ಸುದ್ದಿಸಂತೆ: ಸತ್ತ ಉಗ್ರರೆಷ್ಟು?, ಮೇಲಿಂದ ಬಿತ್ತಲ್ಲ ಭೂಕಂಪನದ ಆತಂಕ, ಇರಾನ್- ಸೌದಿ ಸಂಘರ್ಷ…

ಪಠಾಣ್ ಕೋಟ್ ನಲ್ಲಿ 5, ಅಫ್ಘನ್ ನಲ್ಲಿ 3 ಉಗ್ರಬಲಿ

ಪಠಾಣ್ ಕೋಟ್ ವಾಯುನೆಲೆ ನಡೆದ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಮೂರನೇ ದಿನಕ್ಕೆ ವಿಸ್ತರಿಸಿದೆ. ಸೋಮವಾರ ನಡೆದ ಕಾರ್ಯಚರಣೆಯಲ್ಲಿ 5 ನೇ ಉಗ್ರನನ್ನು ಎನ್.ಎಸ್.ಜಿ ತಂಡ ಹೊಡೆದುರುಳಿಸಿದೆ. ಇನ್ನೂ ಇಬ್ಬರು ಅರಣ್ಯ ಪ್ರದೇಶದಲ್ಲಿ ಅಡಕೊಂಡಿರುವ ಶಂಕೆ ಇರುವುದರಿಂದ ಕಾರ್ಯಾಚರಣೆ ಮುಂದುವರೆದಿದೆ.

ಅಫ್ಘಾನಿಸ್ಥಾನ ನಗರದ ಮಾಜರ್-ಇ-ಷರೀಫ್ ಭಾರತೀಯ ರಾಯಭಾರಿ ಕಚೇರಿ ಮೇಲೆ ಭಾನುವಾರ ರಾತ್ರಿ ಉಗ್ರರು ದಾಳಿ ನಡೆಸಿದ್ದರು. ಇವರು ಪಕ್ಕದ ಕಟ್ಟಡ ಒಂದರಲ್ಲಿ ಅಡಗಿ ಕುಳಿತಿದ್ದರು. ಸೋಮವಾರದ ಕಾರ್ಯಚರಣೆಯಲ್ಲಿ ಅಫ್ಘಾನಿಸ್ಥಾನ ಪೊಲೀಸರು 3 ಭಯೋತ್ಪಾದಕರನ್ನು ಕೊಂದಿದ್ದಾರೆ.

ಭೂಕಂಪಕ್ಕೆ ನಡುಗಿದ ಈಶಾನ್ಯ ಭಾರತ

ಈಶಾನ್ಯ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಹಲವು ಕಡೆ ಸೋಮವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪನದಿಂದ 9 ಮಂದಿ ಸಾವಿಗೀಡಾಗಿ 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಸುಮಾರು 2.70 ಲಕ್ಷಕ್ಕೂ ಅಧಿಕ ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

ರಿಕ್ಟರ್ ಮಾಪಕದಲ್ಲಿ 6.8 ರಷ್ಟು ಕಂಪನದ ಪ್ರಮಾಣ ದಾಖಲಾಗಿದ್ದು ಮಣಿಪುರ ಮತ್ತು ಮಯನ್ಮಾರ್ ಗಳಲ್ಲಿ ಹೆಚ್ಚು ಅನಾಹುತ ಸಂಭವಿಸಿದೆ. ಮುಂಜಾನೆ 4.20ರ ನಿದ್ದೆಯಲ್ಲಿದ್ದ ಸಮಯದಲ್ಲೇ ಆಘಾತ ಅಪ್ಪಳಿಸಿದೆ. ಮಯನ್ಮಾರ್, ನೇಪಾಳ, ಬಾಂಗ್ಲದೇಶ, ಹಿಮಾಚಲ, ಅಸ್ಸಾಂ ಪ್ರದೇಶದಲ್ಲಿ ಭೂಕಂಪದಿಂದ ಸಾಕಷ್ಟು ಜನ ಮನೆಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಭೂಕಂಪನದ ಸಮಯದಲ್ಲಿ 3 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಇಲ್ಲಿನ ಮಾಧ್ಯಮಗಳು ವರದಿಮಾಡಿವೆ.

