2016ರಲ್ಲಿ ಹಣಕಾಸು ಪ್ರಪಂಚ ಹೇಗಿರುತ್ತೆ? ಏನು ಏರುತ್ತೆ, ಮತ್ತೇನು ಬೀಳುತ್ತೆ? ಇಲ್ಲಿದೆ ರಂಗಸ್ವಾಮಿಯವರ ಲೆಕ್ಕಾಚಾರ!

 

authors-rangaswamyದಿನಗಳು ಕಳೆದು, ತಿಂಗಳುಗಳು ಸವೆದು, ಹೊಸ ವರ್ಷವೂ ಬಂದೇ ಬಿಟ್ಟಿತು. 2015 ರಲ್ಲಿ ಏನೇನಾಯ್ತು ಅನ್ನುವುದು ಎಲ್ಲಾ ತಿಳಿದ ವಿಷಯವೇ. 2016 ರಲ್ಲಿ ಏನಾಗಬಹುದು? ನಿಖರವಾಗಿ ಯಾರೂ ಹೇಳಲಾರರು. ಸುಮ್ಮನೆ ತೋಚಿದ್ದ ಹೇಳಲು ಇದು ಬ್ರಹ್ಮಾಂಡ ಜ್ಯೋತಿಷ್ಯವಲ್ಲ!  ಇಲ್ಲೇನಿದ್ದರೂ ಅಂಕಿ ಅಂಶಗಳ ಆಧಾರದ ಮೇಲೆ, ವಿತ್ತ ಪ್ರಪಂಚದ ಜನರ ಭಾವನೆಗಳ ಏರಿಳಿತ, ಸರಕಾರದ ಆಶಯ, ಜಾಗತಿಕ ಮಟ್ಟದಲ್ಲಿ ಆಗುವ ಬದಲಾವಣೆ ಇವನ್ನೆಲ್ಲ ಗಣನೆಗೆ ತೆಗೆದುಕೊಂಡು ಹೀಗಾಗಬಹುದು ಎಂದು ಹೇಳಬಹುದಷ್ಟೇ. ಇದಮಿತ್ಥಂ ಎಂದು ಹೇಳಲು ಮಾತ್ರ ಸಾಧ್ಯವಿಲ್ಲ. ಅದು ಭಾರತವಿರಬಹುದು, ಅಮೆರಿಕ ಇರಬಹುದು, ಚೀನಾ ಇರಬಹುದು.. ಅಲ್ಲಿ ಆದ ಬದಲಾವಣೆ ನಮಗೇನು ಎನ್ನುವ ಸ್ಥಿತಿ ಉಳಿದಿಲ್ಲ. ಹಾಗಾಗಿ 2016ರಲ್ಲಿ ಪ್ರಮುಖವಾಗಿ ಏನು ಬದಲಾವಣೆ ಆಗಬಹುದುಎನ್ನುವುದ ನೋಡೋಣ!

 • ಅಮೆರಿಕ ಫೆಡರಲ್ ರೇಟ್, ಮಾರ್ಚ್ 2016ರ ವೇಳೆಗೆ ಮತ್ತೆ 0.25 ಬೇಸ್ ಪಾಯಿಂಟ್ ಹೆಚ್ಚಿಸುವ ಸಾಧ್ಯತೆ ಇದೆ. ಅಮೆರಿಕ ಸದ್ದಿಲ್ಲದೇ ಇನ್ನೊಂದು ರಿಸೆಶನ್ ಗೆ ರೆಡಿ ಆಗುತ್ತಿದೆ ಅನ್ನಿಸುತ್ತೆ. ಏಳೆಂಟು ವರ್ಷಗಳು ನಲುಗಿದ್ದ ಮಾರುಕಟ್ಟೆಗೆ ಹೆಚ್ಚಿಸಿದ ಬಡ್ಡಿ ದರ ಹೊಡಿಕೆದಾರರನ್ನು ತರುತ್ತದೆ ನಿಜ. ಯಾವುದೇ ಬದಲಾವಣೆ, ಎಲ್ಲಕ್ಕೂ ಮುಖ್ಯ ಹಣಕಾಸಿಗೆ ಸಂಬಂಧಿಸಿದ ಬದಲಾವಣೆಗೆ ಸಕಾರಾತ್ಮಕ ಉತ್ತರ ಸಿಗುವುದಕ್ಕೆ ಕನಿಷ್ಠ 10 ರಿಂದ 12 ತಿಂಗಳು ಬೇಕು. ಹೀಗಾಗಿ 2016ರಲ್ಲಿ ಅಮೆರಿಕ ಏರುಗತಿ ಕಾಣುವ ಸಾಧ್ಯತೆ ಬಹಳ ಕಡಿಮೆ.
