ಗಣೇಶನ ಹಬ್ಬದವರೆಗೂ ರಾಜ್ಯ ಬಿಜೆಪಿ ನೂತನ ಅಧ್ಯಕ್ಷರ ಆಯ್ಕೆ ಡೌಟು

ಡಿಜಿಟಲ್ ಕನ್ನಡ ಟೀಮ್

ರಾಜ್ಯ ಬಿಜೆಪಿಯಲ್ಲಿ ಕುತೂಹಲ ಮೂಡಿಸಿರುವ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಆಗಸ್ಟ್ ವರೆಗೂ ನಡೆಯುವಂತೆ ಕಾಣುತ್ತಿಲ್ಲ. ಸತತ ಚುನಾವಣೆಗಳ ಹಿನ್ನೆಲೆಯಲ್ಲಿ ಗಣೇಶನ ಹಬ್ಬದವರೆಗೂ ಈಗಿನ ಅಧ್ಯಕ್ಷ ಪ್ರಹ್ಲಾದ ಜೋಷಿಯವರೇ ಮುಂದುವರಿಯುವ ಸಂಭವವಿದೆ.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಂತರವಷ್ಟೇ ರಾಜ್ಯಾಧ್ಯಕ್ಷರ ಆಯ್ಕೆ ಎಂಬ ನಿಲುವಿಗೆ ಬೆಂಗಳೂರಲ್ಲಿ ಸೋಮವಾರ ನಡೆದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಬಂದಿದೆ. ಈ ತಿಂಗಳ ಮಧ್ಯ ಭಾಗದಲ್ಲಿ ಚುನಾವಣೆ ಅಧಿಸೂಚನೆ ಹೊರಬೀಳಲಿದ್ದು, ಮಾರ್ಚ್ ವೇಳೆಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಆದರೆ ಬಿಜೆಪಿ ಸ್ಥಾನೀಯ ಸಮಿತಿಗಳ ಚುನಾವಣೆ ನಂತರವಷ್ಟೇ ರಾಜ್ಯಾಧ್ಯಕ್ಷರ ಆಯ್ಕೆ ಆಗುತ್ತದೆ. ಬ್ಲಾಕ್ ಮಟ್ಟದಿಂದ, ತಾಲೂಕು ಮತ್ತು ಜಿಲ್ಲಾ ಸಮಿತಿ ಅಧ್ಯಕ್ಷರವರೆಗೆ ನಡೆಯಬೇಕಿರುವ ಈ ಚುನಾವಣೆಗೆ ಎರಡು-ಮೂರು ತಿಂಗಳಾದರೂ ಬೇಕು. ಮಾರ್ಚ್ ನಂತರ ಮೂರು ತಿಂಗಳು ಅಂದರೆ ಜೂನ್ ಬರುತ್ತದೆ. ಅಷ್ಟು ಹೊತ್ತಿಗೆ ಸರಿಯಾಗಿ ವಿಧಾನಸಭೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ ಗೆ ಚುನಾವಣೆ ಎದುರಾಗಲಿದೆ. ಆದರೆ ಜೂನ್ ನಲ್ಲಿ ಆಷಾಢ ಶುರುವಾಗುತ್ತದೆ. ನಂತರವಷ್ಟೇ ವಿಧಾನ ಪರಿಷತ್ ಚುನಾವಣೆ. ಜುಲೈನಲ್ಲಿ ಈ ಪ್ರಕ್ರಿಯೆ ಪ್ರಾರಂಭವಾದರೂ, ಮುಗಿಯುವ ವೇಳೆಗೆ ಆಗಸ್ಟ್ ಕಳೆದು ಗಣೇಶನ ಹಬ್ಬ ಎದುರಾಗಿರುತ್ತದೆ.

ಲೋಕಸಭೆ ಚುನಾವಣೆ ಒಂದನ್ನು ಹೊರತುಪಡಿಸಿ, ರಾಜ್ಯದಲ್ಲಿ ಬಿಜೆಪಿಗೆ ಕಳೆದ ವಿಧಾನಸಭೆ ಚುನಾವಣೆ ನಂತರ ಮೇಲಿಂದ ಮೇಲೆ ಬರೀ ಸೋಲುಗಳ ಅನುಭವ. ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಅಲೆ ಪಕ್ಷದ ಕೈ ಹಿಡಿಯಿತು. ಅಷ್ಟೊತ್ತಿಗೆ ಯಡಿಯೂರಪ್ಪ ಪಕ್ಷಕ್ಕೆ ಮರಳಿದ್ದರು. ನಂತರ ನಡೆದ ಯಾವುದೇ ಚುನಾವಣೆ ಬಿಜೆಪಿಗೆ ಒಲಿದಿಲ್ಲ. ಅದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇರಬಹುದು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆ ಇರಬಹುದು. ಈ ಸೋಲುಗಳ ನಡುವೆ ರಾಜ್ಯ ಬಿಜೆಪಿಯ ಈಗಿನ ಅಧ್ಯಕ್ಷರ ಅವಧಿ ಇದೇ ತಿಂಗಳು ಮುಗಿಯುತ್ತಿದೆ. ಇನ್ನೆರಡುಕಾಲು ವರ್ಷಕ್ಕೆ ವಿಧಾನಸಭೆ ಚುನಾವಣೆ ಬರುವುದರಿಂದ, ನೂತನ ಅಧ್ಯಕ್ಷರ ಹುದ್ದೆಗೆ ಈಗಾಗಲೇ ತೀವ್ರ ಪೈಪೋಟಿ ಆರಂಭವಾಗಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ್, ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಸಿ.ಟಿ. ರವಿ ಮುಂಚೂಣಿಯಲ್ಲಿರುವ ಹೆಸರುಗಳು. ಇದರ ಜತೆಗೆ ಹಾಲಿ ಅಧ್ಯಕ್ಷ ಪ್ರಹ್ಲಾದ ಜೋಷಿ ಅವರಿಗೂ ಮತ್ತೊಂದು ಅವಧಿಗೆ ಮುಂದುವರಿಯುವ ಇರಾದೆ ಇದೆ.

Leave a Reply