ಭಾರತಕ್ಕೆ ಶ್ರೇಷ್ಠ ವಿಜ್ಞಾನಿಗಳು, ಅನ್ವೇಷಕರು, ನ್ಯಾಯ ಪಂಡಿತರು ಬೇಕಾ? ಹಾಗಿದ್ರೆ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಕಲಿಸೋಣ!

 

ಡಿಜಿಟಲ್ ಕನ್ನಡ ಟೀಮ್

‘ಶಾಲಾ ಪಠ್ಯದಲ್ಲಿ ಶಾಸ್ತ್ರೀಯ ಸಂಗೀತ ಇರಬೇಕು. ಇದರಿಂದ ದೇಶಕ್ಕೆ ಉತ್ತಮ ಕಲಾವಿದರು ಸಿಗುತ್ತಾರಷ್ಟೇ ಎಂದುಕೊಳ್ಳಬೇಕಿಲ್ಲ. ವಿಜ್ಞಾನಿಗಳು, ನ್ಯಾಯಾಧೀಶರು, ಅನ್ವೇಷಕರು ಸಿಗುತ್ತಾರೆ. ಸರಳ ನೆಲೆಯಲ್ಲಿ ಉತ್ತಮ ಮನುಷ್ಯರು ನಿರ್ಮಾಣವಾಗುತ್ತಾರೆ.’ ಹೀಗಂತ ಪಠ್ಯಕ್ರಮದಲ್ಲಿ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಸ್ಥಾನ ನೀಡುವುದಕ್ಕೆ ಆಗ್ರಹಿಸಿದವರು ಯಾರೆಂದುಕೊಂಡಿರಿ? ಯಾರೋ ಸಂಗೀತ ವಿದ್ವಾಂಸರು ಅಥವಾ ಸಂಗೀತಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರಾಜಕಾರಣಿ ಯಾರೋ ಈ ಮಾತನ್ನು ಹೇಳಿದ್ದರೆ, ಅದೊಂದು ಸಂದರ್ಭಕ್ಕೆ ತಕ್ಕ ಮಾತು ಎಂದು ಭಾವಿಸಬಹುದಿತ್ತೇನೋ.

ಗಣಿತದ ನೊಬೆಲ್ ಎಂದೇ ಖ್ಯಾತವಾಗಿರುವ ಫೀಲ್ಡ್ ಮೆಡಲ್ ಪುರಸ್ಕಾರಕ್ಕೆ ಪಾತ್ರರಾಗಿರುವ ಮಂಜುಲ್ ಭಾರ್ಗವ್ ಅವರು, ಚೆನ್ನೈನಲ್ಲಿ ಸಂಗೀತ ಅಕಾಡೆಮಿಯ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಆಡಿದ ಮಾತಿದು.

ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಗಣಿತದ ಪ್ರೊಫೆಸರ್ ಆಗಿರುವ ಭಾರತೀಯ ಮೂಲದ ಭಾರ್ಗವರು, ಸ್ವತಃ ಭಾರತೀಯ ಸಂಗೀತ ಮತ್ತು ಸಂಸ್ಕೃತ ಕಾವ್ಯಗಳಲ್ಲಿ ಅಧ್ಯಯನ ಶ್ರದ್ಧೆಯನ್ನು ತೋರಿದವರು. ಅವರಿಗೆ ಪ್ರತಿಷ್ಠಿತ ಫೀಲ್ಡ್ ಮೆಡಲ್ ದೊರೆತಾಗಲೂ ಗಣಿತದ ಮೇಲೆ ತಮಗೆ ಆಸಕ್ತಿ ಹೆಚ್ಚುವುದಕ್ಕೆ ಪ್ರಾಚೀನ ಸಂಸ್ಕೃತ ಕಾವ್ಯಗಳು ಹೇಗೆಲ್ಲ ಸಹಾಯ ಮಾಡಿದವು ಎಂಬುದನ್ನು ವಿವರಿಸಿದ್ದರು. ಭಾರತದ ಪ್ರಾಚೀನ ಸಾಹಿತ್ಯ, ಉಪನಿಷತ್ ಸಾರ ಹೇಗೆ ಗಣಿತ ಸೂತ್ರಗಳನ್ನು ಅಂತರ್ಗತವಾಗಿ ಪೋಷಿಸಿಕೊಂಡಿದೆ ಎಂಬುದನ್ನು ಹೊಸ ತಲೆಮಾರಿನ ಪ್ರತಿನಿಧಿಯಾಗಿ, ಗಣಿತಜ್ಞನ ಸ್ಥಾನದಲ್ಲಿ ನಿಂತು ಹೇಳಿದಾಗ ಜಗತ್ತು ಬೆರಗುಗೊಂಡಿತ್ತು.

manjul

 

 

 

 

 

 

 

 

 

 

 

 

 

 

 

