ಹೊಸವರ್ಷ ಅವತರಿಸಿದಷ್ಟು ಸುಲಭವಲ್ಲ ಹೊಸಜೀವದ ಆಗಮನ, ಹಂತ ಹಂತಗಳಲ್ಲಿ ಬೇಕು ಬಸುರಿಗೆ ಗಮನ

author-shamaಪ್ರಕೃತಿಯ ವಿಸ್ಮಯಕ್ಕೆ ತೆರೆದುಕೊಂಡ ಜೀವದೊಳಗೆ ಇನ್ನೊಂದು ಜೀವದ ಮಿಡಿತ ಅಂದರೆ ಕಂದನ ಹೃದಯ ಬಡಿತ ಸ್ಪಷ್ಟವಾಗಿ ಕೇಳಲು ಶುರುವಾಗುವ ಪರ್ವಕಾಲ 14 ರಿಂದ 24ನೇ ವಾರದವರೆಗಿನ ಎರಡನೇ ತ್ರೈಮಾಸಿಕ. ಬಸಿರು ಕಥೆ, ಕಾದಂಬರಿ, ಸಿನೆಮಾಗಳಲ್ಲಿ ತೋರಿಸುವಷ್ಟು ರಮಣೀಯವಲ್ಲದಿದ್ದರೂ ಏನೋ ಒಂಥರಾ ಮಧುರವೆನಿಸುವ ಕ್ಷಣಗಳಿವು. ಕಂದನ ಬಹುವಿಧ ಬೆಳವಣಿಗೆಯ ಸಮಯವಿದು. ಗಾತ್ರದಲ್ಲಿ ತುಂಬಿಕೊಂಡ ಒಂದು ದ್ರಾಕ್ಷಿಯಷ್ಟಿರುವ ಗರ್ಭಕೋಶ ತನ್ನೊಳಗೆ ಕುಡಿಯೊಂದನ್ನು ಸಲಹಿ ಪೊರೆದು ಪರಿಪೂರ್ಣವಾಗಿಸುವ ಪ್ರಕ್ರಿಯೆಯೇ ಒಂದು ಬೆರಗು. ಮೊದಲ ತ್ರೈಮಾಸಿಕದಲ್ಲಿನ ಕಿರಿಕಿರಿಗಳು, ವಾಂತಿ ಎಲ್ಲ ಕಡಿಮೆಯಾಗಿ ತಾಯಿ ಮೊದಲಿನಂತಾಗುತ್ತಾಳೆ. ಬಹಳಷ್ಟು ತಾಯಂದಿರಿಗೆ ಬಸಿರಿನ ಈ ಮೂರು ತಿಂಗಳುಗಳು ಆರಾಮದ ಸುಸಮಯ.

ತಾಯೊಳಗೆ ಬೆಚ್ಚಗಿರುವ ಕಂದನ ರೆಪ್ಪೆಗಳು, ಹುಬ್ಬು, ಉಗುರು, ಕೂದಲುಗಳು ಮೂಡಿದ್ದು ಮೂಳೆ ಮತ್ತು ಹಲ್ಲುಗಳು ಗಟ್ಟಿಯಾಗುತ್ತವೆ. ಮಗು ತನ್ನ ಪುಟಾಣಿ ಬಾಯಿಯನ್ನ ಹಕ್ಕಿಯಂತೆ ತೆರೆದು ಆಕಳಿಸಲು ಒಮ್ಮೊಮ್ಮೆ ಬೆರಳು ಚೀಪಲು, ಮೈ ಮುರಿಯಲು ಮುಖ ಸಿಂಡರಿಸಲು ಕೂಡ ಶಕ್ತವಾಗಿರುತ್ತದೆ. ನರಮಂಡಲ ತನ್ನ ಕೆಲಸ ಪ್ರಾರಂಭಿಸಿದ್ದು ಜನನೇಂದ್ರಿಯಗಳು ಲಿಂಗ ನಿರ್ಧಾರ ಸಾಧ್ಯವಾಗುವ ಮಟ್ಟಿಗೆ ಬೆಳೆದಿರುತ್ತವೆ. ಇಷ್ಟೆಲ್ಲ ಆದರೂ ನಾಲ್ಕನೇ ತಿಂಗಳ ಕೊನೆಯ ಹೊತ್ತಿಗೆ ಮಗುವಿನ ಗಾತ್ರ ಸುಮಾರು ಆರು ಇಂಚು ಮಾತ್ರ.

