ಸಂತರ ಸಂದರ್ಶನ, ವಿಜ್ಞಾನ ಸಮ್ಮೇಳನ, ರಕ್ಷಣೆಯ ಗಮನ, ಕೊನೆಯಲ್ಲಿ ಯೋಗಕ್ಕೆ ನಮನ..

ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಪ್ರಧಾನಿ

ಡಿಜಿಟಲ್ ಕನ್ನಡ ಟೀಮ್

ವಿಜ್ಞಾನ ಮತ್ತು ಸಾಂಪ್ರದಾಯಿಕತೆಯ ಮೇಳೈಕೆ- ಮೈಸೂರನ್ನು ಮುಖ್ಯವಾಗಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ಕರ್ನಾಟಕ ಪ್ರವಾಸವನ್ನು ಈ ಒಂದು ವಾಕ್ಯದಲ್ಲಿ ಹಿಡಿದಿಡಬಹುದು.

ಶನಿವಾರದ ಮೋದಿಯವರ ಕಾರ್ಯಕ್ರಮ ಸಂತರ ಸಹಯೋಗದಲ್ಲಿ ಕಳೆಯಿತು. ಭಾನುವಾರ ಮೈಸೂರಿನಲ್ಲಿ ನಡೆದ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಉದ್ಘಾಟನೆಯೊಂದಿಗೆ ವಿಜ್ಞಾನದ ವಾತಾವರಣ ಕಳೆಗಟ್ಟಿತು. ನಂತರ ತುಮಕೂರಿನಲ್ಲಿ ನಿರ್ಮಿಸಲಾಗುತ್ತಿರುವ ಎಚ್ ಎ ಎಲ್ ವಿಮಾನ ತಯಾರಿಕಾ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ದೇಶದ ಪ್ರಗತಿ ಪಥದಲ್ಲೊಂದು ಹೆಮ್ಮೆಯ ಗರಿ ಮೂಡಿಸಿತು. ನಂತರ ಭಾಗಿಯಾದ ಜಿಗಣಿಯಲ್ಲಿನ ಕಾರ್ಯಕ್ರಮ ಯೋಗ ನಮನಕ್ಕೆ ಸಾಕ್ಷಿಯಾಯಿತು.

  • ದೇಶದ ಸ್ವಾತಂತ್ರ್ಯ ಹೋರಾಟವನ್ನು ರೂಪಿಸಿದ್ದರಲ್ಲಿ ಸಂತರ ಪಾತ್ರ ದೊಡ್ಡದಿದೆ. ಭಕ್ತಿ ಚಳವಳಿ ಮೂಲಕ ಅವರು ದೇಶದ ಪ್ರಜ್ಞೆಯನ್ನು ರೂಪಿಸಿದರು. ಇಂಥ ಸಂತ ಪರಂಪರೆಯನ್ನು ಒಂದು ವರ್ಗ ಟೀಕೆ ಮಾಡಿಕೊಂಡಿರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಪ್ರಧಾನಿ ಅವರು ವ್ಯಕ್ತಪಡಿಸಿದ್ದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ.

modi mysore6

  • ಇದಕ್ಕೂ ಮೊದಲು ಅವರು ಅಲ್ಲಿನ ಅವಧೂತ ದತ್ತಪೀಠಕ್ಕೆ ಭೇಟಿ ನೀಡಿ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರನ್ನು ಸಂದರ್ಶಿಸಿದರು. ಸಭೆಯನ್ನುದ್ದೇಶಿಸಿ ಭಾಷಣವನ್ನೂ ಮಾಡಿದರು.

