ನಾಯಕರ ಕಿಮ್ಮತ್ತು ಕಳೆದ ಪರಿವರ್ತನೆ, ಉದ್ಯಮಿಗಳಿಗೆ ಆಶ್ರಯವಾಯಿತು ಮೇಲ್ಮನೆ!

ಡಿಜಿಟಲ್ ಕನ್ನಡ ವಿಶೇಷ

ರಾಜ್ಯ ರಾಜಕೀಯದಲ್ಲಿ ಹಿರಿಯ ಮುಖಂಡರು ಹೇಗೆ ಕಿಮ್ಮತ್ತು ಕಳೆದುಕೊಳ್ಳುತ್ತಿದ್ದಾರೆ, ಜನಪ್ರತಿನಿಧಿಗಳು ಹೇಗೆ ನಾಯಕತ್ವ ಪರಿವರ್ತನೆಗೆ ತುಡಿಯುತ್ತಿದ್ದಾರೆ ಎಂಬುದನ್ನು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆ ಫಲಿತಾಂಶ ಪ್ರತಿಫಲಿಸಿದೆ.

ಪ್ರಸ್ತುತ ಮೇಲ್ಮನೆಗೆ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ಈಗಾಗಲೇ ಜನರಿಂದ ಆಯ್ಕೆಯಾಗಿರುವ ಪ್ರತಿನಿಧಿಗಳು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ – ಈ ಮೂರೂ ಪಕ್ಷಗಳ ಮತದಾರರು ತಮ್ಮ ಆಯ್ಕೆ ಸ್ವಾತಂತ್ರ್ಯವನ್ನು ಮುಕ್ತವಾಗಿ ಚಲಾಯಿಸಿದ್ದು, ಆಯಾ ಪಕ್ಷಗಳ ಹಿರಿಯ ಮುಖಂಡರಿಗೆ ಭಾರೀ ಮುಖಭಂಗವಾಗಿದೆ.

ನಿಜ, ಈ ಬಾರಿ ಚುನಾವಣೆಯನ್ನು ಆಳಿದ್ದು ದುಡ್ಡು ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ಪಕ್ಷ ಇದಕ್ಕೆ ಹೊರತಾಗಿರಲಿಲ್ಲ ಎಂಬುದೂ ಅಷ್ಟೇ ನಿಜ. ಆದರೂ ಲೆಕ್ಕಾಚಾರ ವಿಚಾರಕ್ಕೆ ಬರುವುದಾದರೆ 25 ಸ್ಥಾನಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4 ಹಾಗೂ 2 ಕಡೆ ಸ್ವತಂತ್ರ್ಯ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್ ಗೆ ಹಿಂದಿಗಿಂತ ಒಂದು ಸ್ಥಾನ ಹೆಚ್ಚು ಬಂದಿದ್ದರೆ, ಬಿಜೆಪಿ ಎರಡು, ಜೆಡಿಎಸ್ ಒಂದು ಸ್ಥಾನ ಕಳೆದುಕೊಂಡಿವೆ. ಆದರೆ ಇದರಿಂದ ಮೇಲ್ಮನೆಯಲ್ಲಿ ಪಕ್ಷಗಳ ಸ್ಥಾನಮಾನವೇನೂ ಬದಲಾಗುವುದಿಲ್ಲ. ಆದರೆ ಬದಲಾಗಿರುವುದು ಮಾತ್ರ ಆಯಾ ಪಕ್ಷಗಳ ಹಿರಿಯ ಮುಖಂಡರ ಮುಖಭಾವ.

