ನಾವೆಲ್ಲ ನಿದ್ರಿಸುತ್ತಿದ್ದಾಗ ನೌಕಾಸೇನೆ ದೇಶದ ಕ್ಷಿಪಣಿ ಬಲ ಹೆಚ್ಚಿಸಿದೆ!

ಬರಾಕ್ ಕ್ಷಿಪಣಿಗಳ ಸಾಮರ್ಥ್ಯ ವಿವರಿಸುವ ಕಲಾವಿದನ ಕಲ್ಪನೆ

ಮಂಗಳವಾರ ರಾತ್ರಿಯಿಂದ ಬುಧವಾರದ ನಸುಕಿನವರೆಗೆ ನಾವೆಲ್ಲ ನಿದ್ರೆಯಲ್ಲಿರುವಾಗ ಭಾರತದ ನೌಕಾದಳ ಯಶಸ್ವಿ ಕ್ಷಿಪಣಿ ಪರೀಕ್ಷೆ ಮೂಲಕ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.

ಇಸ್ರೇಲ್ ಸಹಭಾಗಿತ್ವದೊಂದಿಗೆ ಅಭಿವೃದ್ಧಿಪಡಿಸಲಾದ ಬರಾಕ್ ಎನ್ ಜಿ ಕ್ಷಿಪಣಿಗಳನ್ನು ದೂರ ನಿಯಂತ್ರಿತ, ಮಾನವರಹಿತ ರಾಕೆಟ್ ಗಳ ಮೂಲಕ ನಿಯಂತ್ರಿಸಿ ಗುರಿ ಪರೀಕ್ಷಿಸುವಲ್ಲಿ ನೌಕಾಸೇನೆ ಯಶಸ್ವಿಯಾಗಿದೆ.

ಅರಬ್ಬೀ ಸಮುದ್ರದಲ್ಲಿ ನಡೆದ ಈ ಪರೀಕ್ಷೆಗೆ ಐಎನ್ ಎಸ್ ಕೋಲ್ಕತಾ ನೌಕೆ ವೇದಿಕೆ ಒದಗಿಸಿತ್ತು. ಭಾರತದ ಡಿಆರ್ ಡಿಒ ಸಂಸ್ಥೆಯ ವಿಜ್ಞಾನಿಗಳು ಹಾಗೂ ಇಸ್ರೇಲ್ ಏರ್ ಕ್ರಾಫ್ಟ್ ಇಂಡಸ್ಟ್ರಿಗೆ ಸೇರಿದ ವಿಜ್ಞಾನಿಗಳು ಸಾಕ್ಷಿಯಾದ ಈ ಪರೀಕ್ಷೆ, ಇಸ್ರೇಲ್ ಮತ್ತು ಭಾರತದ ನಡುವೆ ಗಟ್ಟಿಗೊಳ್ಳುತ್ತಿರುವ ಮಿಲಿಟರಿ ಸಹಕಾರವನ್ನು ಸಾರಿ ಹೇಳುತ್ತಿದೆ. ಬ್ರಹ್ಮೋಸ್ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ರಷ್ಯಾದ ಜತೆಗೆ ಹೊಂದಿದ್ದಂಥದೇ ಸಂಬಂಧವನ್ನು ಭಾರತವೀಗ ಬರಾಕ್ ಶ್ರೇಣಿಗಳ ಕ್ಷಿಪಣಿ ಸಂಬಂಧ ಇಸ್ರೇಲ್ ನೊಂದಿಗೆ ಬೆಳೆಸಿದಂತಾಗಿದೆ. ನೌಕಾಸೇನೆಯ ಕೋಲ್ಕತಾ ಶ್ರೇಣಿಯ ನೌಕೆಗಳೆಲ್ಲ ಬರಾಕ್ 8 ಇಲ್ಲವೇ ಬರಾಕ್ ಎನ್ ಜಿ ಕ್ಷಿಪಣಿ ವ್ಯವಸ್ಥೆ ಹೊಂದಲಿವೆ. ವಿದೇಶಿ ತೀರಗಳ ಸಮೀಪ ತೈಲ ಸಂಗ್ರಹಕ್ಕೆ ತೊಡಗಿಕೊಳ್ಳುವಾಗಲೂ ಭಾರತವು ರಕ್ಷಣೆಗಾಗಿ ಈ ನೌಕೆಗಳನ್ನು ಬಳಸುವ ಸಾಧ್ಯತೆ ಇದೆ.

ಜನವರಿಯಲ್ಲಿ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಮೋದಿಯವರ ಮುಂದಿನ ವರ್ಷದ ಪ್ರವಾಸ ಪಟ್ಟಿಯಲ್ಲೂ ಇಸ್ರೇಲ್ ಇದೆ.

Leave a Reply