ಹಾಯ್.. ಕ್ರಿಸ್ ಮಸ್ ಮಸ್ತಾಗಿತ್ತಾ? ಈಗ ಕೋಕಕೋಲಾ ಸಾಂತಾಕ್ಲಾಸರನ್ನು ಹೈಜಾಕ್ ಮಾಡಿದ ಕತೆ ಹೇಳ್ತೀವಿ ಕೇಳಿ!

ಸೌಮ್ಯ ಸಂದೇಶ್

 ಕೆಂಪಂಗಿ- ಬಿಳಿಪಟ್ಟೆಯ ಸಾಂತಾಕ್ಲಾಸ್ ಅಂದರೆ ಯಾರಿಗೆ ತಾನೇ ಮುದ್ದಾಗುವುದಿಲ್ಲ? ಕ್ರಿಸ್ ಮಸ್ ಎಂಬ ಶಬ್ದ ಕೇಳಿದೊಡನೆ ನಮ್ಮ ಚಿತ್ತದಲ್ಲಿ ಅರಳುವ ಕಲ್ಪನೆಯಲ್ಲಿ ಸಾಂತಾಕ್ಲಾಸ್ ಗೆ ಅಗ್ರಸ್ಥಾನ ಇದ್ದೇ ಇರುತ್ತದೆ. ಉಡುಗೊರೆಗಾಗಿ ಮಕ್ಕಳೆಲ್ಲ ಸುತ್ತುವರಿದಿರುವ ಹಿರಿ ಮನುಷ್ಯ ಸಾಂತಾಕ್ಲಾಸ್, ಚೀಲದಿಂದ ಬೇಕಾದ್ದೆಲ್ಲವ ತೆಗೆದುಕೊಡಬಲ್ಲ ಕಿಂದರಿಜೋಗಿ ಥರ ನಮ್ಮೆಲ್ಲರಲ್ಲೂ ಅಚ್ಚೊತ್ತಿದ್ದಾನೆ.

ಹೀಗೊಂದು ಗಿಫ್ಟ್ ತಾತನ ಪರಿಕಲ್ಪನೆ ಹೇಗೆಲ್ಲ ಹುಟ್ಟಿಕೊಂಡ್ತು ಎಂಬ ಕುತೂಹಲ ಸಹಜವಲ್ಲವೇ? ಕ್ರೈಸ್ತ ಪುರಾಣದೊಂದಿಗೆ ಮಿಳಿತಗೊಂಡ ಸಾಂತಾಕ್ಲಾಸ್, ಲಾಗಾಯ್ತಿನಿಂದ ಕ್ರಿಸ್ ಮಸ್ ಸಂದರ್ಭದಲ್ಲಿ ಪ್ರಮುಖ ಪಾತ್ರವಾಗಿ ಬೆಳೆದು ಬಂದಿರುವುದು ಸತ್ಯ. ಆದರೆ ಒಂದು ಸಮಾನ ಸೂತ್ರದಲ್ಲಿ, ಜಗತ್ತಿನಾದ್ಯಂತ ಏಕರೂಪವಾಗಿ ಕಡುಕೆಂಪು- ಬಿಳಿಬಟ್ಟೆಯಲ್ಲಿ ಸಾಂತಾಕ್ಲಾಸರನ್ನು ‘ಬ್ರಾಂಡ್’ ಮಾಡಿದ ಶ್ರೇಯಸ್ಸು ಕೋಕಕೋಲಾ ಕಂಪನಿಗೆ ಸಲ್ಲುತ್ತದೆ!

ನಿಜ. ಮಾರುಕಟ್ಟೆ ಪ್ರಭಾವ ಎಂಬುದು ಧಾರ್ಮಿಕ ಪಾತ್ರವನ್ನೂ ಆವರಿಸಿಕೊಳ್ಳುವಂಥ ಯುಗದಲ್ಲಿ ನಾವು ಬದುಕುತ್ತಿದ್ದೇವೆ ಅನ್ನೋದಕ್ಕೆ ಸಾಂತಾಕ್ಲಾಸ್ ಉತ್ತಮ ಉದಾಹರಣೆ. 1920ಕ್ಕೂ ಮೊದಲು, ಸಾಂತಾಕ್ಲಾಸರನ್ನು ಕೋಕಕೋಲಾ ತನ್ನ ಜಾಹೀರಾತಿಗೆ ಬಳಸಿಕೊಳ್ಳುವುದಕ್ಕೂ ಪೂರ್ವದಲ್ಲಿ, ಸಾಂತಾಕ್ಲಾಸ್ ಇಂಥದೇ ಯೂನಿಫಾರ್ಮ್ ಧಿರಿಸಿನಲ್ಲಿ ಕಾಣಿಸಿಕೊಳ್ಳುವ ಪರಿಪಾಠ ಇದ್ದಿರಲಿಲ್ಲ. ಹಿರಿಯಜ್ಜನ ಪೋಷಾಕನ್ನೇ ಧರಿಸಿ ಬಂದರೂ, ಬೇರೇ ಬೇರೆ ಬಣ್ಣ- ವಿನ್ಯಾಸಗಳ ಉಡುಪುಗಳಲ್ಲಿ ಸಾಂತಾಕ್ಲಾಸ್ ವೇಷವನ್ನು ಪ್ರಸ್ತುತ ಪಡಿಸಲಾಗುತ್ತಿತ್ತು.