ಬೆಳವಣಿಗೆ ತೀವ್ರಗತಿಯಲ್ಲಿದ್ದು ಮಗು ಅತ್ತಿಂದಿತ್ತ ಸುಳಿಯಲು ಪುಟ್ಟ ಪಾದಗಳು ಮತ್ತೆ ಮತ್ತೆ ಒದೆಯುತ್ತಲೇ ಅಮ್ಮಾ ನೀ ಎಲ್ಲಿರುವೇ ನಾನಿಲ್ಲಿರುವೆ ಎನ್ನುತ್ತವೆ. ಈ ಸಮಯದಲ್ಲಿ ದೇಹದ ತುಂಬ ಕಂಡೂ ಕಾಣದಂಥ ಕೂದಲ ಕವಚವೊಂದು ಸೃಷ್ಟಿಯಾಗಿ  ಮೃದುಲತೆಗೆ ಒಂದಿನಿತೂ ಏಟಾಗದಂತೆ ಕಾಪಾಡುತ್ತದೆ. ಇದು ಹುಟ್ಟಿನ ಸುಮಾರು ಒಂದು ವಾರದೊಳಗೆ ಉದುರಿ ಹೋಗುತ್ತದೆ. ಜತೆಗೇ ಬೆಣ್ಣೆಯಂಥ ‘ವರ್ನಿಕ್ಸ್ ಕ್ಯಾಸಿಯೋಸಾ’ ಎಂಬ ತೆಳು ಪದರ ಚರ್ಮದ ಮೇಲೆ ರೂಪುಗೊಂಡು ಗರ್ಭಕೋಶದೊಳಗಿನ ಜೀವಜಲದಲ್ಲಿ ತೇಲುತ್ತಿರುವ ಮಗುವಿಗೆ ರಕ್ಷಣಾ ಕವಚದಂತಿರುತ್ತದೆ. ಹುಟ್ಟಿನ ಜತೆಗೇ ಈ ಪೊರೆಯೂ ಕಳಚಿ ಬೀಳುತ್ತದೆ. ಐದನೇ ತಿಂಗಳ ಕೊನೆಯಷ್ಟರಲ್ಲಿ ಸುಮಾರು ಹತ್ತು ಇಂಚಾಗುವ ಪುಟಾಣಿಯ ತೂಕ 450 ಗ್ರಾಂ ಆಗಿರುತ್ತದೆ.

ಆರನೇ ತಿಂಗಳಿನಲ್ಲಿ ರಕ್ತನಾಳಗಳು ಕೆಲಸ ಶುರು ಮಾಡಿದ್ದು ಸುಕ್ಕು ಸುಕ್ಕಾಗಿರುವ ಗುಲಾಬಿ ಬಣ್ಣದ ಹೊಳೆಯುವ ಪಾರದರ್ಶಕ ಚರ್ಮದಿಂದಾಚೆಗೂ ಕಾಣುತ್ತವೆ. ಕೈಕಾಲಿನ ಬೆರಳುಗಳು ಸರಿಯಾದ ಆಕಾರ ತಳೆದಿದ್ದು ರೆಪ್ಪೆಗಳು ಒಂದಕ್ಕೊಂದು ಬೇರೆಯಾಗಿ ಪಾಪು ಅಮ್ಮನೊಳಗೇ ಕಣ್ಣು ತೆರೆವ ಕ್ಷಣವಿದು. ಹೊರಗಿನ ಶಬ್ದಗಳಿಗೆ ಸ್ಪಂದಿಸುವ ಮಗುವಿನ ಬಿಕ್ಕಳಿಕೆ ಅಮ್ಮನಿಗೆ ಅನುಭವವಾಗುತ್ತದೆ. ಆರನೇ ತಿಂಗಳಿನ ಕೊನೆಯಷ್ಟರಲ್ಲಿ ಸುಮಾರು ಒಂಭೈನೂರು ಗ್ರಾಂ ತೂಗುವ ಮಗುವಿನ ಬೆಳವಣಿಗೆ ಯಾವ ಹಂತಕ್ಕೆ ತಲುಪಿರುತ್ತದೆಯೆಂದರೆ 23ನೇ ವಾರದ ನಂತರ ಹುಟ್ಟಿದ ಮಕ್ಕಳು ಇಂಟೆನ್ಸಿವ್ ಕೇರ್^ನ ಸಹಾಯದಿಂದ ಬದುಕುಳಿದ ಉದಾಹರಣೆಗಳೂ ವೈದ್ಯಕೀಯ ಕ್ಷೇತ್ರದ ಇತಿಹಾಸದಲ್ಲಿದೆ.

