ಪಂಜಾಬ್ ದಾಳಿ ಸಾರುತ್ತಿರುವ ಸತ್ಯ: ಷರೀಫ್ ಜತೆ ಎಷ್ಟೇ ಕೈ ಕುಲುಕಿದರೂ ಪಾಕ್ ಸೇನೆ- ಐಎಸ್ ಐ ಅಂದುಕೊಂಡಿದ್ದೇ ನಡೆಯುತ್ತೆ!

 

ಚೈತನ್ಯ ಹೆಗಡೆ

ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯ ಮೇಲೆ ಶನಿವಾರ ನಾಲ್ಕರ ಮುಂಜಾವದ ಉಗ್ರರ ದಾಳಿಗೆ ಇಬ್ಬರು ಯೋಧರು ಮೃತರಾಗಿದ್ದಾರೆ. ದಾಳಿಗೆ ಬಂದ ನಾಲ್ವರು ಜಿಹಾದಿಗಳನ್ನು ಕೊಲ್ಲಲಾಗಿದೆ.

ಅಲ್ಲಿಗೆ, ಪ್ರಧಾನಿ ನರೇಂದ್ರ ಮೋದಿ ಕರಾಚಿಗೆ ದಿಢೀರ್ ಭೇಟಿ ನೀಡಿ ಸೃಷ್ಟಿಸಿದ್ದ ಹಿತ ಸಂಚಲನ, ಜಾಗತಿಕ ಒತ್ತಡ ರೂಪುಗೊಂಡಿರುವುದರಿಂದ ಇನ್ನು ಪಾಕಿಸ್ತಾನವು ಶಾಂತಿ ಮಾತುಕತೆಗೆ ಮಣಿಯಲಿದೆ ಎಂಬ ನಿರೀಕ್ಷೆಗಳೆಲ್ಲ ಕೆಲವೇ ದಿನಗಳ ಅಂತರದಲ್ಲಿ ನೆಗೆದುಬಿದ್ದಿವೆ.

ಪಾಕಿಸ್ತಾನದ ಜೈಷೆ ಮತ್ತು ಲಷ್ಕರ್ ಉಗ್ರ ಸಂಘಟನೆಗಳು ದಾಳಿಯ ಹಿಂದಿದ್ದವು ಎಂಬುದು ಸದ್ಯಕ್ಕೆ ಸಿಗುತ್ತಿರುವ ಮಾಹಿತಿ. ಅದೇನೇ ಇದ್ದರೂ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ ಐ ಬೆಂಬಲ, ಅಲ್ಲಿನ ಸೇನೆಯ ಕುಮ್ಮಕ್ಕು ಇಲ್ಲದೇ ಭಾರತದ ವಾಯುಸೇನೆಯ ನೆಲೆಯೊಂದರ ಮೇಲೆ ದಾಳಿ ಸಂಘಟಿಸುವುದು ಅಸಾಧ್ಯ.

ಈಗ ಯಾರನ್ನು ದೂರೋಣ? ಪಾಕಿಸ್ತಾನದ ಕೈಕುಲುವುದರಲ್ಲಿ ಮೋದಿ ಅವಸರ ಮಾಡಿದರು ಎನ್ನೋಣವೇ? ನವಾಜ್ ಷರೀಫ್ ಬೆನ್ನಿಗೆ ಚೂರಿ ಇರಿದುಬಿಟ್ಟರು ಎಂದು ಪ್ರಲಾಪಿಸೋಣವೇ? ವಾಸ್ತವ ಏನೆಂದರೆ, ನವಾಜ್ ಷರೀಫರಿಗಾಗಲೀ, ಪಾಕಿಸ್ತಾನದ ಇನ್ಯಾವುದೋ ರಾಜಕಾರಣಿಗಳಿಗಾಗಲೀ ಇಂಥ ರಕ್ತಪಾತ- ದ್ವೇಷಗಳೆಲ್ಲ ಬೇಡದ ವಿಷಯವೇ ಆಗಿರಬಹುದು; ಅಲ್ಲಿನ ಶ್ರೀಸಾಮಾನ್ಯರೂ ಇವೆಲ್ಲ ಹೊಡೆದಾಟ ಏಕಪ್ಪಾ ಎನ್ನುತ್ತಿರಬಹುದು…. ಆದರೆ ಪಾಕಿಸ್ತಾನದಲ್ಲಿ ಸೇನೆ ಹಾಗೂ ಗುಪ್ತಚರ ವಿಭಾಗಗಳು ಸರ್ಕಾರದ ಮಾತು ಕೇಳುವುದು ಅಷ್ಟರಲ್ಲೇ ಎಂಬುದು ಪದೇ ಪದೆ ಸಾಬೀತಾಗುತ್ತಿದೆ. ಹೀಗಾಗಿಯೇ ಸರ್ಕಾರದ ಮಟ್ಟದಲ್ಲಿ ಮಾತುಕತೆಗಳು ಎಷ್ಟೇ ಚೆಂದವಾಗಿ ನೆರವೇರಿದರೂ ಅದು ಪ್ರಾಯೋಗಿಕವಾಗಿ ಪರಿಣಾಮ ತೋರುತ್ತಿಲ್ಲ.

