ದೇವೇಗೌಡರ ಕೌಟುಂಬಿಕ ರಾಜಕೀಯ ಕಲಹಕ್ಕೆ ಒಳಮನೆ ಸೇರಿದ ಪಟೇಲ್ ಶಿವರಾಂ!

ಪಿ. ತ್ಯಾಗರಾಜ್

ಚುನಾವಣೇಲಿ ಸೋಲು-ಗೆಲವು ಇದ್ದದ್ದೇ. ಇದಕ್ಕೆ ಯಾರೂ ಹೊರತಲ್ಲ. ಆದರೆ ಮಾಜಿ ಪ್ರಧಾನಿ ದೇವೇಗೌಡರ ಕರ್ಮಭೂಮಿ ಹಾಸನದಲ್ಲಿ ಅವರ ಪಕ್ಷದ ಹುರಿಯಾಳು ಪಟೇಲ್ ಶಿವರಾಂ ಮೇಲ್ಮನೆ ಚುನಾವಣೆ ಕಳೆದುಕೊಂಡ ಕಾರಣ ಮಾತ್ರ ಕೌತುಕ ವಿಶೇಷವಾಗಿದೆ.

ಸರಳ, ಸಜ್ಜನ, ಉತ್ತಮ ಸಂಸದೀಯ ಪಟು ಎಂದೇ ಹೆಸರಾಗಿದ್ದ ಪಟೇಲ್ ಶಿವರಾಂ ಅವರ ಸೋಲಿಗೆ ದೇವೇಗೌಡರ ಕುಟುಂಬ ರಾಜಕೀಯ ಕಲಹವೇ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್ ಮುಖಂಡ, ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ತಂತ್ರಗಳನ್ನು ಮೀರಿಸಿದ ಗೌಡರ ಸೊಸೆ ಭವಾನಿ ರೇವಣ್ಣ ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ ಒಳತಂತ್ರಗಳು ಪಟೇಲ್ ಶಿವರಾಂ ಮೇಲ್ಮನೆ ಮರುಪ್ರವೇಶ ಅವಕಾಶವನ್ನು ಬಲಿ ತೆಗೆದುಕೊಂಡಿದೆ.

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ದೇವೇಗೌಡರ ಸೊಸೆ, ಅಂದರೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಹಾಸನದಿಂದ ಸ್ಪರ್ಧಿಸ ಬಯಸಿದ್ದರು. ತಮಗೇ ಟಿಕೆಟ್ ಕೊಡಬೇಕು ಎಂದು ಗೌಡರನ್ನು ಕೇಳಿಕೊಂಡಿದ್ದರು. ಇದಕ್ಕೆ ರೇವಣ್ಣ ಕೂಡ ಧ್ವನಿಗೂಡಿಸಿದ್ದರು. ಆದರೆ ಇದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗಾಗಲೇ ಪಕ್ಷಕ್ಕೆ ಕುಟುಂಬ ರಾಜಕೀಯದ ಆಪಾದನೆ ಇದೆ. ಅದನ್ನೇ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಈಗ ಮತ್ತೊಬ್ಬ ಸದಸ್ಯರನ್ನು ತಂದರೆ ತೀವ್ರ ಟೀಕೆ ಎದುರಿಸಬೇಕಾಗುತ್ತದೆ ಎಂದು ತಮ್ಮ ಆಕ್ಷೇಪಕ್ಕೆ ಸಮರ್ಥನೆ ಕೊಟ್ಟುಕೊಂಡಿದ್ದರು.

ಆದರೆ ಭವಾನಿ ರೇವಣ್ಣ ಮತ್ತು ಹಾಸನದಲ್ಲಿ ರಾಜಕೀಯ ಕೃಷಿ ಕೈಗೆತ್ತಿಕೊಂಡಿರುವ ಅವರ ಪುತ್ರ ಪ್ರಜ್ವಲ್ ರೇವಣ್ಣ ಇದನ್ನು ಒಪ್ಪಲು ಸಿದ್ಧರಿರಲಿಲ್ಲ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅಡ್ಡಿಯಾಗದ ಈ ಕುಟುಂಬ ರಾಜಕೀಯ ತತ್ವ ಭವಾನಿ ರೇವಣ್ಣ ಅವರಿಗೆ ಮಾತ್ರ ಏಕೆ ಅನ್ವಯವಾಗಬೇಕು ಎಂಬುದು ಅವರ ಪ್ರಶ್ನೆ. ಅನಿತಾ ಕುಮಾರಸ್ವಾಮಿ ಅವರು ಮಧುಗಿರಿಯಲ್ಲಿ ನಿಂತು ಗೆಲ್ಲಬಹುದು, ನಂತರ ಚನ್ನಪಟ್ಟಣದಲ್ಲಿ ನಿಲ್ಲಬಹುದು. ಅಲ್ಲಿ ಸೋತರೂ ಬೆಂಗಳೂರು ಗ್ರಾಮಾತಂರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಗಬಹುದು. ಅಲ್ಲೂ ಕೂಡ ಸೋತಿದ್ದಾರೆ. ಆದರೆ ತಮಗೆ ಗೆಲ್ಲುವ ಸಾಮರ್ಥ್ಯ ಇದ್ದರೂ, ಮೂರ್ನಾಲ್ಕು ಚುನಾವಣೆಗಳಿಂದ ಟಿಕೆಟ್ ಕೇಳುತ್ತಿದ್ದರೂ ಉದ್ದೇಶಪೂರ್ವಕವಾಗಿ ತಮಗೆ ಟಿಕೆಟ್ ನೀಡುತ್ತಿಲ್ಲ. ಇದರ ಹಿಂದೆ ತಮ್ಮ ರಾಜಕೀಯ ಬೆಳವಣಿಗೆ ತಡೆಯುವ ಹುನ್ನಾರವಿದೆ. ಕುಟುಂಬದೊಳಗೇ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬುದು ಭವಾನಿ ಅವರ ಆಪಾದನೆಯಾಗಿತ್ತು.

