ಹೊಸವರ್ಷದಲ್ಲಿ ಬದುಕು ಹೆಂಗಿರ್ಬಾರ್ದು… ರಾಹುಲ್ ಗಾಂಧಿ ಮಾದರಿಯ 3 ಪಾಠಗಳು!

ಸೌಮ್ಯ ಸಂದೇಶ್

ಪ್ರತಿವರ್ಷವೂ ಲೈಫು ಹಿಂಗಿರ್ಬೇಕು ಅನ್ನೋದಕ್ಕೆ ಒಂದಿಷ್ಟು ಕಾರ್ಯತಂತ್ರ ಅಂತ ಇಟ್ಟುಕೊಳ್ತೇವೆ. ಈ ಅರ್ಥದಲ್ಲಿ ಬದುಕೊಂದು ಹೋರಾಟ. 2016ಕ್ಕೂ ನೀವೆಲ್ಲ ಒಂದಿಷ್ಟು ಕಾರ್ಯಸೂಚಿಗಳನ್ನು ಇಟ್ಕೊಂಡಿರಬಹುದು. ಅದನ್ನು ಈಡೇರಿಸಿಕೊಳ್ಳುವಲ್ಲಿ ಮಾದರಿ ಯಾರು ಅಂತ ಹೇಳೋದಕ್ಕೂ ಮೊದ್ಲು, ಯಾವ ಮಾದರಿ ಬೇಡ ಅಂತ ಹೇಳಿಬಿಡ್ತೇವೆ…

ಸ್ಸಾರಿ.. ತಪ್ಪು ಮಾದರಿಯ ಉದಾಹರಣೆಯಾಗಿ ಮಿನುಗಿದವರೆಂದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅಂತ ನೋವಿಂದಲೇ ಹೇಳಬೇಕು. ನೋವೇಕೆ ಅಂದ್ರೆ, ನಾಯಕನಿಗೊಬ್ಬ ಅಷ್ಟೇ ಸಮರ್ಥ ಪ್ರತಿನಾಯಕ ಇದ್ದರೆ ಪ್ರಜಾಪ್ರಭುತ್ವಕ್ಕೆ ಜೀವಂತಿಕೆ. ಆ ವಿಷಯದಲ್ಲಿ ಸೋತ ರಾಹುಲ್ ಮಾದರಿ ಹೀಗಿದೆ.

ಪಾಠ 1: ಎದುರಾಳಿಯನ್ನು ಯಾವ ವಿಷಯದಲ್ಲಿ ಟೀಕಿಸುತ್ತಿದ್ದೀರೋ ಅದೇ ವಿಷಯ ನಿಮ್ಮನ್ನು ಸುತ್ತಿಕೊಳ್ಳುವಂತೆ ಆದಾಗ ಬಂಡವಾಳವೇ ಇಲ್ಲವಾಗುತ್ತದೆ.

rahul1

ಹೊಸ ವರ್ಷದ ಆಗಮನಕ್ಕೂ ಮೊದಲೇ ಶುಭಾಶಯ ಕೋರಿರುವ ರಾಹುಲ್ ‘ನಾನು ಯುರೋಪ್ ಪ್ರವಾಸದಲ್ಲಿರ್ತೇನೆ’ ಅಂತ ಟ್ವೀಟು ಮಾಡಿದ್ದರು. ರಾಹುಲ್ ಮತ್ತವರ ಪಕ್ಷದವರು ಪ್ರಧಾನಿ ಮೋದಿ ಯಾವಾಗಲೂ ವಿದೇಶ ಪ್ರವಾಸದಲ್ಲಿರ್ತಾರೆ ಅಂತ ಟೀಕಿಸುತ್ತಿದ್ದಾರೆ. ಹಾಗಿರುವಾಗ, ರಾಹುಲ್ ಆಗಾಗ ಪ್ರತ್ಯಕ್ಷರಾಗಿ ಕೋಪ-ತಾಪ ತೋರಿಸಿ ಮತ್ತೆ ವಿದೇಶಕ್ಕೆ ಹಾರಿಬಿಟ್ಟರಾಯಿತೇ? ಈ ಹಿಂದೆ ಒಂದಿಷ್ಟು ತಿಂಗಳು ಯಾರಿಗೂ ಸಿಗದಂತೆ ಅಲ್ಲೆಲ್ಲೋ ಥೈಲ್ಯಾಂಡಿಗೆ ಹೋಗಿದ್ದರಂತೆ. ಮೋದಿಯವರಿಗೆ ಪ್ರಧಾನಿಯಾಗಿ ವಿದೇಶ ಪ್ರವಾಸ ಮಾಡುತ್ತಿರುವುದಕ್ಕೆ ಸಾಕಷ್ಟು ಸಮರ್ಥನೆಗಳು ಸಿಗುತ್ತವೆ. ಪ್ರತಿಪಕ್ಷದಲ್ಲಿರೋರು ಹೆಚ್ಚು ಶ್ರಮ ಪಡಬೇಕು. ಮೋದಿ ವಿಷಯ ಹಂಗಿರಲಿ, ಸ್ಮೃತಿ ಇರಾನಿಯವರು ಆಗಾಗ ಅಮೇಠಿಗೆ ಹೋಗಿ, ತಾವು ಸೋತ ಕ್ಷೇತ್ರದಲ್ಲೂ  ಜನಸಂಪರ್ಕದಲ್ಲಿರುವಾಗ, ರಾಹುಲ್ ರಜೆ ತೆಗೆದುಕೊಳ್ಳುತ್ತಾ ಕುಳಿತರೆ ಪರಿಸ್ಥಿತಿ ಏನಾಗಬಹುದು?

