ಅನಾಮಧೇಯ ಪತ್ರಕ್ಕೆ ನ್ಯಾಯಾಂಗವೇ ಮನ್ನಣೆ ಕೊಟ್ಟರೆ ಬ್ಲಾಕ್ ಮೇಲ್ ತಂತ್ರ ಗೆದ್ದಂತಾಗುವುದಿಲ್ಲವೇ?

 

 

author-thyagarajಇದು ನಿಜಕ್ಕೂ ಬ್ಲಾಕ್ ಮೇಲ್ ತಂತ್ರ!

ದೇಶದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಹಾಗೂ ಪವಿತ್ರ ಸ್ಥಾನ ಪಡೆದಿರುವ ನ್ಯಾಯಾಂಗವನ್ನೇ ಈ ರೀತಿ ಬ್ಲಾಕ್ ಮೇಲ್ ಮಾಡುತ್ತಾರಲ್ಲಾ.., ಈ ಬ್ಲಾಕ್ ಮೇಲ್ ತಂತ್ರಕ್ಕೆ ನ್ಯಾಯಾಂಗ ಕೂಡ ಸೊಪ್ಪು ಹಾಕುತ್ತದಲ್ಲ ಎಂಬುದನ್ನು ನೆನೆದಾಗ ಮನಸ್ಸಿಗೆ ಬಹಳ ಘಾಸಿಯಾಗುತ್ತದೆ. ಯಾರೋ ದುರುದ್ದೇಶಿಗಳು ಮಾಡುವ ಕುತಂತ್ರಕ್ಕೆ ಈ ರೀತಿ ಬೆಲೆ ಸಿಕ್ಕಿಬಿಟ್ಟರೆ, ನ್ಯಾಯ ಅರಸಿ ನ್ಯಾಯದೇಗುಲಕ್ಕೆ ಬರುವವರು ಎಲ್ಲಿಗೆ ಹೋಗಬೇಕು, ಬಾಧಿತ ಸಂತ್ರಸ್ಥರನ್ನು ಯಾರು ಕಾಪಾಡಬೇಕು..?

ಸಂಸದ ಕೆ. ರೆಹಮಾನ್ ಖಾನ್ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಬೆಂಗಳೂರಿನ ಅಮಾನತ್ ಬ್ಯಾಂಕ್ ಬಹುಕೋಟಿ ಅವ್ಯವಹಾರ ಪ್ರಕರಣದ ಮುಂದುವರಿದ ಭಾಗವಾಗಿ ಮಧ್ಯಂತರ ಅರ್ಜಿ ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಇದ್ದಕ್ಕಿದ್ದಂತೆ ನಿನ್ನೆ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಕಾರಣ, ‘ಪ್ರಕರಣದ ವಿಚಾರಣೆಯಲ್ಲಿ ನನ್ನ ನಿಯತ್ತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಯಾರೋ ಅನಾಮಧೇಯರು ನನಗೆ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ಹೀಗಾಗಿ ವಿಚಾರಣೆಯಿಂದ ನಾನು ಹಿಂದೆ ಸರಿಯುತ್ತಿದ್ದೇನೆ’ ಎಂಬುದು. ವಾಸ್ತವವಾಗಿ ಪ್ರಕರಣದ ಅಂತಿಮ ತೀರ್ಪು ನಿನ್ನೆಯೇ ಹೊರಬೀಳುತ್ತದೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ..?!

ಇಲ್ಲಿ ಇನ್ನೂ ಒಂದು ವಿಜಾರ ಇದೆ. ವರ್ಷದ ಹಿಂದೆ ಪ್ರಕರಣದ ವಿಚಾರಣೆ ನಿರ್ಣಾಯಕ ಹಂತ ತಲುಪಿದ ಸಂದರ್ಭದಲ್ಲಿ  ಇದೇ ರೀತಿ ಮುಖ್ಯ ನ್ಯಾಯಮೂರ್ತಿಗಳಿಗೆ ಕೆಲವು ಅನಾಮಧೇಯ ಪತ್ರಗಳು ಬಂದಿದ್ದವು. ಆಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ರಾಮಮೋಹನರೆಡ್ಡಿ ಅವರು ಬೇಸರ ಮಾಡಿಕೊಂಡು ಹೀಗೆಯೇ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಹಾಗಾದರೆ ಒಂದೇ ಕೇಸಿನ ಈ ಎರಡೂ ಸಂಗತಿಗಳು ಏನನ್ನು ಸೂಚಿಸುತ್ತಿವೆ?

