ಕೇರಳದ ಶಿವಗಿರಿ ಮಠಕ್ಕೆ ರಾಜಕಾರಣಿಗಳ ದೌಡೇಕೆ ಗೊತ್ತೇ?

 

ಡಿಜಿಟಲ್ ಕನ್ನಡ ಟೀಮ್

ಕೇರಳದ ಶಿವಗಿರಿ ಮಠಕ್ಕೆ ಈಗ ಎಲ್ಲ ಪಕ್ಷಗಳ ರಾಜಕಾರಣಿಗಳ ದೌಡಿನ ಸಮಯ. ಸಮಾಜ ಸುಧಾರಕ ಸಂತ ನಾರಾಯಣ ಗುರುಗಳ ಸಮಾಧಿಯನ್ನು ಹೊಂದಿರುವ ಇಲ್ಲಿ ಪ್ರತಿವರ್ಷ ಡಿಸೆಂಬರ್ 30ರಿಂದ ಜನವರಿ 1ರವರೆಗೆ ಜಾತ್ರಾ ಉತ್ಸವ.

ಬುಧವಾರ ಮಠದ ಆಹ್ವಾನಿತ ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ಸಂದರ್ಭವನ್ನು ಪರೋಕ್ಷವಾಗಿ ಬಿಜೆಪಿ ವಿರುದ್ಧ ದಾಳಿ ಮಾಡುವುದಕ್ಕೆ ಬಳಸಿಕೊಂಡರು. ‘ನಾರಾಯಣ ಗುರುಗಳ ಚಿಂತನೆಯ ವಾರಸುದಾರಿಕೆಯನ್ನು ಕೋಮುವಾದಿ ಶಕ್ತಿಗಳು ತಮ್ಮದೆಂದು ಪ್ರಚಾರಪಡಿಸುವುದಕ್ಕೆ ನೋಡುತ್ತಿವೆ. ಇದು ಕೂಡದು.’ ಎಂದಿದ್ದಲ್ಲದೇ ನಾರಾಯಣ ಗುರುಗಳ ವ್ಯಕ್ತಿತ್ವಕ್ಕೆ ನೆಹರು ಮತ್ತು ಇಂದಿರಾ ಗಾಂಧಿಯವರು ಮಾರುಹೋಗಿದ್ದರು ಎಂದು ಉಲ್ಲೇಖಿಸುವುದಕ್ಕೆ ಮರೆಯಲಿಲ್ಲ. ಇದು ಶಿವಗಿರಿ ಮಠಕ್ಕೆ ಸೋನಿಯಾ ಗಾಂಧಿಯವರ ಪ್ರಥಮ ಭೇಟಿ.

ಪ್ರಧಾನಿ ನರೇಂದ್ರ ಮೋದಿ ಸಹ ಡಿಸೆಂಬರ್ 15ರಂದು ಮಠಕ್ಕೆ ಭೇಟಿ ನೀಡಿದ್ದರು. ಜಾತ್ರೋತ್ಸವ ಸಂದರ್ಭದಲ್ಲಿ ಪ್ರಧಾನಿಯವರಿಗೆ ಆಹ್ವಾನವಿತ್ತಾದರೂ ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಈ ಮೊದಲೇ ಭೇಟಿ ಕಾರ್ಯಕ್ರಮ ಮುಗಿಸಿಕೊಂಡಿದ್ದಾರೆ.

ಈ ಭೇಟಿಗಳ ಕತೆ ಹಾಗಿರಲಿ, ಸಿಪಿಎಂನ ಸೀತಾರಾಮ್ ಯೆಚೂರಿ ಸಹ ಶಿವಗಿರಿ ಮಠಕ್ಕೆ ಭೇಟಿ ನೀಡಿದ್ದು ವಿಶೇಷ. ಕಮ್ಯುನಿಷ್ಟರನ್ನೂ ಸೇರಿಸಿ ಎಲ್ಲ ಪಕ್ಷಗಳ ರಾಜಕಾರಣಿಗಳಲ್ಲೂ ಹೀಗೊಂದು ಭಕ್ತಿರಸ ಉಕ್ಕುತ್ತಿರುವುದಕ್ಕೇನು ಕಾರಣ?

ವಿಷಯವಿಷ್ಟೆ- ಸ್ಥಳೀಯ ಏಳವ ಸಮುದಾಯ ಶಿವಗಿರಿ ಮಠಕ್ಕೆ ನಿಷ್ಠೆಯಿಂದ ನಡೆದುಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಠದ ಜನಪ್ರಿಯತೆಯೂ ಹೆಚ್ಚಾಗಿದೆ. ಈ ಏಳವ ಹಿಂದು ಸಮುದಾಯವು ಕೇರಳ ಜನಸಂಖ್ಯೆಯ ಶೇ. 20ರಷ್ಟು ಪಾಲು ಹೊಂದಿದ್ದು, 2016ರಲ್ಲಿ ಕೇರಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಇವರ ಮತಗಳನ್ನು ಓಲೈಸಿಕೊಳ್ಳುವುದಕ್ಕೆ ಪೈಪೋಟಿ ಏರ್ಪಟ್ಟಿದೆ.

Leave a Reply