ಪುಗ್ಸಟ್ಟೆ ಅಂದಾಗ ಸಹಜವೇ ಪುಳಕ, ಆದ್ರೆ ಜುಕರ್ ಬರ್ಗ್ ಗೇಟ್ ಕೀಪರ್ ಆಗಬೇಕಾ?

ಪ್ರವೀಣ್ ಕುಮಾರ್

ನಾವು ದಾನ-ಧರ್ಮ ಮಾಡಲು ಬಂದಿದ್ದೇವೆ. ಆದ್ರೂ ನಮ್ಮನ್ನು ಒಳಗೆ ಬಿಟ್ಕೊಳಲ್ಲ ಅಂದ್ರೆ ಹೆಂಗೆ? ನಮಗೇನಿದ್ರೂ ವಿಶಾಲ ಭಾರತವನ್ನು ಬೆಸೆಯುವ ಕಲ್ಪನೆ ಇದೆ. ಹಳ್ಳಿಮೂಲೆಯಲ್ಲಿ ಕುಳಿತಿರುವವನಿಗೆ ಫ್ರೀ ಇಂಟರ್ನೆಟ್ ಸಿಗುತ್ತೆ ಅಂತಾದ್ರೆ ನೀವು ವಿರೋಧಿಸೋದ್ಯಾಕೆ? ನೀವೂ ಫ್ರೀ ಬೇಸಿಕ್ಸ್ ಛತ್ರದಡಿ ಆರಾಮಾಗಿ ಬಂದುಬಿಡಬಹುದು, ಯಾರು ಬೇಕಾದರೂ ಇಲ್ಲಿ ಸೇರಬಹುದು. ಇದು ಸಮಾನತೆಯ ಸಾಧನ….

ಹೀಗೆಲ್ಲ ಹೇಳಿದಾಗ ಯಾರಿಗೆ ತಾನೇ ಫೇಸ್ ಬುಕ್ ನ ಫ್ರೀ ಬೇಸಿಕ್ಸ್ ಯೋಜನೆ ವಿರೋಧಿಸುವುದಕ್ಕೆ ಆಗುತ್ತದೆ ಹೇಳಿ? ಅದರಲ್ಲೂ ಫೇಸ್ ಬುಕ್ ನಾವು ದಿನವೂ ಬಳಸುವ, ಅದಾಗಲೇ ನಮ್ಮಲ್ಲಿ ಆಪ್ತತೆ ಒಡಮೂಡಿಸಿರುವ ವೇದಿಕೆ. ಅದರ ಬಗ್ಗೆ ನಮಗೊಂದು ಅನನ್ಯ ಬೆರಗು. ಹೀಗಾಗಿ ಫೇಸ್ ಬುಕ್ ನ ಜುಕರ್ ಬರ್ಗ್ ಏನೋ ಮಾಡಲು ಹೊರಟಿದ್ದಾರೆ ಅಂದ್ರೆ ಸರಿಯೇ ಇರ್ಬೇಕು. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಜುಕರ್ ಬರ್ಗ್ ಪಕ್ಕ ಕುಳಿತು ಸಂವಾದ ಮಾಡಿ ಬಂದಿದ್ದಾರೆ ಅಂತಂದ್ರೆ ಅಲ್ಲಿಂದ ಒಳ್ಳೆಯದೇ ಬರಬೇಕೇ ವಿನಃ ಮತ್ತೇನೂ ಗಡ್ಬಡ್ ಆಗೋಕೆ ಸಾಧ್ಯ ಇಲ್ಲ.

ಇಷ್ಟಾಗಿಯೂ ಫ್ರೀ ಬೇಸಿಕ್ಸ್ ವಿರೋಧಿಸುತ್ತಿರುವವರು ತಮಗೆ ಸಿಗುತ್ತಿರುವ ಸೌಲಭ್ಯ ಹಳ್ಳಿಯ ಬಡವನಿಗೆ ಸಿಗದಂತೆ ತಡೆಯುತ್ತಿದ್ದಾರೆ. ಇವರೆಲ್ಲ ಬಡವರ ವಿರೋಧಿಗಳು, ಪ್ರಗತಿ ವಿರೋಧಿಗಳು… ಅಲ್ಟಿಮೇಟ್ಲಿ ದೇಶದ್ರೋಹಿಗಳು…..

