ಹೆಣ್ಣುತನ, ಗಂಡುತನಗಳು ಸೃಷ್ಟಿಯ ವೈರುಧ್ಯವೇ ಹೊರತು ಭೇದವಲ್ಲ

ಅಕ್ಕಮಹಾದೇವಿ ಪ್ರತಿಮೆ

author-vasundara12ನೇ ಶತಮಾನ ಕನ್ನಡ ಸಾಮಾಜಿಕ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಕಾಲಘಟ್ಟ. ವರ್ಣ ವ್ಯವಸ್ಥೆಯ ವಿರುದ್ಧವಾಗಿ ನಡೆದ ಹೋರಾಟದಲ್ಲಿ ಎಲ್ಲ ವರ್ಗದ ಜನರೂ ಪಾಲ್ಗೊಂಡಿದ್ದರು. ಮಹಿಳೆಯರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಗಮನಕ್ಕೆ ಬರುವುದು ಆ ಚಳುವಳಿಗಳ ಒಂದು ಮಹತ್ವದ ಸಾಧನೆ. ಅಲ್ಲಿ ಪಾಲ್ಗೊಂಡಿದ್ದ ಕಾಯಕಜೀವಿಗಳು ಅದರಲ್ಲೂ ವಿಶೇಷವಾಗಿ ಕೆಳವರ್ಗದ ಕಾಯಕಜೀವಿ ಮಹಿಳೆಯರು ಆ ಚಳುವಳಿಯ ಜೀವನಾಡಿಯಾಗಿ ಮಾತನಾಡಿದ್ದಾರೆ. ಸತ್ಯಕ್ಕ ಒಬ್ಬ ಜಾಡಮಾಲಿ ಶರಣೆ. ತನ್ನ ವಚನದಲ್ಲಿ ಲಂಚದ ಬಗ್ಗೆ ಮಾತನಾಡಿದ್ದಾಳೆ. ಅದು ಕೊಟ್ಟರೆ ತೆಗೆದುಕೊಳ್ಳುವ ಲಂಚವಲ್ಲ ತನ್ನದಲ್ಲದ ದ್ರವ್ಯವನ್ನು ಲಪಾಟಾಯಿಸುವ ಯಾವುದೇ ಕ್ರಿಯೆಯನ್ನು ಲಂಚವೆಂದು ಭ್ರಮಿಸಿ ತಿರಸ್ಕರಿಸಿದ್ದಾಳೆ ಸತ್ಯಕ್ಕ.