modi mysore

ಭಾನುವಾರ ಐದು ದಿನಗಳ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಅಧಿವೇಶನ ಉದ್ಘಾಟಿಸಿದ ಅವರು, ಅಕ್ಷರವೊಂದನ್ನು ಇಟ್ಟುಕೊಂಡು ಶಬ್ದಗಳನ್ನು ಪೋಣಿಸಿ ದೃಷ್ಟಿಕೋನ ವಿವರಿಸುವ ತಮ್ಮ ಎಂದಿನ ಚಾಕಚಕ್ಯತೆ ಮೆರೆದರು. ಈ ಹಿಂದೆ ವಿದೇಶಿ ವೇದಿಕೆಗಳಲ್ಲಿ ಡೆಮಾಕ್ರಸಿ- ಡೆವಲಪ್ ಮೆಂಟ್- ಡಿವಿಡೆಂಡ್ ಎಂದು ಭಾರತದ ಸಾಧ್ಯತೆಗಳ ಸೂತ್ರ ಹರವಿಟ್ಟಿದ್ದ ಪ್ರಧಾನಿಯವರು, ಈ ಬಾರಿ ಇಂಗ್ಲಿಷ್ ನ ‘ಇ’ಕಾರದಲ್ಲಿ ವಿಜ್ಞಾನದ ದಿಕ್ಕನ್ನು ಬಣ್ಣಿಸಿದರು. ಎಕಾನಮಿ, ಎನ್ವಿರಾನ್ ಮಂಟ್, ಎನರ್ಜಿ, ಎಂಪಥಿ, ಇಕ್ವಿಟಿ ಪರಿಕಲ್ಪನೆಗಳೇ ವಿಜ್ಞಾನವನ್ನು ಪ್ರಭಾವಿಸಬೇಕು ಎಂಬುದು ಪ್ರಧಾನಿ ಮೋದಿ ಅಭಿಮತ. ‘ವಿಜ್ಞಾನದ ಪರಿಕರಗಳು ನಗರ ಯೋಜನೆ, ಸ್ಥಳೀಯ ಪರಿಸರಕ್ಕೆ ಸ್ಪಂದಿಸುವಂತಿದ್ದು ತ್ಯಾಜ್ಯ ನಿರ್ವಹಣೆಗೆ ಕೊಡುಗೆ ನೀಡಲಿ. ಇಲ್ಲಿಯದನ್ನು ಮಾತ್ರ ಯೋಚಿಸದೇ ಸಾಗರ ಮತ್ತು ಅಂತರಿಕ್ಷ ವಾತಾವರಣವನ್ನೂ ಗಣನೆಯಲ್ಲಿಟ್ಟುಕೊಂಡು ವಿಜ್ಞಾನ ಬೆಳೆಯಬೇಕಿದೆ. ವಿಜ್ಞಾನಿಯ ಗುರಿ ಮಾನವ ಕಲ್ಯಾಣ ಮತ್ತು ಆರ್ಥಿಕ ಅಭಿವೃದ್ಧಿ ಅಲ್ಲದೇ ಮತ್ತೇನೂ ಅಲ್ಲ’ ಎಂಬುದು ಅವರ ಖಚಿತ ನುಡಿ. ನಮ್ಮ ಡಿಜಿಟಲ್ ಜಾಲವು ವಿಸ್ತರಿಸಿಕೊಳ್ಳುತ್ತಿದೆ. ಇದನ್ನು ಉಪಯೋಗಿಸಿಕೊಂಡು ಸಾರ್ವಜನಿಕ ಸೇವೆಯ ಲಾಭಗಳನ್ನು ಬಡವರಿಗೆ ತಲುಪಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರಲ್ಲಿ ಕಾಳಜಿ ಇತ್ತು.

modi mysore5

‘ತುಮಕೂರಿನಲ್ಲಿ ನಿರ್ಮಾಣವಾಗುವ ಎಚ್ ಎ ಎಲ್ ಹೆಲಿಕಾಪ್ಟರ್ ಘಟಕ ಸಣ್ಣ ಸಂಗತಿಯಲ್ಲ. ಮುಂದಿನ ದಿನಗಳಲ್ಲಿ ಜಗತ್ತನ್ನೇ ಸೆಳೆಯಲಿದೆ. 2018ರಲ್ಲಿ ಈ ಕಾರ್ಖಾನೆಯಿಂದ ಮೊದಲ ಹೆಲಿಕಾಪ್ಟರ್ ಹೊರಬರಲಿದೆ. ಪ್ರತ್ಯಕ್ಷ- ಪರೋಕ್ಷವಾಗಿ ಸುಮಾರು ನಾಲ್ಕು ಸಾವಿರ ಕುಟುಂಬಗಳಿಗೆ ಈ ಕಾರ್ಖಾನೆ ಜೀವನಾಧಾರ ಆಗಲಿದೆ’ ಎಂಬುದು ತುಮಕೂರಿನಲ್ಲಿ ಎಚ್ ಎ ಎಲ್ ವಿಮಾನ ತಯಾರಿಕೆ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರಾಡಿದ ಮಾತು. ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನೂ ಅಲ್ಲಿಯೇ ನೆನಪಿಸಿಕೊಂಡ ಅವರು, ‘ಕೈಗಾರೀಕರಣದಿಂದ ತುಳಿತಕ್ಕೆ ಒಳಗಾದವರನ್ನು ಮೇಲೆತ್ತಬಹುದು ಎಂಬ ಅಂಬೇಡ್ಕರರ ಆಶಯಕ್ಕೆ ಈ ಪ್ರಯತ್ನವೂ ಪೂರಕವಾಗಿದೆ’ ಅಂದ್ರು.