ಯಾವುದೇ ಅನುಮಾನ ಬೇಡ. ಇದೊಂದು ನ್ಯಾಯಾಂಗವನ್ನೇ ಬ್ಲಾಕ್ ಮೇಲ್ ಮಾಡುವ ಕುತಂತ್ರ. ನ್ಯಾಯಮೂರ್ತಿಗಳನ್ನೇ ಅಧೀರರನ್ನಾಗಿಸುವ ಕುತ್ಸಿತ ಮನೋಭಾವಗಳ ಪರಕಾಷ್ಠೆಯ ಅನಾವರಣ. ಎರಡೂ ಸಾರಿ ಅನಾಮಧೇಯ ಪತ್ರಗಳೇ ಬಂದಿವೆ. ಅದೂ ವಿಚಾರಣೆ ನಿರ್ಣಾಯಕ ಹಂತದಲ್ಲಿರುವಾಗಲೇ. ಇದೊಂದೇ ಸಾಕು, ಪತ್ರ ಬರೆದವರ ಉದ್ದೇಶ, ನಿರೀಕ್ಷೆ ಏನೆಂಬುದನ್ನು ಅರ್ಥ ಮಾಡಿಕೊಳ್ಳಲು. ತೀರ್ಪು ತಮ್ಮ ಪರವಾಗಿ ಬರುವುದಿಲ್ಲ ಎಂದು ಮನವರಿಕೆ ಆದವರು, ಇದು ಮನವರಿಕೆ ಆಗುತ್ತಿದ್ದಂತೆ ಭಯಕ್ಕೆ ಬಿದ್ದವರು, ನ್ಯಾಯದಾನವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಒಯ್ದಿದ್ದೇ ಆದಲ್ಲಿ, ಅಲ್ಲಿಯವರೆಗೂ ಶಿಕ್ಷೆ ಮತ್ತು ದಂಡದಿಂದ ತಪ್ಪಿಸಿಕೊಳ್ಳಬಹುದು ಎಂಬ ದುರಾಲೋಚನೆಯವರು ಈ ಕೆಲಸ ಮಾಡಿದ್ದಾರೆ ಎಂಬುದು ಸುಸ್ಪಷ್ಟ. ತಪ್ಪು ಮಾಡಿದವನಿಗೆ ತಾನೇನು ಮಾಡಿದ್ದೇನೆ ಎಂಬುದು ಗೊತ್ತಿರುತ್ತದೆ. ಆದರೂ ಕಾನೂನಿನ ಇಕ್ಕಳದಿಂದ ತಪ್ಪಿಸಿಕೊಳ್ಳಲು ಹಪಾಹಪಿಸುತ್ತಿರುತ್ತಾನೆ. ಅದಕ್ಕೆ ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡಿರುತ್ತಾನೆ. ಆದರೆ ಇಷ್ಟೆಲ್ಲದರ ನಡುವೆಯೂ ನ್ಯಾಯದಾನ ಪ್ರಕ್ರಿಯೆ ಸರಿದಾರಿಯಲ್ಲಿ ಸಾಗುತ್ತಿದೆ ಎಂಬುದು ಮನವರಿಕೆ ಆದಾಗ ಈ ರೀತಿ ಅನಾಮಧೇಯ ಪತ್ರ ಬರೆಯುವುದೋ, ಕೋರ್ಟ್ ಆವರಣದಲ್ಲಿ ಕರಪತ್ರ ಹಂಚುವುದೋ – ಇವೇ ಮೊದಲಾದ ವಾಮಮಾರ್ಗಳ ಮೊರೆ ಹೋಗುತ್ತಾನೆ. ಇದು ಅವನ ಹತಾಶೆ ಮತ್ತು ವಿಕೃತ ಭಾವ ಪ್ರತಿಫಲನದ ಪ್ರತೀಕವಷ್ಟೇ.

ಆದರೆ ಸಮಸ್ಯೆ ಇದಲ್ಲವೇ ಅಲ್ಲ. ಇಂಥ ವಿಕ್ಷಿಪ್ತ ಮನಸ್ಸುಗಳು ಪ್ರಯೋಗಿಸುವ ಕಾಗದದ ಅಸ್ತ್ರಗಳನ್ನು ಕಸದ ಬುಟ್ಟಿಗೆ ಎಸೆಯುವುದು ಬಿಟ್ಟು ನ್ಯಾಯಾಂಗವು ಇದಕ್ಕೆ ಸೊಪ್ಪು ಹಾಕುತ್ತಿದೆಯಲ್ಲ ಎಂಬುದೇ ಆತಂಕ ಹುಟ್ಟಿಸುವ ನೈಜ ಸಮಸ್ಯೆ. ಅದು ಅನಾಮಧೇಯ ಪತ್ರ ಎಂದಾಗಲೇ ಅದರ ಹಿಂದಿನ ಉದ್ದೇಶ ಸ್ಪಟಿಕದಷ್ಟೇ ಸರಳ ಹಾಗೂ ಸ್ಪಷ್ಟ. ಹೀಗಿದ್ದಾಗಿಯೂ ಇಂಥ ಪತ್ರಗಳಿಗೆ ಬೆಲೆ ಕೊಡಬೇಕೇಕೆ? ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕೇಕೆ? ಈ ರೀತಿ ಹಿಂದೆ ಸರಿಯುವುದರಿಂದ ಬ್ಲಾಕ್ ಮೇಲ್ ತಂತ್ರಕ್ಕೆ ಬೆಲೆ ಕೊಟ್ಟಂತಾಗಲಿಲ್ಲವೇ? ಬ್ಲಾಕ್ ಮೇಲ್ ಘಾತಕರಿಗೆ ಮಣಿದಂತಾಗಲಿಲ್ಲವೇ..? ನಿಜಕ್ಕೂ ಉತ್ತರ ಸಿಗಬೇಕಾದ  ಕಳವಳಕಾರಿ ವಿಚಾರ ಇದು.

ಹಿಂದೆ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು. ಈಗ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು. ಮುಂದೆ ಬರುವವರೂ ಹೀಗೇ ಮಾಡಬಹುದು. ಬಂದವರೆಲ್ಲ ಹೀಗೇ ಮಾಡುತ್ತಾ ಹೋದರೆ ನ್ಯಾಯಕ್ಕಾಗಿ ಕಾಯುತ್ತಿರುವ ಅಮಾಯಕ ಕಾಯಗಳು ಏನು ಮಾಡಬೇಕು? ಅವು ಎಲ್ಲಿಗೆ ಹೋಗಬೇಕು? ನ್ಯಾಯ ವ್ಯವಸ್ಥೆ ಬಗ್ಗೆ ಒಂದು ಮಾತಿದೆ. ‘ನ್ಯಾಯದಾನ ವಿಳಂಬವಾದರೆ ನ್ಯಾಯವನ್ನೇ ನಿರಾಕರಿಸಿದಂತೆ’ ಎಂದು. ದಾರಿಯಲ್ಲಿ ಹೋಗುವವರೆಲ್ಲ ಬರೆದ ಪತ್ರಕ್ಕೆ, ಅದೂ ಹಿಂದೆ-ಮುಂದೆ ಏನೂ ಇಲ್ಲದ ಪತ್ರಕ್ಕೆ ಹೆದರಿ ಹೀಗೆ ಹಿಂದೆ ಸರಿದರೆ ನ್ಯಾಯದಾನ ವಿಳಂಬವಾಗುವುದಿಲ್ಲವೇ? ನ್ಯಾಯವನ್ನೇ ನಿರಾಕರಿಸಿದಂತೆ ಎಂಬ ನಾಣ್ನುಡಿ ನಿಜವಾಗುವುದಿಲ್ಲವೇ..?

ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಎನ್ನಿಸಿಕೊಂಡಿರುವವರು ಹಾಗೂ ಸಂಸ್ಥೆಗಳ ವಿರುದ್ಧ ವಿಚಾರಣೆ ನಡೆಯುವಾಗ ಕೆಲವು ಸಂದರ್ಭಗಳಲ್ಲಿ ಇಂಥ ‘ಶಬ್ದವೇಧಿ ಅಸ್ತ್ರ’ಗಳ ಪ್ರಯೋಗ ಆಗುತ್ತದೆ. ಹಿಂದೆಯೂ ಆಗಿವೆ. ಮುಂದೆಯೂ ಆಗುತ್ತವೆ. ಆರೋಪಿ ಸ್ಥಾನದಲ್ಲಿರುವವರ ಜತೆ ಹಿಂದೆ ಯಾವಾಗಲೋ ವೇದಿಕೆ ಹಂಚಿಕೊಂಡದ್ದೋ, ದೇವಸ್ಥಾನದಲ್ಲಿ ಕಾಣಿಸಿಕೊಂಡದ್ದೋ, ರಸ್ತೆಯಲ್ಲಿ ಹೆಜ್ಜೆ ಹಾಕಿದ್ದೋ, ಬಾಲ್ಯದಲ್ಲಿ ಮರಕೋತಿ ಆಡಿದ್ದೋ, ಯಾವುದೋ ಬಾದರಾಯಣ ಸಂಬಂಧವೋ – ಹೀಗೆ ನಾನಾ ವಿಚಾರಗಳು ಇಂಥ ಸಂದರ್ಭಗಳಲ್ಲಿ ಮುಂದಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಆರೋಪಿ ಸ್ಥಾನದಲ್ಲಿರುವವರ ಅಂತರಂಗಪಡೆ, ಇನ್ನೂ ಕೆಲವು ಬಾರಿ ಬಹಿರಂಗಪಡೆ ಇಂಥ ವಿಚಾರಗಳನ್ನು ಮುಂದಿಟ್ಟು ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳ ಆತ್ಮಸಾಕ್ಷಿಯನ್ನು ಕೆಣುಕುತ್ತವೆ. ಕೆಲವರು ನೇರವಾಗಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆಯುತ್ತಾರೆ, ಇಲ್ಲವೇ ಅನಾಮಧೇಯ ಪತ್ರ ಒಗಾಯಿಸುತ್ತಾರೆ. ಇಲ್ಲ ಕರಪತ್ರ ಹಂಚಿ, ಮಾಯವಾಗುತ್ತಾರೆ. ಸ್ವರೂಪಗಳು ಏನೇ ಇರಲಿ, ಉದ್ದೇಶ ಮಾತ್ರ ಒಂದೇ. ಅದು ದುರುದ್ದೇಶ.