ಲಂಚವಂಚನಕೆ ಕೈಯಾಣದ ಭಾಷೆ

ಬೀದಿಯಲ್ಲಿ ಬಿದ್ದ ಹೊನ್ನವಸ್ತ್ರವ

ಒಂದರಗಳಿಗೆ ಮುಟ್ಟಿಸಿನಾದೆಡೆ

ನಿಮ್ಮಾಣೆ ನಿಮ್ಮ ಪ್ರಮರ್ಥಣೆ

ಮುಟ್ಟಿದೆನಾದೊಡೆ ನೀನಾಗಲೇ

ಎನ್ನ ನರಕದಲ್ಲಿ ಅದ್ದಿ ಎದ್ದು ಹೋಗಾ ಶಂಭುಜಕ್ಕೇಶ್ವರ

ಎಂದು ದೇವರಿಗೆ ಸವಾಲು ಹಾಕುತ್ತಾಳೆ. ಬೀದಿಯ ಕಸಗುಡಿಸುವಾಗ ತನ್ನದಲ್ಲದ ಹೊನ್ನವಸ್ತ್ರವನ್ನು ಕಸದಂತೆ ಪರಿಭಾವಿಸಿ ಗುಡಿಸಿ ಎಸೆಯುವ ಈ ಮನೋಧರ್ಮ ಎಷ್ಟು ಜನರಲ್ಲಿ ಬಂದೀತು? ಅದಕ್ಕೆ ಇವರು ತನ್ನನ್ನು ಸತ್ಯಶುದ್ಧ ಕಾಯಕ ಜೀವ ಎಂದು ಕರೆದುಕೊಂಡಿದ್ದಾರೆ. ಅದೇ ರೀತಿ ಆಯ್ದಕ್ಕಿ ಲಕ್ಕಮ್ಮನೆಂಬ ಶಿವಶರಣೆ ತನ್ನ ಗಂಡ ಹೆಚ್ಚಿನ ಅಕ್ಕಿಯನ್ನು ಆರಿಸಿಕೊಂಡು ಬಸವಣ್ಣನ ಮಹಾಮನೆಯಿಂದ ಆರಿಸಿ ತಂದಾಗ ಅದನ್ನು ಕಂಡು ಸಿಟ್ಟುಕೊಂಡಂತೆ ಮಾತನಾಡುತ್ತಾಳೆ. ಇದು ನಿಮ್ಮ ದುರಾಸೆಯ ಫಲವೋ ಬಸವಣ್ಣ ಪರೀಕ್ಷೆಯ ಜಾಲವೋ ಎಂದು ಆತ ತಂದಿರುವ ದಾನಕ್ಕಿಂತ ಹೆಚ್ಚು ಅಕ್ಕಿಯನ್ನು ವಾಪಸ್ಸು ಕಳಿಸುತ್ತಾಳೆ. ಹೀಗೆ ಅಸಂಗ್ರಹ ಗುಣವನ್ನು ಮೆರೆಯುತ್ತಾಳೆ. ಇದೇ ರೀತಿ ಬಹುಪಾಲು ಶರಣೆಯರು ತಮ್ಮ ತಮ್ಮ ಕಾಯಕದಲ್ಲಿ ಸತ್ಯಶುದ್ಧ ಮಾರ್ಗದಲ್ಲಿ ನಡೆದಿದ್ದಾರೆ. ಇವರಿಗೆ ಕಾಯಕವೇ ಕೈಲಾಸ ಕಾಯವೇ ದೇವಾಲಯ ಇವರು ನುಡಿದಂತೆ ನಡೆಯುವ ನಡೆದಂತೆ ನುಡಿದವರು. ಇಂದಿನ ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಆಡುವ ಮಾತುಗಳನ್ನ ಕೇಳಿದಾಗ ಆಡುವುದು ಒಂದು ಮಾಡುವುದು ಮತ್ತೊಂದು ಎಂಬುದು ಕಂಡು ಬರುತ್ತದೆ. ಆದರೆ 12ನೇ ಶತಮಾನದ ಶರಣೆಯರು ಇಂದಿಗೂ ಆದರ್ಶ ಜೀವಿಗಳಾಗಿದ್ದಾರೆ. ಬಾಳಿ ಬದುಕಿದ್ದಾರೆ. ಅವರ ವಚನಗಳೇ ಅದಕ್ಕೆ ಪ್ರಮಾಣ.

