ಮಕ್ಕಳಿಗೆ ಬೇಕಿರುವುದು ಬರಿ ಸ್ಪರ್ಧೆಯಲ್ಲ, ಸಹಕಾರ ಮನೋಭಾವ

 

 

author-geetha‘ಫೈನಲ್ ಎಕ್ಸಾಮ್ಸ್ ಹತ್ತಿರ ಬಂತು ಎಲ್ಲಾ ಹೇಗೆ ಓದ್ತಾ ಇದೀರಿ?’ ಟೀಚರ್ ಕೇಳಿದರು

‘ಚೆನ್ನಾಗಿ ಓದ್ತಾ ಇದೀನಿ ಮೇಡಂ..’ ಒಕ್ಕೊರಲರಾಗಿ ಉತ್ತರಿಸಿದರು ಐದನೇ ತರಗತಿಯ ಮಕ್ಕಳು.

“ಫಸ್ಟ್ ರ್ಯಾಂಕ್ ಯಾರು ಬರ್ತಿರಾ?”

ಎಲ್ಲಾ ಮಕ್ಕಳು ಕೈ ಎತ್ತಿದವು, ಶಶಾಂಕನ ಹೊರತು.

ಮಕ್ಕಳ ಸ್ಪರ್ಧಾತ್ಮಕ ಮನೋಭಾವಕ್ಕೆ ಟೀಚರ್ ಖುಷಿಯಾದರು ಮೆಲ್ಲನೆ ಶಶಾಂಕನ ಬಳಿ ನಡೆದರು.

“ನೀನು ಫಸ್ಟ್ ರ್ಯಾಂಕ್ ಬರೋಲ್ಲವೇ? ಕೈ ಯಾಕೆ ಎತ್ತಲ್ಲಿಲ್ಲ?.. ಚೆನ್ನಾಗಿ ಓದಿದರೆ ಖಂಡಿತಾ ಫಸ್ಟ್ ರ್ಯಾಂಕ್ ಬರುತ್ತೆ”

“ಇಲ್ಲ ಮೇಡಂ ರಾಹುಲ್ ಫಸ್ಟ್ ರ್ಯಾಂಕ್ ಬರಲಿ, ನಾನು ಸೆಕೆಂಡ್ ರ್ಯಾಂಕ್ ಬರ್ತೀನಿ”

ಅವನ ಪಕ್ಕ ಕೈ ಎತ್ತಿ ಕುಲಿತ್ತಿದ್ದ ರಾಹುಲ್ ಅತ್ತ ನೋಡಿ, ಶಶಾಂಕನತ್ತ ಕಣ್ಣರಳಿಸಿದರು ಟೀಚರ್

“ಯಾಕೆ ? ನಿಂಗೆ ಫಸ್ಟ್ ರ್ಯಾಂಕ್ ಬರಲು ಇಷ್ಟ ಇಲ್ಲವೇ?

“ನಾನು ಯಾವ ರ್ಯಾಂಕ್ ಬಂದರೂ ನಮ್ಮಮ್ಮ ಏನೂ ಹೇಳೊಲ್ಲ, ಆದ್ರೆ ರಾಹುಲ್ ಅಮ್ಮ ಅವನು ಫಸ್ಟ್ ರ್ಯಾಂಕ್ ಬರದೇ ಇದ್ದರೆ ಪನಿಷ್ ಮಾಡ್ತಾರೆ. ಅದಕ್ಕೆ ಅವನೇ ಫಸ್ಟ್ ರ್ಯಾಂಕ್ ಬರಲಿ”

ಟೀಚರ್ ದಂಗಾಗಿ ನಿಂತರು.

ಇದು ಕಥೆಯಲ್ಲ. ಆ ಟೀಚರ್ ನನ್ನ ಸೇಹಿತೆ. ಮೇಲಿನ ಘಟನೆ ಅವಳ ಕ್ಲಾಸಿನಲ್ಲಿ ನಡೆದಿದ್ದು, ಅದನ್ನು ಅವಳು ಯಥಾವತ್ತಾಗಿ ನನಗೆ ಹೇಳಿದ್ದು.

ರಾಹುಲ್, ಶಶಾಂಕ್ ಇಬ್ಬರು ಮಕ್ಕಳಷ್ಟೇ ಅಲ್ಲ. ನಮ್ಮ ಸಮಾಜದ ಕನ್ನಡಿ. ಸಮಾಜದ ಅತ್ಯಂತ ಕಿರಿದಾದ ಯೂನಿಟ್ ಆದ ಒಂದು ಕುಟುಂಬದಲ್ಲಿ ಮಕ್ಕಳನ್ನು ಪ್ರಾಥಮಿಕ ಗಾರ್ಡಿಯನ್ ಆದ, ಆ ಮಕ್ಕಳಿಗೆ ಜನ್ಮವಿತ್ತ ತಂದೆತಾಯಿಯರು ಹೇಗೆ ನೋಡಿಕೊಳ್ಳುತ್ತಾರೆ, ಸಲಹುತ್ತಾರೆ ಎಂಬುದು ಅತ್ಯಂತ ಮುಖ್ಯವಾದ ಜೊತೆಗೆ ಯಾವುದೇ ಕಾನೂನಿಗೆ, ಕಟ್ಟಳಗೆ ಒಳಪಡದ ವಿಷಯ.