 • ಮಾರ್ಚ್ ಏಪ್ರಿಲ್ ವೇಳೆಗೆ ನಮ್ಮಲ್ಲಿ GST ಪಾಸು ಆಗುವ ಸಾಧ್ಯತೆ ಇದೆ. ಹಾಗಾದಲ್ಲಿ ನಮ್ಮ ಮಾರುಕಟ್ಟೆ ಏರುಗತಿ ಕಾಣುವ ಎಲ್ಲಾ ಸಾಧ್ಯತೆ ಇದೆ.
 • ಎಮರ್ಜಿಂಗ್ ಮಾರ್ಕೆಟ್ನಲ್ಲಿ ಚೈನೀಸ್ ಹಣ ದ ಮೇಲಿನ ಹೂಡಿಕೆ 0.22 ಪ್ರತಿಶತ ಲಾಭ ತಂದುಕೊಟ್ಟಿದೆ. ಉಳಿದಂತೆ ಇಂಡೋನೇಷ್ಯದ ರುಪಾಯಿ, ಸೌತ್ ಕೊರಿಯಾ ದ ವಾನ್, ರಶಿಯಾ ದ ರೂಬೆಲ್, ಮಲೇಷ್ಯಾ ದ ರಿಂಗ್ಗೆಟ್, ಸೌತ್ ಆಫ್ರಿಕಾದ ರಾಂಡ್, ಬ್ರೆಜಿಲ್ ನ ರಿಯಲ್ ಎಲ್ಲವೂ ಋಣಾತ್ಮಕವೆ. ಅಂದರೆ ಹೂಡಿಕೆ ಮೇಲಿನ ಲಾಭ ಇರಲಿ, ಹೂಡಿಕೆಯ ಸ್ವಲ್ಪ ಭಾಗವೆ ಕರಗಿ ಹೋಗಿದೆ. ಭಾರತದ  ರುಪಾಯಿ ಎಮರ್ಜಿಂಗ್ ಮಾರ್ಕೆಟ್ ನ ರಾಜ .., ರುಪಾಯಿ ಮೇಲಿನ ಹೂಡಿಕೆಯ ಲಾಭ 2.57 ಪ್ರತಿಶತ. ಇದು 2015ರ ಕಥೆ!  2016ರಲ್ಲಿ ಅಲ್ಪ ಸ್ವಲ್ಪ ಏರಿಳಿತಗಳಿದ್ದರೂ ರುಪಾಯಿ ತನ್ನ 2015ರ ಸಾಧನೆ ಉಳಿಸಿಕೊಳ್ಳಲಿದೆ.
 • ಕರೆನ್ಸಿ ವಾರ್ ಗೆ ನಾಂದಿ ಹಾಡಿದ್ದು ಚೈನಾ ಎನ್ನುವುದು ಇವತ್ತಿಗೆ ಓಪನ್ ಸಿಕ್ರೆಟ್!  ಅಮೆರಿಕ ಫೆಡರಲ್ ಬಡ್ಡಿ ದರ ಹೆಚ್ಚಿಸಿದರೆ  ಚೀನಾ ತನ್ನ ಬಡ್ಡಿ ದರ ಕಡಿಮೆ ಮಾಡಬಹುದು ಅಥವಾ ತನ್ನ ಕರೆನ್ಸಿ ಅಪಮೌಲ್ಯ ಮಾಡಬಹುದು. ಭಾರತ ವಿಧಿ ಇಲ್ಲದೆ ತನ್ನ ಬಡ್ಡಿ ದರ ಕಡಿಮೆ ಮಾಡಲೇ ಬೇಕಾಗುತ್ತದೆ. ನೆನಪಿಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕೀಳು ದರ್ಜೆಯ ಹೊಡೆದಾಟ ಇದು. ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ ಅವನದು ಎರಡು ಹೋಗಲಿ ಎನ್ನುವ ನೀತಿ ಇದು. ಇದರಿಂದ ಮೊದಲೇ ಸ್ಥಿರತೆ ಕಾಣದ ಜಗತ್ತು ಮತ್ತಷ್ಟು ಅಸ್ಥಿರವಾಗುತ್ತೆ.
