ಪಠಾಣ್ ಕೋಟ್ ನಲ್ಲಿ ಮುಗಿಯದ ಸಮರ, ಅಫ್ಘನ್ ನಲ್ಲೂ ದಾಳಿ ಯತ್ನ: ಮೋದಿ- ಷರೀಫ್ ಭೇಟಿ ಬೆನ್ನಲ್ಲೇ ಆಗುತ್ತಿರುವ ವಿದ್ಯಮಾನಗಳು ಹೇಳ್ತಿರೋದು ಏನನ್ನು?

 

ಪ್ರವೀಣ್ ಕುಮಾರ್

‘ಪಠಾಣ್ ಕೋಟ್ ನಲ್ಲಿ ಮಿಲಿಟರಿ ಕಾರ್ಯಾಚರಣೆ ಇನ್ನೂ ಮುಂದುವರಿದೆ. ನಮ್ಮ ಕಾರ್ಯತಂತ್ರ ಪರಿಕರಗಳೆಲ್ಲ ಸುಸ್ಥಿತಿಯಲ್ಲಿವೆ. ವಿವಿಧ ಏಜೆನ್ಸಿಗಳ ನಡುವೆ ಉತ್ತಮ ಸಮನ್ವಯದೊಂದಿಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ.’ – ಇವಿಷ್ಟು ಭಾರತೀಯ ಸೇನೆ, ಎನ್ ಎಸ್ ಜಿ ಹಾಗೂ ವಾಯುಪಡೆ ಪ್ರತಿನಿಧಿಗಳು ಸೋಮವಾರದ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಮಾತಿನ ಸಾರ.

ಇದರಿಂದ ನಾವು ತಿಳಿದುಕೊಳ್ಳಬಹುದಾದ ಸಂಗತಿಗಳು ಹೀಗಿವೆ.

