ಡಿಡಿಸಿಎ: ಮುಂದುವರಿದ ಆರೋಪಕಾಂಡ

ಕೀರ್ತಿ ಆಜಾದ್

ಡಿಡಿಸಿಎ ಪ್ರಕರಣ ಕೆದಕಿದಷ್ಟು ಆಳ ಎಂಬಂತೆ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಕೇಂದ್ರ ವಿತ್ತ ಮಂತ್ರಿ ಅರುಣ್ ಜೇಟ್ಲಿ ವಿರುದ್ಧ ಪ್ರಾರಂಭವಾದ ಆರೋಪಗಳು ಈಗ ಪಕ್ಷದ ಸಂಸದ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸೇರಿ ಹಲವು ರಾಜಕಾರಣಿಗಳನ್ನೂ ಸುತ್ತಿಕೊಳ್ಳುವ ಲಕ್ಷಣಗಳು ಕಾಣತೊಡಗಿದೆ. ಜೊತೆಗೆ ಆಪ್ ನಾಯಕ ಅಶುತೋಷ್ ಬುಧವಾರ ಜೇಟ್ಲಿ ವಿರುದ್ಧ, ಡಿಡಿಸಿಎ ಹಗರಣದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿರುವ ಆರೋಪವನ್ನು ಹೊರಿಸಿದ್ದಾರೆ.

2011 ರಲ್ಲಿ ನಡೆದ ಸಿಂಡಿಕೇಟ್ ಬ್ಯಾಂಕ್ ಕ್ರಿಕೆಟ್ ತಂಡಕ್ಕೆ ಸಂಬಂಧಿಸಿ ಡಿಡಿಸಿಎ ಅಧಿಕಾರಿಗಳ ವಿರುದ್ಧ ಇಂದ್ರಪ್ರಸ್ತ ಠಾಣೆಯಲ್ಲಿ ದಾಖಲಾಗಿದ್ದ ದೂರನ್ನು ಮುಚ್ಚಿ ಹಾಕುವಂತೆ ಅಂದಿನ ದೆಹಲಿ ಪೊಲೀಸ್ ಆಯುಕ್ತ ಬಿ.ಕೆ ಗುಪ್ತಾ ರವರಿಗೆ ಅರುಣ್ ಜೇಟ್ಲಿ ಅವರು ಪತ್ರ ಬರೆದು ಒತ್ತಡ ಹೇರಿದ್ದರು ಎಂದು ಆರೋಪಿಸಿರುವ ಅಶುತೋಷ್, ಈ ಸಂಬಂಧ ಕೆಲ ದಾಖಲೆಗಳನ್ನು ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.

ಇನ್ನೊಂದೆಡೆ, ಡಿಡಿಸಿಎದ ಆಯ್ಕೆದಾರರು ಲೈಂಗಿಕ ತೃಷೆ ಈಡೇರಿಸಿಕೊಳ್ಳುವ ಒತ್ತಡ ಹೇರಿದ್ದರು ಎಂಬ ಕೇಜ್ರಿವಾಲ್ ಅವರ ಆರೋಪಕ್ಕೆ ಕೀರ್ತಿ ಆಜಾದ್ ಪುಷ್ಟಿ ತುಂಬಿದ್ದಾರೆ. ಇದೇನೂ ಹೊಸ ವಿಷಯ ಅಲ್ಲ, ಈ ಬಗ್ಗೆ ತಾವು ಹಿಂದೆಯೇ 2007ರಲ್ಲಿ ಮಾತನಾಡಿದ್ದಾಗಿ ಆಜಾದ್ ಹೇಳಿದ್ದಾರೆ.

ಕ್ರಿಕೆಟ್ ನ ವ್ಯವಹಾರಗಳಲ್ಲಿ ಸಂಸದರು ಭಾಗಿಯಾಗುವುದೇ ಹಿತಾಸಕ್ತಿ ಸಂಘರ್ಷಕ್ಕೆ ಕಾರಣ ಎಂದು ಪ್ರತಿಪಾದಿಸಿರುವ ಆಜಾದ್, ಜೇಟ್ಲಿ ಮಾತ್ರವಲ್ಲದೇ ಅನುರಾಗ್ ಠಾಕೂರ್, ರಾಜೀವ್ ಶುಕ್ಲಾ, ಜೋತಿರಾಧಿತ್ಯ ಸಿಂಧ್ಯಾ, ಫಾರುಕ್ ಅಬ್ದುಲಾ, ಮತ್ತು ಪ್ರಫುಲ್ ಪಟೇಲ್, ಶರದ್ ಪವಾರ್ ಹೆಸರುಗಳನ್ನೂ ಉಲ್ಲೇಖಿಸಿದ್ದಾರೆ. ಒಂದೋ ಸಂಸದರಾಗಿರಬೇಕು ಇಲ್ಲವೇ ಕ್ರಿಕೆಟ್ ಬೋರ್ಡ್ ನಲ್ಲಿ ಕಾರ್ಯನಿರ್ವಹಿಸಬೇಕು. ಎರಡು ದೋಣಿಯ ಪಯಣ ಸರಿಯಲ್ಲ ಎಂದಿದ್ದಾರೆ ಆಜಾದ್.

ಇವೆಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಡಿಡಿಸಿಎ, ಕೇಜ್ರಿವಾಲ್ ಮತ್ತು ಆಜಾದ್ ಇಬ್ಬರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದೆ.

Leave a Reply