ಫೇಸ್ ಬುಕ್ ನ ಫ್ರೀ ಬೇಸಿಕ್ಸ್ ಅನ್ನೋದು ನಿಜಕ್ಕೂ ಪುಕ್ಕಟೆಯಾ? 

 

Srinidhi_Oct_2014

ಟಿ. ಜಿ. ಶ್ರೀನಿಧಿ

ಅಂತರ್ಜಾಲವನ್ನು ಇನ್‌ಫರ್ಮೇಶನ್ ಸೂಪರ್‌ಹೈವೇ ಎಂದು ಕರೆಯುತ್ತಾರಲ್ಲ, ಅದನ್ನು ಒಂದು ರಸ್ತೆಯಾಗಿಯೇ ಕಲ್ಪಿಸಿಕೊಳ್ಳಿ. ಆ ರಸ್ತೆಯಲ್ಲಿ ಎಲ್ಲ ಜಾಲತಾಣ ಹಾಗೂ ಆ್ಯಪ್ ಬಳಕೆದಾರರಿಗೆ ಸಂಬಂಧಪಟ್ಟ ಮಾಹಿತಿಯೂ ಓಡಾಡುತ್ತಿರುತ್ತದೆ. ಕೆಲವರದು ಎಸ್‌ಯುವಿ ಇರಬಹುದು, ಇನ್ನು ಕೆಲವರದು ಕಾರು-ಬೈಕು-ಬಸ್ಸು-ಲಾರಿಗಳಿರಬಹುದು, ಸೈಕಲ್ ಓಡಿಸುವವರೂ ಇರಬಹುದು. ಆದರೆ ರಸ್ತೆ ಮಾತ್ರ ಎಲ್ಲರಿಗೂ ಒಂದೇ. ಟೋಲ್ ಬಂದಾಗ ಟೋಲ್ ಪಾವತಿಸಿ, ಇಲ್ಲದಿದ್ದರೆ ಹಾಗೆಯೇ ಗಾಡಿ ಓಡಿಸುತ್ತಿರಿ.

ಇದ್ದಕ್ಕಿದ್ದ ಹಾಗೆ ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಯೊಂದು ಆ ರಸ್ತೆಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡುಬಿಡುತ್ತದೆ; ತಾನು ತಯಾರಿಸುವ ಕಾರುಗಳಿಗೆ ಮಾತ್ರ ಆ ರಸ್ತೆಯಲ್ಲಿ ಪ್ರವೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಆ ರಸ್ತೆಯ ಮೂಲಕ ಯಾವ ಊರಿಗೆ ಹೋಗಬೇಕು, ದಾರಿಯಲ್ಲಿ ಎಲ್ಲಿ ನಿಲ್ಲಿಸಬೇಕು, ಕಾಫಿ ಎಲ್ಲಿ ಕುಡಿಯಬೇಕು, ಶೌಚಾಲಯಕ್ಕೆ ಎಲ್ಲಿ ಹೋಗಬೇಕು ಎನ್ನುವುದನ್ನೂ ತಾನೇ ನಿರ್ಧರಿಸುತ್ತದೆ. ಹಾಂ, ಇಷ್ಟು ಶರತ್ತುಗಳನ್ನು ಒಪ್ಪಿದರೆ ಸಾಕು, ರಸ್ತೆ ಬಳಸಲು ಟೋಲ್ ಕೊಡುವುದೇನೂ ಬೇಡ ನೋಡಿ!

ಇದೇನೋ ಅಸಂಬದ್ಧವಾಗಿದೆಯಲ್ಲ ಎನಿಸಿದರೆ ಒಂದು ಕ್ಷಣ ಆಚೀಚೆ ನೋಡಿ – ನಿಮ್ಮ ಮನೆಯ ದಿನಪತ್ರಿಕೆಯಲ್ಲಿ, ಟೀವಿ ಕಾರ್ಯಕ್ರಮದ ನಡುವೆ, ಪಕ್ಕದ ಬಸ್ ಸ್ಟಾಪ್ ಫಲಕದಲ್ಲಿ ನಿಮಗೆ ‘ಫ್ರೀ ಬೇಸಿಕ್ಸ್’ನ ಜಾಹೀರಾತು ಕಾಣಸಿಗುತ್ತದೆ. ಇಂತಿಂಥವರು ಈ ಯೋಜನೆಯನ್ನು ಬೆಂಬಲಿಸಿದ್ದಾರೆ ಎನ್ನುವ ಮಾಹಿತಿಯಂತೂ ಫೇಸ್‌ಬುಕ್‌ನಲ್ಲಿ ಕಾಣಿಸುತ್ತಲೇ ಇರುತ್ತದೆ.

