ಪಕ್ಕದ ಬಿಲ್ಡಿಂಗ್ ಹೊತ್ತಿ ಉರಿವಾಗ ಈತಗೆ ಕಾಡಿದ್ದು ಸ್ವಂತಿ ಚಿಂತೆ!

ಡಿಜಿಟಲ್ ಕನ್ನಡ ಟೀಮ್

ಈ ಸಾಮಾಜಿಕ ಮಾಧ್ಯಮಗಳು ಬಂದು ಸಾಮಾನ್ಯರನ್ನೂ ಮಾಹಿತಿ ವಿಷಯದಲ್ಲಿ ಬಲಪಡಿಸಿವೆ ಅನ್ನೋದೆಷ್ಟು ನಿಜವೋ, ಹಾಗೆಯೇ ಎಲ್ಲರ ತಿಕ್ಕಲುತನ, ವಿಕ್ಷಿಪ್ತ ಮನೋಭಾವ ಬೆತ್ತಲಾಗಿಸುವುದರಲ್ಲೂ ಕೊಡುಗೆ ಸಲ್ಲಿಸುತ್ತಿವೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ದುಬೈನ ಬುರ್ಜ್ ಖಲಿಫಾ ಸಮೀಪದ ಬಹುಮಹಡಿ ಹೋಟೆಲ್ ಒಂದು ಅಗ್ನಿ ಅವಘಡಕ್ಕೆ ತುತ್ತಾದ ಸುದ್ದಿ ಓದಿರ್ತೀರಿ. ಅದರ ಸಮೀಪದಲ್ಲೇ ವಾಸ್ತವ್ಯ ಹೂಡಿದ್ದ ಈ ಭೂಪ ಮಾಡಿದ್ದೇನು ನೋಡಿ? ಹೆಂಡತಿ ಪಕ್ಕ ನಿಂತು, ಉರಿಯುವ ಕಟ್ಟಡವನ್ನೇ ಹಿನ್ನೆಲೆಯನ್ನಾಗಿಸಿಕೊಂಡು ಸ್ವಂತಿ ತೆಗೆದುಕೊಂಡಿದ್ದು. ಅದನ್ನು ಇನ್ಸ್ತಾಗ್ರಾಮ್ ನಲ್ಲೂ ತೇಲಿಬಿಟ್ಟಿದ್ದಾಯ್ತು.

ಇದೀಗ ಈ ಫೋಟೊ ಅಂತರ್ಜಾಲದಲ್ಲಿ ಸಾಕಷ್ಟು ಹರಿದಾಡಿ ಟೀಕೆಗೆ ಗುರಿಯಾಗಿದೆ. ಅಯ್ಯೋ ಮಹಾನುಭಾವ, ಪಕ್ಕದ ಕಟ್ಟಡ ಹೊತ್ತಿ ಉರೀತಿದ್ರೆ ಅದೆಷ್ಟು ಖುಷಿಯಾಗಿ, ಮುಖ ಅರಳಿಸಿ ಫೋಟೋ ತೆಗೆದುಕೊಂಡು ಕುಳಿತಿದ್ದೀಯಪ್ಪ ಅಂತ ನೆಟ್ಟಿಗರು ದಬಾಯಿಸುತ್ತಿದ್ದಾರೆ.

ಬೆಂಕಿ ಹೊತ್ತಿದ ತಾಸಿನೊಳಗೆ ಇಂಥದೊಂದು ಫೋಟೊ ಹಾಕಿಕೊಂಡಿರುವ ಅಬ್ದುಲ್ ರೆಹಮಾನ್ ಅಲ್ತೀಕಿ, ‘ಪ್ರೀತಿಯ ದುಬೈಗೆ ಹೊಸ ವರ್ಷದ ಶುಭಾಶಯ. ದೇವರ ಅನುಗ್ರಹದಿಂದ ಸುರಕ್ಷಿತವಾಗಿರು. ನೀನು ಯಾವತ್ತೂ ನಮ್ಮನ್ನು ದೊಡ್ಡ ಬೆಂಕಿ ಆಕರ್ಷಣೆಗಳ ಆಟದಿಂದ ಚಕಿತಗೊಳಿಸುತ್ತೀ’ ಅಂತ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಸಖತ್ತಾಗಿದೆ, ಒಳ್ಳೆ ಪ್ರಾಜ್ವಲ್ಯಮಾನ ಜೋಡಿ ಅಂತೆಲ್ಲ ಕಾಮೆಂಟು ಹಾಕಿ ಸಂಭ್ರಮಿಸಿದವರೂ ಇದ್ದಾರೆ.

ಅಬ್ದುಲ್ ಉದಾಹರಣೆ ಇಲ್ಲಿ ನಿಮಿತ್ತವಷ್ಟೆ. ನಮ್ಮಲ್ಲೂ ಅಪಘಾತವಾದ ಸ್ಥಳದಲ್ಲಿ ರಕ್ಷಣೆಗೆ ಧಾವಿಸುವುದಕ್ಕೆ ಬದಲಾಗಿ ಸೆಲ್ ಫೋನ್ ನಲ್ಲಿ ಫೋಟೊ ತೆಗೆದುಕೊಂಡಿರುವವರ ಸಮೂಹವೇ ಸೃಷ್ಟಿಯಾಗುತ್ತಿರುವುದು ರಹಸ್ಯವೇನಲ್ಲ.

Leave a Reply