ಆರೋಪಿಗಳು ಮತ್ತು ಅವರ ಕಡೆಯವರಿಗೆ ಈ ತಂತ್ರ ಫಲ ಕೊಡುತ್ತದೆ ಎಂಬುದು ಖಾತ್ರಿ ಆಗಿರುವುದರಿಂದಲೇ ಇಂಥ ಪ್ರಕರಣಗಳು ಮೇಲಿಂದ ಮೇಲೆ ಮರುಕಳಿಸುತ್ತಿವೆ. ಅದು ನ್ಯಾಯಮೂರ್ತಿ ಕೆ. ಶ್ರೀಧರರಾವ್ ಅವರಾಗಿರಬಹುದು, ನ್ಯಾಯಮೂರ್ತಿ ಎ.ಎಸ್. ಪಚಪುರೇ, ನ್ಯಾಯಮೂರ್ತಿ ಇಂಚಗೇರಿ, ನ್ಯಾಯಮೂರ್ತಿ ಎಸ್. ಎನ್. ಸತ್ಯನಾರಾಯಣ,  ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ, ನ್ಯಾಯಮೂರ್ತಿ ಎನ್. ಕುಮಾರ್, ನ್ಯಾಯಮೂರ್ತಿ ಎಚ್.ಜಿ. ರಮೇಶ್ – ಇವರೇ ಮೊದಲಾದ ನ್ಯಾಯಮೂರ್ತಿಗಳು ಬೇರೆ-ಬೇರೆ ಪ್ರಕರಣಗಳಲ್ಲಿ ಬೇರೆ-ಬೇರೆ ಕಾರಣಗಳಿಂದ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಕೆಲವರು ಅನಗತ್ಯ ಅಪನಂಬಿಕೆಗಳಿಗೆ ಆಸ್ಪದ ಆಗುವುದು ಬೇಡ ಎಂಬ ಮುನ್ನೆಚ್ಚರಿಕೆಯಿಂದ ಹಿಂದೆ ಸರಿದರೆ, ಇನ್ನೂ ಕೆಲವರು ತೆರೆಮರೆಯಲ್ಲಿ ಹಾರಿದ ‘ಅಸ್ತ್ರ’ಗಳಿಂದ ವಿಚಾರಣೆ ಕೈಬಿಟ್ಟಿದ್ದಾರೆ. ನಿರ್ದಿಷ್ಟ ಪ್ರಕರಣಗಳಲ್ಲಿ ಇಬ್ಬರು, ಮೂವರು, ನಾಲ್ವರು ನ್ಯಾಯಮೂರ್ತಿಗಳು ಹಿಂದೆ ಸರಿದಿರುವುದೂ ಉಂಟು.

ಇಲ್ಲಿ ಎಲ್ಲ ಪ್ರಕರಣಗಳು ಒಂದೇ ಅಲ್ಲ, ಕಾರಣಗಳೂ ಒಂದೇ ಅಲ್ಲ. ಆದರೆ ಕ್ರಿಯೆ ಮಾತ್ರ ಒಂದೇ. ಪ್ರಕರಣದಿಂದ ಹಿಂದೆ ಸರಿಯಲು ನ್ಯಾಯಮೂರ್ತಿಗಳಿಗೆ ಅವಕಾಶವಿದೆ. ಇದು ಪ್ರಶ್ನಾತೀತ. ಆದರೆ ಅದು ರವಾನೆ ಮಾಡಿದ ಸಂದೇಶ, ಆ ಸಂದೇಶ ಮುಂದೆ ಉಂಟು ಮಾಡಬಹುದಾದ ಪರಿಣಾಮಗಳು ಮುಖ್ಯವಾಗುತ್ತವೆ. ಯಾರೋ ಅನಾಮಧೇಯ ಬರೆದ ಪತ್ರಕ್ಕೆ ಯಾಕೆ ಮನ್ನಣೆ ಕೊಡಬೇಕು? ಅಗತ್ಯ ಎನಿಸಿದರೆ ಆ ಪತ್ರದ ಸತ್ಯಾಸತ್ಯತೆ ಬಗ್ಗೆಯೇ ತನಿಖೆಗೆ ಆದೇಶಿಸಬಹುದು. ಅಲ್ಲಿಯವರೆಗೂ ವಿಚಾರಣೆಯಿಂದ ಹಿಂದೆ ಸರಿಯದಂತೆ ಮುಖ್ಯ ನ್ಯಾಯಮೂರ್ತಿಗಳು ಸಂಬಂಧಪಟ್ಟ ನ್ಯಾಯಮುರ್ತಿಗಳಿಗೆ ಸೂಚನೆ ನೀಡಬಹುದು. ಒಂದೊಮ್ಮೆ ಪತ್ರದಲ್ಲಿ ಸತ್ಯಾಂಶ ಇದೆ ಎಂದು ಮನವರಿಗೆ ಆದರಷ್ಟೇ ಮುಂದಿನ ಕ್ರಮದ ಬಗ್ಗೆ ಚಿಂತಿಸಬಹುದು. ಅದು ಬಿಟ್ಟು ಅನಾಧೇಯ ಪತ್ರಕ್ಕೆ ಮನ್ನಣೆ ಕೊಟ್ಟು, ಅದರ ಸತ್ಯಾಸತ್ಯಾತೆ ಅನ್ವೇಷಣೆಗೂ ಅವಕಾಶವಿಲ್ಲದಂತೆ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿಯುವುದು ಅವರಿಗೆ ಅವರೇ ಅನ್ಯಾಯ ಮಾಡಿಕೊಂಡಂತೆ.