ಮಗುವಿನ ಬೆಳವಣಿಗೆ ಹೆಚ್ಚಾದಂತೆಲ್ಲ ತಾಯಿಯ ದೇಹವೂ ಬದಲಾಗುತ್ತದೆ. ಹೆಚ್ಚುತ್ತಿರುವ ಹೊಟ್ಟೆಯ ತೂಕ ಬೆನ್ನಿನ ಮೇಲೆ ಒತ್ತಡ ಉಂಟುಮಾಡಿ ಬೆನ್ನು ನೋವು ಬರಬಹುದು. ಈ ಕಿರಿಕಿರಿಯೊಂದ ದೂರಾಗಲು ಸಾದ್ಯವಾದಷ್ಟು ನೇರ ಕೂರುವುದು, ಜಾಸ್ತಿ ಭಾರ ಎತ್ತದೇ ಇರುವುದು ಒಳ್ಳೆಯದು. ಅತಿಯಾದ ನೋವಿದ್ದಲ್ಲಿ ವೈದ್ಯರ ಮಾರ್ಗದರ್ಶನದ ಪ್ರಕಾರ ಮಸಾಜ್ ಮಾಡಿಸಿಕೊಳ್ಳಬಹುದು. ಹಾರ್ಮೋನು ವ್ಯತ್ಯಾಸಗಳಿಂದ ರಕ್ತ ಸಂಚಲನೆಯೂ ವ್ಯತ್ಯಯವಾಗಿದ್ದು ಒಸಡುಗಳಿಂದ ಬಲುಬೇಗ ರಕ್ತ ಬರುವುದು ಸಾಮಾನ್ಯ. ಇದನ್ನು ತಡೆಯಲು ಹಲ್ಲುಜುವುದಕ್ಕೆ ಮೃದುವಾದ ಬ್ರಶ್ ಬಳಸಿ. ಹಾಗಂತ ಬಾಯಿಯ ನೈರ್ಮಲ್ಯದ ಬಗ್ಗೆ ಉದಾಸೀನ ಸಲ್ಲದು. ಸಂಶೋಧನೆಗಳ ಪ್ರಕಾರ ದಂತ ಸಂಬಂಧಿ ಸಮಸ್ಯೆಗಳಿರುವ ತಾಯಿಗೆ ಅವಧಿ ಪೂರ್ವ ಹೆರಿಗೆ ಮತ್ತು ಕಡಿಮೆ ತೂಕದ ಮಗು ಹುಟ್ಟುವ ಎಲ್ಲಾ ಸಾಧ್ಯತೆಗಳು ಇರುತ್ತವೆ.