ಒಂದು ಗಂಡು, ಹೆಣ್ಣು ಮದುವೆಯಾಗಲು ವಯಸ್ಸು ಬಿಟ್ಟು ಬೇರೆ ಯಾವುದೇ ಅರ್ಹತೆಯನ್ನು ಸಮಾಜ ಬಯಸುವುದಿಲ್ಲ (ವೈಯುಕ್ತಿಕವಾಗಿ ಅರ್ಹತೆ ಬೇಕಾಗಬಹುದು ಆದರೆ ಇಷ್ಟು ಸಂಪಾದಿಸಬೇಕು, ಇಷ್ಟು ಓದಿರಲೇಬೇಕು, ಮನೋಭಾವ ಹೀಗಿರಬೇಕು ಎಂಬುದೆಲ್ಲಾ ಏನಿಲ್ಲ) ಮಕ್ಕಳೂ ಅಷ್ಟೇ… ಮದುವೆಯಾಗಿದೆ, ದೈಹಿಕವಾಗಿ ಸಾಧ್ಯವಿದೆ.. ಹಾಗಾಗಿ ಮಕ್ಕಳಾಗುತ್ತವೆ. ಎಲ್ಲಾ ಕೆಲಸಕ್ಕೂ ಒಂದು ವಿದ್ಯಾರ್ಹತೆ, ಮನೋಬಲ ಎಂದೆಲ್ಲಾ ಕೇಳುವ ಸಮಾಜ, ಮುಂದಿನ ಸಮಾಜದ ಸದಸ್ಯರನ್ನು ರೂಪಿಸುವ ಜವಾಬ್ದಾರಿ ಉಳ್ಳ ತಂದೆ-ತಾಯಿ ಎಂಬ ಸ್ಥಾನಕ್ಕೆ ಯಾವುದೇ ಕಂಡೀಷನ್ ಹಾಕುವುದಿಲ್ಲ. ಮಕ್ಕಳ ಮೇಲೆ ಇರುವ ಸಹಜ ಪ್ರೀತಿಯಿಂದ ಪ್ರತಿಯೊಬ್ಬ ತಂದೆ ತಾಯಿಯು ಆ ಮಕ್ಕಳು ಚೆನ್ನಾಗಿ ಇರಲಿ ಎಂಬ ಅಭಿಲಾಷೆಯಿಂದಲೇ ಅವರ ಆರೈಕೆ ಮಾಡಿ ಬೆಳೆಸುತ್ತಾರೆ. ನಿಜ, ಸತ್ಯ ಆದರೆ ಮಕ್ಕಳಿಗೆ ಏನು ಬೇಕು, ಉತ್ತಮ ಸಮಾಜಕ್ಕೆ ನಮ್ಮ ಮಕ್ಕಳು ಹೇಗಿರಬೇಕು ಎಂದೆಲ್ಲಾ ಯೋಚಿಸುವ ಗೋಜಿಗೆ ಎಷ್ಟೋ ಮಂದಿ ತಂದೆ ತಾಯಂದಿರು ಹೋಗುವುದೇ ಇಲ್ಲ. ಅವರಿಗೆ ಏನು ಬೇಕು ಎನ್ನುವುದೇ ಅವರಿಗೆ ಮುಖ್ಯವಾಗಿರುತ್ತದೆ. ಮಕ್ಕಳು ತಮ್ಮ ಒಂದು ಮುಂದುವರಿದ ಭಾಗ ಎಂದು ಹೆಚ್ಚಿನ ತಂದೆ ತಾಯಂದಿರು ಭಾವಿಸುತ್ತಾರೆ. ಅವರು ಮಾಡಲಾಗದ್ದು, ಇನ್ಯಾರೋ ಮಾಡಿದ್ದು, ಇವರು ಮಾಡಬೇಕಿದ್ದು, ಇನ್ಯಾರದ್ದೋ ಮಗು ಮಾಡುತ್ತಿರುವುದು.. ಅವೆಲ್ಲವನ್ನು ತಮ್ಮ ಮಗು ಮಾಡಬೇಕೆಂದು ಬಯಸುತ್ತಾರೆ, ಒತ್ತಡ ಹೇರುತ್ತಾರೆ, ಬೈಯ್ಯುತ್ತಾರೆ, ಹೊಡೆಯುತ್ತಾರೆ, ಪ್ರಲೋಭನೆ ಒಡ್ಡುತ್ತಾರೆ, emotional blackmail  ಮಾಡುತ್ತಾರೆ. ಗುರಿ ತಂದೆ ತಾಯಿಯರದಾಗಿರುತ್ತದೆ. ಓಡುವ ಕುದುರೆ ಮಕ್ಕಳಾಗಿರುತ್ತಾರೆ.