ಹಿಂಗೆಲ್ಲ ವಾದಿಸುವುದಕ್ಕೆ ಸಾಕಷ್ಟು ಕಾರಣಗಳು ಸಿಗೋದ್ರಿಂದ ಮಾಹಿತಿ ಸಮರದಲ್ಲಿ ಫೇಸ್ ಬುಕ್ ನ ಮಾರ್ಕ್ ಜುಕರ್ ಬರ್ಗ್ ಒಂದು ಹಂತ ಮುಂದಿದ್ದಾರೆ. ಆದರೆ ಸದ್ಯದ ಸಮಾಧಾನ ಅಂತಂದ್ರೆ, ಈ ಜನಪ್ರಿಯ ವರಸೆಗೆ ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅಷ್ಟು ಸುಲಭಕ್ಕೆ ಮಣೆ ಹಾಕಿಲ್ಲ. ಹೀಗಾಗಿ ಈ ಜನಪ್ರಿಯ ಪುಕ್ಕಟೆ ಚರ್ಚೆಯಲ್ಲಿ ಆತಂಕ ಹುಟ್ಟಿಸಿರುವ ಅಂಶಗಳನ್ನು ಗಮನಿಸೋಣ.

  •  ಫ್ರೀ ಬೇಸಿಕ್ಸ್ ನಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂಬ ಮಾತು ತೇಲಿಬಿಟ್ಟಿರುವ ಫೇಸ್ ಬುಕ್, ನಂತರ ನಮ್ಮ ಕಣ್ಣಿಗೆ ಬೀಳದಂತೆ ಒಂದಿಷ್ಟು ಷರತ್ತುಗಳನ್ನು ಇಟ್ಟುಕೊಂಡಿದೆ. ಫ್ರೀ ಬೇಸಿಕ್ಸ್ ನಲ್ಲಿ ಯಾರು ಬೇಕಾದರೂ ತಮ್ಮ ಆ್ಯಪ್ಸ್, ಕಿರು ತಂತ್ರಾಂಶಗಳನ್ನು ಇಡಬಹುದು, ಆದರೆ ಇದನ್ನು ತಿರಸ್ಕರಿಸುವ ಹಕ್ಕು ಫೇಸ್ ಬುಕ್ ಬಳಿ ಇರುತ್ತದೆ. ಇಂಟರ್ನೆಟ್ ವೇದಿಕೆಯಲ್ಲಿ ಯಾರು ಸ್ಪರ್ಧೆ ಮಾಡಬೇಕು, ಇನ್ಯಾರನ್ನು ಅಪ್ರಸ್ತುತ ವೇದಿಕೆಗೆ ನೂಕಬೇಕು ಅಂತ ಫೇಸ್ ಬುಕ್ ನಿರ್ಧರಿಸುತ್ತದೆ.
  •  ಆಯ್ಕೆಗಳನ್ನು ಕುಗ್ಗಿಸಿ ಸ್ಪರ್ಧಾತ್ಮಕತೆ ತಗ್ಗಿಸುವಲ್ಲಿ ಫ್ರೀ ಬೇಸಿಕ್ಸ್ ಪಾತ್ರ ಇದ್ದೇ ಇದೆ. ಇಂಟರ್ನೆಟ್ ನಲ್ಲಿ ಫ್ರೀ ಬೇಸಿಕ್ಸ್ ಮಾದರಿ ಬಳಕೆದಾರರಿಗೆ ಪುಕ್ಕಟೆ, ಅಲ್ಲಿಂದ ಹೊರಬಂದು ಅಂತರ್ಜಾಲ ಬಳಸಬೇಕೆಂದರೆ ಹಣ ಖರ್ಚಾಗುತ್ತದೆ ಎಂದಾದಾಗ, ಫ್ರೀ ಬೇಸಿಕ್ಸ್ ಎಂಬುದೇ ಇಂಟರ್ನೆಟ್ ಆಗುತ್ತದೆ. ಅಂಥ ಸಂದರ್ಭದಲ್ಲಿ ಫ್ರೀ ಬೇಸಿಕ್ಸ್ ವೇದಿಕೆಯಲ್ಲಿ ಸ್ಥಾನ ಗಿಟ್ಟಿಸಿದವರಿಗೆ ಮಾತ್ರ ಲಾಭ. ಉದಾಹರಣೆಗೆ ಫ್ರೀ ಬೇಸಿಕ್ಸ್ ಎಂಬ ಫ್ಲಾಟ್ ಫಾರ್ಮ್ ನಲ್ಲಿ ಫ್ಲಿಪ್ ಕಾರ್ಟ್ ಇದೆ ಆದರೆ ಸ್ನ್ಯಾಪ್ ಡೀಲ್ ಇಲ್ಲ ಎಂದರೆ, ಫ್ಲಿಪ್ ಕಾರ್ಟ್ ಗೆ ಲಾಭ ಹೆಚ್ಚು.
