ಪುಗ್ಸಟ್ಟೆ ಇಂಟರ್ನೆಟ್ ಸ್ಕೀಮು ದುಬಾರಿಯೋ, ಒಳ್ಳೇದೋ? ಜನವರಿ 7ರೊಳಗೆ ಕೇಂದ್ರಕ್ಕೆ ತಿಳಿಸಿ…

ಡಿಜಿಟಲ್ ಕನ್ನಡ ಟೀಮ್

ಫ್ರೀ ಬೇಸಿಕ್ಸ್ ಸೇರಿದಂತೆ ಅಂತರ್ಜಾಲ ತಾಟಸ್ಥ್ಯ ಅಲುಗಾಡಿಸಬಹುದು ಎಂಬ ಆತಂಕವಿರುವ ಯೋಜನೆಗಳು ಬೇಕೋ, ಬೇಡವೋ ಎಂಬ ಬಗ್ಗೆ ಜನಸಾಮಾನ್ಯರು ತಮ್ಮ ಅಭಿಪ್ರಾಯ ಹೇಳುವುದಕ್ಕೆ ಇದ್ದ ಗಡುವನ್ನು ಟ್ರಾಯ್,(ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಜನವರಿ 7ರವರೆಗೆ ವಿಸ್ತರಿಸಿದೆ.

ನೀವು ಮಾಡಬಹುದಾದದ್ದು

www.trai.gov.in ವೆಬ್ ಸೈಟ್ ಗೆ ಹೋಗಿ, ಅಲ್ಲಿ, consultation paper on differential pricing for data service ಎಂಬ ವಿಷಯ ಕ್ಲಿಕ್ಕಿಸಿದರೆ ಅಲ್ಲಿ ಪ್ರಸ್ತಾವವನ್ನು ಓದುವ, ನಿಮ್ಮ ಕಾಮೆಂಟ್ ಸಲ್ಲಿಸುವ ಅವಕಾಶ ತೆರೆದುಕೊಳ್ಳುತ್ತದೆ. advisorfea1@tria.gov.in ಗೆ ಇ ಮೇಲ್ ನಲ್ಲೂ ನಿಮ್ಮ ಅಭಿಪ್ರಾಯ ತಿಳಿಸಬಹುದು.

ಚರ್ಚೆ ಹುಟ್ಟಿದ್ದು, ಬೆಳೆದಿದ್ದು..  