  • ಆರೆಂಟು ಉಗ್ರರು ಬಂದು ಗುಂಡು ಚಲಾಯಿಸಿ ಹಿಂತಿರುಗುವ ಅಡ್ಡಾದಿಡ್ಡಿ ಯೋಜನೆಯೇನೂ ಇದಾಗಿದ್ದಿರಲಿಲ್ಲ ಎನಿಸುತ್ತದೆ. ವಾಯುಸೇನೆಯ ವಿಮಾನವನ್ನೇ ಗುರಿಯಾಗಿರಿಸಿಕೊಂಡು, ಎಲ್ಲ ಗುಪ್ತಚರ ಮಾಹಿತಿ ಕಲೆಹಾಕಿ, ಪೂರ್ಣ ತಯಾರಿಯೊಂದಿಗೆ ಉಗ್ರರು ಬಂದಿದ್ದು ಸ್ಪಷ್ಟ. ಹಾಗೆಂದೇ ಭಾರತೀಯ ಪಡೆಗಳ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
  • ಕಾರ್ಯಾಚರಣೆಯನ್ನು ಯುದ್ಧದ ರೀತಿಯಲ್ಲೇ ತ್ವರಿತಗೊಳಿಸಲಾಗದ ಅಡ್ಡಿಗಳು ಪಠಾಣ್ ಕೋಟ್ ನಲ್ಲಿ ಇವೆ. ಇಲ್ಲಿ ಶಾಲೆಗಳಿವೆ, ನಾಗರಿಕರಿದ್ದಾರೆ. ಇವರೆಲ್ಲರ ಜೀವಕ್ಕೆ ಹಾನಿಯಾಗದಂತೆ ಉಳಿದಿರಬಹುದಾದ ಉಗ್ರರನ್ನು ಹುಡುಕಿ ಹೊಡೆಯಬೇಕಾದ ಗುರಿ ಭಾರತೀಯ ಪಡೆಯದ್ದು. ಈ ಅರ್ಥದಲ್ಲಿ ನೋಡಿದಾಗ ಪಾಕಿಸ್ತಾನವು ಕೇಲವೇ ಮಂದಿ ಉಗ್ರರನ್ನು ಬಳಸಿಕೊಂಡು ಯುದ್ಧವನ್ನು ಭಾರತದ ಅಂಗಳದಲ್ಲೇ ತಂದು ನಿಲ್ಲಿಸುವುದಕ್ಕೆ ಯಶಸ್ವಿಯಾಗಿಬಿಟ್ಟಿದೆ.
  • ಮೊದಲೇ ಗುಪ್ತಚರ ಮಾಹಿತಿ ಇತ್ತು, ಅದರ ಪ್ರಕಾರ ನಡೆದುಕೊಂಡಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ ಎಂಬುದೆಲ್ಲ ಅಷ್ಟು ಸೂಕ್ತ ವಿಶ್ಲೇಷಣೆ ಅಲ್ಲ. ಭಾರತ ತ್ವರಿತವಾಗಿ ಸ್ಪಂದಿಸಿದ್ದರಿಂದಲೇ ದಾಳಿಯು ಈ ಹಂತಕ್ಕೆ ನಿಂತಿದೆ. ಶನಿವಾರ ನಸುಕಿನ ನಾಲ್ಕು ಗಂಟೆಗೆಲ್ಲ ಎನ್ ಎಸ್ ಜಿ ಘಟನಾ ಸ್ಥಳವನ್ನು ತಲುಪಿತ್ತು ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಾಗ, ಈಗಿನದಕ್ಕಿಂತ ಹೆಚ್ಚಿನ ಮಹಾ ವಿಧ್ವಂಸವೊಂದನ್ನು ತಪ್ಪಿಸುವುದಕ್ಕೆ ಸೇನೆ ಯಶಸ್ವಿಯಾಗಿದೆ ಎಂಬುದು ಸ್ಪಷ್ಟ. ಮುಂಬಯಿ ದಾಳಿಗೆ ಬಂದಿದ್ದ ಹತ್ತು ಉಗ್ರರು 169 ಮಂದಿಯನ್ನು ಕೊಂದಿದ್ದರು. ಈಗಿನ ದಾಳಿಯಲ್ಲಿ ಆರೆಂಟು ಉಗ್ರರಿರುವ ಬಗ್ಗೆ ಮಾಹಿತಿ ಸಿಗುತ್ತಿದೆ. ವಾಯುನೆಲೆಯಲ್ಲಿ ಇನ್ನೂ ತೀವ್ರತರವಾದ ವಿಧ್ವಂಸ ಸೃಷ್ಟಿಸುವುದು ಅವರ ಉದ್ದೇಶವಾಗಿತ್ತೆಂಬುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಭಾರತ ತನ್ನ ಜಾಗೃತ ಸ್ಥಿತಿ ಕಳೆದುಕೊಂಡಿಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
  • tw
  •  ಪ್ರಧಾನಿ ಮೋದಿಯವರು ಪಾಕ್ ಪ್ರಧಾನಿ ಷರೀಫರ ಕೈ ಕುಲುಕಿ ಬಂದ ಬೆನ್ನಲ್ಲೇ ಭಾರತದ ಮೇಲೆ ನಡೆದಿರುವ ದಾಳಿ ಇದು. ಪಾಕಿಸ್ತಾನಕ್ಕೆ ಭೇಟಿ ನೀಡುವುದಕ್ಕೂ ಪೂರ್ವದಲ್ಲಿ ಅವರು ಅಫ್ಘಾನಿಸ್ತಾನವನ್ನು ಸಂದರ್ಶಿಸಿದ್ದರು. ಭಾನುವಾರ ರಾತ್ರಿ ಅಫ್ಘಾನಿಸ್ತಾನದ ಮಜರ್ ಇ ಷರೀಫ್ ನಗರದ ಭಾರತೀಯ ಕನ್ಸುಲೇಟ್ ಕಚೇರಿ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ದಾಳಿಯಿಂದ ಯಾವುದೇ ಸಾವು-ನೋವು, ನಷ್ಟಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಇಲ್ಲಿ ಸಹ ಪಠಾಣ್ ಕೋಟ್ ಮಾದರಿಯಲ್ಲಿ, ಅವಿತಿರುವ ಉಗ್ರರನ್ನು ಹುಡುಕಿ ಸಂಹರಿಸುವಲ್ಲಿ ಚಕಮಕಿ ನಡೆದಿದೆ.

ಪಾಕಿಸ್ತಾನ- ಅಫ್ಘಾನಿಸ್ತಾನಗಳ ವಿಷಯದಲ್ಲಿ ಭಾರತ ಹೊಸಹೆಜ್ಜೆಗಳನ್ನು ಇಡುತ್ತಿರುವಾಗಲೇ ನಡೆಯುತ್ತಿರುವ ಉಗ್ರ ದಾಳಿಗಳು ಸಂಬಂಧ ಸುಧಾರಣೆಗೆ ಅಡ್ಡಿ ಉಂಟು ಮಾಡುವ ಉದ್ದೇಶ ಹೊಂದಿವೆ ಎಂಬ ವಿಶ್ಲೇಷಣೆ ಹೆಚ್ಚಿನದಾಗಿ ಕೇಳಿಬರುತ್ತಿದೆ. ಇದರ ಹಿಂದೆ ಇನ್ನೂ ವ್ಯಾಪಕವಾದ ಜಾಗತಿಕ ಲಾಬಿಗಳೆಲ್ಲ ಕೆಲಸ ಮಾಡುತ್ತಿರಬಹುದೇ ಎಂಬ ಊಹೆಗಳಿಗೂ ಜಾಗವಿದೆ.

Leave a Reply