ಇಷ್ಟಕ್ಕೂ ಏನಿದು ಫ್ರೀ ಬೇಸಿಕ್ಸ್? ಜಾಹೀರಾತನ್ನು ನೋಡಿದವರೆಲ್ಲರೂ ಕೇಳುತ್ತಿರುವ ಪ್ರಶ್ನೆ ಇದು.

ಈ ಪ್ರಶ್ನೆಗೆ ಉತ್ತರಿಸುವುದು ಸುಲಭದ ಕೆಲಸವೇನೂ ಅಲ್ಲ. ಏಕೆಂದರೆ ಫ್ರೀ ಬೇಸಿಕ್ಸ್ ಎನ್ನುವ ಪರಿಕಲ್ಪನೆಯನ್ನು ಒಬ್ಬೊಬ್ಬರು ಒಂದೊಂದು ರೀತಿ ವಿವರಿಸುತ್ತಿದ್ದಾರೆ – ಈ ಯೋಜನೆಯ ಬೆಂಬಲಿಗರು ಇದನ್ನು ಸಮಾಜ ಸೇವೆ ಎಂದು ಕರೆಯುತ್ತಾರೆ, ವಿರೋಧಿಗಳು ಇದಕ್ಕೆ ಮುಕ್ತ ಅಂತರಜಾಲಕ್ಕೆ ಮಾರಕವೆಂಬ ಹಣೆಪಟ್ಟಿ ಕೊಟ್ಟಿದ್ದಾರೆ.

‘ಫ್ರೀ ಬೇಸಿಕ್ಸ್’ ಎಂಬ ಕಾರ್ಯಕ್ರಮ ಯಾರದು, ಹಾಗೂ ಇದರ ಉದ್ದೇಶ ಏನು ಎನ್ನುವುದನ್ನು ಮೊದಲಿಗೆ ತಿಳಿದುಕೊಳ್ಳೋಣ.

ಈ ಕಾರ್ಯಕ್ರಮದ ಹಿಂದಿರುವುದು ವಿಶ್ವವಿಖ್ಯಾತ ಸಮಾಜಜಾಲ ಫೇಸ್‌ಬುಕ್. ಅಂತರಜಾಲದಿಂದ ದೂರವೇ ಉಳಿದಿರುವ ಬಳಕೆದಾರರನ್ನು ಅಂತರಜಾಲಕ್ಕೆ ಪರಿಚಯಿಸುವುದು ಫ್ರೀ ಬೇಸಿಕ್ಸ್‌ನ ಉದ್ದೇಶ ಎಂದು ಫೇಸ್‌ಬುಕ್ ಹೇಳಿಕೊಳ್ಳುತ್ತಿದೆ. ಈ ಕಾರ್ಯಕ್ರಮ ಅನುಷ್ಠಾನಗೊಂಡಾಗ ನಿರ್ದಿಷ್ಟ ಮೊಬೈಲ್ ಸಂಸ್ಥೆಯ ಬಳಕೆದಾರರಿಗೆ ಆಯ್ದ ಕೆಲವು ಜಾಲತಾಣಗಳನ್ನು  ಉಚಿತವಾಗಿ ಬಳಸುವ ಸೌಲಭ್ಯ ದೊರಕಲಿದೆ. ಅಂದರೆ, ನೀವು ಯಾವ ಡೇಟಾ ಪ್ಯಾಕ್ ಹಾಕಿಸದಿದ್ದರೂ ಕೆಲವು ಜಾಲತಾಣಗಳನ್ನು ಉಚಿತವಾಗಿ ಬಳಸುವುದು ಸಾಧ್ಯವಾಗಲಿದೆ.

ವಿಷಯ ಇಷ್ಟೇ. ಆದರೆ ಫ್ರೀ ಬೇಸಿಕ್ಸ್ ಕುರಿತು ಇಷ್ಟೆಲ್ಲ ಗಲಾಟೆಯಾಗುತ್ತಿರುವುದು ಏಕೆ?