ಭವಾನಿ ರೇವಣ್ಣ ಅವರು 2008 ಹಾಗೂ 2013 ರಲ್ಲಿ ಕೆ.ಆರ್. ನಗರ ಮತ್ತು ಬೇಲೂರು ವಿಧಾನಸಭೆ ಕ್ಷೇತ್ರಗಳಿಂದ ಸ್ಪರ್ಧಿಸಲು ಉತ್ಸುಕರಾಗಿದ್ದರು. ಕೆ.ಆರ್. ನಗರ ಭವಾನಿ ಅವರ ತವರೂರು. ಚಲುವರಾಯಸ್ವಾಮಿ ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದ ಮಂಡ್ಯ ಲೋಕಸಭೆ ಕ್ಷೇತ್ರದ ಮರುಚುನಾವಣೆಗೂ ಟಿಕೆಟ್ ಕೇಳಿದ್ದರು. ಆದರೆ ಆಗಲೂ ಟಿಕೆಟ್ ಕೊಡಲಿಲ್ಲ. ಅಲ್ಲಿ ಪಕ್ಷದ ಪುಟ್ಟರಾಜು ವಿರುದ್ಧ ಚಿತ್ರನಟಿ ರಮ್ಯ ಗೆದ್ದಿದ್ದರು.

ಭವಾನಿ ರೇವಣ್ಣ ಅವರ ಬೇಡಿಕೆ, ಅದಕ್ಕೆ ಕುಮಾರಸ್ವಾಮಿ ಅವರ ಆಕ್ಷೇಪ ದೇವೇಗೌಡರನ್ನು ಇಕ್ಕಟ್ಟಿಗೆ ಸಿಕ್ಕಿಸಿತ್ತು. ಈಗಾಗಲೇ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನದಲ್ಲಿ ಸ್ಪರ್ಧಿಸದಿರಲು, ಬದಲಿಗೆ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು ಅಲ್ಲಿ ಕಣಕ್ಕಿಳಿಸಲು ದೇವೇಗೌಡರು ನಿರ್ಧರಿಸಿದ್ದಾರೆ. ಹೀಗಾಗಿ ಮುಂದೆ ಲೋಕಸಭೆ ಚುನಾವಣೆ ಟಿಕೆಟ್ ಕೊಡುವುದಾಗಿ ಪಟೇಲ್ ಶಿವರಾಂ ಅವರಿಗೆ ಸಬೂಬು ಹೇಳುವಂತಿಲ್ಲ. ಹಾಗೆಂದು ಸಂಭಾವಿತ ಶಿವರಾಂ ಅವರಿಗೆ ಸುಮ್ಮನೆ ಟಿಕೆಟ್ ನಿರಾಕರಿಸಿ, ಭವಾನಿ ರೇವಣ್ಣ ಅವರಿಗೆ ಕೊಟ್ಟರೆ ಜನರ ಟೀಕೆಗೆ ಗುರಿ ಆಗಬೇಕಾಗುತ್ತದೆ. ಈ ತೊಳಲಾಟದಲ್ಲಿ ಬಿದ್ದ ಗೌಡರು ಕೊನೆಗೆ ಪಟೇಲ್ ಶಿವರಾಂ ಅವರಿಗೇ ಟಿಕೆಟ್ ಕೊಟ್ಟರು.