ವಿಪ್ರೋಗೆ ನೂತನ ಸಿಇಒ

ಭಾರತದ 3 ನೇ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೋಗೆ ನೂತನ ಸಿಇಒ ಆಗಿ ಅಭಿದಾಲಿ ನೀಮೂಚ್ ವಾಲಾ ಆಯ್ಕೆಯಾಗಿದ್ದಾರೆ. ಟಿ.ಕೆ ಕುರಿಯನ್ ರವರನ್ನು ಕಾರ್ಯಕಾರಿಯ ಉಪಾಧ್ಯಕ್ಷ ಸ್ಥಾನಕ್ಕೆ ಬಡ್ತಿ ಪಡೆದಿದ್ದು ಈ ಜಾಗಕ್ಕೆ ಎ.ಎನ್ ವಾಲಾ ರವರ ಹೆಸರು ಅಂತಿಮವಾಗಿದೆ. ಇವರು ಮುಂದಿನ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಎ.ಎನ್ ವಾಲಾ ಈ ಹಿಂದೆ ಟಿ.ಸಿ.ಎಸ್ ಸಂಸ್ಥೆಯಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ.

ಶುರುವಾಗಲಿದೆಯೇ ಹೊಸದೊಂದು ಶಿಯಾ- ಸುನ್ನಿ ಜಗಳ?

ಶಿಯಾ ಧರ್ಮಗುರುವನ್ನು ಶಿರಚ್ಛೇದ ಮಾಡಿದ ಸೌದಿ ಅರೇಬಿಯಾ ಕ್ರಮಕ್ಕೆ, ಶಿಯಾ ಮುಸ್ಲಿಮರ ಪ್ರಾಬಲ್ಯದ ಇರಾನ್ ಕಿಡಿ ಕಿಡಿಯಾಗಿದೆ. ಸೌದಿಗೆ ಬುದ್ಧಿ ಕಲಿಸಿಯೇ ಸಿದ್ಧ ಅಂತ ಇರಾನ್ ನ ಪರಮೋಚ್ಛ ನಾಯಕ ಅಯತೊಲ್ಲ ಖಮೇನಿ ಗುಡುಗಿದ್ದಾರೆ.

ಶನಿವಾರ ಒಟ್ಟೂ 47 ಮಂದಿಯನ್ನು ದೇಶದ್ರೋಹದ ಆರೋಪದ ಮೇಲೆ ಸೌದಿ ಅರೇಬಿಯಾ ಮರಣದಂನೆಗೆ ಗುರಿಪಡಿಸಿತು. ಅದರಲ್ಲಿ ಹೆಚ್ಚಿನವರ ಅಪರಾಧ ಏನೆಂದರೆ ಅಲ್ಲಿನ ಸುನ್ನಿ ಪ್ರಾಬಲ್ಯದ ರಾಜಮನೆತನವು ಶಿಯಾ ಮುಸ್ಲಿಮರ ಸಂಕಷ್ಟಗಳನ್ನು ಆಲಿಸುತ್ತಿಲ್ಲ ಎಂದು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದು. 56 ವರ್ಷ ಪ್ರಾಯದ ಧರ್ಮಗುರು ನಿಮ್ರ್ ಅಲ್ ನಿಮ್ರ್ ಈ ಎಲ್ಲ ಪ್ರತಿಭಟನೆಗಳ ಮಂಚೂಣಿಯಲ್ಲಿದ್ದರು.

ಸೌದಿ ವಿರುದ್ಧ ಇರಾನ್ ಸಿಡಿದೆದ್ದಿರುವುದರಿಂದ, ಕೆಲವು ತಿಂಗಳುಗಳ ಹಿಂದೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಇರಾನ್ ಮೇಲಿನ ಆರ್ಥಿಕ ದಿಗ್ಬಂಧನ ತೆಗೆದು ಸಾಧಿಸಲಾಗಿದ್ದ ಶಾಂತಿ ಸ್ಥಾಪನೆ ಕ್ರಮಗಳು ಮಂಕಾಗಿವೆ. ಸೌದಿ ಪರ ನಿಂತಿರುವ ಅರಬ್ ಒಕ್ಕೂಟ, ಬಹ್ರೇನ್, ಸುಡಾನ್ ದೇಶಗಳು ಇರಾನ್ ನೊಂದಿಗೆ ರಾಜತಾಂತ್ರಿಕ ಒಪ್ಪಂದ ಕಡಿದುಕೊಳ್ಳುವುದಾಗಿ ಹೇಳಿವೆ.

Leave a Reply