ಪಾಠ 2: ನಾಯಕನಾಗಿ ನಿಮಗೆ ಉತ್ತರಿಸಲು ಗೊತ್ತಿಲ್ಲದ ಪ್ರಶ್ನೆಯನ್ನು ಬೇರೆಯವರಿಗೆ ಕೇಳಬಾರದು.

ತಯಾರಿ ಎಂಬುದು ಬದುಕಲ್ಲಿ ತುಂಬ ಮುಖ್ಯ. ಪ್ರಖ್ಯಾತ ನಟನ ಮಗನಿಗೆ ತಯಾರಿಯಿಲ್ಲದೇ ಮೊದಲ ಚಿತ್ರಕ್ಕೆ ಅವಕಾಶ ಸಿಕ್ಕಿಬಿಡಬಹುದು, ಆದ್ರೆ ನಿರಂತರತೆ ಕಾಪಾಡಿಕೊಳ್ಳಬೇಕಾದ್ರೆ ತಯಾರಿ ಬೇಕೇಬೇಕು. ತಯಾರಿಯಿಲ್ಲದ ಸಮರದ ಪರಿಣಾಮಕ್ಕೆ ರಾಹುಲ್ ಮಾದರಿ. ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ರು. ಮೋದಿಯವರ ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಸರಿದಾರಿಯಲ್ಲಿಲ್ಲ ಅಂತಾದ್ರೆ ಅದಕ್ಕೆ ಪಕ್ಕಾ ಅಂಕಿಅಂಶಗಳ ಮೂಲಕ ಜಾಡಿಸಬೇಕು. ಅದುಬಿಟ್ಟು, ‘ಸ್ವಚ್ಛ ಭಾರತ ವರ್ಕ್ ಆಗ್ತಿದೆಯಾ’ ಅಂತ ವಿದ್ಯಾರ್ಥಿಗಳನ್ನು ಕೇಳಿದ್ರೆ? ಹೆಚ್ಚಿನವರು ಹೌದು ಎಂದಾಗ ರಾಹುಲ್ ಗಾಂಧಿಯವರಿಗೆದುರಾಯ್ತು ಮುಜುಗರ. ತಯಾರಿ ಇದ್ದವ, ಬುದ್ಧಿವಂತಿಕೆ ಇದ್ದವ ತಕ್ಷಣ ಅದಕ್ಕೆ ಪ್ರತಿವಾದ ಮಂಡಿಸಿ, ನಮ್ಮೆದುರಿನ ಅಂಕಿಅಂಶ ಹೀಗೆ ಹೇಳ್ತಿರುವಾಗ ಸ್ವಚ್ಛ ಭಾರತ ಸಕ್ಸಸ್ ಅಂತ ಹೇಗೆ ಹೇಳ್ತೀರಿ ಅಂತ ಮರುಪ್ರಶ್ನೆ ಕೇಳಿ ಚರ್ಚೆ ಹುಟ್ಟುಹಾಕಬೇಕಿತ್ತು. ಅಂಥ ತಯಾರಿಗಳಿಲ್ಲದೇ ಪ್ರಶ್ನೆ ಒಗೆದರೆ ಅದು ಕೇಳಿದವರನ್ನೇ ಚುಚ್ಚುತ್ತೆ.

