ಬೆನಗಲ್ ನೇಮಕ, ಖೇಮ್ಕ ಭಡ್ತಿ, ಸಂಸತ್ ಕ್ಯಾಂಟೀನ್ ಸಬ್ಸಿಡಿ ಕಡಿತ: ಬಿಜೆಪಿ ವರ್ಚಸ್ಸು ಹೆಚ್ಚಿಸಿದ ಹೊಸ ವರ್ಷದ ನಿರ್ಧಾರಗಳು

ಶ್ಯಾಮ್ ಬೆನಗಲ್

ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಕ್ಕೆ ಒಳ್ಳೆಯ ಹೆಸರು ತಂದುಕೊಡಬಹುದಾದ ಕೆಲವು ನಿರ್ಧಾರಗಳು ಹೊಸ ವರ್ಷದ ಮೊದಲ ದಿನ ಪ್ರಕಟವಾಗಿವೆ.

  1. ಸೆನ್ಸಾರ್ ಬೋರ್ಡ್ ನ ಮರು ರಚನೆ ಬಗ್ಗೆ ಶಿಫಾರಸು ಮಾಡುವ ಸಮಿತಿಗೆ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರನ್ನು ನೇತೃತ್ವ ವಹಿಸುವಂತೆ ಕೇಂದ್ರವು ಕೇಳಿಕೊಂಡಿದೆ. ಇದಕ್ಕೆ ಬೆನಗಲ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಸಿನಿಮಾಟೊಗ್ರಫಿ ಕಾಯ್ದೆಯಲ್ಲಾಗಬೇಕಿರುವ ಬದಲಾವಣೆಗಳ ಬಗ್ಗೆ ಈ ಸಮಿತಿ ಅಧ್ಯನ ನಡೆಸಿ ಶಿಫಾರಸು ನೀಡಲಿದೆ.ಸೆನ್ಸಾರ್ ಬೋರ್ಡ್ ನ ಮುಖ್ಯಸ್ಥರಾಗಿ ಪಹ್ಲಾಜ್ ನಿಹಲಾನಿ ಕಾರ್ಯ ನಿರ್ವಹಣೆ ರೀತಿಗೆ ಬಹಳಷ್ಟು ಅಪಸ್ವರಗಳು ಕೇಳಿಬಂದಿದ್ದವು. ಮೋದಿಯವರ ಬಗ್ಗೆ ಸಾಕ್ಷ್ಯಚಿತ್ರ ಮತ್ತು ಮೋದಿ ಹೊಗಳಿಕೆಯ ವಿಡಿಯೋಗಳನ್ನು ಮಾಡಿಕೊಂಡಿರುವುದೇ ನಿಹಲಾನಿ ಆ ಸ್ಥಾನದಲ್ಲಿರುವುದಕ್ಕೆ ಕಾರಣವೇ ಎಂಬ ಪ್ರಶ್ನೆಗಳೆದ್ದಿದ್ದವು. ಈಗ ಶ್ಯಾಮ್ ಬೆನಗಲ್ ರಂಥ ಸಮರ್ಥರನ್ನು ಸೆನ್ಸಾರ್ ಕಾರ್ಯವೈಖರಿಯನ್ನೇ ತಿದ್ದುವಂಥ ಜಾಗಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ.
  1. ಸಂಸತ್ ಭವನದ ಕ್ಯಾಂಟೀನ್ ತಿನಿಸುಗಳಾಗಿವೆ ದುಬಾರಿ. ಇದು ಸಹ ಜನರಿಗೆ ಒಂದುಮಟ್ಟದ ಸಂತೃಪ್ತಿ ನೀಡುವಂಥದ್ದೇ. ಸಂಸತ್ ಕಲಾಪದಲ್ಲಿ ಸರಿಯಾಗಿ ಭಾಗವಹಿಸದವರಿಗೆ ಸವಲತ್ತುಗಳು ಮಾತ್ರ ಏಕೆ ಎಂಬ ಪ್ರಶ್ನೆಗಳು ಎದ್ದಿದ್ದವು. ಇದೀಗ ಸಂಸತ್ ಕ್ಯಾಂಟೀನ್ ಗೆ ನೀಡುತ್ತಿದ್ದ 16 ಕೋಟಿ ರುಪಾಯಿಗಳ ವಾರ್ಷಿಕ ಸಬ್ಸಿಡಿಯನ್ನು ಹಿಂದಕ್ಕೆ ಪಡೆದಿರುವುದರಿಂದ ಸಸ್ಯಾಹಾರಿ ಊಟ 18 ರುಪಾಯಿಯಿಂದ 30ರುಗೆ, ಮಾಂಸಾಹಾರ ಊಟ ಈ ಹಿಂದಿದ್ದ 33 ರು.ಗಳಿಂದ 60 ರುಪಾಯಿಗೆ ಏರಿದೆ.
  2. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ದಕ್ಕೆ ನಿರಂತರ ವರ್ಗಾವಣೆಗೆ ಒಳಗಾಗುತ್ತ ಬಂದಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕ ಅವರಿಗೆ ಹರ್ಯಾಣದ ಬಿಜೆಪಿ ಸರ್ಕಾರವು ಮುಖ್ಯ ಕಾರ್ಯದರ್ಶಿ ಹುದ್ದೆಗೆ ಭಡ್ತಿ ನೀಡಿದೆ. ರಾಬರ್ಟ್ ವಾದ್ರಾ ಮತ್ತು ಡಿಎಲ್ ಎಫ್ ನಡುವೆ ಆದ ಭೂ ವ್ಯವಹಾರವು ಕ್ರಮಬದ್ಧವಾಗಿಲ್ಲ ಎಂದು ಆ ಒಪ್ಪಂದವನ್ನೇ ರದ್ದುಪಡಿಸುವ ಮೂಲಕ ಖೇಮ್ಕ ದೊಡ್ಡ ಸುದ್ದಿಯಾಗಿದ್ದರು. ಖೇಮ್ಕರ ಭಡ್ತಿ ಕೇಂದ್ರ- ರಾಜ್ಯಗಳ ಬಿಜೆಪಿ ವರ್ಚಸ್ಸನ್ನು ಹೆಚ್ಚಿಸಿದಂತಿದೆ. ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಬಿಜೆಪಿ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಅಸಮಾಧಾನದಲ್ಲಿದ್ದ ಪಕ್ಷದ ಬೆಂಬಲಿಗರು ಸಹ ಈ ಬಗ್ಗೆ ಖುಷಿ ಹೊಂದಿರುವುದು ಸಾಮಾಜಿಕ ತಾಣಗಳಲ್ಲಿ ಬಿಂಬಿತವಾಗುತ್ತಿದೆ. ಖೇಮ್ಕ ಭಡ್ತಿಯೊಂದಿಗೆ ಮೋದಿ ಸರ್ಕಾರ ಮತ್ತೆ ಹಳಿಗೆ ಬರ್ತಿದೆ. ಅರುಣ್ ಜೇಟ್ಲಿಯವರು ಈವರೆಗೆ ಖೇಮ್ಕರಿಗೆ ನ್ಯಾಯ ನಿರಾಕರಿಸಿದ್ದರು ಎಂದು ಪತ್ರಕರ್ತೆ ಮಧು ಕಿಶ್ವರ್ ಟ್ವೀಟ್ ಮಾಡಿದ್ದಾರೆ.

Leave a Reply