ಸುದ್ದಿಸಂತೆ @ 6.45 pm: ಹಾಲು ದುಬಾರಿ, ಕೈದಿಗಳಲ್ಲಿ ಯಾರಿಗೆ ಬಿಡುಗಡೆ ಭಾಗ್ಯ..? ಸಮ-ಬೆಸ ಸಂಚಾರ ನೀತಿಗೆ ಸೈ ಎಂದ ದೆಹಲಿ..

ಕೆಎಂಎಫ್ ಹಾಲಿನ ದರ 5 ರು. ಏರಿಕೆ?

ಅಪ್ ಡೇಟ್ ಟಿಪ್ಪಣಿ: ಹಾಲಿನ ದರ ಲೀಟರ್ ಗೆ ನಾಲ್ಕು ರುಪಾಯಿ ಏರಿಸುವುದಕ್ಕೆ ಮುಖ್ಯಮಂತ್ರಿಯವರಿಂದ ಒಪ್ಪಿಗೆ ಸಿಕ್ಕಿದೆ ಎಂದು ಪಶುಸಂಗೋಪನೆ ಸಚಿವರು ಹೇಳಿದ್ದಾರೆ. ಇದರಲ್ಲಿ 3 ರು, ರೈತರಿಗೇ ಸೇರಬೇಕೆಂಬ ಷರತ್ತಿನನ್ವಯ ದರ ಏರಿಕೆ ಮಾಡಲಾಗಿದೆ. ಅಧಿಕೃತ ಘೋಷಣೆ ಬಾಕಿ ಇದೆ.

ನೂತನ ವರ್ಷದ ಮೊದಲ ದಿನವೇ ರಾಜ್ಯ ಸರ್ಕಾರ ಹಾಲಿನ ವಿಚಾರದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಭಾಗ್ಯ, ರೈತರ ಜೋಳಿಗೆಗೆ ಹುತ್ತರಿ ಭಾಗ್ಯ ನೀಡಲು ಸಿದ್ಧತೆ ನಡೆಸಿದೆ. ಇದರರ್ಥ ಶೀಘ್ರದಲ್ಲೇ ಹಾಲಿನ ದರ ಕನಿಷ್ಟ ಐದು ರೂಪಾಯಿ ಏರಿಕೆಯ ದೊಡ್ಡ ಶಾಕ್ ಗ್ರಾಹಕರಿಗೆ ಕಾದಿದೆ.

ಈ ವಿಚಾರದ ಬಗ್ಗೆ ಸುಳಿವು ನೀಡಿರುವ ಪಶುಸಂಗೋಪನೆ ಸಚಿವ ಎ ಮಂಜು, ಕೆ ಎಂ ಎಫ್ ಸಂಸ್ಥೆಯಿಂದ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಬಂದಿದ್ದು ಮುಖ್ಯಮಂತ್ರಿಯವರ ಬಳಿ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಆದರೆ ದರ ಏರಿಕೆಯಿಂದ ಬರುವ ಹಣ ರೈತರಿಗೆ ಸಿಗಲಿದೆಯೇ ಅಥವಾ ಹಾಲು ಮಾರಾಟ ಮಾಡುವ ಮಧ್ಯವರ್ತಿಗಳಿಗೆ, ಏಜಂಟರ ಪಾಲಾಗಲಿದೆಯೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

 

 ಸನ್ನಡತೆಯ ಕೈದಿಗಳಿಗೆ ಬಿಡುಗಡೆ ಭಾಗ್ಯ

ಸನ್ನಡತೆಯ ಆಧಾರದ ಮೇಲೆ ಕೈದಿಗಳನ್ನು ಜನವರಿ 26ರ ಗಣರಾಜ್ಯೋತ್ಸವ ದಿನದಂದು ಬಿಡುಗಡೆಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ ತಿಳಿಸಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಸಚಿವರು, ‘ಸನ್ನಡತೆ ಹೊಂದಿರುವ ಕೈದಿಗಳ ಪಟ್ಟಿಯನ್ನು ಸಿದ್ದಪಡಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಕಂಡುಬಂದಿದ್ದು 8 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗುವುದು. ಜೈಲಿನಲ್ಲಿ ಸಣ್ಣಪುಟ್ಟ ದೋಷಗಳು ಮತ್ತು ಸೌಲಭ್ಯಗಳ ಕೊರತೆ ಇದ್ದು ಇಲ್ಲಿನ ಸಿಬ್ಬಂದಿ ಲಭ್ಯವಿರುವ ಸೌಲಭ್ಯಗಳನ್ನು ಸರಿದೂಗಿಸಿಕೊಂಡು ಹೋಗುತ್ತಿರುವುದು ಕಂಡುಬಂದಿದೆ ಶೀಘ್ರವೇ ಇವುಗಳನ್ನು ಪರಿಹರಿಸಲಾಗುವುದು’ ಎಂಬ ಭರವಸೆ ನೀಡಿದ್ದಾರೆ.