ತಮ್ಮ ಮಗು ಫಸ್ಟ್ ರ್ಯಾಂಕೇ ಬರಬೇಕು… ಎಂಬುದಂತೂ ಅನಕ್ಷರಸ್ಥ ತಂದೆತಾಯಿ ಅಥವಾ ವಿದ್ಯಾವಂತ, ಸುಶಿಕ್ಷಿತ ತಂದೆ ತಾಯಿಯರ ಅಭಿಲಾಷೆ.

ನಾನು ಪ್ರಾರಂಭದಲ್ಲಿ ಹೇಳಿದ ಘಟನೆಯಂತೆ ರಾಹುಲ್ ನಾವು ಮಾಮೂಲಾಗಿ ಕಾಣುವ ಕುಟುಂಬದಿಂದ ಬಂದಿರುವ ಹುಡುಗ. ಫಸ್ಟ್ ರ್ಯಾಂಕ್ ಬಂದರೆ ಚಾಕೊಲೇಟ್ ಕೊಡಿಸುತ್ತೇನೆ ಎಂಬ ಪ್ರಲೋಭನೆ… ಈ ನಡುವೆ ಫಸ್ಟ್ ರ್ಯಾಂಕ್ ಬರದೇ ಇದ್ದರೆ ಹೊಡೆಯುತ್ತೇನೆ ಎಂದು ಶಿಕ್ಷಿಸುವ ಹಂತ ತಲುಪಿರುವ ಕುಟುಂಬದಿಂದ ಬಂದಿರುವ ಮಗುವಿನ ನೋವು, ಸಂಕಟ, ಹೆದರಿಕೆ ಅರ್ಥಮಾಡಿಕೊಳ್ಳುವ ಮನೋಭಾವ ಹೊಂದಿರುವ ಶಶಾಂಕ್ ಎಂಬ ಹುಡುಗ ಬಂದಿರುವ ಕುಟುಂಬ ಎಂತಹದು ಎಂಬುದನ್ನು ನಾವು ಅರಿಯಬೇಕು. ಆ ತಂದೆ ತಾಯಿ ನಮಗೆ ಉದಾಹರಣೆಯಾಗಬೇಕು, ಆದರ್ಶವಾಗಬೇಕು, ನಮ್ಮ ಮಕ್ಕಳು ವಿಶಾಲವಾಗಿ ಬೆಳೆಯಬೇಕು. ಹರಡಿಕೊಳ್ಳಬೇಕು, ನೆರಳಾಗಬೇಕು, ಒಂಟಿಯಾಗಿ ಎತ್ತರಕ್ಕೆ ಬೆಳೆದು, ಗಾಳಿ ಬೀಸಿದಾಗ ವಾಲಿ, ಬಾಗಿ ಬೀಳುವ ಹಾಗೆ ಇರಬಾರದು.

ತಾಯಿ ಅಸಹನೆಯುಳ್ಳ ವ್ಯಕ್ತಿತ್ವದವಳಾಗಿದ್ದರೆ ಮಕ್ಕಳು ಅದನ್ನು ಮೈಗೂಡಿಸಿಕೊಂಡು ಬೆಳೆಯುತ್ತಾರೆ. ಒಂದಾಗಿ ಬಾಳುವುದಕ್ಕಿಂತ ಒಂಟಿಯಾಗಿ ಬಾಳುತ್ತಾರೆ. ಆದಕ್ಕಾಗಿಯೇ ನಮ್ಮ ಹಿರಿಯರು ತಾಯಿಯನ್ನು  ಭೂತಾಯಿಗೆ, ಜನನಿಯನ್ನು ಧರಿಣಿಗೆ ಹೋಲಿಸಿ ವರ್ಣಿಸಿದ್ದಾರೆ. ಆ ತಾಳ್ಮೆ, ಸಹನೆ ಅವಳಿಗಿದ್ದರೆ ಅವಳು ಬೆಳೆಸುವ ಮಕ್ಕಳು ಸಮಾಜದ ಸ್ವಾಸ್ಯ ಕಾಪಾಡುವ ಸತ್ಪ್ರಜೆಗಳಾಗುತ್ತಾರೆ. ಒಂಟಿಯಾಗಿ ತಮ್ಮಲ್ಲಿ ತಾವೇ ಮುಳುಗಿರುವ ಕೂಪಮಂಡೂಕಗಳಾಗುವುದಿಲ್ಲ.

Leave a Reply