುರಿದಿದ್ದಾರೆ. ಗೆದ್ದು ಬಂದರೆ ಈಗ ಹಾಕಿರುವ ಬಂಡವಾಳ ಎಲ್ಲೂ ಹೋಗುವುದಿಲ್ಲ. ಬಡ್ಡಿ, ಸುಸ್ತಿಬಡ್ಡಿ, ಚಕ್ರಬಡ್ಡಿ ಸಮೇತ ಹರಿದು ಬರುತ್ತದೆ ಎಂಬ ಅದಮ್ಯ ವಿಶ್ವಾಸ ಅವರದು.

ಇನ್ನೂ ಕೆಲವರಿದ್ದಾರೆ. ಅವರು ಗಣಿಯಲ್ಲೋ, ರಿಯಲ್ ಎಸ್ಟೇಟ್ ನಲ್ಲೋ, ಉದ್ಯಮದಲ್ಲೋ ಈಗಾಗಲೇ ದುಡ್ಡು ಮಾಡಿ ಆಗಿದೆ. ಆದರೆ ಅವರ ಬಳಿ ಅಧಿಕಾರ ಇಲ್ಲ. ಅವರಿಗೆ ಅಧಿಕಾರ ಎಂಬುದು ಪ್ರತಿಷ್ಠೆಯ ವಿಚಾರ, ತೆವಲಿನ ವಿಚಾರ. ಅವರಿಗೆ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆ ಚುನಾವಣೆ ಸುಲಭದ್ದು ಎಂದು ಕಂಡಿದೆ. ಇಲ್ಲಿ ವಿಧಾನಸಭೆ ಚುನಾವಣೆಯಂತೆ ಲಕ್ಷಾಂತರ ಮತದಾರರನ್ನು ನಿಭಾಯಿಸುವಂತಿಲ್ಲ. ಜತೆಗೆ ಏಜೆಂಟ್ ಗಳ ಹಾವಳಿ ಕಡಿಮೆ. ಇಲ್ಲಿ ಮತದಾರರ ಸಂಖ್ಯೆ ಸೀಮಿತ. ನೇರವಾಗಿಯೇ ವ್ಯವಹರಿಸಬಹುದು. ಒತ್ತಡ, ಶ್ರಮ ಕಡಿಮೆ. ದುಡ್ಡೊಂದೇ ಎಲ್ಲ. ಹೀಗಾಗಿ ಅಧಿಕಾರ ಪ್ರತಿಷ್ಠೆ ಹಪಾಹಪಿಯವರೂ ಮುಗಿಬಿದ್ದಿದ್ದಾರೆ.

ಇದಲ್ಲದೇ ಇನ್ನೂ ಒಂದು ವರ್ಗ ಇದೆ. ಅವರಿಗೆ ಕುಟುಂಬ ರಾಜಕೀಯದ ಅಮಲು. ತಮ್ಮ ವಂಶಸ್ಥರಿಗೆ ಅಧಿಕಾರದ ದೋಣಿ ಹತ್ತಿಸುವ ಹಪಾಹಪಿ. ತನ್ನ ಕುಟುಂಬದ ಮೇಲಿನ ಮಮಕಾರವೋ, ಮತ್ತೊಂದು ಕುಟುಂಬದ ಮೇಲಿನ ಮಾತ್ಸರ್ಯವೋ ಏನೋ, ಒಟ್ಟಿನಲ್ಲಿ ಕುಲಸುಳಿಗಳನ್ನು ಕಣಕ್ಕಿಳಿಸುವ ಚಳವಳಿ. ಮಾಜಿ ಮುಖ್ಯಮಂತ್ರಿ, ವಿಧಾನಸಬೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟಿ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಪುತ್ರ ವಿಜಯ್ ಸಿಂಗ್, ನೈಸ್ ರಸ್ತೆ ರೈತರ ಜಮೀನು ಕಬಳಿಕೆ ಕುಖ್ಯಾತಿಯ ಬೀದರ್ ಶಾಸಕ ಅಶೋಕ್ ಖೇಣಿ ಸಹೋದರ ಸಂಜಯ್ ಖೇಣಿ, ಡಿ.ಕೆ. ಶಿವಕುಮಾರ್ ಸೋದರ ಸಂಬಂಧಿ ಎಸ್. ರವಿ ಇವರೆಲ್ಲ ಸ್ಪರ್ಧಿಸಿದ್ದು ಈ ಮಮಕಾರದ ಸೆಲೆಯಲ್ಲೇ. ಅಧಿಕಾರ ಅನ್ಯರ ಪಾಲಾಗಬಾರದು, ತಮ್ಮ ಕುಟುಂಬದ ನೆರಳಲ್ಲೇ ನರಳಬೇಕು ಎಂಬ ವಾಂಛೆ ಚುನಾವಣೆ ಹಣೆಬರಹವನ್ನೇ ಬದಲಿಸಿದೆ.

