ಬೆಂಗಳೂರಿಗಿಲ್ಲ ನಾಡೆಲ್ಲ- ಪಿಚ್ಚೈ ಗಮನ, ಆತಂಕಕ್ಕೆ ಇದೆಯೇ ಕಾರಣ?

ವೆಂಕಟ ಕೊಂಡಪ್ಪ ರೆಡ್ಡಿ

ಸೋಮವಾರ ಮೈಕ್ರೊಸಾಫ್ಟ್ ನ ಸತ್ಯ ನಾಡೆಲ್ಲ ಭಾರತಕ್ಕೆ ಬಂದಿಳಿದರು. ವಾರದ ಹಿಂದೆ ಗೂಗಲ್ ನ ಸುಂದರ್ ಪಿಚ್ಚೈ ಬಂದಿದ್ದರು. ಒಂದು ಕ್ಷಣ ಯೋಚಿಸಿ. ಐದಾರು ವರ್ಷಗಳ ಹಿಂದೆ ಇಂಥ ಐಟಿ ದೈತ್ಯರ ಆಗಮನಕ್ಕೆ ಹೆಬ್ಬಾಗಿಲು ಯಾವುದಾಗಿರುತ್ತಿತ್ತು? ಇನ್ಯಾವುದು, ಐಟಿ ಸಿಟಿ ಬೆಂಗಳೂರು ಎಂಬುದೇ ಉತ್ತರ. ರಾಷ್ಟ್ರ ರಾಜಧಾನಿಯಲ್ಲಿ ಇಳಿದವರೂ ವ್ಯವಹಾರಕ್ಕೆಂದು ನೇರ ಬರುತ್ತಿದ್ದದ್ದು ಬೆಂಗಳೂರಿಗೇ.

ಆದರೆ, ಪಿಚ್ಚೈ ಭೇಟಿಯಲ್ಲಾಗಲೀ, ನಾದೆಲ್ಲ ಪ್ರವಾಸದಲ್ಲಾಗಲೀ ಬೆಂಗಳೂರು ಅಂಥ ಪ್ರಾಮುಖ್ಯ ಪಡೆದಂತೆ ಕಾಣುತ್ತಿಲ್ಲ.

ಮೈಕ್ರೋಸಾಫ್ಟ್ ನ ಸಿಇಓ ಸತ್ಯ ನಾಡೆಲ್ಲ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರನ್ನು ಭೇಟಿಯಾಗಿ ಶಿಕ್ಷಣ, ನಾಗರೀಕ ಸೇವೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಪಾಲುದಾರಿಕೆಯ ಒಡಂಬಡಿಕೆಯ ಬಗ್ಗೆ ಚರ್ಚಿಸಿದ್ದಾರೆ. ಗೂಗಲ್ ನ ಭಾರತೀಯ ಮೂಲದ ಸಿಇಓ ಸುಂದರಂ ಪಿಚ್ಚೈ ಅವರು ಇತ್ತೀಚೆಗೆ ಭಾರತಕ್ಕೆ ಬಂದಿದ್ದಾಗ ಹೈದರಾಬಾದ್ ನಲ್ಲಿ ನೂತನ ಗೂಗಲ್ ಕ್ಯಾಂಪಸ್ ಅನ್ನು ಸ್ಥಾಪಿಸುತ್ತಿರುವುದುದಾಗಿ ಘೋಷಣೆ ಮಾಡಿದ್ದಾರೆ.