1920ರಲ್ಲಿ ಸಾಂತಾಕ್ಲಾಸ್ ಇಮೇಜ್ ಬಳಸಿಕೊಂಡು, ಕೋಕಕೋಲ ಕಂಪನಿ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ, ‘ದ ಸ್ಯಾಟರ್ಡೆ ಇವನಿಂಗ್ ಪೋಸ್ಟ್’ ನಿಯತಕಾಲಿಕದಲ್ಲಿ ತನ್ನ ಉತ್ಪನ್ನವನ್ನು ಜಾಹೀರಾತು ಮಾಡಿತು. 1930ರಲ್ಲಿ ಸಾಂತಾಕ್ಲಾಸ್ ಕೋಕ್ ಪಾನೀಯ ಹೀರುತ್ತಿರುವ ದೊಡ್ಡ ಚಿತ್ರಗಳು ಮಾರುಕಟ್ಟೆ ಪ್ರದೇಶಗಳಲ್ಲಿ ಕಾಣಿಸಿಕೊಂಡವು.

‘ಅ ವಿಸಿಟ್ ಫ್ರಾಮ್ ಸೇಂಟ್ ನಿಕೊಲಸ್’ ಎಂಬ 1822ರ ಪದ್ಯವೊಂದನ್ನು ಇಟ್ಟುಕೊಂಡೇ ಸಾಂತಾಕ್ಲಾಸ್ ಚಿತ್ರಣವನ್ನು ಕಟ್ಟಿದ ಕೋಕಕೋಲಾ ಕಂಪನಿ, ಅದನ್ನು ತನ್ನ ಬ್ರಾಂಡ್ ನೊಂದಿಗೆ ಸಮೀಕರಿಸಿತು. ಸ್ನೇಹಭಾವದ, ಖುಷಿ ಖುಷಿಯಾಗಿರುವ ಸಾಂತಾಕ್ಲಾಸ್ ಇದೇ ಸಂಭ್ರಮ ಕೋಕ್ ಪೇಯದಲ್ಲೂ ಇದೆ ಎಂಬುದನ್ನು ಬಿಂಬಿಸುವಂತೆ ಚಿತ್ರಿತನಾದ. ಅಷ್ಟೇ ಅಲ್ಲ, ತನ್ನ ಬ್ರಾಂಡ್ ಬಣ್ಣವಾದ ಕೆಂಪನ್ನು ಸಾಂತಾಕ್ಲಾಸ್ ನಲ್ಲಿ ಮಿಳಿತಗೊಳ್ಳುವಂತೆ ಮಾಡಿತು ಕಂಪನಿ. ನಿಯತಕಾಲಿಕಗಳಲ್ಲಿ ಒಂದರ ಹಿಂದೊಂದರಂತೆ ಜಾಹೀರಾತುಗಳನ್ನು ಪ್ರಕಟಿಸಿದ ಪರಿಣಾಮವಾಗಿ ಹಾಗೂ ಜನಸಾಂದ್ರಿತ ಮಾರುಕಟ್ಟೆ ಪ್ರದೇಶಗಳಲ್ಲಿ ಸಾಂತಾಕ್ಲಾಸ್ ಕೋಕ್ ಪೇಯ ಹೀರುವ ಬಣ್ಣದ ಪೇಂಟಿಂಗ್ ಗಳು ಪ್ರದರ್ಶಿತವಾದ್ದರಿಂದ ಕಾಲಕ್ರಮೇಣ, ಸಾಂತಾಕ್ಲಾಸ್ ಅಂದ್ರೆ ಹೀಗೇನೇ ಎಂಬ ಚಿತ್ರಣ ಅಚ್ಚೊತ್ತಿತು.