  • ಫ್ರೀ ಬೇಸಿಕ್ಸ್ ಮೂಲಕ ಬಡವರನ್ನು- ಭಾರತವನ್ನು ಬೆಸೆಯುತ್ತೇವೆ ಎಂದಿರುವ ಫೇಸ್ ಬುಕ್ ನದ್ದು ಅಂತರ್ಜಾಲದಲ್ಲಿ ಏಕಸ್ವಾಮ್ಯ ಸ್ಥಾಪಿಸುವ ಇರಾದೆ ಅಂತ ಆಕ್ಷೇಪಗಳು ಎದ್ದಿವೆ. ಹೀಗಾಗಿ ಫೇಸ್ ಬುಕ್- ರಿಲಾಯನ್ಸ್ ಸಹಭಾಗಿತ್ವದ ಫ್ರೀ ಬೇಸಿಕ್ಸ್, ಏರ್ಟೆಲ್ ನ ಜಿರೋ ರೇಟಿಂಗ್ ಇಂಥವೆಲ್ಲ ಪ್ಲಾನ್ ಗಳನ್ನು ಟ್ರಾಯ್ ಸದ್ಯಕ್ಕೆ ತಡೆಹಿಡಿದಿದೆ.
  • ಐಐಟಿಯ 40 ಪ್ರೊಫೆಸರ್ ಗಳು ಹಾಗೂ ಭಾರತದ 9 ಪ್ರಮುಖ ಸ್ಟಾರ್ಟ್ ಅಪ್ ಕಂಪನಿಗಳ ಸ್ಥಾಪಕರು ಟ್ರಾಯ್ ಗೆ ಪತ್ರ ಬರೆದು, ಫೇಸ್ ಬುಕ್ ನ ಫ್ರೀ ಬೇಸಿಕ್ಸ್, ಅಂತರ್ಜಾಲ ಸ್ವಾತಂತ್ರ್ಯವನ್ನು ಕಸಿಯುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
  • ಪೇಟಿಎಂ ಸಂಸ್ಥಾಪಕ ವಿಜಯ ಶೇಖರ ಶರ್ಮಾ ಅವರು ಫ್ರೀ ಬೇಸಿಕ್ಸ್ ಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ, ಅಂತರ್ಜಾಲ ಉಳಿಸುವುದಕ್ಕೆ ಜಿಹಾದ್ ನಡೆಯಬೇಕಿದೆ ಎಂದು ಟ್ವೀಟ್ ಮಾಡಿದ್ದರು. ಅವರಿಗೆ ಫೇಸ್ ಬುಕ್ ನ ಮಾರ್ಕ್ ಜುಕರ್ ಬರ್ಗ್ ದೂರವಾಣಿ ಕರೆ ಮಾಡಿ ಮಾತಾಡಿದ್ದಾರೆ. ಭಾರತದಲ್ಲಿ ಫ್ರೀ ಬೇಸಿಕ್ಸ್ ಅನ್ನು ಶತಾಯಗತಾಯ ಅನುಷ್ಠಾನಕ್ಕೆ ತಂದೇ ಸಿದ್ಧ ಎಂಬ ನಿಲುವಿನಲ್ಲಿರುವ ಫೇಸ್ ಬುಕ್, ಈ ಬಗ್ಗೆ ಜಾಹೀರಾತಿಗೆ ಕೋಟ್ಯಂತರ ರುಪಾಯಿಗಳನ್ನು ಸುರಿಯುತ್ತಿದೆ. ಅಲ್ಲದೇ, ಭಾರತದ ಫೇಸ್ ಬುಕ್ ಬಳಕೆದಾರರಿಗೆ ತನ್ನ ಪರ ಪಿಟಿಷನ್ ಸಲ್ಲಿಸುವಂತೆ ಕೋರಿ, ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ನೆಟ್ ನ್ಯೂಟ್ರಾಲಿಟಿಯ ಈ ಚರ್ಚೆಯಲ್ಲಿ ಸಾಮಾನ್ಯನೂ ಭಾಗವಹಿಸಿ ಸರ್ಕಾರಕ್ಕೆ ತನ್ನ ಅಭಿಮತ ತಲುಪಿಸುವುದು ಅಗತ್ಯ. ದೇಶ ಕಾಳಜಿ ತೋರಿಸುವುದೆಂದರೆ ಪಾಕಿಸ್ತಾನವನ್ನು ಬಯ್ಯುವುದು ಮಾತ್ರವಲ್ಲ. ಇಂಥ ವಿಷಯಗಳನ್ನೂ ಅರ್ಥ ಮಾಡಿಕೊಂಡು ಸ್ಪಷ್ಟತೆ ಕಂಡುಕೊಳ್ಳುವುದು. ಈ ಚರ್ಚೆಯಲ್ಲಿ ಪರ- ವಿರೋಧದ ಆಯಾಮಗಳೆರಡೂ ಇವೆ. ಹೀಗಾಗಿ ಮಿದುಳಿಗೆ ಕೆಲಸ ಕೊಡಬೇಕಾದದ್ದು ಅನಿವಾರ್ಯ.

ಫೇಸ್ ಬುಕ್ ನ ಫ್ರೀ ಬೇಸಿಕ್ಸ್ ಆತಂಕ ಹುಟ್ಟಿಸೋದೇಕೆ ಅಂತ ವಿವರಿಸುವ ಎರಡು ಲೇಖನಗಳು ಡಿಜಿಟಲ್ ಕನ್ನಡದಲ್ಲಿ ಪ್ರಕಟವಾಗಿವೆ.

Leave a Reply