ಗಂಡು ಗಂಡಾದೆಡೆ ಹೆಣ್ಣಿನ ಸೂತಕ

ಹೆಣ್ಣು ಹೆಣ್ಣಾದೆಡೆ ಗಂಡಿನ ಸೂತಕ

ಮನದ ಸೂತಕ ಹಿಂಗಿದೆಡೆ

ತನುವಿನ ಸೂತಕಕ್ಕೆ ತೆರಹುಂಟಿ

ಮುನ್ನಿಲ್ಲದ ಸೂತಕಕ್ಕೆ ಜನ ಮರುಳಾಯಿತ್ತು

ನೋಡ ಚನ್ನಮಲ್ಲಿಕಾರ್ಜುನ

ಇದು ಕನ್ನಡದ ಪ್ರಥಮ ಕವಯತ್ರಿ ಅಕ್ಕಮಹಾದೇವಿಯ ವಚನವಾಗಿದೆ. ಇಲ್ಲಿ ಅವಳು ಗಂಡು ಹೆಣ್ಣು ಎರಡು ಜೀವಿಗಳ ಜೈವಿಕ ಲಕ್ಷಣ ಕುರಿತು ಹೇಳುತ್ತಾಳೆ. ಗಂಡು-ಹೆಣ್ಣು ಎಂಬ ಭೇದಭಾವನೆ ಮನಸ್ಸಿಗೆ ಅಂಟಿದ ಮೈಲಿಗೆಯಾಗಿದೆಯೇ ಹೊರತು ನಿಸರ್ಗಜನ್ಯ ತಾರತಮ್ಯ ಅಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಸೃಷ್ಟಿಯ ನಿರಂತರ ಚಲನೆಗಾಗಿ ಹೆಣ್ಣು-ಗಂಡು ಎಂಬ ಲಿಂಗ ವೈವಿಧ್ಯ ಅತ್ಯಂತ ಅವಶ್ಯ ಮತ್ತು ಅನಿವಾರ್ಯ ಅವಮಾನ. ಎಲ್ಲ ಬಗೆಯ ಶಕ್ತಿ ಸಂಚಲನೆಗೆ ಧನಾತ್ಮಕ ಋಣಾತ್ಮಕ ಎಂಬ ಅಂಶಗಳು ಬೇಕೇ ಬೇಕು. ಆದ್ದರಿಂದ ಸೃಷ್ಟಿಯ ಎಲ್ಲ ಪಶು, ಪಕ್ಷಿ, ಪ್ರಾಣಿ ಮುಂತಾದ ಜೀವರಾಶಿಗಳಲ್ಲಿ ಉಭಯಲಿಂಗಿಗಳು ಅಸ್ತಿತ್ವದಲ್ಲಿವೆ. ಅಕ್ಕಮಹಾದೇವಿಯೇ ಹೀಗೆ ನುಡಿದಿದ್ದಾಳೆ.

ಪುರುಷನ ಮುಂದೆ ಸ್ತ್ರೀ ಎಂಬ

ಅಭಿಮಾನವಾಗಿ ಕಾಡಿತ್ತು ಮಾಯೆ

ಸ್ತ್ರೀಯ ಮುಂದೆ ಪುರುಷನೆಂಬ

ಅಭಿಮಾನವಾಗಿ ಕಾಡಿತ್ತು ಮಾಯೆ

ಎಂದು ಪರಸ್ಪರದ ಶಕ್ತಿ ಸಾಧನೆಯನ್ನು ನೈಸರ್ಗಿಕ ನೆಲೆಯಲ್ಲಿ ಒಪ್ಪಿಸುತ್ತಾಳೆ. ಇದೇ ಅವಧಿಯಲ್ಲಿ ಬಸವಣ್ಣನ ಪತ್ನಿಯರಾದ ನೀಲಾಂಬಿಕೆ, ಗಂಗಾಬಿಕೆ, ಅಜಗಣ್ಣನ ತಂಗಿ ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ, ಮೊಳಿಗೆ ಮಹಾದೇವಮ್ಮ, ಸೂಳೆ ಸಂಕವ್ವ, ಕಸಗುಡಿಸುವ ಸತ್ಯಕ್ಕ, ದಲಿತರ ಕಾಳವ್ವೆ, ಗೊಗ್ಗವ್ವೆ, ಬೊಂತಾದೇವಿ ಮುಂತಾದ 30ಕ್ಕೂ ಹೆಚ್ಚು ಮಹಿಳೆಯರು ಸಾಹಿತ್ಯ ರಚಿಸಿದ್ದಾರೆ. ಪುರುಷನ ಸಮಾನವಾಗಿ ಅನುಭವ ಮಂಟಪದಲ್ಲಿ ಕುಳಿತು ತಮ್ಮ ಬದುಕುವ ಹಕ್ಕಿನ ಕುರಿತು ಮಾತನಾಡಿದ್ದಾರೆ. ಕೆಲವು ವಚನಕಾರ್ತಿಯರಂತೂ ತೀರಾ ಮೂಲಭೂತ ಪ್ರಶ್ನೆಯನ್ನೆತ್ತಿ ದಂಗುಬಡಿಸಿದ್ದಾರೆ. ಗೊಗ್ಗವ್ವೆ ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿ

ಗಂಡು ಮೋಹಿಸಿ ಹೆಣ್ಣು ಹಿಡಿದಡೆ

ಅದು ಒಬ್ಬರ ಒಡವೆ ಎಂದರಿಯಬೇಕು

ಹೆಣ್ಣು ಮೋಹಿಸಿ ಗಂಡ ಹಿಡಿದಡೆ

ಉತ್ತರವಾವುದೆಂದರಿಯಬೇಕು

ಇದರರ್ಥ ಗಂಡಸು ಹೆಣ್ಣನ್ನು ಮೋಹಿಸಿ ಅವರನ್ನ ತಮ್ಮ ಬಯಕೆಗೆ ಬಳಸಿಕೊಂಡರೆ ಅದಕ್ಕೆ ಸಮ್ಮತಿಸುವ ಸಮಾಜ ಅದೇ ಕೆಲಸ ಸ್ತ್ರೀಯರು ಮಾಡಿದರೆ ಶಿಕ್ಷಿಸುವುದೇಕೆ? ಎಂದು ತಾರ್ಕಿಕ ಪ್ರಶ್ನೆ ಎತ್ತುತ್ತಾಳೆ. ಲೈಂಗಿಕ ಮಡಿವಂತಿಕೆ ಸ್ತ್ರೀಯರಿಗೆ ಮಾತ್ರ ಮೀಸಲು ಪುರುಷರಿಗೆ ಏಕೆ ಈ ವಿಷಯದಲ್ಲಿ ನಿರ್ಭಂಧವಿಲ್ಲ. ಅವನು ಮುಕ್ತವಾಗಿ ಅವನ ಲೈಂಗಿಕ ಬಯಕೆಗಳನ್ನು ತೀರಿಸಿಕೊಳ್ಳಬಹುದು. ಅದು ಅವನ ಹಕ್ಕು. ಆದರೆ ಮಹಿಳೆಯರಿಗೆ ಈ ಹಕ್ಕು ಇಲ್ಲ. ಮದುವೆ ಮುಂಚಿನ ಲೈಂಗಿಕ ಬದುಕು ಅವಳಿಗೆ ವಜ್ರ್ಯ. ಹಾಗೇನಾದರೂ ಆದರೆ ಆಕೆಯನ್ನು ಕುಲಟಿ, ಜಾರಿಣಿ, ಶೀಲಗೆಟ್ಟವಳು ಅಂತ ಜರಿದಿದ್ದಾರೆ. ಗೊಗ್ಗವ್ವೆ ಈ ಅನ್ಯಾಯವನ್ನು ಪ್ರತಿಭಟಿಸುತ್ತಾಳೆ. ಲೈಂಗಿಕ ಬದುಕು ಪುರುಷರಿಗೊಂದು ಸ್ತ್ರೀಯರಿಗೊಂದು ನಿಯಮ ಸಲ್ಲದು ಎನ್ನುತ್ತಾಳೆ.

ಆಯ್ದಕ್ಕಿ ಲಕ್ಕಮ್ಮನಂತೂ ಕುಟುಂಬ ಒಡ್ಡಿದ ನಿರ್ಬಂಧನೆಗಳನ್ನು  ಕುರಿತು ಪ್ರಶ್ನಿಸುತ್ತಾಳೆ.

ಆವ ಬೀಜ ಮೊಳೆಯುವಲ್ಲಿ

ಹಿಂಚುಮುಂಚುಂಟೆ?

ಕೂಟಕ್ಕೆ ಸತಿಪತಿಯೆಂಬ ನಾಮವಲ್ಲದೆ ಅರಿವಿಗೆ ಬೇರೂಂದು ಒಡಲುಂಟೆ? ಎಂದು ಕೇಳುತ್ತಾಳೆ.