ಇದು ಅಭ್ಯರ್ಥಿಗಳ ಮಾತಾಯಿತು. ಅದಕ್ಕೂ ಮಿಗಿಲಾಗಿ ಅಚ್ಚರಿ ತಂದದ್ದು ಚುನಾವಣೆ ಆಯೋಗ ನಡೆದುಕೊಂಡ ರೀತಿ. ಮೇಲ್ಮನೆ ಚುನಾವಣೆ ಖರ್ಚು-ವೆಚ್ಚಗಳ ಬಗ್ಗೆ ನೀತಿ-ನಿರೂಪಣೆ ಇಲ್ಲ ಎಂಬುದನ್ನೇ ನೆಪ ಮಾಡಿಕೊಂಡು ಕೈಕಟ್ಟಿ ಕುಳಿತ ಪರಿಣಾಮವಾಗಿ ಅದರ ಕಣ್ಣೆದುರಿಗೇ ಅಕ್ರಮಗಳು ಢಾಳಾಗಿ ನಡೆದವು. ಆಯೋಗವು ನಿಯಮಗಳ ವಿಚಾರ ಪಕ್ಕಕ್ಕಿಟ್ಟು, ಸಾಮಾಜಿಕ ಬದ್ಧತೆ ಪ್ರದರ್ಶಿಸಿ, ಒಂದೆರಡು ದಾಳಿ ಮಾಡಿದ್ದರೂ ಅಕ್ರಮಗಳು ಈ ಪಾಟಿ ನಡೆಯುತ್ತಿರಲಿಲ್ಲ. ಚುನಾವಣೆ ಆಯೋಗದ ಕಾರ್ಯವೈಖರಿ ಸುಧಾರಣೆಗೆ ಸಾಕಷ್ಟು ಅವಕಾಶವಿದೆ ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾಬೀತು ಮಾಡಿದೆ.