ಇಲ್ಲಿ ಇನ್ನೂ ಒಂದು ಮುಖ್ಯ ವಿಚಾರವಿದೆ. ಭೂಮಿಕೆಯ ಹಿಂದೆ ನಿಂತು ಅನುಸರಿಸಿದ ಬ್ಲಾಕ್ ಮೇಲ್ ತಂತ್ರ ಕೆಲಸ ಮಾಡುತ್ತದೆ ಎಂಬುದು ರುಜುವಾತು ಆಗುತ್ತಾ ಹೋಗುವುದರಿಂದ ಇಂಥ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಾ ಹೋಗುತ್ತದೆ. ಒಬ್ಬರು ವಿಚಾರಣೆಯಿಂದ ಹಿಂದೆ ಸರಿದ ಮಾತ್ರಕ್ಕೆ ಅದೇನೂ ಅಲ್ಲಿಗೆ ನಿಂತು ಹೋಗುವುದಿಲ್ಲವಲ್ಲ. ಅವರ ಜಾಗಕ್ಕೆ ಬಂದ ಬೇರೆಯವರು ವಿಚಾರಣೆ ನಡೆಸಲೇ ಬೇಕು. ಆದರೆ ಹಿಂದಿನವರು ವಿಚಾರಣೆಯಿಂದ ಹಿಂದೆ ಸರಿದದ್ದು, ಮುಂದೆ ಅವರ ಜಾಗಕ್ಕೆ ಬಂದವರ ಮೇಲೂ ಪರಿಣಾಮ ಬೀರಲು ಅವಕಾಶವಿದೆ. ಅವರು ನಿರ್ದಿಷ್ಟ ಪ್ರಕರಣ ಬೇಡುವ ಅಗತ್ಯಕ್ಕಿಂತಲೂ ಹೆಚ್ಚು ಪ್ರಜ್ಞಾಪೂರ್ವಕವಾಗಿ ವರ್ತಿಸಬಹುದು. ಪೂರ್ವಾಗ್ರಹಕ್ಕೂ ಆಸ್ಪದವಿರುತ್ತದೆ. ಹೀಗಾಗಿ ಅನಾಮಧೇಯ ಪತ್ರ ಪ್ರಕರಣಗಳಿಗೆ ಬೇರೆಯದೇ ಆದ ‘ಸಂಸ್ಕಾರ’ ಮಾಡುವ ಅಗತ್ಯವಿದೆ. ಇದರಿಂದ ಬ್ಲಾಕ್ ಮೇಲ್ ತಂತ್ರ ಸೋಲುತ್ತದೆ. ನ್ಯಾಯದಾನ ವಿಳಂಬವೂ ತಪ್ಪುತ್ತದೆ.

2 COMMENTS

  1. ಯಾಕೆ ನ್ಯಾಯಮೂರ್ತಿಗಳು ಹಿಂದೆ ಸರಿಯುತ್ತಾರೆಂದರೆ, ಪತ್ರ ಬರೆದ ಕೆಲವರಿಗೆ ನ್ಯಾಯಮೂರ್ತಿಗಳು ಮಾಡಿರಬಹುದಾದ ತಪ್ಪುಗಳು ಗೊತ್ತಿರುವುದರಿಂದ. ಅಲ್ಲವಾಗಿದ್ದರೆ, ಅವರು ಏತಕ್ಕಾಗಿ ಇಂತಹ ವ್ಯಾಜ್ಯಗಳಿಂದ ದೂರಸರಿಯುತ್ತಾರೆ?

Leave a Reply