ಕಾಂಗ್ರೆಸ್ ಬಲ ಕಾಯ್ದುಕೊಂಡಿರುವ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಬಲ ಆಭಾದಿತ. ಅವರನ್ನು ಅಲ್ಲಾಡಿಸಲು ನೆಪ ಹುಡುಕುತ್ತಿದ್ದವರಿಗೆ ಈ ಫಲಿತಾಂಶವೂ ಯಾವುದೇ ಅಸ್ತ್ರ ಒದಗಿಸಿಲ್ಲ. ಬದಲಿಗೆ ಆ ನಾಯಕರ ಕ್ಷೇತ್ರ ವ್ಯಾಪ್ತಿಯ ಅಭ್ಯರ್ಥಿಗಳೇ ಸೋಲು ಕಂಡಿದ್ದಾರೆ. ಹಾಗೇ ನೋಡಿದರೆ ಸಿದ್ದರಾಮಯ್ಯನವರು ವ್ಯಕ್ತಿಗತವಾಗಿ ಕಣಕ್ಕಿಳಿಸಿದ್ದ ಎಲ್ಲ ಅಭ್ಯರ್ಥಿಗಳೂ ಗೆಲವು ಸಾಧಿಸಿದ್ದಾರೆ. ಹೀಗಾಗಿ ಅವರ ಅಧಿಕಾರದ ಬಾಕಿ ಅವಧಿಯನ್ನು ದಲಿತ ಸಿಎಂ, ಆ ಸಿಎಂ, ಈ ಸಿಎಂ ಎಂಬ ಯಾವುದೇ ಮಂತ್ರಗಳು ಕಾಡುವ ಸಾಧ್ಯತೆಗಳು ಕಡಿಮೆ.

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಹಿಡಿದು ಹಿರಿಯ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜನ ಖರ್ಗೆ, ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ ಅವರವರೆಗೆ ಯಾರೊಬ್ಬರ ಮಾತನ್ನು ಮತ ಚಲಾಯಿಸಿದ ಅವರ ಪಕ್ಷಗಳ ಕಿರಿಯ ನಾಯಕರು ಕೇಳಿಲ್ಲ. ಅವರ ಮಾತು ಮತ್ತು ಗೌರವವನ್ನು ಮುಗಿಯುತ್ತಿರುವ ವರ್ಷದ ಜತೆಗೆ ಝಾಡಿಸಿ ಬಿಸಾಕಿದ್ದಾರೆ. ಅವರು ಹೊಸ ವರ್ಷದ ಜತೆಗೆ ಹೊಸ ರಾಜಕೀಯ ಶಕೆ ಬರಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ.

ಹಾಸನದಲ್ಲಿ ದೇವೇಗೌಡರ ಕುಟುಂಬ ಗೌರವದ ಪ್ರತೀಕವಾಗಿ ನಿಂತಿದ್ದ ಪಟೇಲ್ ಶಿವರಾಮು ಮಖಾಡೆ ಮಲಗಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಆಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಉಸ್ತುವಾರಿಯಲ್ಲಿ ಈ ಚುನಾವಣೆ ನಡೆದಿತ್ತು. ಇಲ್ಲಿ ಪ್ರಜ್ವಲ್ ಅಹಂಕಾರದ ಜತೆಗೆ ಗೌಡರ ಕುಟುಂಬದ ಮರ್ಯಾದೆಯೂ ಮಣ್ಣುಪಾಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಕುಮಾರಸ್ವಾಮಿ ಪ್ರತಿಷ್ಠೆ ಪ್ರತೀಕವಾಗಿದ್ದ ಇ. ಕೃಷ್ಣಪ್ಪ ಸೋತಿದ್ದಾರೆ. ಇಲ್ಲಿ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಸೋದರ ಸಂಬಂಧಿ ಎಸ್. ರವಿ ಗೆದ್ದಿದ್ದು, ಕುಮಾರಸ್ವಾಮಿ ಜತೆ ಮುನಿಸಿಕೊಂಡಿರುವ ಮಾಗಡಿ ಬಾಲಕೃಷ್ಣ ಹಾಲು ಕುಡಿದಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ನಿಂದ ಗೆದ್ದಿರುವ ಸಂದೇಶ್ ನಾಗರಾಜ್ ಒಂದು ಮಾತು ಆಡಿದ್ದಾರೆ. ತಮಗೆ ಟಿಕೆಟ್ ಕೊಡಲು ನಾಯಕರು ಸಾಕಷ್ಟು ಆಟ ಆಡಿಸಿದರು. ತಾವು ಗೆದ್ದದ್ದು ತಮಗಿರುವ ತಾಕತ್ತು ಮತ್ತು ಮೈಸೂರು-ಚಾಮರಾಜನಗರ ಪ್ರತಿನಿಧಿಗಳ ಸಹಕಾರದಿಂದಲೇ ಹೊರತು ದೇವೇಗೌಡರ ಕುಟುಂಬದ ಕಟಾಕ್ಷದಿಂದ ಅಲ್ಲವೇ ಅಲ್ಲ ಎಂದು. ನಾಯಕರ ಗೌರವ ಏನಾಗಿದೆ ಎಂಬುದಕ್ಕೆ ಇದಕ್ಕಿಂತ ನಿದರ್ಶನ ಬೇಕೇ?