ಈ ವಚನ ತುಂಬ ಸ್ಪಷ್ಟವಾಗಿ ಗಂಡ-ಹೆಂಡತಿಯರ ದಾಂಪತ್ಯ ಸಂಬಂಧದ ವ್ಯಾಪ್ತಿಯನ್ನು ಕುರಿತು ಮಾತನಾಡುತ್ತದೆ. ಬೀಜ ಮೊಳೆಯಬೇಕಾದರೆ ಬೀಜದ ಮೇಲ್ಭಾಗ ಮೊದಲು ಬೀಜದ ಕೆಳಭಾಗ ಹಿಂದೆ ಇರುತ್ತದೆ. ಹೀಗಿರುವುದು ನಿಸರ್ಗದ ನಿಯಮ. ಪುರುಷ, ಸ್ತ್ರೀ ಪರಸ್ಪರ ಮಿಲನದಲ್ಲಿ ಸಂತಾನ ಅಂಕುರಿಸುತ್ತದೆ. ಪುರುಷನಿಂದ ವೀಯಾಣು ಪಡೆದು ಸ್ತ್ರೀ ಗರ್ಭ ಧರಿಸುತ್ತಾಳೆ. ಇದೇ ಗರ್ಭ ಬೆಳೆದು ಮಗುವಾಗಿ ಭೂಮಿಗೆ ಬರುತ್ತದೆ. ಇದೊಂದು ನೈಸರ್ಗಿಕ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಸ್ತ್ರೀಪುರುಷರಿಬ್ಬರಿಗೂ ಪ್ರಕೃತಿ ಭಿನ್ನಪಾತ್ರ ನೀಡಿದೆ. ಈ ದಾಂಪತ್ಯಗಳು ಪರಸ್ಪರ ಸಹಜ ಮತ್ತು ಸಮಾನ. ಇದರಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಯಾರ ಪಾತ್ರ ಕಡಿಮೆ, ಹೆಚ್ಚು ಅಲ್ಲ. ಸಂತಾನ ಸೃಷ್ಟಿಯಲ್ಲಿ ಪುರುಷನು ಮಾತ್ರ-ಗೌಣ ಎಂದಾಗಲಿ ಅಥವಾ ಅದು ಸ್ತ್ರೀಯರ ಕರ್ಮ ಎಂದಾಗಲಿ ಅಲ್ಲ. ಸಂತಾನಕ್ಕಾಗಿ ಅವರು ಸತಿಪತಿಗಳೆಂಬ ಅಭಿದಾನ ಕರ್ತವ್ಯ ಪಾಲಿಸುತ್ತಿರಬೇಕು ಹೊರತು ಪತಿ ಅಂದರೆ ಶ್ರೇಷ್ಠ, ಅವನು ಮನ ಬಂದಂತೆ ನಡೆದುಕೊಳ್ಳಬಹುದು ಎಂದಲ್ಲ. ಪುರುಷ ಎಂಬ ಕಾರಣಕ್ಕಾಗಿಯೇ ಅವನು ಸ್ತ್ರೀಯನ್ನು ಯಾವುದೇ ರೀತಿಯಿಂದಲ್ಲೂ ಶೋಷಿಸಲಾಗದು. ಹೀಗೆ ಶೋಷಿಸುವುದನ್ನು ಸ್ತ್ರೀಯರು ಒಪ್ಪಿಕೊಳ್ಳಲಾರರು ಎಂದು ಆಯ್ದಕ್ಕಿ ಲಕ್ಕಮ್ಮ ಪ್ರತಿಭಟಿಸುತ್ತಾಳೆ.

ಸ್ತ್ರೀಪುರುಷ ಎಂಬ ಭೇದಸಲ್ಲದು ಎಂಬುದಕ್ಕೆ ಕಸಗೂಡಿಸುವ ಕಾಯಕದ ಸತ್ಯಕ್ಕನ ವಚನ ಹಾಗೇ ಮೊಲೆ ಮುಡಿ ಇದ್ದುದೇ ಹೆಣ್ಣೆಂದು ಪ್ರಮಾಣಿಸಲಲ್ಲ ಕಾಸೆ ಮೀಸೆ ಕಠಾರೆ ಎನ್ನುವುದೇ ಗಂಡೆಂದು ಪ್ರಮಾಣಿಸಲಲ್ಲ.

ಅದು ಜಗದ ಹಾಹೆ; ಬಲ್ಲವರ ನೀತಿಯಲ್ಲ

ಏತರ  ಹಣ್ಣಾದರು ಮಧುರವೇ ಕಾರಣ

ಅಂದವಿಲ್ಲದ ಕುಸುಮಕ್ಕೆ ವಾಸನೆಯೇ ಕಾರಣ

ಇದರಂದವ ನೀನೇ ಬಲ್ಲೇ ಶಂಭುಜಕ್ಕೇಶ್ವರಾ ||

ಹೆಣ್ಣುತನ, ಗಂಡುತನಗಳು ಸೃಷ್ಟಿಯ ವೈರುಧ್ಯವೇ ಹೊರತು ಭೇದವಲ್ಲ.

Leave a Reply