 • ಅಮೆರಿಕ, ಯುರೋಪ್ ದೇಶಗಳ ರಿಯಲ್ ಎಸ್ಟೇಟ್ 2016 ರಲ್ಲೂ ಚೇತರಿಕೆ ಕಾಣದೆ ದೈನೇಸಿ ಸ್ಥಿತಿ ಮುಂದುವರಿಯಲಿದೆ. ಭಾರತದಲ್ಲಿ ಕಡಿಮೆಯಾದ ಬಡ್ಡಿ ದರ, ಇನ್ನಷ್ಟು ಕಡಿಮೆ ಮಾಡುವ ಸೂಚನೆ ಕೂಡ ಇರುವುದರಿಂದ, ಮಾರಾಟವಾಗದೆ ಉಳಿದ ಅಪಾರ್ಟ್ ಮೆಂಟ್ ಗಳಿಗೆ ಬೇಡಿಕೆ ಬರಲಿದೆ. 60 ಲಕ್ಷಕ್ಕೂ ಕಡಿಮೆ ಬೆಲೆಯ ಅಪಾರ್ಟ್ ಮೆಂಟ್ ಗಳು ಮಾರಾಟವಾಗಿ, ಕೋಟಿಗೂ ಮೇಲ್ಪಟ್ಟ ಮೌಲ್ಯದ ಮನೆಗಳ ಮೇಲಿನ ಬೇಡಿಕ ಕುಸಿಯಲಿದೆ. ಇಲ್ಲಿ ಮನೆ ಕೊಳ್ಳುವ ಆಸೆ ಇದ್ದವರು ಒಂದು ವಿಷಯ ಗಮನಿಸಿ, ಭಾರತದಲ್ಲಿ ಇನ್ನಷ್ಟು ಬಡ್ಡಿ ಕಡಿಮೆ ಆಗುವ ಸಾಧ್ಯತೆ ಇರುವುದು ಸುಳ್ಳಲ್ಲ. ಬ್ಯಾಂಕ್ ಗಳು ಕೂಡ ಸಾಲ ಕೊಡಲು ತುದಿ ಕಾಲಲ್ಲಿ ನಿಂತಿವೆ. ಅಮೆರಿಕದಲ್ಲಿ ಫೆಡರಲ್ ದರ ಹೆಚ್ಚಾದರೆ ಇದರ ಪರಿಣಾಮವಾಗಿ 2016 ರ ಅಂತ್ಯದ ವೇಳೆಗೆ ನಮ್ಮಲ್ಲಿ ಬಡ್ಡಿ ದರ ಹೆಚ್ಚು ಸಾಧ್ಯತೆ ಇದೆ. ಸಾಲ ಮಾಡುವ ಮುನ್ನ ಇದನ್ನು ಲೆಕ್ಕಕ್ಕೆ ತೆಗೆದು ಕೊಳ್ಳುವುದು ಒಳ್ಳೆಯದು.
 • ಇ ಕಾಮರ್ಸ್ .., ಇದರ ಬಗ್ಗೆ ಕೇಳದೆ ಇರುವರು ಯಾರು? ಅಷ್ಟರ ಮಟ್ಟಿಗೆ ಕಡಿಮೆ ಸಮಯದಲ್ಲಿ ಪ್ರಸಿದ್ದಿ ಪಡೆದ ಫ್ಲಿಪ್ ಕಾರ್ಟ್, ಅಮೆಜಾನ್ , ಸ್ನ್ಯಾಪ್ ಡೀಲ್ , ಮೈನ್ತ್ರ  ಹೀಗೆ ಪಟ್ಟಿ ದೊಡ್ಡದಿದೆ. ಗ್ರಾಹಕರನ್ನು ಸಳೆಯುವ ಬರದಲ್ಲಿ ಇಲ್ಲಿ ಆಗುತ್ತಿರುವ ಅಚಾತುರ್ಯಗಳ ವಿವರಿಸಿ ಇನ್ನೊಂದು ಲೇಖನ ಬರೆಯಬಹುದು, ಅಷ್ಟೊಂದು ದೊಡ್ಡ ಮಟ್ಟದಲ್ಲಿ ಇಲ್ಲಿ ತಪ್ಪುಗಳು ನಡೆಯುತ್ತಿವೆ. ಬಿಸಿನೆಸ್ ನಡೆಯುವುದು ಕೆಲವು ರೀತಿ ನೀತಿ ( ಫ್ರೇಮ್ ವರ್ಕ್ ) ಗಳ ಮೇಲೆ. ಅದನ್ನು ಬಿಟ್ಟು ಅಂಕೆಯಿಲ್ಲದ ಬೆಳವಣಿಗೆ ಮಾರಕ. 2016 ಮೇಲೆ ಹೇಳಿದ ಯಾವುದಾದರೂ ಒಂದು ಇ ಕಾಮರ್ಸ್ ಕಂಪನಿಯ ಅವನತಿಗೆ ಸಾಕ್ಷಿ ಆಗಬಹುದು.
 • ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರಲ್ ಗೆ 20 ಡಾಲರ್ ತಲುಪುವ ಸಾಧ್ಯತೆ ನಿಚ್ಚಳವಾಗಿದೆ. ಮೋದಿಯವರ ಸರಕಾರ ಅಬಕಾರಿ ಸುಂಕ ಮತ್ತೆ ಹೆಚ್ಚಿಸದೇ ಇದ್ದರೆ ಪೆಟ್ರೋಲ್ ಬೆಲೆ 10 ಅಥವಾ 15 ರುಪಾಯಿ ಇಳಿಯುವ ಸಾಧ್ಯತೆ ಇದೆ.
