ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಏಕರೂಪ ಶಿಕ್ಷಣ ನೀತಿ

ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಇನ್ನು ಮುಂದೆ ಏಕರೂಪದ ಶಿಕ್ಷಣ ನೀತಿ ಜಾರಿಗೆ ಬರಲಿದೆ. ವಿದ್ಯಾರ್ಥಿಗಳ  ಪ್ರವೇಶ, ಪಠ್ಯ, ಪರೀಕ್ಷೆ ಹಾಗೂ ಫಲಿತಾಂಶ ಎಲ್ಲವೂ ಏಕರೂಪದಲ್ಲಿರುತ್ತದೆ ಮತ್ತು ಏಕಕಾಲದಲ್ಲೇ ನಡೆಯುತ್ತದೆ.

ಪ್ರಸ್ತುತ ವಿವಿಗಳು ತಮ್ಮದೇ ಆದ ವಿಷಯ ಆಧರಿಸಿ, ಪರೀಕ್ಷೆ ನಡೆಸುತ್ತಿವೆ. ಒಂದು ವಿಶ್ವವಿದ್ಯಾಲದಿಂದ ಮತ್ತೊಂದು ವಿಶ್ವವಿದ್ಯಾಲಯದ ನಡುವೆ ಭಾರೀ ವ್ಯತ್ಯಾಸವಿದೆ. ಪ್ರವೇಶ ಮತ್ತು ಪರೀಕ್ಷೆ ಕೂಡ ಪ್ರತ್ಯೇಕ.

ಇದರಿಂದ ಗ್ರಾಮೀಣ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅವಕಾಶ ಸಿಗುತ್ತಿಲ್ಲ. ಉದ್ಯೋಗಾಧರಿತ ಶಿಕ್ಷಣವೂ ಲಭ್ಯವಾಗುತ್ತಿಲ್ಲ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿವಿಗಳ ಉಪಕುಲಪತಿಗಳ ಸಭೆ ನಡೆಸಿದ ಸಮಾಲೋಚನೆ ಆಧರಿಸಿ ಏಕ ರೂಪ ಶಿಕ್ಷಣ ನೀತಿ ಕುರಿತ ಏಕರೂಪದ ಶಿಕ್ಷಣ ಕಾಯ್ದೆ ರೂಪಿಸಲಾಗುವುದು. ವಿವಿಗಳು ಹೊಂದಿರುವ ಪ್ರತ್ಯೇಕ ಕಾಯ್ದೆಗಳನ್ನು ಸಮ್ಮಿಳಿತಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.

ರಾಜ್ಯದ ಬೇರೆ, ಬೇರೆ ಕಾಲೇಜುಗಳಲ್ಲಿರುವ ಅತ್ಯುತ್ತಮ ಉಪನ್ಯಾಸಕರು, ಪ್ರೊಫೆಸರುಗಳ ಪಟ್ಟಿ ಮಾಡಿ, ಅಗತ್ಯವಿರುವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಅವರಿಂದ ಆನ್ ಲೈನ್ ಮೂಲಕ ಬೋಧನೆ ಸಿಗುವಂತೆ ಮಾಡಲಾಗುವುದು. ಇಲ್ಲಿ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ, ಪರಿಹಾರ ಪಡೆಯಲು ಅವಕಾಶ ಇರುತ್ತದೆ. ಈ ವ್ಯವಸ್ಥೆಯಿಂದ ಎಲ್ಲ ವಿದ್ಯಾರ್ಥಿಗಳಿಗೂ ಉತ್ತಮ ಶಿಕ್ಷಣ ಅವಕಾಶ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ.

Leave a Reply