ತಮ್ಮ ಭೇಟಿ ಅಬ್ಬರದ ಕಾರ್ಯಕ್ರಮಗಳಿಂದ ಮುಕ್ತವಾಗಿರಲಿ ಎಂಬ ಪೂರ್ವಷರತ್ತಿನೊಂದಿಗೆ ನಾಡೆಲ್ಲ ಆಂಧ್ರಪ್ರದೇಶಕ್ಕೆ ಬಂದಿದ್ದಾರೆ. ಅವರ ಮುಖ್ಯ ಕಾರ್ಯಯೋಜನೆ ಎಂದರೆ, ಆ ರಾಜ್ಯದ ನೂತನ ಪ್ರಾರಂಭಿಕ ಉದ್ದಿಮೆ (ಸ್ಟಾರ್ಟ್ ಅಪ್)ಗಳೊಂದಿಗೆ ಅವರು ನಿರಂತರ ಸಂವಾದ ನಡೆಸಲಿದ್ದಾರೆ. ಟಿ- ಹಬ್ ಎಂಬುದು ಆಂಧ್ರದ ತಂತ್ರಜ್ಞಾನ ಕಂಪನಿಗಳ ಸಮುಚ್ಛಯ. ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿದ್ದು ನಾಡೆಲ್ಲ ತಮ್ಮ ಭೇಟಿಯ ಹೆಚ್ಚಿನ ಸಮಯವನ್ನು ಇಲ್ಲೇ ವ್ಯಯಿಸಲಿದ್ದಾರೆ.

ಈಗ ಹೇಳಿ… ಈ ಎಲ್ಲ ವಿವರಗಳನ್ನು ಓದಿಕೊಳ್ಳುತ್ತಿದ್ದರೆ ಇಂಥ ಎಲ್ಲ ಚಟುವಟಿಕೆಗಳಿಂದ ಬೆಂಗಳೂರು ಹಿಂದೆ ಬೀಳುತ್ತಿದೆ ಅಂತ ಅನಿಸುವುದಿಲ್ಲವಾ? ಹಾಗಾದರೆ ನಾಡೆಲ್ಲ ಆಗಲಿ, ಪಿಚ್ಚೈ ಆಗಿರಲಿ ತಮ್ಮ ಭೇಟಿಯಲ್ಲಿ ಐಟಿ ನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿಗೆ ಅಂಥ ಪ್ರಾಧಾನ್ಯವನ್ನೇನೂ ನೀಡಿಲ್ಲವೇಕೆ? ಇಲ್ಲಿ ಬೆಳವಣಿಗೆ ಒಂದು ಹಂತಕ್ಕೆ ಬಂದುಬಿಟ್ಟಿರುವುದರಿಂದ, ಇತರ ನಗರಗಳ ಕಡೆ ದೃಷ್ಟಿ ಹಾಯಿಸಲೇಬೇಕಾದ ಅನಿವಾರ್ಯ ಇದೆಯಾ? ಅಥವಾ ಕರ್ನಾಟಕದ ಸ್ಪರ್ಧಾತ್ಮಕತೆ, ಇಲ್ಲಿನ ವಾತಾವರಣ ಮೊದಲಿನಷ್ಟು ಉತ್ತೇಜಕವಾಗಿಲ್ಲವಾ?

ಎರಡನೆಯ ಸಾಧ್ಯತೆಯೂ ಸಾಕಷ್ಟು ಪರಿಣಾಮ ಬೀರುತ್ತಿರುವುದರಲ್ಲಿ ಸಂಶಯವಿಲ್ಲ. ಏಕೆಂದರೆ ಅದಾಗಲೇ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಉದ್ದಿಮೆಗಳೂ ಬೇರೆ ರಾಜ್ಯಗಳತ್ತ ಮುಖ ಮಾಡುತ್ತಿವೆ. ರಿಯಲ್ ಎಸ್ಟೇಟ್ ನ ದೈತ್ಯ ಬಿಲ್ಡರ್ ಮಂತ್ರಿ ಗ್ರೂಪ್ ನ ಸುಶೀಲ್ ಮಂತ್ರಿ ಅವರು ಸಹ ನಮ್ಮ ಮುಂದಿನ ಯೋಜನೆಗಳು ಬೆಂಗಳೂರು ಬದಲಿಗೆ ಪುಣೆ ಮತ್ತು ಹೈದರಾಬಾದ್ ನಗರಗಳಲ್ಲಿ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ‘ಬೆಂಗಳೂರಿನಲ್ಲಿ ವಾಣಿಜ್ಯ ಮತ್ತು ವಸತಿಯ ಬಾಡಿಗೆ ತುಂಬಾ ದುಬಾರಿಯಾಗಿದೆ. ಸಣ್ಣ ರಸ್ತೆಗಳಿಂದ ಸಂಚಾರ ದಟ್ಟಣೆ ಹೆಚ್ಚಾಗಿದ್ದು ರಿಯಲ್ ಎಸ್ಟೇಟ್ ಮಾರುಕಟ್ಟೆ ಕುಸಿಯುತ್ತಿದೆ. ಹೀಗಾಗಿ ಹೈದರಾಬಾದ್ ಮತ್ತು ಪುಣೆಯ ಕಡೆ ಮುಖ ಮಾಡಬೇಕಾಗಿದೆ’ ಎಂದು ‘ಬಿಸಿನಸ್ ಲೈನ್’ಗೆ ನೀಡಿದ ಸಂದರ್ಶನದಲ್ಲಿ ನಗರದ ಪ್ರಸ್ತುತ ಸ್ಥಿತಿಯನ್ನು ವಿವರಿಸಿದ್ದಾರೆ ಸುಶೀಲ್ ಮಂತ್ರಿ.