ಇನ್ನು ಕಾಂಗ್ರೆಸ್ ಹೈಕಮಾಂಡ್ ಚಿಂತಕರ ಚಾವಡಿ ತುಂಡುಗಳೆನಿಸಿದ್ದ ಕೆ.ಎಚ್. ಮುನಿಯಪ್ಪ ಹಾಗೂ ವೀರಪ್ಪ ಮೊಯ್ಲಿ ಅವರ ಆರ್ಭಟಕ್ಕೆ ಇಡೀ ಕೋಲಾರ, ಚಿಕ್ಕಬಳ್ಳಾಪುರವೇ ಬೆಚ್ಚಿ ಬಿದ್ದಿತ್ತು. ಅಲ್ಲಿ ಜೆಡಿಎಸ್ ನ ಮನೋಹರ ಗೆಲುವಿನ ಆರ್ಭಟಕ್ಕೆ ಈ ಮುಖಂಡರಿಬ್ಬರೂ ಬೆಚ್ಚಿ ಬಿದ್ದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅಂದರೆ ಕಲ್ಬುರ್ಗಿ ಎಂದೆನಿಸಿದ್ದ ಜಾಗದಲ್ಲಿ ಕಾಂಗ್ರೆಸ್ಸಿನ ಅಲ್ಲಮಪ್ರಭು ಪಾಟೀಲರು ಸೋತಿದ್ದಾರೆ. ಬೆಳಗಾವಿಯಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲರು ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.

ಇನ್ನು ಯಡಿಯೂರಪ್ಪ, ಈಶ್ವರಪ್ಪ ಪಾಳೇಪಟ್ಟು ಇರುವ ಶಿವಮೊಗ್ಗದಲ್ಲಿ ಬಿಜೆಪಿ ಹಾಲಿ ಸದಸ್ಯ ಆರ್.ಕೆ. ಸಿದ್ರಾಮಣ್ಣ ಸೋತು ಸುಣ್ಣವಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯಡಿಯೂರಪ್ಪನವರಿಗೆ ಇದರಿಂದ ಭಾರೀ ಹಿನ್ನಡೆಯಾಗಿದೆ. ಮಂಡ್ಯದಲ್ಲಿ ಕೃಷ್ಮ ಮತ್ತು ಅಂಬರೀಶ್ ಗುಂಪಿನ ಕದನಕ್ಕೆ ಕಾಂಗ್ರೆಸ್ ಬಾಲ ಮುದುರಿದೆ. ಅಲ್ಲಿ ಜೆಡಿಎಸ್ ನ ಅಪ್ಪಾಜಿಗೌಡ ಗೆದ್ದಿದ್ದು, ಇವರ ಪರವಾಗಿ ತಮ್ಮ ಅಭ್ಯರ್ಥಿ ರಾಮಕೃಷ್ಣ ಅವರನ್ನು ಕಣದಿಂದ ಹಿಂದಕ್ಕೆ ಸರಿಸಿದ ಚಲುವರಾಯಸ್ವಾಮಿ ಒಡಲಲ್ಲಿ ಕಳ್ಳಿಹಾಲು ಸುರುವಿದಂತಾಗಿದೆ. ಆದರೆ ತಮ್ಮ ಎದುರಾಳಿ ಎಲ್.ಆರ್. ಶಿವರಾಮೇಗೌಡ ಸೋತಿದ್ದೊಂದೇ ಅವರಿಗೆ ಸಮಾಧಾನ.

