ಮನೇಲಿ ಮನಸ್ತಾಪ ಏನಿಲ್ಲ, ಮೈ ಮರೆತಿದ್ರಿಂದ ಹಾಸನದಲ್ಲಿ ಸೋತ್ವಿ ಅಂತಿದ್ದಾರೆ ರೇವಣ್ಣ!

ವಿಧಾನ ಪರಿಷತ್ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಕಳೆದುಕೊಳ್ಳಲು ತಮ್ಮ ಕುಟುಂಬ ರಾಜಕೀಯ ಕಲಹ ಕಾರಣವಲ್ಲ. ಬದಲಿಗೆ ನಾವು ಮೈಮರೆತಿದ್ದರಿಂದ ಸೋಲು ಅನುಭವಿಸಬೇಕಾಯಿತು ಎಂದು ಜೆಡಿಎಸ್ ಮುಖಂಡ, ಶಾಸಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಒಂದೆಡೆ ಅತಿಯಾದ ವಿಶ್ವಾಸ ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡ ಕಾರಣ ನಮ್ಮ ಅಭ್ಯರ್ಥಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡರು. ಮತದಾರರನ್ನು ಓಲೈಸಲು ಕಾಂಗ್ರೆಸ್ ಅಭ್ಯರ್ಥಿ ಭಾರೀ ಪ್ರಮಾಣದಲ್ಲಿ ಹಣದ ಹೊಳೆ ಹರಿಸಿದರು. ಜತೆಗೆ ಆಣೆ ಪ್ರಮಾಣ ಮಾಡಿಸಿಕೊಂಡರು. ನಮ್ಮ ಅಭ್ಯರ್ಥಿ ಬಳಿ ಹಣವಿರಲಿಲ್ಲ. ಹೀಗಾಗಿ ಸೋಲು ಅನುಭವಿಸಬೇಕಾಯಿತು ಎಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದ್ದಾರೆ.

ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಅದರ ಸೋಲನ್ನು ವಿಶ್ಲೇಷಿಸುತ್ತ, ದೇವೇಗೌಡರ ಕೌಟುಂಬಿಕ ರಾಜಕೀಯ ಕಲಹಕ್ಕೆ ಒಳಮನೆ ಸೇರಿದ ಪಟೇಲ್ ಶಿವರಾಂ! ಎಂದು ಡಿಜಿಟಲ್ ಕನ್ನಡ ಶುಕ್ರವಾರವಷ್ಟೇ ವಿಶ್ಲೇಷಿಸಿತ್ತು.

ಹಾಸನ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದ್ದರೂ ನಮ್ಮ ನಿರ್ಲಕ್ಷ್ಯತನ ಮುಳುವಾಯಿತು. ಮೇಲ್ಮನೆ ಚುನಾವಣೆಯಲ್ಲಿ ಜೆಡಿಎಸ್ ಕೇವಲ ನಾಲ್ಕು ಸ್ಥಾನ ಗೆದ್ದಿದೆ ಎಂದು ಯಾರೂ ಬೀಗುವುದು ಬೇಕಿಲ್ಲ. ಇವತ್ತು ನಮ್ಮ ಪಕ್ಷ ಶೆಡ್ಡಿನಲ್ಲಿರಬಹುದು. ಆದರೆ ಪರಿಸ್ಥಿತಿ ಹೀಗೆ ಇರುವುದಿಲ್ಲ.

1989 ರ ಚುನಾವಣೆಯಲ್ಲಿ ಕೇವಲ ಎರಡು ಸ್ಥಾನ ಗೆದ್ದಿದ್ದೆವು. ಆದರೆ ’94 ರಲ್ಲಿ 124 ಗೆದ್ದೆವು. 1999 ರಲ್ಲಿ ಸೋತಾಗ ಜೆಡಿಎಸ್ ಕತೆ ಮುಗಿದೇ ಹೋಯಿತು ಎಂದರು. ಆದರೆ 2004 ರಲ್ಲಿ ಐವತ್ತೆಂಟು ಸೀಟು ಗೆದ್ದೆವು. 2008 ರಲ್ಲಿ ಇಪ್ಪತ್ತೆಂಟು ಸೀಟು ಗೆದ್ದಾಗ ಕೆಲವರು ಕುಹಕವಾಡಿದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಲವತ್ತು ಸೀಟು ಗೆದ್ದಿದ್ದೇವೆ. ಮುಂದಿನ ಬಾರಿ ಖಂಡಿತಾ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಯಾವ ಅನುಮಾನವೂ ಬೇಡ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಧರ್ಮಸಿಂಗ್, ಖರ್ಗೆ, ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರ ಕ್ಷೇತ್ರದಲ್ಲೂ ಸೋಲಾಗಿವೆ. ತುಮಕೂರಿನಲ್ಲಿ ಸಂಸದರು, ಗೃಹ ಸಚಿವರು, ಕಾನೂನು ಸಚಿವರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ ಎಂದು ಹಾಸನ ಸೋಲಿಗೆ ಸಮರ್ಥನೆ ನೀಡಿದರು.

ನಮ್ಮ ಕಾಮೆಂಟ್ : ಎದುರಾಳಿಗಳು ಹಣಬಲ ಮೆರೆದಿದ್ದರಿಂದ ನಾವು ಸೋಲಬೇಕಾಯಿತು ಎಂಬುದು ಪಕ್ಷಬೇಧ ಮರೆತು ಸೋತವರೆಲ್ಲರೂ ಕೊಡುವ ಕಾರಣ ಅಷ್ಟೆ. ಆದರೆ ಟಿಕೆಟ್ ಕೊಡುವಾಗ ಎಲ್ಲ ಪಕ್ಷಗಳೂ ಅಭ್ಯರ್ಥಿಯ ಹಣಬಲವೂ ಸೇರಿದಂತೆ ಎಲ್ಲ ಬಗೆಯ ಬಲಗಳನ್ನು ತಕ್ಕಡಿಯಲ್ಲಿಡುತ್ತವೆ ಎಂಬುದು ಓಪನ್ ಸಿಕ್ರೆಟ್. ಸೋಲುವುದಕ್ಕೆ ಎದುರಾಳಿಗಳ ಹಣಬಲವಷ್ಟೇ ಕಾರಣ ಅಂತಾದರೆ, ನಾಲ್ಕು ಸ್ಥಾನಗಳಲ್ಲಿ ಜೆಡಿಎಸ್ ಗೆದ್ದಿದೆಯಲ್ಲ, ಅಲ್ಲಿ ಯಾವ ತರ್ಕ ಅನ್ವಯಿಸುತ್ತದೆ?

Leave a Reply