santa2

ಯುರೋಪ್ ನಲ್ಲಿ ಸ್ಪೇನ್ ನಂಥ ರಾಷ್ಟ್ರಗಳಿಗೆ ಈಗಲೂ ಸಾಂತಾಕ್ಲಾಸ್ ರ ಇಂಥ ಅವತರಣಿಕೆ ಬಗ್ಗೆ ಕೋಪ ಇದೆ. ನಮ್ಮ ಸಾಂಪ್ರದಾಯಿಕ ಶೈಲಿ ಬಿಟ್ಟು ಅಮೆರಿಕದಿಂದ ಆಮದಾದ ಮಾರುಕಟ್ಟೆ ಮಾದರಿ ಅನುಸರಿಸೋದು ಸ್ವಲ್ಪವೂ ಸರಿ ಇಲ್ಲ ಎಂಬ ಅಂಬೋಣ ಅವರದ್ದು. ಹೀಗಾಗಿ ಸ್ಪೇನ್ ನ ಕಾತಲುನ್ಯ ಹಾಗೂ ಆರೋಗೊನೆಸ್ ರಾಜ್ಯಗಳಲ್ಲಿ ಇಂದಿಗೂ ಸಾಂತಾಕ್ಲಾಸ್ ಪರಿಕಲ್ಪನೆ ಬದಲಾಗಿ ‘ಕಾಗ ತಿಯೋ’ ಬಳಸುತ್ತಾರೆ. ಸಾಂತಾ ಕ್ಲಾಸ್ ಇಲ್ಲಿನ ಮಾಸ್ ಗೆ ಅಲರ್ಜಿ!
ಏನಿದು ಕಾಗ ತಿಯೋ?
ಎರಡೋ ಮೂರೋ ಅಡಿ ಉದ್ದದ ಮರದ ತುಂಡಿಗೆ ನಗು ಮುಖ ಬರೆದು, ನಾಲ್ಕು ಕಡ್ಡಿ ಕಾಲಿನಂತೆ ಸಿಗಿಸಿ ಅದರ ಮೇಲೊಂದು ಹೊದಿಕೆ ಹೊದಿಸುತ್ತಾರೆ. ಡಿಸೆಂಬರ್ 8 ನೆ ತಾರೀಕಿಗೆ ಇದನ್ನು ಮನೆಯಲ್ಲಿ ಇಡುತ್ತಾರೆ. ನಿತ್ಯವೂ ಅದರ ಮುಂದೆ ಒಂದಷ್ಟು ತಿಂಡಿ ತಿನಿಸು ಇಟ್ಟು, ‘ಕೊಟ್ಟ ತಿಂಡಿ ತಿಂದು ಕ್ರಿಸ್ಮಸ್ ನಲ್ಲಿ ಉಡುಗೊರೆ ನೀಡುತ್ತದೆ’ ಎಂದು ಮಕ್ಕಳಿಗೆ ಹೇಳುತ್ತಾರೆ. ಅದನ್ನೇ ನಂಬಿದ ಮಕ್ಕಳು ನಿತ್ಯವೂ ಕಾಗ ತಿಯೋ ಮರದ ತುಂಡಿನ ಮುಂದೆ ಶ್ರದ್ದಾ ಭಕ್ತಿಯಿಂದ ತಿಂಡಿ ಇಟ್ಟು, ನನಗೆ ಇಂತಹ ಉಡುಗೊರೆ ಬೇಕು ಎಂದು ನಿವೇದಿಸಿಕೊಳ್ಳುತ್ತಾರೆ. ಡಿ. 24 ರ ದಿನ ಮನೆ ಹಿರಿಯರು, ಕೆಲವೊಮ್ಮೆ ಮಕ್ಕಳು ಸಣ್ಣ ಕಡ್ಡಿ ತೆಗೆದು ಕೊಂಡು ಕಾಗ ತಿಯೋ ಮೇಲೆ ಬಡಿದು  ‘ಇಷ್ಟು ದಿನ ತಿಂದೆಯಲ್ಲ ಈಗ ನನ್ನ ಉಡುಗೊರೆ ಕೊಡು’ ಎನ್ನುತ್ತಾರೆ. ಮಕ್ಕಳ ಉಡುಗೊರೆ ಮೊದಲೇ ತಂದು ಹೊದಿಕೆಯಡಿ ಬಚ್ಚಿಟ್ಟ ಹಿರಿಯರು ಅದನ್ನು ತೆಗೆದು ಮಕ್ಕಳಿಗೆ ಕಾಗ ತಿಯೋ ಕೊಟ್ಟಿತು ಎಂದು ಹೇಳಿ ಕೊಡುತ್ತಾರೆ.
ವರ್ಷ ಪೂರ್ತಿ ಮಕ್ಕಳಿಗೆ, ಈ ವರ್ಷ ನೀನು ಸರಿಯಾಗಿ ನಡೆದುಕೊಳ್ಳದಿದ್ದರೆ, ಹೇಳಿದ ಮಾತು ಕೇಳದಿದ್ದರೆ ಮುಂದಿನ ವರ್ಷ ಕಾಗ ತಿಯೋ ನಿನಗೆ ಉಡುಗೊರೆ ಕೊಡುವುದಿಲ್ಲ ಎಂದು ಹೆದರಿಸುವುದು ಸ್ಪೇನ್ ನಲ್ಲಿ ಸಾಮಾನ್ಯ.

ಸ್ಥಳೀಯ ಸೊಬಗನ್ನು ಹೊದ್ದ ಹಬ್ಬಗಳು ಮಾರ್ಕೆಟಿಂಗ್, ಬ್ರಾಂಡಿಂಗ್ ಲೋಕಕ್ಕೆ ಸಿಕ್ಕಾಗ ಹೇಗೆ ಪರಿವರ್ತನೆ ಹೊಂದಿಬಿಡುತ್ತವೆ ಎಂಬುದಕ್ಕೆ ಸಾಂತಾಕ್ಲಾಸ್ ಉದಾಹರಣೆ.

Leave a Reply