ಮೇಲೆ ಹೇಳಿದ ರಸ್ತೆಯ ಉದಾಹರಣೆಯಲ್ಲಿ ಬಹುರಾಷ್ಟ್ರೀಯ ವಾಹನ ತಯಾರಿಕಾ ಸಂಸ್ಥೆಯಾಗಿ ಫೇಸ್‌ಬುಕ್ ಅನ್ನು ಕಲ್ಪಿಸಿಕೊಳ್ಳಿ.

ಫ್ರೀ ಬೇಸಿಕ್ಸ್ ಮೂಲಕ ಫೇಸ್‌ಬುಕ್ ಹೇಳುತ್ತಿರುವುದು ಅದನ್ನೇ. ಈ ಕಾರ್ಯಕ್ರಮದ ಬಳಕೆದಾರರಿಗೆ ಉಚಿತವಾಗಿ ಸಿಗುವುದು ಫೇಸ್‌ಬುಕ್ ಹಾಗೂ ಈ ಕಾರ್ಯಕ್ರಮವನ್ನು ಬೆಂಬಲಿಸುವ ಇತರ ಕೆಲ ತಾಣಗಳು ಮಾತ್ರ. ಅಂದರೆ, ಫ್ರೀ ಬೇಸಿಕ್ಸ್ ಬಳಕೆದಾರರು ಅಂತರಜಾಲದ ಹೆದ್ದಾರಿಯಲ್ಲೇ ಸಾಗಿದರೂ ಅವರು ಭೇಟಿಕೊಡಬೇಕಾದ ತಾಣಗಳನ್ನು, ಬಳಸಬೇಕಾದ ಸೇವೆಗಳನ್ನು ನಿರ್ಧರಿಸುವುದು ಮಾತ್ರ ಫೇಸ್‌ಬುಕ್!

ಇದು ನೆಟ್ ನ್ಯೂಟ್ರಾಲಿಟಿ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧ. ಫ್ರೀ ಬೇಸಿಕ್ಸ್‌ಗೆ ಪ್ರತಿಭಟನೆ ಎದುರಾಗುತ್ತಿರುವುದಕ್ಕೂ ಇದೇ ಕಾರಣ.

ಅಂತರಜಾಲ ಒಂದು ಬೃಹತ್ ಮಾಧ್ಯಮ. ಈ ಮಾಧ್ಯಮದ ಮೂಲಕ ಬಳಕೆದಾರರರನ್ನು ತಲುಪುವ ಹಕ್ಕು ಎಲ್ಲರಿಗೂ ಇದೆ. ಎಷ್ಟೇ ದೊಡ್ಡ ಸಂಸ್ಥೆಯಾಗಿರಬಹುದು, ಪುಟ್ಟ ಹಳ್ಳಿಯಲ್ಲಿರುವ ವ್ಯಕ್ತಿಯಾಗಿರಬಹುದು – ಅಂತರಜಾಲ ಲೋಕದಲ್ಲಿ ನಿಮ್ಮ ಹಿನ್ನೆಲೆ ಗಣನೆಗೆ ಬರುವುದಿಲ್ಲ. ಸ್ವತಃ ಫೇಸ್‌ಬುಕ್ ಸೇರಿದಂತೆ ಅದೆಷ್ಟೋ ಸಂಸ್ಥೆಗಳು ತೀರಾ ಸಣ್ಣ ಮಟ್ಟದಲ್ಲಿ ಪ್ರಾರಂಭವಾದರೂ ಇದೀಗ ವಿಶ್ವವಿಖ್ಯಾತವಾಗಿ ಬೆಳೆಯಲು ಕಾರಣವಾದದ್ದು ಕೂಡ ಇದೇ ಅಂಶ.

ಅಂತರಜಾಲದ ಮೂಲಕ ಹರಿದಾಡುವ ಸಂಗತಿಗಳಲ್ಲಿ ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಬಳಕೆದಾರನೇ ನಿರ್ಧರಿಸಬೇಕಲ್ಲದೆ ಅದನ್ನು ಬೇರೆ ಯಾರೂ ಅವನ ಮೇಲೆ ಹೇರುವಂತಿಲ್ಲ. ಹಾಗಾಗಿಯೇ, ಅಂತರಜಾಲವನ್ನು ತಟಸ್ಥ (ನ್ಯೂಟ್ರಲ್) ಎಂದು ಕರೆಯುತ್ತಾರೆ. ಈ ತಾಟಸ್ಥ್ಯವೇ (ನ್ಯೂಟ್ರಾಲಿಟಿ) ಜಾಲಲೋಕದ ಯಶಸ್ಸಿಗೆ ಕಾರಣವಾಗಿರುವುದು.

