ಸಿಎಸ್ ಹುದ್ದೆಗೆ ಜಾಧವ್ ನೇಮಕದ ಮೂಲಕ ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆದ ಸಿಎಂ

 

ಡಿಜಿಟಲ್ ಕನ್ನಡ ಟೀಮ್

ಕೇಂದ್ರ ಸರಕಾರದ ಸೇವೆಯಲ್ಲಿದ್ದ ಹಿರಿಯ ಐಎಎಸ್ ಅಧಿಕಾರಿ ಅರವಿಂದ ಜಾಧವ್ ಅವರನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಮೂಲಕ  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆದಿದ್ದಾರೆ.

ಮುಖ್ಯ ಕಾರ್ಯದರ್ಶಿ ಹುದ್ದೆಗೆ ಪೈಪೋಟಿಯಲ್ಲಿ ಇರದಿದ್ದ, ಆರು ತಿಂಗಳ ಸೇವೆಯಷ್ಟೇ ಬಾಕಿ ಇರುವ ಜಾಧವ್ ಅವರ ದಿಢೀರ್ ನೇಮಕ ರಾಜಕೀಯ ವಲಯದಲ್ಲಿ ಅಚ್ಚರಿ ತಂದಿರುವುದು ಸುಳ್ಳಲ್ಲ. ಆದರೆ ಸಿದ್ದರಾಮಯ್ಯನವರ ಈ ನಡೆ ಜಾಣತನದ ಮೂರು ಅಂಶಗಳಿಂದ ಕೂಡಿದೆ. ಒಂದೆಡೆ ಐದು ತಿಂಗಳ ಸೇವೆಯಷ್ಟೇ ಬಾಕಿ ಇರುವ ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಉಮೇಶ್ ಪರ ನಡೆದಿದ್ದ ಲಿಂಗಾಯತ ಲಾಬಿಯನ್ನು ಹತ್ತಿಕ್ಕಿದ್ದಾರೆ. ಅದೇ ಕಾಲಕ್ಕೆ ತಮಗೆ ಅಂಟಬಹುದಾಗಿದ್ದ ಲಿಂಗಾಯತ ವಿರೋಧಿ ಹಣೆಪಟ್ಟಿ ಕಳಚಿಕೊಂಡಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಈಗ ಹುದ್ದೆಗೆ ತರಬೇಕೆಂದು ಬಯಸಿದ್ದ ಬಿ.ಎಸ್. ಪಟ್ನಾಯಕ್ ಅಥವಾ ರತ್ನಪ್ರಭಾ ಅವರ ಭವಿಷ್ಯದ ನೇಮಕಕ್ಕೆ ದಾರಿ ಸುಗಮ ಮಾಡಿಕೊಂಡಿದ್ದಾರೆ.

ಉಮೇಶ್ ಅವರನ್ನೇ ಮುಖ್ಯ ಕಾರ್ಯದರ್ಶಿ ಮಾಡಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ ಅವರು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಆದರೆ ಸಿಎಂಗೆ ಪಟ್ನಾಯಕ್ ಅಥವಾ ರತ್ನಪ್ರಭಾ ಅವರನ್ನು ಈ ಹುದ್ದೆಗೆ ತರಬೇಕೆಂಬ ಇಚ್ಛೆ ಇತ್ತು. ಆದರೆ ಲಿಂಗಾಯತ ಲಾಬಿ ಒತ್ತಡ ತೀವ್ರವಾಗಿತ್ತು. ಸೇವಾ ಹಿರಿತನ ಕಡೆಗಣಿಸಿ ಪಟ್ನಾಯಕ್ ಅಥವಾ ರತ್ನಪ್ರಭಾ ಅವರನ್ನು ಮಾಡಿದರೆ ಲಿಂಗಾಯತ ವಿರೋಧಿ ಪಟ್ಟು ಅವರಿಗೆ ಕಾಯಂ ಆಗುತ್ತಿತ್ತು. ಹೀಗಾಗಿ ಒತ್ತಡಕ್ಕೆ ಬಿದ್ದ ಸಿದ್ದರಾಮಯ್ಯನವರು ಸೇವಾ ಹಿರಿತನದಲ್ಲಿ ಉಮೇಶ್ ಅವರಿಗಿಂತಲೂ ಮುಂದಿರುವ ಜಾಧವ್ ಅವರನ್ನು ನೇಮಕ ಮಾಡಿದ್ದಾರೆ. ಹೀಗಾಗಿ ಸೇವಾ ಹಿರಿತನ ಯಾರೂ ಪ್ರಶ್ನಿಸುವಂತಿಲ್ಲ. ಜಾಧವ್ ಅವರ ಆರು ತಿಂಗಳ ಅವಧಿ ಮುಗಿವ ವೇಳೆಗೆ ಉಮೇಶ್ ನಿವೃತ್ತಿ ಆಗಿರುತ್ತಾರೆ. ಆಗ ಪಟ್ನಾಯಕ್ ಅಥವಾ ರತ್ನಪ್ರಭಾ ಅವರನ್ನು ನೇಮಕ ಮಾಡಲು ಯಾವುದೇ ಅಡ್ಡಿ ಇಲ್ಲ.

Leave a Reply