ಹುತಾತ್ಮ ನಿರಂಜನ್ ಕುಟುಂಬಕ್ಕೆ 30 ಲಕ್ಷ ಪರಿಹಾರ, ಕಂಬನಿಗರೆದ ಜನಸ್ತೋಮ, ಪಾಲಕ್ಕಾಡ್ ಗೆ ಪಾರ್ಥೀವ ಶರೀರ, ನಾಳೆ ಅಂತಿಮ ಸಂಸ್ಕಾರ

ಹುತಾತ್ಮ ನಿರಂಜನರ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಮೂಹ

ಪಠಾನ್ ಕೋಟ್ ನಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ಮಡಿದ ಕರ್ನಲ್ ನಿರಂಜನ್ ಅವರ ಕುಟುಂಬದವರಿಗೆ ಕರ್ನಾಟಕ ಸರಕಾರ 30 ಲಕ್ಷ ರೂ. ಪರಿಹಾರ ಘೋಷಿಸಿದೆ. ಬೆಂಗಳೂರಿನ ಬಿಇಎಲ್ ಶಾಲಾ ಮೈದಾನದಲ್ಲಿ ನಿರಂಜನ್ ಪಾರ್ಥೀವ ಶರೀರಕ್ಕೆ ಸೋಮವಾರ ಬೆಳಗ್ಗೆ ಸರಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ನಂತರ ಈ ಪರಿಹಾರ ಘೋಷಿಸಿದ್ದಾರೆ.

ನಿರಂಜನ್ ಕಳೇಬರವನ್ನು ಸೋಮವಾರ ಸಂಜೆ ಇಲ್ಲಿಂದ ಕೇರಳದ ಪಾಲಕ್ಕಾಡ್ ಗೆ ವಿಶೇಷ ವಿಮಾನದಲ್ಲಿ ಕೊಂಡೊಯ್ಯಲಾಯಿತು. ನಿರಂಜನ್ ತಂದೆ ಶಿವರಾಜನ್ ಹುಟ್ಟೂರಾದ ಪಾಲಕ್ಕಾಡ್ ನ ಯಳಬೆಲಸರಿಯಲ್ಲಿ ನಾಳೆ ಬೆಳಗ್ಗೆ ಅಂತಿಮ ಸಂಸ್ಕಾರ ನಡೆಯಲಿದೆ. ಭಾನುವಾರ ರಾತ್ರಿ ನಾಗಪುರದಿಂದ ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ತಂದ ನಿರಂಜನ್ ಪಾರ್ಥೀವ ಶರೀರರವನ್ನು ಮೊದಲು ದೊಡ್ಡಬೊಮ್ಮಸಂದ್ರದ ಅವರ ನಿವಾಸದಲ್ಲಿರಿಸಿ, ನಂತರ ಕಮಾಂಡ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಸೋಮವಾರ ಬೆಳಗ್ಗೆಯಿಂದ ಬಿಇಎಲ್ ಪಬ್ಲಿಕ್ ಶಾಲಾ ಮೈದಾನದಲ್ಲಿ ಇರಿಸಲಾಗಿತ್ತು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ನಿರಂಜನರ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಅಪಾರ ಜನಸ್ತೋಮ ಕಂಬನಿಗರೆದು, ಗೌರವ ಸಮರ್ಪಿಸಿತು.

colonel Niranjan

ನಿರಂಜನ್ ಅವರ ತಂದೆ ಶಿವರಾಜನ್ ಬಿಇಎಲ್ ನಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಯಾದವರು. ಮೂರು ವರ್ಷದವರಿದ್ದಾಗಲೇ ನಿರಂಜನ್ ತಾಯಿಯನ್ನು ಕಳೆದುಕೊಂಡಿದ್ಡದರು. ಅವರ ಮಲತಾಯಿ ತನ್ನದೇ ಮಗನೆಂಬ ಪ್ರೀತಿ ಕೊಟ್ಟು ಬೆಳೆಸಿದರು. ದಂತವೈದ್ಯೆಯಾಗಿರುವ ಮಡದಿ ರಾಧಿಕಾ ಮತ್ತು ಎರಡು ವರ್ಷದ ಮಗಳು ವಿಸ್ಮಯಳನ್ನು ಅಗಲಿದ್ದಾರೆ ನಿರಂಜನ್. ಸುಮಾರು ಒಂದೂವರೆ ವರ್ಷಗಳಿಂದ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ತಂಡದಲ್ಲಿದ್ದ ನಿರಂಜನ್, ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಆಗಮಿಸಿ ಕುಟುಂಬದೊಂದಿಗೆ ಕೆಲ ಸಮಯ ಕಳೆದಿದ್ದರು.

niranjan

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನೆಲೆಗಟ್ಟಿದಂಥ ಶೋಕ- ಅಭಿಮಾನದ ಕಂಬನಿಯ ದೃಶ್ಯಗಳೇ ದೇಶದ ಬೇರೆ ಬೇರೆ ಭಾಗಗಳಲ್ಲಿ ಕಂಡುಬಂದವು. ಈವರೆಗೆ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿರುವ ಎಲ್ಲ ಏಳು ಯೋಧರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ನೀಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಎಲ್ಲ ಹುತಾತ್ಮರ ಅಂತ್ಯಕ್ರಿಯೆ ನಡೆಯಲಿದೆ.

niranjan2

(ಚಿತ್ರಕೃಪೆ- ಇಂಡಿಯಾ ಟುಡೆ)

ಕರ್ನಲ್ ನಿರಂಜನ್ ಅವರ ತ್ಯಾಗದೊಂದಿಗೆ ಈ ದೇಶಕ್ಕೆ, ಬೆಂಗಳೂರಿಗರಿಗೆ ಬಹುಕಾಲದವರೆಗೆ ಎದೆಯಲ್ಲಿ ಉಳಿಯುವ ಸಂಗತಿ ಎಂದರೆ ಕರ್ನಲ್ ನಿರಂಜನ್ ಅವರ ತಂದೆ- ತಾಯಿ ಪ್ರತಿಕ್ರಿಯೆ. ಅವರ ನಷ್ಟ- ದುಃಖಕ್ಕೆ ಬೆಲೆಕಟ್ಟಲಾಗುವುದಿಲ್ಲ ನಿಜ. ಅಂಥ ಸಮಯದಲ್ಲೂ ಪತ್ರಿಕೆಯೊಂದಕ್ಕೆ ಅವರು ಹೇಳಿದ್ದು- ದೇಶವನ್ನು ರಕ್ಷಿಸುತ್ತ ಮರಣಿಸಿದ ನಮ್ಮ ಮಗನ ತ್ಯಾಗದ ಬಗ್ಗೆ ನಮಗೆ ಹೆಮ್ಮೆ ಇದೆ!

Leave a Reply