ಆದರೆ ಈಗ, ಫ್ರೀ ಬೇಸಿಕ್ಸ್‌ನಂತಹ ಕಾರ್ಯಕ್ರಮಗಳ ಮೂಲಕ, ಫೇಸ್‌ಬುಕ್‌ನಂತಹ ಸಂಸ್ಥೆಗಳು ಜನರು ಅಂತರಜಾಲದಲ್ಲಿ ಏನನ್ನು ನೋಡಬೇಕು ಎಂದು ನಿರ್ಧರಿಸಲು ಹೊರಟಿವೆ. ತನ್ನ ಜಾಲತಾಣಕ್ಕೆ ಇನ್ನಷ್ಟು ಬಳಕೆದಾರರನ್ನು ಸಂಪಾದಿಸಿಕೊಳ್ಳುವ ಉದ್ದೇಶಕ್ಕೆ ಈ ಫ್ರೀ ಬೇಸಿಕ್ಸ್ ಕಾರ್ಯಕ್ರಮ ಸಮಾಜಸೇವೆಯ ಮುಖವಾಡವನ್ನೂ ತೊಡಿಸಿಬಿಟ್ಟಿದೆ. ಗಮನಿಸಿ: ಭಾರತದಲ್ಲಿನ ಅಂತರಜಾಲ ಬಳಕೆದಾರರ ಸಂಖ್ಯೆ 2014 ರಲ್ಲಿ ಶೇ.32 ರಷ್ಟು, 2015ರ ಮೊದಲ ಆರು ತಿಂಗಳುಗಳಲ್ಲಿ ಶೇ. 17ರಷ್ಟು ಏರಿಕೆಯಾಗಿದೆ (http://goo.gl/5xzh2M), ಯಾವ ಫ್ರೀ ಬೇಸಿಕ್ಸ್ ನೆರವೂ ಇಲ್ಲದೆ!

ಇದೇ ಫೇಸ್‌ಬುಕ್ ಈ ಹಿಂದೆ ಪರಿಚಯಿಸಿದ್ದ ‘ಇಂಟರ್‌ನೆಟ್.ಆರ್ಗ್’, ಏರ್‌ಟೆಲ್ ಸಂಸ್ಥೆ ಪರಿಚಯಿಸಲು ಹೊರಟಿದ್ದ ‘ಏರ್‌ಟೆಲ್ ಜೀರೋ’, ಇಂದಿನ ‘ಫ್ರೀ ಬೇಸಿಕ್ಸ್’ – ಇವೆಲ್ಲವೂ ಅಂತರಜಾಲದ ಮೂಲ ಪರಿಕಲ್ಪನೆಗೇ ಧಕ್ಕೆತರಲು ಹೊರಟಿವೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಅಂತರಜಾಲಕ್ಕೆ ಹೆಚ್ಚಿನ ಬಳಕೆದಾರರನ್ನು ಪರಿಚಯಿಸುವುದು ಒಳ್ಳೆಯ ಉದ್ದೇಶವೇ ಆದರೂ ಆ ಬಳಕೆದಾರರು ಅಂತರಜಾಲವನ್ನು ಹೇಗೆ ಬಳಸಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಫೇಸ್‌ಬುಕ್ ಬೇಕಾದರೆ ಉಚಿತವಾಗಿ ಬಳಸಿ, ಆದರೆ ಇತರ ತಾಣಗಳಿಗೆ ದುಡ್ಡುಕೊಡಿ ಎನ್ನುವ ಅಧಿಕಾರವಂತೂ ಯಾರಿಗೂ ಯಾವತ್ತಿಗೂ ಇರಬಾರದು.