ಇದೆಲ್ಲ ಅತ್ಲಾಗಿರಲಿ. ಇಂತಿಂಥ ಮಹಾನುಭಾವರ ಪ್ರವೇಶದಿಂದ ಮೇಲ್ಮನೆ ಪರಿಸ್ಥಿತಿ ಏನಾಗಿದೆ? ಅದರ ಗೌರವ-ಘನತೆ ಎಲ್ಲಿಗೆ ಬಂದು ನಿಂತಿದೆ, ಕಲಾಪದ ಗುಣಮಟ್ಟ ಎಲ್ಲಿಗೆ ಹೋಗಿದೆ ಎಂಬುದರ ಪರಾಮರ್ಶೆ ನೋವು ತರುತ್ತದೆ. ಅನ್ಯ ಉದ್ದೇಶದಿಂದ ಗೆದ್ದು ಬಂದವರ ಹಾಜರು ಆರಂಭದಲ್ಲಷ್ಟೇ ಇರುತ್ತದೆ. ನಂತರ ಅವರ ಮುಖದರ್ಶನ ಬರಿಯ ಹಾಜರಾತಿ ಪುಸ್ತಕಕ್ಕಷ್ಟೇ ಸೀಮಿತ. ಇನ್ನು ಚರ್ಚೆ ಎಂಬುದು ಅವರಿಗೆ ಬಲು ದುಬಾರಿ. ಒಂದು ಸರಿಯಾಗಿ ಸದನಕ್ಕೆ ಹಾಜರಾಗುವುದಿಲ್ಲ. ಇನ್ನೊಂದು ಹಾಜರಾದರೂ ಕಲಾಪದಲ್ಲಿ ಭಾಗವಹಿಸುವುದಿಲ್ಲ. ಏಕೆಂದರೆ ವಿಷಯ, ವಿಧೇಯಕ, ಅದರ ಉದ್ದೇಶ, ಆಳ-ಅಗಲ ಗೊತ್ತಿರಬೇಕಲ್ಲ. ಅವರ ಆಸಕ್ತಿಯ ವಿಚಾರಗಳೇ ಬೇರೇ. ರಿಯಲ್ ಎಸ್ಟೇಟ್, ವ್ಯಾಪಾರ-ವಹಿವಾಟು ವಗೈರೆ, ವಗೈರೆ. ಇಂಥವರಿಂದ ಗುಣಮಟ್ಟದ ಕಲಾಪ ನಿರೀಕ್ಷೆ ಹೇಗೆ ಸಾಧ್ಯ?

ಮೊನ್ನೆ ಪಂಚಾಯಿತಿರಾಜ್ ತಿದ್ದುಪಡಿ ವಿಧೇಯಕ ಮಂಡನೆಯಾಯಿತು. ಮಂಡನೆ ಆದಷ್ಟೇ ಬೇಗ ಅಂಗೀಕಾರವೂ ಆಯಿತು. ಪಂಚಾಯಿತಿಗಳಿಗೆ ಹೆಚ್ಚಿನ ಆರ್ಥಿಕ ಬಲ ಕೊಡುವುದರ ಜತೆಗೆ ಸದಸ್ಯರ ಅಧಿಕಾರಕ್ಕೆ ಒಂದಷ್ಟು ನಿಯಂತ್ರಣ ಹಾಕುವ ಬಹು ಮುಖ್ಯ ವಿಧೇಯಕ ಇದು. ಆದರೆ ಯಾವುದೇ ಚರ್ಚೆ ಇಲ್ಲದೇ ಅಂಗೀಕಾರವಾಯಿತು. ಚರ್ಚೆಯಲ್ಲಿ ಭಾಗವಿಹಿಸಬೇಕು, ವಿಷಯದ ಗಹನತೆ ಅರ್ಥ ಮಾಡಿಕೊಳ್ಳಬೇಕು, ಒಂದಷ್ಟು ಬದಲಾವಣೆಗೆ ಸಲಹೆ ಕೊಡಬೇಕು ಎಂದು ಯಾರಿಗೂ ಅನ್ನಿಸಲಿಲ್ಲ. ಅದು ಅವರಿಗೆ ಬೇಕಾಗಿಯೂ ಇರಲಿಲ್ಲ. ಮೇಲ್ಮನೆ ಸ್ಥಿತಿ ಹೇಗಿದೆ ಅನ್ನುವುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕೇ..?

ಲಗೋರಿ : ಕೈ ಚಾಚುವವ ತಲೆ ಎತ್ತುವ ಅಧಿಕಾರ ಕಳೆದುಕೊಂಡಿರುತ್ತಾನೆ.

5 COMMENTS

  1. Well said Tyagaraj. Nijavagiyu namage higella nadeyuttadendu gottiralilla. Ondastu vishaya tilakondahagayitu. So “Kurudu kanchana Kuniyutalitto…………………….

Leave a Reply