ಇದೀಗ ಶಾಸ್ತ್ರೀಯ ಸಂಗೀತಕ್ಕೆ ಪಠ್ಯಕ್ರಮದಲ್ಲಿ ಜಾಗವಿರಲಿ ಎಂದು ಆಶಿಸಿರುವ ಮಂಜುಲ್ ಭಾರ್ಗವರು ಅದಕ್ಕೆ ಮನಮುಟ್ಟುವ ಕಾರಣಗಳನ್ನೂ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಸಂಗೀತವೆಂಬುದು ಹೇಗೆ ಸೃಜನಶೀಲತೆಯನ್ನೂ, ಕ್ರಿಯಾಶೀಲತೆಯನ್ನೂ ಬೆಸೆಯುತ್ತದೆ ಎಂಬುದಕ್ಕೆ ತಂತ್ರಜ್ಞಾನ ಲೋಕದ ದಂತಕತೆ ಸ್ಟೀವ್ ಜಾಬ್ಸ್ ಅವರನ್ನು ಭಾರ್ಗವರು ಉದಾಹರಿಸುತ್ತಾರೆ. ‘ಮ್ಯಾಕಿಂತೋಶ್ ಗೆ ಗಣಕ ಸಾಮರ್ಥ್ಯವನ್ನು ಹಿಗ್ಗಿಸುವುದಕ್ಕೆ ಸಾಧ್ಯವಾಗಿದ್ದಾರೂ ಹೇಗೆ ಎಂಬ ಪ್ರಶ್ನೆಗೆ ಸ್ಟೀವ್ ಉತ್ತರಿಸಿದ್ದರು- ನಾನು ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುವುವಾಗ ಅವರು ಎಂಜಿನಿಯರಿಂಗ್ ನ ಜೊತೆಯಲ್ಲಿ ಸಂಗೀತ ಸೇರಿದಂತೆ ಕುಶಲ ಕಲೆಗಳಲ್ಲಿ ತರಬೇತು ಹೊಂದಿದ್ದಾರೆಯೇ ಎಂದು ಗಮನಿಸಿ ಅಂಥವರಿಗೆ ಪ್ರಾತಿನಿಧ್ಯ ನೀಡುತ್ತೇನೆ. ಅಂಥವರೇ ಹೆಚ್ಚಿನ ಅನ್ವೇಷಕ ಬುದ್ಧಿ ಹೊಂದಿರುತ್ತಾರೆ.’   (ಚಿತ್ರಕೃಪೆ: ದ ಹಿಂದು)

ಈ ಟಿಪ್ಪಣಿಯೊಂದಿಗೆ ಶಾಸ್ತ್ರೀಯ ಸಂಗೀತದ ಮಹತ್ವ ಸಾರಿದ ಮಂಜುಲ್ ಭಾರ್ಗವರು ತಮ್ಮ ಪ್ರತಿಪಾದನೆಯನ್ನು ತರ್ಕಬದ್ಧವಾಗಿ ಹಿಡಿದಿಟ್ಟಿದ್ದು ಹೀಗೆ- ‘ಭಾರತೀಯ ಸಂಗೀತವೆಂಬುದು ಆಳ ಗಣಿತವನ್ನೂ ಸಂಕೀರ್ಣ ಸೌಂದರ್ಯವನ್ನೂ ತನ್ನೊಳಗಿರಿಸಿಕೊಂಡಿರುವ ಅತಿ ವಿಸ್ತಾರದ ಅಭಿವ್ಯಕ್ತಿ. ದೇಶದ ಶ್ರೇಷ್ಠ ಗಣಿತಜ್ಞರಾದ ಶ್ರೀನಿವಾಸ ರಾಮಾನುಜಂ ಮತ್ತು ಸಿ. ಎಸ್. ಶೇಷಾದ್ರಿ ಅವರಿಗೆ ಶಾಸ್ತ್ರೀಯ ಸಂಗೀತದ ಹಿನ್ನೆಲೆ ಇತ್ತು. ಭರತನ ನಾಟ್ಯಶಾಸ್ತ್ರ ಮತ್ತು ಶರಗದೇವನ ಸಂಗೀತ ರತ್ನಾಕರ ಗ್ರಂಥಗಳು ಕೇವಲ ಸಂಗೀತದ ಅತ್ಯುನ್ನತ ಕೃತಿಗಳು ಮಾತ್ರವೇ ಅಲ್ಲ, ಗಣಿತದ ಆಯಾಮದಲ್ಲೂ ದಿಗ್ದರ್ಶಕ ಕೃತಿಗಳಾಗಿ ನಿಲ್ಲುತ್ತವೆ. ಹೀಗಾಗಿ ಶಾಸ್ತ್ರೀಯ ಸಂಗೀತದ ಶಕ್ತಿ ಏನೆಂದರೆ ಅದು ವ್ಯಕ್ತಿ ತೊಡಗಿಸಿಕೊಂಡಿರುವ ಇತರ ವಲಯದಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ನಾವು ಶಾಲಾಪಠ್ಯದಲ್ಲಿ ಶಾಸ್ತ್ರೀಯ ಸಂಗೀತವನ್ನು ಸೇರಿಸುವ ಮೂಲಕ ಯುವ ಮನಸ್ಸುಗಳಲ್ಲಿ ಇರುವ ಅತ್ಯುತ್ತಮ ಅಂಶಗಳು ಅರಳುವುದಕ್ಕೆ ದಾರಿ ಮಾಡಿಕೊಡಬೇಕು.’