ಹೊಸ ವರ್ಷಾಚರಣೆಗೆ ಆತಂಕ ಒಡ್ಡಿದ ದುಬೈ ಬೆಂಕಿ ಆಕಸ್ಮಿಕ

ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಖ್ಯಾತಿ ಪಡೆದಿರುವ ದುಬೈನ ಬುರ್ಜ್ ಖಲಿಫಾ ಬಳಿಯ ಹೋಟೆಲ್ ಒಂದಕ್ಕೆ ಬೆಂಕಿ ಆವರಿಸಿಕೊಂಡು 16 ಜನರಿಗೆ ತೀವ್ರತರವಾದ ಗಾಯಗಳಾಗಿರುವ ದುರ್ಘಟನೆ ಹೊಸ ವರ್ಷಾಚರಣೆಗೂ ಕೆಲವೇ ಗಂಟೆಗಳ ಮೊದಲು ಎಮಿರೈಟ್ಸ್ ನಲ್ಲಿ ನಡೆದಿದೆ. ಹೋಟೆಲ್ ಡೌನ್ ಟೌನ್ ನ ಬಳಿಯೇ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಪಟಾಕಿಗಳನ್ನು ಸಿಡಿಸಲು ಸಿದ್ಧತೆ ನಡೆಯುತ್ತಿತ್ತು. ಗುರುವಾರ ರಾತ್ರಿ 9.30 ರಲ್ಲಿ ಕಾಣಿಸಿಕೊಂಡ ಬೆಂಕಿ ಹೋಟೆಲ್ ನ ಬಹುತೇಕ ಮಹಡಿಗಳನ್ನು ಆವರಿಸಿಕೊಂಡಿತ್ತು.

ಸಮ-ಬೆಸ ಸಂಚಾರ ನಿಯಮ ಯಶಸ್ವಿ

ದೆಹಲಿಯಲ್ಲಿ ಶುಕ್ರವಾರದಿಂದ ಜಾರಿಗೆ ಬಂದಿರುವ ಸಮ, ಬೆಸ ಸಂಖ್ಯೆಗಳ ಆಧಾರದಲ್ಲಿ ವಾಹನಗಳ ಸಂಚಾರ ನಿಯಮ ಸಫಲವಾಗಿದೆ. ಇದು ಹೊಸವರ್ಷದ ಮೊದಲ ದಿನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿರುವ ಟ್ವೀಟ್.

ನಂತರ ಮಾಧ್ಯಮಗಳೊಂದಿಗೂ ಮಾತನಾಡಿ ಈ ಬಗ್ಗೆ ಪರ್ಷ ವ್ಯಕ್ತಪಡಿಸಿದರು. ‘ಹೊಸ ನಿಯಮವನ್ನು ಜನರು ಸಹ ಸ್ವೀಕರಿಸಿದ್ದು ಪ್ರತಿದಿನ ಬೆಳಗ್ಗೆ 8 ರಿಂದ ಸಂಜೆ 8 ರ ವರೆಗೆ ಈ ನಿಯಮ ಜಾರಿಯಲ್ಲಿ ಇರುತ್ತದೆ. ಹೆಚ್ಚುವರಿಯಾಗಿ 3 ಸಾವಿರ ಬಸ್ಸುಗಳ ಜೊತೆಗೆ ನೊಯ್ಡ ಮತ್ತು ಗುರಂಗಾವ್ ನಗರಗಳಿಂದ ವಿಶೇಷ ಬಸ್ಸುಗಳು ಸಂಚರಿಸಲಿವೆ. ಯಾವುದೇ ಕಾರಣಕ್ಕೂ ಪೊಲೀಸರು 15 ದಿನಗಳವರೆಗೆ ರಜೆ ತೆಗೆದುಕೊಳ್ಳುವಂತಿಲ್ಲ’ ಎಂದು ಆದೇಶಿಸಿದ್ದಾರೆ.

ಕೇಜ್ರಿವಾಲ್ ರವರಿಗೂ ಸೇರಿದಂತೆ ಸಂಪುಟದ ಎಲ್ಲಾ ಸಚಿವರಿಗೂ ಈ ನಿಯಮ ಅನ್ವಯಿಸುತ್ತದೆ. ಸಚಿವರು ಸೇರಿದಂತೆ ಯಾರೆ ಉಲ್ಲಂಘನೆ ಮಾಡಿದರು 2 ಸಾವಿರ ರೂ ದಂಡ ಹಾಕುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಒಂಟಿ ಮಹಿಳೆಯರಿಗೆ ಮಾತ್ರ ಈ ನಿಯಮದಿಂದ ವಿನಾಯ್ತಿ ನೀಡಲಾಗಿದೆ.

ನಮ್ಮ ಕಾಮೆಂಟ್: ಈ ನೀತಿಯ ನಿಖರ ಯಶಸ್ಸು ತಿಳಿಯಬಹುದಾದದ್ದು ಸೋಮವಾರದ ನಂತರವಷ್ಟೆ. ಆದಾಗ್ಯೂ, ಇದು ಪ್ರಾಯೋಗಿಕ ಅಲ್ಲ, ಜನ ಪ್ರತಿಭಟಿಸುತ್ತಾರೆ ಎಂಬೆಲ್ಲ ಅಭಿಪ್ರಾಯಗಳ ನಡುವೆಯೂ ಯೋಜನೆಗೆ ಒಂದು ಹಂತದ ಬೆಂಬಲ ವ್ಯಕ್ತವಾಗಿರುವುದು ಸುಳ್ಳಲ್ಲ. ದೆಹಲಿಯ ವಾಯು ಮಾಲಿನ್ಯ ಎಷ್ಟು ಹದಗೆಟ್ಟಿದೆ ಎಂದರೆ, ವಿಷದ ವಾತಾವರಣದಿಂದ ಪಾರಾಗುವುದಕ್ಕೆ ಹೀಗೊಂದು ರಾಜಿ ಮನೋಭಾವ ಅನಿವಾರ್ಯ ಅಂತಲೂ ಕೆಲವರಿಗೆ ಅನ್ನಿಸಿದೆ. ಇದಲ್ಲದೇ ಬೇರೆ ಮಾರ್ಗವಾದರೂ ಏನಿದೆ ಎಂಬ ಪ್ರಶ್ನೆಯೂ ಜನರನ್ನು ಕಾಡುತ್ತಿದೆ.

Leave a Reply