 • ಚಿನ್ನಕ್ಕೂ ಏರುಗತಿಯ ಯೋಗ ಕಾಣುತ್ತಿಲ್ಲ. ಹೀಗಾಗಿ, ಮೈಮೇಲೆ ಚಿನ್ನ ಇರಬೇಕಿತ್ತು ಅಂತ ಆಸೆಪಡುವವರಿಗೆ ಒಡವೆ ಮಾಡಿಸಿಕೊಳ್ಳುವುದಕ್ಕೆ 2016 ಅನುವು ಮಾಡಿಕೊಡಬಹುದೇನೋ… ಆದರೆ ಹೂಡಿಕೆಯ ಮಾರ್ಗವಾಗಿ 2016ರಲ್ಲಿ ಬಂಗಾರವು ಬೆಳಗುವ ಸಾಧ್ಯತೆ ಕಡಿಮೆ.
  ಇಂದಿನ ಜೀವನ ಗಳಿಗೆ ಗಳಿಗೆಗೂ ಏನಾದರೂ ಒಂದು ನಿರ್ಧಾರ ತೆಗೆದು ಕೊಳ್ಳಲೆಬೇಕಾದ ಅನಿವಾರ್ಯತೆ ಸೃಷ್ಟಿಸಿದೆ. ಅನಿಶ್ಚಿತತೆ ಬದುಕಿನ ಅವಿಭಾಜ್ಯ ಅಂಗವಾಗಿರುವ ಇಂದಿನ ದಿನದಲ್ಲಿ ಒಂದಿಷ್ಟು ವಿಷಯಗಳ ಮೇಲಿನ ನಿಖರತೆ ನೀವೊಂದು ಉತ್ತಮ ನಿರ್ಧಾರ ತೆಗೆದು ಕೊಳ್ಳಲು ಸಹಾಯ ಮಾಡಿದರೆ ಈ ಲೇಖನದ ಉದ್ದೇಶ ಸಾರ್ಥಕ.
  ಎಲ್ಲಾ ಓದುಗರಿಗೂ ಹೊಸ ವರ್ಷದ ಶುಭಾಶಯಗಳು.

1 COMMENT

 1. ಇವತ್ತೊಂದು ಪತ್ರಿಕೆಯಲ್ಲಿ ಯಾವುದೋ ಮಠದ ಸ್ವಾಮಿಯೊಬ್ಬರು ೨೦೧೬ರಲ್ಲಿ ಏನೇನಾಗಬಹುದೆಂದು ಭವಿಷ್ಯ ಹೇಳುತ್ತಿದ್ದರು. ರಾಜ್ಯ/ಕೇಂದ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಯಾಗುತ್ತದೆ, ಪಶ್ಚಿಮದಲ್ಲಿ ಭಯೋತ್ಪಾದನೆಯ ಅಪಾಯ ಎದುರಾಗುತ್ತದೆ, ಹಿಮಾಲಯದಲ್ಲಿ ಉಷ್ಣತೆ ಹೆಚ್ಚಾಗಿ ಹಿಮ ಕರಗುತ್ತದೆ, ಶೇರು ಮಾರುಕಟ್ಟೆ ತೊಂದರೆಗೆ ಸಿಲುಕಲಿದ್ದು ಮಾರುಕಟ್ಟೆಯಲ್ಲಿ ಹುಷಾರಾಗಿ ಆಟ ಆಡದಿದ್ದಲ್ಲಿ ಹಣ ಕಳೆದುಕೊಳ್ಳಬೇಕಾಗುತ್ತದೆ- ಅಂತೆಲ್ಲ ಹೇಳಿದ್ದರು.
  ನಗು ಬರುತ್ತದೆ. ಡೆರಿವೆಟಿವ್ಸ್, f&O, ಹೆಜಿಂಗ್ ಅಂತೆಲ್ಲ ಪದಗಳನ್ನೇ ಕೇಳಿರದಿದ್ದರೂ ಇವತ್ತು ಶೇರು ಮಾರುಕಟ್ಟೆಯ ಬಗ್ಗೆ ಎಲ್ಲರೂ ಮಾತನಾಡಬಹುದು ನೋಡಿ! 🙂
  ಹೀಗಿರುವಾಗ, ನೀವು ವಾಸ್ತವ ನೆಲೆಯಲ್ಲಿ if then else statement ಕೊಡುವದನ್ನು ನೋಡಿದರೆ ಕೊಂಚ ಸಮಾಧಾನವಾಗುತ್ತದೆ..
  -Rj

Leave a Reply