ಇನ್ನು ಕುಟುಂಬ ರಾಜಕೀಯದ ಬೆನ್ನು ಹತ್ತಿದ್ದವರ ಪೈಕಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟಿ, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಪುತ್ರ ವಿಜಯ್ ಸಿಂಗ್, ಸಚಿವ ಡಿ.ಕೆ. ಶಿವಕುಮಾರ್ ಸೋದರ ಸಂಬಂಧಿ ಎಸ್. ರವಿ, ಶಾಸಕ ಅಪ್ಪಚ್ಚು ರಂಜನ್ ಸಹೋದರ ಸುನೀಲ್ ಸುಬ್ರಹ್ಮಣ್ಯ ಯಶಸ್ವಿಯಾಗಿದ್ದಾರೆ. ರಘು ಆಚಾರ್, ಮನೋಹರ್, ನಾರಾಯಣಸ್ವಾಮಿ, ಕಾಂತರಾಜು ಸೇರಿದಂತೆ ಗೆದ್ದಿರುವವರ ಪೈಕಿ ಶೇಕಡಾ 80 ರಷ್ಟು ಮಂದಿ ರಿಯಲ್ ಎಸ್ಟೇಟ್, ಸಿನಿಮಾ ಮತ್ತಿತರ ಉದ್ಯಮಿಗಳಾಗಿದ್ದು, ಮೇಲ್ಮನೆಯ ಖದರ್ರೇ ಬದಲಾಗಲಿದೆ.

ಈ ಫಲಿತಾಂಶ ನೋಡಿದಾಗ ಒಂದು ವಿಚಾರ ಸ್ಪಷ್ಟ. ಮತ ಚಲಾಯಿಸಿದವರು ಪಕ್ಷ ಮತ್ತು ಪಕ್ಷದ ಮುಖಂಡರ ಮಾತಿಗಿಂತ ಅವರು ತಮ್ಮ ಮನಸಾಕ್ಷಿಯ ಮಾತು ಕೇಳಿದ್ದಾರೆ. ಆ ಮನಸಾಕ್ಷಿಯನ್ನು ಅಭ್ಯರ್ಥಿಗಳು ಕೊಟ್ಟ ಹಣ ಆಳಿದೆಯೋ ಅಥವಾ ಆತ್ಮಾಭಿಮಾನ ಪಾರಮ್ಯ ಮೆರೆದಿದಿಯೋ ಅದು ಬೇರೆ ಮಾತು. ಆದರೆ ಈ ಎರಡರ ಮುಂದೆ ಹಿರಿಯರು ನಗಣ್ಯ ಎಂಬುದಂತೂ ಸಾಬೀತಾಗಿದೆ. ಹೀಗಾಗಿಯೇ ಮುಖಂಡರುಗಳ ಕರ್ಮಭೂಮಿಯಲ್ಲೇ ಅವರ ಪ್ರಾಯೋಜಿತ ಅಭ್ಯರ್ಥಿಗಳಿಗೆ ಮಣ್ಣು ಮುಕ್ಕಿಸಿದ್ದಾರೆ. ಆ ಮೂಲಕ ತಾವು ತುಳಿಯುವ ದಾರಿಯೇ ಬೇರೆ ಎಂಬುದನ್ನು ಶೃತಪಡಿಸಿದ್ದಾರೆ. ಅವರಿಗೆ ಹಿರಿಯ ತಲೆಗಳನ್ನು ನೋಡಿ, ಅವರ ಮಾತುಗಳನ್ನು ಕೇಳಿ ಸಾಕಾಗಿ ಹೋಗಿರುವಂತಿದೆ. ಬದಲಾವಣೆ ಬೇಕಿರುವಂತಿದೆ. ಆದರೆ ಅವರು ಬಯಸಿರುವ ಬದಲಾವಣೆ ಹಾದಿಯಲ್ಲಿ ವ್ಯವಸ್ಥೆ ಸುಧಾರಣೆಯ ಉದ್ದೇಶವೊಂದೇ ಕಾಣುತ್ತಿಲ್ಲ. ಬದಲಿಗೆ ಸ್ವಾರ್ಥವೂ ಮೇಳೈಸಿದೆ. ಇದು ರಾಜಕೀಯ ದುರಂತ.

2 COMMENTS

  1. It is true. Tumba sogasagi barediddiri. Nimma baravanige shaili, shabdagala jote ata aduva reeti tumba maja kodutte.Brilliant.

Leave a Reply