ಪಾಠ 3: ಮುಂಚೂಣಿಯಲ್ಲಿರಲು ನೀವು ಬಯಸಿದರೆ ಕೇವಲ ಪ್ರಶ್ನಿಸುತ್ತಿದ್ದರೆ ಸಾಲದು, ಪರಿಹಾರ ಸೂಚಿಸುವ ಕಲೆ ಇರಬೇಕು. ಗಟ್ಟಿ ಪರಿಹಾರವಿರದ ಸಂದರ್ಭದಲ್ಲೂ ಅದರ ಸಂಕೀರ್ಣತೆ ವಿವರಿಸುವ ಕಲೆಯಾದರೂ ತಿಳಿದಿರಬೇಕು.

ಅದುಯುಪಿಎ ಅಧಿಕಾರದಲ್ಲಿದ್ದ ಸಂದರ್ಭ. ಅಂತರ್ಜಾಲವನ್ನು ಶಾಲಾ ಮಕ್ಕಳಿಗೆಲ್ಲ ಮುಟ್ಟಿಸಬೇಕು ಎಂಬ ಮೇಲ್ಮೇಲಿನ ಮಾತಾಡುತ್ತಿದ ರಾಹುಲ್ ಗಾಂಧಿಯವರಿಗೆ ಸಂವಾದದಲ್ಲಿ ವಿದ್ಯಾರ್ಥಿಯೊಬ್ಬ ಕೇಳಿದ- ಇದನ್ನು ಹೇಗೆ ಮಾಡ್ತೀರಿ ಹೇಳಿ ಅಂತ. ಯಥಾಪ್ರಕಾರ ರಾಹುಲ್ ಅವರಲ್ಲಿ ಉತ್ತರವಿರಲಿಲ್ಲ. ‘ನೀವೇ ಹೇಳಿ, ನೀವಾದ್ರೆ ಏನು ಮಾಡ್ತೀರಿ’ ಅಂತ ರಾಹುಲ್ ಪ್ರತಿಪ್ರಶ್ನೆ. ‘ನಾನಾದರೆ ಏನ್ ಮಾಡ್ತೀನಿ ಅಂತ ಉತ್ತರಿಸೋದಕ್ಕೆ ಮೊದ್ಲು ನಿಮಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ. ನಾವು ಆ ಜಾಗದಲ್ಲಿಲ್ಲ ಅಂತ ತಾನೇ ನಿಮಗೆ ಪ್ರಶ್ನೆ ಕೇಳ್ತಿರೋದು’ ಎಂದ ಯುವಕ!

ಇದಕ್ಕೆ ಭಿನ್ನ ಮಾದರಿ ಗಮನಿಸಿ. ‘ನೀವು ಅಧಿಕಾರ ವಹಿಸಿ ಇಷ್ಟು ದಿನಗಳ ನಂತರವೂ ಆರ್ಥಿಕತೆಯಲ್ಲಿ ಭಾರೀ ಬದಲಾವಣೆಗಳು ಆಗಿಲ್ಲವಲ್ಲ, ಏನ್ ಹೇಳ್ತೀರಿ’ ಅಂತ ಸಂವಾದವೊಂದರಲ್ಲಿ ಮೋದಿಯವರನ್ನು ಕೇಳಲಾಯ್ತು. ಅದಕ್ಕೆ ಮೋದಿ ಉತ್ತರ, ‘ನೋಡಿ, ನೀವು ಸ್ಕೂಟರ್ ನಲ್ಲಿ ಹೋಗ್ತಿರುವಾಗ ತಕ್ಷಣಕ್ಕೆ ತಿರುಗಬೇಕು ಅಂತಾದಾಗ ಪಥ ಬದಲಿಸಿಬಿಡಬಹುದು. ಭಾರತ ಅನ್ನೋದು ದೊಡ್ಡ ರೈಲು. ಏಕಾಏಕಿ ತಿರುಗಿಸಿಬಿಡೋದಕ್ಕಾಗಲ್ಲ, ಸಮಯ ಹಿಡಿಯುತ್ತೆ..’

1 COMMENT

Leave a Reply