ಅಮೆರಿಕವಾಗಲೀ, ಭಾರತವಾಗಲೀ ತನ್ನೆಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಒತ್ತಡ ಹೇರಬಹುದಾದದ್ದು ಸರ್ಕಾರಗಳ ಮೇಲೆ. ಸರ್ಕಾರದ ಯೋಚನೆ ಏನಿದ್ದರೂ ಐಎಸ್ ಐ ಮತ್ತು ಸೇನೆ ತಮ್ಮದೇ ಯೋಜನೆಯಲ್ಲಿ ನಿರತವಾಗಿರುತ್ತವೆ. ಷರೀಫ್ ಇದ್ದರೂ ಮುಷರ್ರಫ್ ಬಂದರೂ ಅವರಿಗೇನೂ ಫರಕ್ಕು ಬೀಳುವುದಿಲ್ಲ. ಮಧ್ಯಪ್ರಾಚ್ಯದ ಐಸಿಸ್ ಉಗ್ರ ಗುಂಪಿಗೆ ಅದ್ಯಾವ ಸರ್ಕಾರ- ಆಡಳಿತ ವ್ಯವಸ್ಥೆಗೆ ನಿಷ್ಠೆ ಇಟ್ಟಿದೆ ಹೇಳಿ? ಅವರದ್ದೇನಿದ್ದರೂ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸುವ ವಿಭ್ರಾಂತ ವಿಕೃತಿ. ಪಾಕಿಸ್ತಾನದ ಸೇನೆ- ಗೂಢಚಾರಿಕೆ ಹಂತದಲ್ಲೂ ಕೆಲಸ ಮಾಡುತ್ತಿರುವುದು ಇಂಥದೇ ಒಂದು ಐಡಿಯಾಲಜಿ.