modi mysore3

ಪ್ರವಾಸದ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದು ಜಿಗಣಿಯಲ್ಲಿ ನಡೆದ ‘ಯೋಗ ಸಂಶೋಧನೆ ಮತ್ತು ಸಾಧನ ಕುರಿತ 21ನೇ ಅಂತಾರಾಷ್ಟ್ರೀಯ ಯೋಗ ವೇದಿಕೆ’ಯಲ್ಲಿ. ಹೊಸ ತಲೆಮಾರಿನ ವಿಜ್ಞಾನವಾಗಿಯೂ ಪರಿಚಿತವಾಗುತ್ತಿರುವ, ಪ್ರಾಚೀನತೆಯ ಬೇರು ಹೊಂದಿರುವ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳುವಿಕೆಯು ಅವರ ಒಟ್ಟಾರೆ ಪ್ರವಾಸಕ್ಕೆ ಸಮ್ಮಿಳಿತದ ಲೇಪ ಹಚ್ಚಿತ್ತು. ಸಂತರ ಸಹವಾಸ, ವಿಜ್ಞಾನಿಗಳೊಂದಿಗೆ ವೇದಿಕೆ, ಪ್ರಾಚೀನ-ನವೀನ ಎರಡೂ ಆಗಿರುವ ಯೋಗದೊಂದಿಗೆ ಮುಕ್ತಾಯ. ಯೋಗದ ಕುರಿತು ಪ್ರಧಾನಿಯವರಿಗಿರುವ ಆಸ್ಥೆ-ಅಭಿಮಾನ ಈ ಮೊದಲೇ ತಿಳಿದಿರುವಂಥದ್ದು. ಈ ಬಾರಿ ತಮ್ಮ ಮಾತಿನಲ್ಲಿ ಯೋಗದ ಅನನ್ಯತೆಗಳನ್ನು ಕೊಂಡಾಡುತ್ತಲೇ, ‘ನಮ್ಮದು ಋಷಿ ಮುನಿಗಳ ಪರಂಪರೆ- ನಾವದರ ವಾರಸುದಾರರು ಎಂದು ಅಭಿಮಾನದ ಮಾತಲ್ಲೇ ದಿನಕಳೆವುದು ಸೂಕ್ತವಲ್ಲ. ಈಗೇನಿದ್ದರೂ ಅನುಷ್ಠಾನಕ್ಕೆ ತರಬೇಕಾದ ಸಮಯ’ ಎಂದಿದ್ದು ವಿಶೇಷವಾಗಿತ್ತು.

ಉಳಿದಂತೆ ನಡೆದಿದ್ದು…

  • ಪ್ರಧಾನಿಯವರು ವಿಜ್ಞಾನ ಕಾಂಗ್ರೆಸ್ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯನವರು  ನಿದ್ದೆಗೆ ಜಾರಿದ್ದು ಮಾಧ್ಯಮಗಳಲ್ಲಿ ಬಿತ್ತರವಾಗಿ ಮುಜುಗರಕ್ಕೆ ಕಾರಣವಾಯಿತು. ಸಾಮಾಜಿಕ ಮಾಧ್ಯಮವು ಅವರ ನಿದ್ರೆ ಫೋಟೋವನ್ನೇ ಇಟ್ಟುಕೊಂಡು ಭಾನುವಾರದ ಚರ್ಚೆಗಳಿಗೆ ಬಿಸಿಯೇರಿಸಿಕೊಂಡಿತು.
  • ಶನಿವಾರ ಪ್ರಧಾನಿ ವಾಹನಕ್ಕೆ ಅಡ್ಡಬರಲು ಯತ್ನಿಸಿದ ಯುವಕನಿಗೆ ಆತಂಕ ಒಡ್ಡುವ ಯಾವುದೇ ದುರುದ್ದೇಶ ಇದ್ದಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ನರೇಂದ್ರ ಮೋದಿಯವರ ಮೇಲಿದ್ದ ವಿಪರೀತ ಅಭಿಮಾನವೇ ಆತನನ್ನು ಅಂಥ ಹುಚ್ಚು ಸಾಹಸಕ್ಕೆ ಪ್ರೇರೇಪಿಸಿತ್ತು ಎಂಬುದನ್ನು ದೃಢಪಡಿಸಿದೆ.

Leave a Reply