2016ರಲ್ಲಿ ಮಹಿಳೆಯರ ಬದುಕನ್ನು ಪ್ರಭಾವಿಸಲಿರುವ ಕೇಂದ್ರದ ಎರಡು ನಿರ್ಧಾರಗಳು

ಡಿಜಿಟಲ್ ಕನ್ನಡ ಟೀಮ್

2016ರಲ್ಲಿ ಮಹಿಳೆಯರಿಗೆ ವರದಾನವಾಗಬಲ್ಲ ಎರಡು ಯೋಜನೆಗಳಿವೆ. ಈಗಿನ್ನೂ ಪ್ರಸ್ತಾವದ ಹಂತದಲ್ಲಿರುವ ಇವು, ಅನುಷ್ಠಾನಕ್ಕೆ ಬಂದಾಗ ಮಹಿಳೆಯ ಬದುಕನ್ನು ಪ್ರಭಾವಿಸಬಲ್ಲ ಅಂಶಗಳನ್ನು ಹೊಂದಿವೆ.

ಮಹಿಳೆಯರು ಸಮಸ್ಯೆಗೆ ಸಿಲುಕಿಕೊಂಡಾಗ ಸ್ಥಳೀಯ ಪೊಲೀಸ್ ಠಾಣೆಗೆ ಸಂದೇಶ ರವಾನೆಯಾಗುವಂತೆ ಸೆಲ್ ಫೋನ್ ಗಳು “ಪ್ಯಾನಿಕ್ ಬಟನ್” ಹೊಂದಿರುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ಕಡ್ಡಾಯ ಮಾಡುತ್ತಿದೆ. ಮಹಿಳಾ ಉದ್ಯೋಗಿಗಳ “ಹೆರಿಗೆ ರಜೆ”ಯನ್ನು 12 ವಾರಗಳಿಂದ 26 ವಾರಗಳಿಗೆ ವಿಸ್ತರಿಸುವ ಪ್ರಸ್ತಾವವಕ್ಕೆ ಕೇಂದ್ರ ಕಾರ್ಮಿಕ ಸಚಿವಾಲಯವು ಸಮ್ಮತಿ ಸೂಚಿಸಿದೆ.

ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ, ಕಿರುಕುಳ, ಶೋಷಣೆಯಂತಹ ಘಟನೆಗಳನ್ನು ತಡೆಯಲು ಮೊಬೈಲ್ ಫೋನ್ ಗಳಲ್ಲಿ “ಪ್ಯಾನಿಕ್ ಬಟನ್” ಅಳವಡಿಸುವ ಕೇಂದ್ರ ಸರಕಾರದ ಯೋಜನೆ, ಮೇನಕಾ ಗಾಂಧಿಯವರ ಆಸ್ಥೆಯಿಂದ ರೂಪುಗೊಂಡಿದೆ. 2016 ರ ಮಾರ್ಚ್ ನಿಂದ ಜಾರಿಗೆ ಬರಲಿರುವ ಈ ಯೋಜನೆಯ ರೂಪುರೇಷೆ ಮತ್ತು ನೀತಿನಿಯಮಗಳ ಅಳವಡಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ದೂರಸಂಪರ್ಕ ಇಲಾಖೆಗೆ ಸಲ್ಲಿಸಿದೆ.

ಸಚಿವೆ ಮೇನಕಾ ಗಾಂಧಿ ಮೊಬೈಲ್ ಫೋನ್ ಕಂಪನಿಗಳೊಂದಿಗೆ ಫೋನ್ ನಲ್ಲಿ “ಪ್ಯಾನಿಕ್ ಬಟನ್” ಆಳವಡಿಸಲು ಚರ್ಚೆ ನಡೆಸಿದ್ದಾರೆ. ಇನ್ನೂ ಮುಂದೆ ಭಾರತಕ್ಕೆ ಬರುವ ಎಲ್ಲಾ ಕಂಪನಿಗಳ ಹೊಸ ಮೊಬೈಲ್ ಫೋನ್ ಗಳಲ್ಲಿ “ಪ್ಯಾನಿಕ್ ಬಟನ್” ಇನ್ ಬಿಲ್ಟ್ ಆಗಿ ಬರಲಿದೆ. ಈಗಾಗಲೇ ತಯಾರಾಗಿರುವ ಮತ್ತು ಜನರು ಬಳಸುತ್ತಿರುವ ಫೋನ್ ಗಳಿಗೆ ಆಳವಡಿಸಲು ಸಂಬಂಧಿಸಿದ ಕಂಪನಿಗಳೇ ದೇಶಾದಂತ್ಯ ಹತ್ತು ಸಾವಿರ ಶಾಖೆಗಳನ್ನು ತೆರೆಯಲು ಸೂಚಿಸಿದ್ದಾರೆ. ಈ ಸಂಬಂಧ ಕಳೆದ ಒಂದು ವರ್ಷದಿಂದ  ಮೊಬೈಲ್ ಫೋನ್ ಕಂಪನಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದ್ದು, ಅಂತಿಮವಾಗಿ “ಪ್ಯಾನಿಕ್ ಬಟನ್” ಆಳವಡಿಸಲು ಸಹಮತ ರೂಪುಗೊಂಡಿದೆ.

“ಹೆರಿಗೆ ರಜೆ”ಯನ್ನು ವಿಸ್ತರಿಸುವ ಮಸೂದೆಯನ್ನು ಮಹಿಳಾ ಮತ್ತು ಮಕ್ಕಳ ಸಚಿವಾಲಯ ಹಾಗೂ ಕಾರ್ಮಿಕ ಸಚಿವಾಲಯಗಳು ಒಟ್ಟಾಗಿ ಚರ್ಚಿಸಿ ಸಂಪುಟದ ಅನುಮೋದನೆ ಪಡೆದಿದೆ. ಮಹಿಳಾ ಸುರಕ್ಷತೆಗೆ ದೇಶದಾದ್ಯಂತ ಏಕ ರೂಪ ಸಹಾಯ ವಾಣಿ ಸಂಖ್ಯೆ ನೀಡಲಾಗುವುದು. ಜೊತೆಗೆ ಪ್ರತಿ ಹಳ್ಳಿಯಲ್ಲೂ ವಿದ್ಯಾವಂತ ಯುವತಿಯರನ್ನು ವಿಶೇಷ ಪೊಲಿಸ್ ಸ್ವಯಂ ಸೇವಕರನ್ನಾಗಿ ಸೇರಿಸಿಕೊಳ್ಳುವ ಯೋಜನೆಗೂ ಸರ್ಕಾರ ಚಿಂತಿಸುತ್ತಿದೆ. ಇವುಗಳ ಜತೆಯಲ್ಲೇ ಕಾರ್ಪೋರೇಟ್ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅನುಕೂಲತೆಯನ್ನು ಅಗತ್ಯವಿದ್ದ ಕಡೆಗಳಲ್ಲಿ ಕೈಗೊಳ್ಳುವುದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ.

Leave a Reply