ಹಾಲೂಡಿಸುವ ಸಿದ್ಧತೆಯಲ್ಲಿರುವ ಸ್ತನಗಳು ಗಾತ್ರದಲ್ಲಿ ಹಿಗ್ಗಿ ಮೃದುವಾಗುತ್ತ ಹೋಗುತ್ತವೆ. ಮೂತ್ರಕೋಶದ ಮೇಲೆ ಬೀಳುವ ಹೊಟ್ಟೆಯ ಒತ್ತಡ ಪದೇ ಪದೇ ಬಾತ್^ರೂಮಿಗೆ ಎಡತಾಕುವಂತೆ ಮಾಡುತ್ತದೆ. ಈ ರಗಳೆ ತಡೆಯಲು ನೀರನ್ನೇ ಕುಡಿಯದಿರುವುದು ಅಪಾಯಕಾರಿ. ಹೆಚ್ಚು ನೀರು ಪದಾರ್ಥಗಳನ್ನು ಸೇವಿಸುವುದು ಎಲ್ಲ ರೀತಿಯಿಂದಲೂ ಒಳ್ಳೆಯದು. ಕೆಲವರಿಗೆ ದೇಹದ ಮೇಲೆ ಅಲ್ಲಲ್ಲಿ ಕೂದಲುಗಳು ಹುಟ್ಟಬಹುದು. ಸೌಂದರ್ಯ ಪ್ರಜ್ಞೆಯ ಸುಳಿಗೆ ಸಿಲುಕಿ ವ್ಯಾಕ್ಸಿಂಗ್, ಎಲೆಕ್ಟ್ರಾಲಿಸಿಸ್ ಲೇಸರ್ ಥೆರಪಿಗಳ ಮೊರೆ ಹೋಗಬೇಡಿ. ಇವುಗಳು ಮಗುವಿಗೆ ಮಾಕರವಲ್ಲ ಎಂದು ಈವರೆಗೂ ದೃಢಪಟ್ಟಿಲ್ಲ. ಚರ್ಮದ ಬಣ್ಣ ಬದಲಾಗಿ ಒಂದಷ್ಟು ಕಲೆಗಳು ಮೂಡಬಹುದು; ಕೊಳಕು ಕಾಣಿಸುತ್ತೇನೆಂಬ ಬೇಸರಕ್ಕೆ ಚಿಕಿತ್ಸೆಗಳ ಮೊರೆ ಹೋಗುವುದು ಬೇಡ. ಮಗು ಹುಟ್ಟಿದ ನಂತರ ಇವೆಲ್ಲ ತನ್ನಷ್ಟಕ್ಕೆ ಮಾಯವಾಗುತ್ತವೆ. ಇದು ಸೌಂದರ್ಯಕ್ಕಿಂತ ಆರೋಗ್ಯಕ್ಕೆ ಒತ್ತು ಕೊಡಬೇಕಾದ ಸಮಯ. ಹೆರಿಗೆಯ ನಂತರ ಕಿಬ್ಬೊಟ್ಟೆಯ ಮೇಲೆ ಉಳಿಯುವ (Stretch Marks) ಹೋಗಲಾಡಿಸುವುದಕ್ಕಾಗಿ ಜಾಹೀರಾತುಗಳು ಹೇಳುವ ಕ್ರೀಂಗಳಿಗಿಂತ ತೀಕ್ಷ್ಣವಲ್ಲದ ಸೌಮ್ಯವಾದ ಎಣ್ಣೆಗಳನ್ನು ಹಚ್ಚಿ ಮೃದುವಾಗಿ ನೀವಿದರೆ ಪರಿಣಾಮಕಾರಿ. ಹೊಟ್ಟೆಯ ಮೇಲೆ ಕೈಯಾಡಿಸುವುದು ಕಂದನ ಸಂವೇದನೆಗೂ ನಿಲುಕುವ ಕಾರಣ ನಿಮ್ಮ ಕಾಳಜಿ ಮಗುವನ್ನು ತಲುಪುತ್ತದೆ.

ತಲೆನೋವು ಪ್ರತಿ ಗರ್ಭಿಣಿಯ ಸಮಸ್ಯೆ. ಇದನ್ನು ಹೋಗಲಾಡಿಸುವಲ್ಲಿ ಧ್ಯಾನ, ಯೋಗ, ನಿರಾಳತೆಗೆಂದೇ ಇರುವ ವ್ಯಾಯಾಮವೇ ದಿವ್ಯೌಷಧಿ ಹೊರತು ಗುಳಿಗೆಗಳಲ್ಲ. ಸಾಕಷ್ಟು ವಿಶ್ರಾಂತಿ ಬಹಳ ಸಹಾಯಕ. ಎದೆಯುರಿ, ಅಜೀರ್ಣಗಳು ಬಿಡದೇ ಕಾಡಬಹುದು. ಒಂದೇ ಬಾರಿಗೆ ಜಾಸ್ತಿ ತಿನ್ನುವ ಬದಲು ಆವಾಗಾವಾಗ ಸ್ವಲ್ಪ ಸ್ವಲ್ಪವೇ ತಿನ್ನುವುದು, ಸಾಕಷ್ಟು ದ್ರವಾಹಾರ ಸೇವನೆ, ಮಸಾಲೆ ಪದಾರ್ಥಗಳನ್ನು, ಸಿಟ್ರಸ್ ಆಹಾರಗಳನ್ನು ಕಡಿಮೆ ಮಾಡುವುದು ಇದಕ್ಕೆ ಪರಿಹಾರ. “ಈಗ ನೀನು ಒಬ್ಬಳಲ್ಲ, ಎರಡು ಜೀವ; ಇಬ್ಬರಿಗಾಗೋಷ್ಟು ತಿನ್ನಬೇಕು” ಎಂಬ ಒತ್ತಾಯಕ್ಕೆ ಕಟ್ಟು ಬೀಳುವುದು ಬೇಡ. ಆರಾಮಾಗಿ ಆನಂದವಾಗಿ ಎಷ್ಟು ಎಷ್ಟು ತಿನ್ನಲು ಸಾಧ್ಯವೋ ಅಷ್ಟು ತಿನ್ನಿ. ಆಹಾರದ ಪ್ರಮಾಣಕ್ಕಿಂತ ಗುಣಮಟ್ಟದ್ದು ನಿರ್ಣಾಯಕ ಪಾತ್ರ.