ಮಂಜುಲ್ ಭಾರ್ಗವರ ಮಾತುಗಳಿಗೆ ಕೇವಲ ಚಿಂತಕರ ವಲಯದ ಮಟ್ಟದಲ್ಲಿ ಮಾತ್ರವಲ್ಲದೇ ಆಡಳಿತಾತ್ಮಕ ಪ್ರಭಾವ ಹೊರಡಿಸಬಲ್ಲ ಶಕ್ತಿಯೂ ಇದೆ. ಏಕೆಂದರೆ ಪ್ರಧಾನಿಯವರು ಉದ್ದೇಶಿಸಿರುವ ‘ಟೀಚ್ ಇಂಡಿಯಾ’ ಎಂಬ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗಣಿತ ಮತ್ತು ಮೂಲವಿಜ್ಞಾನಗಳಲ್ಲಿ ಜಾಗತಿಕ ಮಟ್ಟದಲ್ಲಿ ಬೋಧನೆಯಲ್ಲಿ ತೊಡಗಿರುವ ಶ್ರೇಷ್ಠ ಉಪನ್ಯಾಸಕರನ್ನು ಕರೆತಂದು, ಭಾರತದ ಆಯ್ದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿಸುವ ಯೋಜನೆ ಇದು. ಈ ನಿಟ್ಟಿನಲ್ಲಿ ರೂಪುರೇಷೆ ಸಿದ್ಧಪಡಿಸುವಲ್ಲಿ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯದೊಂದಿಗೆ ಮಂಜುಲ್ ಭಾರ್ಗವರು ಸಂಪರ್ಕದಲ್ಲಿದ್ದಾರೆ. ಇಂಥವರಿಂದ ಹೊರಹೊಮ್ಮುವ ಆಲೋಚನೆಗಳು ನೀತಿಯಾಗಿ ಮಾರ್ಪಡುವ ಸಾಧ್ಯತೆಗಳು ಸಹಜವಾಗಿ ಹೆಚ್ಚು. ಹೀಗಾಗಿ, ಶಾಸ್ತ್ರೀಯ ಸಂಗೀತಕ್ಕೆ ಪಠ್ಯದಲ್ಲಿ ಸ್ಥಾನಮಾನ ಕಲ್ಪಿಸುವ ಭಾರ್ಗವರ ಯೋಚನೆ ಗಟ್ಟಿಗೊಂಡಿದ್ದೇ ಹೌದಾದರೆ ಮುಂದೊಮ್ಮೆ ಅನುಷ್ಠಾನಕ್ಕೂ ಬಂದೀತು.

ನಮ್ಮ ಕಾಮೆಂಟ್: ಈ ವರದಿ ಓದಿಕೊಂಡು, ‘ಹೌದ್ಹೌದು, ನಾವೂ ನಮ್ ಮಕ್ಳನ್ನ ಮ್ಯೂಸಿಕ್ ಗೆ ಹಾಕಿದೀವಿ’ ಎಂದೆನ್ನುವ ಪಾಲಕರೇ ಗಮನಿಸಿ… ಮಂಜುಲ್ ಭಾರ್ಗವರು ಇಲ್ಲಿ ಹೇಳುತ್ತಿರುವುದು ಮಕ್ಕಳನ್ನು ರಿಯಾಲಿಟಿ ಶೋಗಳಿಗೆ ತಯಾರು ಮಾಡುವ ಸಂಗೀತ ಪಠ್ಯದ ಬಗ್ಗೆ ಅಲ್ವೇ ಅಲ್ಲ!

ಕೊನೆಯಲ್ಲಿ, ಗಣಿತಜ್ಞನ ಮನಸ್ಸನ್ನು ಹಿಡಿದಿಡುವ ಆಂಗ್ಲ ಸಂವಾದದ ವಿಡಿಯೋ. ಎನ್ ಡಿಟಿವಿ ಪ್ರಣಯ್ ರಾಯ್ ಜತೆಗಿನ ಸಂದರ್ಶನದಲ್ಲಿ ಭಾರತದ ಜೀನಿಯಸ್ ನ ಅಚ್ಚುಮೆಚ್ಚುಗಳು ಬಿಂಬಿತವಾಗಿವೆ.

Leave a Reply