ಬೆಂಗಳೂರು ಮೂಲದ ಇ ಕಾಮರ್ಸ್ ಸಂಸ್ಥೆಯಾದ ಫ್ಲಿಪ್ ಕಾರ್ಟ್ ಕೂಡ ವಿಶಾಖಪಟ್ಟಣದ ಬಳಿ 600 ಕೋಟಿಗಳಷ್ಟು ಬಂಡವಾಳದಲ್ಲಿ ಬೃಹತ್ “ಲಾಜಿಸ್ಟಿಕ್ಸ್ ಪಾರ್ಕ್” ನಿರ್ಮಿಸುತ್ತಿದೆ. ಹಾಗೆಂದು ವಿಶಾಖಪಟ್ಟಣ ಬಂದರು ಟ್ರಸ್ಟ್ ನ ಅಧಿಕಾರಿ ಮಾಧ್ಯಮಗಳ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರದಲ್ಲಿ ತೆರಿಗೆ ನೀತಿ ಸಹಾಯಕವಾಗಿದೆ ಎಂಬುದು ಇಂಥ ಅಂತರ್ಜಾಲ ವಹಿವಾಟು ಕಂಪನಿಗಳ ಅಂಬೋಣ.

ಇವೆಲ್ಲವನ್ನೂ ಕರ್ನಾಟಕ ಪರಾಮರ್ಶೆಯ ದೃಷ್ಟಿಯಿಂದ ನೋಡಬೇಕಿರುವ ಅಗತ್ಯ ಇದ್ದೇ ಇದೆ. ಅದರರ್ಥ ಬೇಕಾಬಿಟ್ಟಿ ಸವಲತ್ತುಗಳನ್ನು ಕೊಟ್ಟು ಕಂಪನಿಗಳನ್ನು ಇಟ್ಟುಕೊಳ್ಳಬೇಕು ಎಂದಲ್ಲ. ಆದರೆ, ಬೆಂಗಳೂರು ಇಕ್ಕಟ್ಟಾಗುತ್ತಿರುವುದರಿಂದ, ಸಂಚಾರ ಸಮಸ್ಯೆಗಳು ಅತಿಯಾಗಿರುವುದರಿಂದ ಇಂಥ ಪಲ್ಲಟಗಳು ಆಗುತ್ತಿವೆಯೇ? ಮೂಲಸೌಕರ್ಯ ಸುಧಾರಣೆಯಲ್ಲಿ ವಹಿಸಬೇಕಿರುವ ಆದ್ಯತೆಯ ಎಚ್ಚರಿಕೆಗಳೇನು? ಬೆಂಗಳೂರಿಗೆ ಸಮಾನಾಂತರವಾಗಿ ಇನ್ನೊಂದು ಐಟಿ ನಗರವನ್ನು ಅಭಿವೃದ್ಧಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಉದ್ಯೋಗಗಳೆಲ್ಲ ನೆರೆ ರಾಜ್ಯಗಳ ಪಾಲಾಗಲಿವೆಯಾ? ಇವೆಲ್ಲ ಚಿಂತಿಸಬೇಕಾದ ವಿಷಯಗಳು.

Leave a Reply