ಇನ್ನು ತೂಕದಲ್ಲಿನ ವ್ಯತ್ಯಾಸದಿಂದ ದೇಹದ ಗಾತ್ರ ಆಕಾರಗಳ ಬದಲಾವಣೆ ಸರ್ವೇಸಾಮಾನ್ಯ. ಆರನೇ ತಿಂಗಳ ಹೊತ್ತಿಗೆ ಆರೋಗ್ಯವಂತ ಗರ್ಭಿಣಿಯ ತೂಕ ಸುಮಾರು ಮೂರೂವರೆಯಿಂದ ನಾಲ್ಕೂವರೆ ಕೆ.ಜಿಯಷ್ಟು ಹೆಚ್ಚಾಗಿರುತ್ತದೆ. ಮೈಕಟ್ಟು ಕಾಪಾಡಿಕೊಳ್ಳುವ ಅಥವಾ ಮೈಮಾಟದ ಮೋಹಕ್ಕೆ ಸಿಲುಕುವುದು ಬೇಡ. ದೇಹಕ್ಕೆ ಹಾಯೆನಿಸುವ ಸಡಿಲವಾದ ಬಟ್ಟೆ ಧರಿಸಿ. ತುಂಬ ಬಿಗಿಯಾದ ಬಟ್ಟೆಗಳು ಸುಗಮ ರಕ್ತ ಸಂಚಲನೆಗೆ ಅಡ್ಡಿಮಾಡುತ್ತವೆ.

ಕೆಂಪು ನಿಶಾನೆಗಳು: (Red Flags/Symptoms)

  • ರಕ್ತಸ್ರಾವ
  • ಕಿಬ್ಬೊಟ್ಟೆಯಲ್ಲಿ ಅತಿಯಾದ ನೋವು ಅಥವಾ ಸ್ನಾಯು ಸೆಳೆತ
  • ಅತೀ ತಲೆ ಸುತ್ತುವಿಕೆ
  • ಅತಿಯಾದ ತೂಕ ಹೆಚ್ಚಳ

ಇವುಗಳಲ್ಲಿ ಯಾವುದು ಕಾಣಿಸಿಕೊಂಡರೂ ನಿರ್ಲಕ್ಷ್ಯವಾಗಲೀ ಸ್ವಯಂ ವೈದ್ಯ ಪ್ರಯೋಗವಾಗಲೀ ಬೇಡವೇ ಬೇಡ. ಇವುಗಳು ನಿಮ್ಮೊಳಗಿನ ಕಂದನನ್ನೇ ಇಲ್ಲವಾಗಿಸಬಹುದು. ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಒಟ್ಟಾರೆಯಾಗಿ ಹೇಳುವುದಾದರೆ ಸರಿಯಾದ ಆಹಾರ, ಕಾಳಜಿಯ ಆರೈಕೆ ಆರೋಗ್ಯವಂತ ಮಗುವಿನ ಜನನಕ್ಕೆ ಮೂಲ ಮಂತ್ರ. ಸಾಥ್ ಕೊಡಲು ಮನಸ್ಸಿನ ನಿರಾಳತೆ, ಮೈಯಲ್ಲಿನ ಉಲ್ಲಾಸ, ಮನೆಯಲ್ಲಿನ ಸಂಭ್ರಮ ತಾಯಿ ಮಗುವಿನ ಆರೋಗ್ಯಕ್ಕೆ ಅಮೃತ ಸಮಾನ. ಗರ್ಭಗುಡಿಯೇ ಸಂಸ್ಕೃತಿ, ಸಂಸ್ಕಾರಗಳ ಉಗಮಸ್ಥಾನ. ಅದನ್ನು ನಿರ್ಮಲವಾಗಿರಿಸುವುದಕ್ಕಿಂತ ಹೆಚ್ಚಿನ ಪೂಜೆಯಿಲ್ಲ.

Leave a Reply