  • ಭಾರತದಲ್ಲಿ ನೂತನ ಉದ್ದಿಮೆಗಳು (ಸ್ಟಾರ್ಟ್ ಅಪ್) ಹೆಚ್ಚಬೇಕು ಎಂಬ ಪ್ರಧಾನಿ ಮೋದಿ ಆಶಯಕ್ಕೆ ಫ್ರೀ ಬೇಸಿಕ್ಸ್ ವಿರುದ್ಧ. ‘ಎಲ್ಲರಿಗೂ ಮುಕ್ತ, ಆದರೆ ಗೇಟ್ ಕೀಪರ್ ಕೆಲಸ ನಾವು ಮಾಡ್ತೇವೆ’ ಎಂಬ ಫೇಸ್ ಬುಕ್ ನ ಜಾಣಮಾತುಗಳನ್ನು ಗಮನಿಸಿ. ಬೆಂಗಳೂರೊಂದರಲ್ಲೇ ಬೆಳೆಯುತ್ತಿರುವ ಮೂರು ಸಾವಿರಕ್ಕಿಂತ ಹೆಚ್ಚು ನವೋದ್ಯಮಗಳಲ್ಲಿ ಎಷ್ಟು ಮಂದಿಗೆ ಫ್ರೀ ಬೇಸಿಕ್ಸ್ ವೇದಿಕೆಯಲ್ಲಿ ಜಾಗ ಪಡೆದುಕೊಳ್ಳುವುದಕ್ಕೆ ಸಾಧ್ಯವಾದೀತು? ಈ ಆತಂಕ ಇರುವುದರಿಂದಲೇ ಭಾರತದ ಪ್ರಸಿದ್ಧ ನವೋದ್ಯಮಗಳ ಸಾಲಿನಲ್ಲಿ ನಿಲ್ಲುವ ಪೇಟಿಎಂ, ಜೊಮಾಟೊ ಸೇರಿದಂತೆ 9 ಸಂಸ್ಥೆಗಳು ಫ್ರೀ ಬೇಸಿಕ್ಸ್ ಗೆ ಅವಕಾಶ ನೀಡಬಾರದೆಂದು ಟ್ರಾಯ್ ಅನ್ನು ಕೇಳಿಕೊಂಡಿವೆ. ಇವರೆಲ್ಲ ಅಭಿವೃದ್ಧಿ ವಿರೋಧಿಗಳು, ಫೇಸ್ ಬುಕ್ ಜುಕರ್ ಬರ್ಗ್ ಮಾತ್ರ ಭಾರತವನ್ನುದ್ಧರಿಸಲು ಬಂದಿರುವ ಅವತಾರ ಎಂದು ನಂಬೋಣವೇ?
  • ಫ್ರೀ ಬೇಸಿಕ್ಸ್ ನ ಒಟ್ಟಾರೆ ಚರ್ಚೆಯಲ್ಲಿ ಕಣ್ಣಿಗೆ ರಾಚುತ್ತಿರುವ ವ್ಯಂಗ್ಯ ಎಂದರೆ, ಹಳ್ಳಿಗಳಿಗೆ ಇಂಟರ್ನೆಟ್ ಕೊಡುವುದಕ್ಕೆ, ಡಿಜಿಟಲ್ ಇಂಡಿಯಾ ಸಾಕಾರವಾಗುವುದಕ್ಕೆ ಫೇಸ್ ಬುಕ್- ಗೂಗಲ್ ನಂಥ ಕಂಪನಿಗಳ ನೇತೃತ್ವ ಸಿಕ್ಕರೆ ಮಾತ್ರ ಸಾಧ್ಯ ಎಂದು ಬಹುತೇಕರು ನಂಬಿದ್ದೇವೆ! ಖಂಡಿತ, ತಂತ್ರಜ್ಞಾನದಲ್ಲಿ ಮುಂದಿರುವ ಅವರೆಲ್ಲರ ಸಹಕಾರ ಬೇಕೇ ಬೇಕು. ಆದರೆ, ಇಂಟರ್ನೆಟ್ ಮೂಲಕ ಬಡವರ ಉದ್ಧಾರ, ಹಳ್ಳಿಗಳ ಬೆಸುಗೆ ಇವೆಲ್ಲ ಅವರಿಂದ ಮಾತ್ರ ಸಾಧ್ಯ ಎಂಬ ಸ್ಥಿತಿಗೆ ಬರುತ್ತೇವೆ ಎಂದಾದರೆ ‘ಭಾರತ ವಿಶ್ವಗುರು’ ಎಂಬ ಮಾತು ಭಾಷಣಕ್ಕೆ ಸೀಮಿತ ಅಂತ ಒಪ್ಪಿಕೊಳ್ಳಬೇಕಾಗುತ್ತದೆ. ಮಂಗಳಯಾನ ಮಾಡಿದ ದೇಶ ಇಷ್ಟು ದೈನ್ಯತೆಯ ದೃಷ್ಟಿಕೋನ ಹೊಂದಿರಬೇಕಾದ ಅಗತ್ಯ ಇದೆಯೇ?
  • ಮಹಾಭಾರತದಲ್ಲಿ ಅಶ್ವತ್ಥಾಮ ಸತ್ತಿದ್ದು ನಿಜ, ಆದರೆ ವ್ಯಕ್ತಿಯಲ್ಲ ಆ ಹೆಸರಿನ ಆನೆ ಎಂಬುದು ತಿಳಿದಾಗ ತಡವಾಗಿತ್ತು. ಕಂಡೀಷನ್ಸ್ ಅಪ್ಲೈ ಎಂಬರ್ಥದಲ್ಲಿ ಸತ್ತಿದ್ದು ಆನೆ ಎಂದು ಧರ್ಮರಾಯ ಘೋಷಿಸುವಾಗಲೇ ಕೃಷ್ಣ ಶಂಖ ಊದಿದನಂತೆ. ಬಡವರುದ್ಧಾರಕ್ಕೆ ಇದು ಉಚಿತ, ಇದು ಉಚಿತ ಅಂತ ಕೂಗುತ್ತಿರುವ ಫೇಸ್ ಬುಕ್ ಧ್ವನಿ ಆಕರ್ಷಕವಾಗಿ ಕೇಳುತ್ತಿದೆಯೇ ಹೊರತು, ಅದರ ಜತೆಗಿರುವ ಕಂಡೀಷನ್ ಗಳಲ್ಲ.

ಫೇಸ್ ಬುಕ್ ನ ಫ್ರೀ ಕೂಗಿನ ಹಿಂದಿನ ಷರತ್ತುಗಳನ್ನು ಬಿಡಿಸಿಡುವ ವಿಡಿಯೋ ಒಂದನ್ನು ಎಐಬಿ ಎಂಬ ಕಾಮೆಡಿ ಕಂಪನಿ ಪ್ರಸ್ತುತಪಡಿಸಿದೆ. ಆಂಗ್ಲ ಭಾಷೆಯಲ್ಲಿರುವ ಏಳು ನಿಮಿಷಗಳ ವಿಡಿಯೋ ಮೇಲೆ ಉಲ್ಲೇಖಿಸಿದ ಅಂಶಗಳ ಜತೆಗೆ ಇನ್ನೂ ಕೆಲವಷ್ಟು ಸೂಕ್ಷ್ಮಗಳನ್ನು ಹೇಳಿದೆ.

1 COMMENT

  1. This is the famous saying of Desmond Tutu:

    “When Christian missioneries came to South Africa for the first time, they had Bible in their hand. We had land. They said “Close your eyes, let’s pray”. We closed our eyes. When we opened our eyes, they had our land, and we had Bible in our hand”.

Leave a Reply