ಅಷ್ಟೇ ಅಲ್ಲ, ಫ್ರೀ ಬೇಸಿಕ್ಸ್ ಮೂಲಕ ಒಂದಷ್ಟು ಜನ ಉಚಿತವಾಗಿ ಫೇಸ್‌ಬುಕ್ ನೋಡಲು ಹಣ ಖರ್ಚಾಗುತ್ತದಲ್ಲ, ಆ ಖರ್ಚನ್ನು ತಾನು ಕೊಡುವುದಿಲ್ಲ ಎಂದು ಫೇಸ್‌ಬುಕ್ ಘೋಷಿಸಿಕೊಂಡಿದೆ. ಅದನ್ನು ಮೊಬೈಲ್ ಸಂಸ್ಥೆಗಳೇ ವಹಿಸಿಕೊಳ್ಳುತ್ತವಂತೆ. ಈ ಖರ್ಚನ್ನು ಅವು ಹಣ ಪಾವತಿಸುವ ಬಳಕೆದಾರರ ಮೇಲೆ ಹೇರುವುದಿಲ್ಲ ಎಂದು ಏನು ಗ್ಯಾರಂಟಿ?

ಫ್ರೀ ಬೇಸಿಕ್ಸ್ ಬಳಕೆದಾರರ ಮಾಹಿತಿಯನ್ನು ಮುಂದೊಂದು ದಿನ ಫೇಸ್‌ಬುಕ್ ಅಥವಾ ಬೇರೊಂದು ಸಂಸ್ಥೆ ತನ್ನ ಲಾಭಕ್ಕೆ ಬಳಸಿಕೊಳ್ಳುವುದಿಲ್ಲ ಎಂದು ನಂಬುವುದು ಹೇಗೆ? “ಯಾವುದೇ ಲಾಭವಿಲ್ಲದ” ಯೋಜನೆಯ ಜಾಹೀರಾತಿಗೆ ಈ ಪ್ರಮಾಣದಲ್ಲಿ ಹಣ ಸುರಿಯುತ್ತಿರುವುದನ್ನು ನೀವು ಈ ಹಿಂದೆ ಎಲ್ಲಾದರೂ ನೋಡಿದ್ದೀರಾ?

ಅಂದಹಾಗೆ ಫ್ರೀ ಬೇಸಿಕ್ಸ್ ವಿರೋಧವೆಲ್ಲ ಅಂತರಜಾಲದಲ್ಲಿ ಸಕ್ರಿಯರಾಗಿರುವವರ ಕೆಲಸವಷ್ಟೇ ಎಂದೇನೂ ತಿಳಿಯಬೇಡಿ. ಭಾರತದಲ್ಲಿ ಫ್ರೀ ಬೇಸಿಕ್ಸ್ ಯೋಜನೆಯನ್ನು ಪರಿಚಯಿಸಲು ಹೊರಟಿರುವ ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅನುಮತಿಯೂ ಸಿಕ್ಕಿಲ್ಲ (2015ರ ಡಿಸೆಂಬರ್ 23ರಂದು ಇದ್ದ ಸ್ಥಿತಿ).

ಫೇಸ್‌ಬುಕ್‌ನಲ್ಲಿ ಸಿಕ್ಕಸಿಕ್ಕ ಕೊಂಡಿಗಳನ್ನೆಲ್ಲ ಕ್ಲಿಕ್ಕಿಸುವ ಮುನ್ನ, ಪೇಪರಿನಲ್ಲಿ ಕಂಡ ನಂಬರಿಗೆಲ್ಲ ಮಿಸ್ಡ್‌ಕಾಲ್ ಕೊಡುವ ಮುನ್ನ ಇದೆಲ್ಲ ನಿಮ್ಮ ನೆನಪಿನಲ್ಲಿರಲಿ!

(ಸಾಫ್ಟ್ಪವೇರ್ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಲೇಖಕರು ಕನ್ನಡದ ಹಲವು ಪತ್ರಿಕೆಗಳಿಗೆ ತಂತ್ರಜ್ಞಾನ ಸಂಬಂಧಿ ಲೇಖನಗಳನ್ನು ಬರೆದಿದ್ದಾರೆ. www.ejnana.com ಎಂಬ ತಂತ್ರಜ್ಞಾನ ಕುರಿತ ಕನ್ನಡ ಬರಹಗಳ ಜಾಲತಾಣದ ಉಸ್ತುವಾರಿ ಹೊತ್ತಿದ್ದಾರೆ.)

3 COMMENTS

Leave a Reply