ಇದು ಭವಾನಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಕೆರಳಿಸಿಬಿಟ್ಟಿತು. ರೇವಣ್ಣ ಅವರಿಗೆ ಬೇಸರವಾದರೂ ರಾಜಕೀಯ ವಸ್ತುಸ್ಥಿತಿ ಹಾಗೂ ತಂದೆಯವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಮ್ಮನಾದರು. ಆದರೆ ಭವಾನಿ ಮತ್ತು ಪ್ರಜ್ವಲ್ ರೇವಣ್ಣನವರ ತಾಳ್ಮೆ ಬರಲಿಲ್ಲ. ಏಕೆಂದರೆ ರೇವಣ್ಣ ಈಗಾಗಲೇ ಮಂತ್ರಿ, ಶಾಸಕ ಎಲ್ಲ ಅಧಿಕಾರ ಕಂಡಿದ್ದಾರೆ. ಹೀಗಾಗಿ ಅಧಿಕಾರದ ರುಚಿ ಇನ್ನಷ್ಟೇ ಕಾಣಬೇಕಿರುವ ಭವಾನಿ ಮತ್ತು ಪ್ರಜ್ವಲ್ ಸಿಡಿದೆದ್ದರು. ಐದಾರು ವರ್ಷಗಳಿಂದ ಹೊಳೆನರಸೀಪುರ ಮತ್ತು ಹಾಸನದಲ್ಲಿ ತಂದೆ ಮತ್ತು ತಾತನ ನೆರಳಿನಲ್ಲಿ ರಾಜಕೀಯ ಮಾಡುತ್ತಿರುವ ಪ್ರಜ್ವಲ್ ಗೆ ಹಾಗೂ ಮಗನಿಗೆ ಆಶ್ರಯವಾಗಿ ನಿಂತಿರುವ ಭವಾನಿ ಅವರಿಗೂ ಕ್ಷೇತ್ರದಲ್ಲಿ ಒಂದಷ್ಟು ರಾಜಕೀಯ ಹಿಡಿತ ಇದೆ. ಆ ಹಿಡಿತದ ಆಧಾರದ ಮೇಲೆಯೇ ಭವಾನಿ ಅವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೇಲೂರು ಕ್ಷೇತ್ರದ ಟಿಕೆಟ್ ಕೇಳಿದ್ದರು. ಆಗಲೂ ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಅವರ ಬದಲು ಟಿಕೆಟ್ ಪಡೆದ ಕೆ. ಎಸ್. ಲಿಂಗೇಶ, ಕಾಂಗ್ರೆಸ್ ನ ವೈ. ಎನ್. ರುದ್ರೇಶಗೌಡ ಎದುರು ಭಾರಿ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಅಮ್ಮ-ಮಗ ತಮಗಿರುವ ಹಿಡಿತವನ್ನು ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಸರಿಯಾಗಿಯೇ ಬಳಸಿಕೊಂಡಿದ್ದಾರೆ. ಎಲ್ಲೆಲ್ಲಿ ಅದುಮಬೇಕೋ ಅಲ್ಲಿ ಸರಿಯಾಗಿಯೇ ಅದುಮಿದ್ದಾರೆ. ದೇವೇಗೌಡರಿಗೆ ಏನೋ ಹೆಚ್ಚು-ಕಡಿಮೆ ಆಗುತ್ತಿದೆ ಎಂಬ ಅನುಮಾನ ಬಂದು ಬೇರೆ ಕ್ಷೇತ್ರಗಳಿಗಿಂತ ಸ್ವಲ್ಪ ಹೆಚ್ಚಾಗಿಯೇ ಹಾಸನದಲ್ಲಿ ಓಡಾಡಿದರು. ಆದರೆ ಅವರ ಓಡಾಟಕ್ಕಿಂತಲೂ ಭವಾನಿ ಮತ್ತು ಪ್ರಜ್ವಲ್ ರೇವಣ್ಣ ಅವರ ‘ಸೈಲೆಂಟ್ ಕಿಲ್ಲಿಂಗ್’ ತಂತ್ರ ಚೆನ್ನಾಗಿ ಕೆಲಸ ಮಾಡಿದ್ದರಿಂದ ಪಟೇಲ್ ಶಿವರಾಂ ಅವರು ಇದೀಗ ಚುನಾವಣೆಯಲ್ಲಿ ಸೋತು, ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊದಲ ಬಾರಿ ಕಣಕ್ಕಿಳಿದ ಕಾಂಗ್ರೆಸ್ ನ ಗೋಪಾಲಸ್ವಾಮಿ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.

2 COMMENTS

  1. […] ಅದರ ಸೋಲನ್ನು ವಿಶ್ಲೇಷಿಸುತ್ತ, ದೇವೇಗೌಡರ ಕೌಟುಂಬಿಕ ರಾಜಕೀಯ ಕಲಹಕ್ಕೆ ಒಳಮ…ಎಂದು ಡಿಜಿಟಲ್ ಕನ್ನಡ ಶುಕ್ರವಾರವಷ್ಟೇ […]

Leave a Reply