ಇವತ್ತಿನ ದಾಳಿಗೆ ಕಾರಣ ಜೈಷೆ, ಲಷ್ಕರ್ ಅಂತೆಲ್ಲ ಯಾವ ಹೆಸರನ್ನೇ ಮುಂದು ಮಾಡಿದರೂ ಈ ಉಗ್ರರಿಗೆಲ್ಲ ಪಾಕ್ ಗೂಢಚಾರಿಕೆ ವಲಯದ ಸಂಪೂರ್ಣ ಸಹಕಾರ ಇರೋದು ಖಚಿತ. ಏಕೆಂದರೆ ಕೇವಲ ವಾರದ ಹಿಂದಷ್ಟೇ ಭಾರತದಲ್ಲಿ ವಾಯುಸೇನೆಯ ಮಾಜಿ ಅಧಿಕಾರಿಯೊಬ್ಬರ ಬಂಧನವಾಯಿತು. ಭಾರತೀಯ ವಾಯುಸೇನೆಯ ನೆಲೆಗಳ ಫೋಟೋ ಇನ್ನಿತರ ಮಾಹಿತಿಗಳನ್ನೆಲ್ಲ ಆತ ಐಎಸ್ ಐಗೆ ದಾಟಿಸುತ್ತಿದ್ದ ಎಂಬುದೇ ಬಂಧನಕ್ಕೆ ಕಾರಣ. ಫೇಸ್ ಬುಕ್ ನಲ್ಲಿ ಹೆಂಗಸನ್ನು ಬಳಸಿಕೊಂಡು ಐಎಸ್ ಐ ಆತನನ್ನು ಹನಿಟ್ರ್ಯಾಪ್ ಮಾಡಿತ್ತು ಎಂಬುದೂ ವರದಿಯಾಯಿತು. ರಂಜಿತ್ ಕೆಕೆ ಎಂಬ ಈ ಮಾಜಿ ಐಎಎಫ್ ಅಧಿಕಾರಿ ಬಂಧನವಾಗಿದ್ದು ಪಂಜಾಬ್ ನ ಭಟಿಂಡಾದಲ್ಲೇ ಎಂಬುದು ನಮಗೆಲ್ಲ ತಿಳಿದಿರಬೇಕು. ಈ ಎಲ್ಲ ಮಾಹಿತಿಗಳನ್ನು ಇವತ್ತಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಗೆ ಸಮೀಕರಿಸಿದರೆ ಸ್ಪಷ್ಟ ಚಿತ್ರಣ ಸಿಕ್ಕಿಬಿಡುತ್ತದೆ.

ಅಲ್ಲದೇ, ಮೂರು ದಿನಗಳ ಹಿಂದಷ್ಟೇ ಭಾರತದ ಗೃಹ ಸಚಿವಾಲಯವು ಕಟ್ಟೆಚ್ಚರದ ಸೂಚನೆಯೊಂದನ್ನು ಕೊಟ್ಟಿತ್ತು. ಭಾರತೀಯ ಸೇನೆಯ ಮಾಜಿ ಯೋಧರಿಗೆ ಸವಲತ್ತು- ಉದ್ಯೋಗಗಳನ್ನು ನೀಡುವುದಕ್ಕೆ ಉತ್ತರ ಭಾರತದಲ್ಲಿ ಕೆಲ ಸಂಘಟನೆಗಳು ತಲೆ ಎತ್ತಿವೆ. ಇವುಗಳಲ್ಲಿ ಹೆಚ್ಚಿನವು ಪಾಕಿಸ್ತಾನದ ಐಎಸ್ ಐ ಪ್ರಚೋದನೆಯನ್ನು ಹೊಂದಿವೆ. ಮಾಜಿ ಯೋಧರನ್ನು ಬಳಸಿಕೊಂಡು ಭಾರತದ ಸೇನೆ ನೆಲೆಗಳು ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ರಕ್ಷಣಾ ಸಚಿವಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿ ತಕ್ಕ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹ ಸಚಿವಾಲಯವು ಎಚ್ಚರಿಕೆ ನೀಡಿರುವ ‘ಮೂಲಗಳನ್ನು ಉಲ್ಲೇಖಿಸಿದ’ ಸುದ್ದಿ ಡಿ. 30ರಂದು ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಇವೆಲ್ಲದರ ಅರ್ಥ ಇಷ್ಟೆ. ಭಾರತ- ಪಾಕಿಸ್ತಾನಗಳ ಸರ್ಕಾರಗಳು ಅವೇನೇ ಉತ್ತಮ ಆಶಯಗಳನ್ನಿಟ್ಟುಕೊಂಡು ಶಾಂತಿ ಪ್ರಕ್ರಿಯೆ ನಡೆಸಿದರೂ ಅಲ್ಲಿನ ಸೇನೆ- ಗೂಢಚರ ವಿಭಾಗ ಮಾತ್ರ ತನ್ನದೇ ಪ್ಲಾನ್ ಪ್ರಕಾರ ಮುಂದುವರಿಯಲಿದೆ. ಹಾಗಾದರೆ ಪಾಕ್ ಸೇನೆ- ಐಎಸ್ ಐ ಕೊರಳಿಗೆ ಗಂಟೆ ಕಟ್ಟುವವರ್ಯಾರು?

Leave a Reply