ನ್ಯೂಸ್ ಮಾತ್ರೆ: ಬಿಎಸ್ ವೈ ನಿರಾಳತೆ ಹೆಚ್ತು, ಸಾವಿರ ರನ್ ಮಳೆ ಹರೀತು, ಸಿನಿಮೋತ್ಸವ ಘೋಷಣೆಯಾಯ್ತು…

ಡಿಜಿಟಲ್ ಕನ್ನಡ ಟೀಮ್

ಯಡಿಯೂರಪ್ಪ ವಿರುದ್ಧದ 15 ಡಿನೋಟಿಫಿಕೇಷನ್ ಪ್ರಕರಣ ರದ್ದು

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪವಿರುದ್ಧದ 15 ಡಿನೋಟಿಫಿಕೇಷನ್ ಪ್ರಕರಣಗಳನ್ನು ಹೈಕೋರ್ಟ್ ಮಂಗಳವಾರ ರದ್ದುಪಡಿಸಿದೆ.

ಸಿಎಜಿ ವರದಿ ಆಧರಿಸಿ ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಅವರು ಸಲ್ಲಿಸಿದ್ದ ದೂರು ಮೇರೆಗೆ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ, ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಕುಟುಂಬ ಸದಸ್ಯರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ರದ್ದು ಮಾಡಿ ಹೈಕೋರ್ಟ್ ನ್ಯಾಯಮೂರ್ತಿ ರತ್ನಕಲಾ ಮಂಗಳವಾರ ಆದೇಶ ಹೊರಡಿಸಿದರು. ಜತೆಗೆ ಇನ್ನು ಮುಂದೆ ಸಿಎಜಿ ವರದಿ ಆಧರಿಸಿ ಮತ್ತೆ ಪ್ರಕರಣ ದಾಖಲಿಸಬಾರದು ಎಂದು ನಿರ್ದೇಶನ ನೀಡಿದರು.

ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾನೂನು ಮೀರಿ 40 ಪ್ರಕರಣಗಳಲ್ಲಿ ಡಿನೋಟಿಫಿಕೇಷನ್ ಮಾಡಿ, ರಾಜ್ಯ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟುಮಾಡಿದ್ದಾರೆ ಎಂದು ಸಿಎಜಿ ವರದಿಯಲ್ಲಿ ಹೇಳಿತ್ತು.

 

ಜ. 28ರಿಂದ ಚಿತ್ರೋತ್ಸವ

ಎಂಟನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವು ಜನವರಿ 28ರಿಂದ ಫೆಬ್ರವರಿ 4ರವರೆಗೆ ನಡೆಯಲಿದೆ.

ಪಿವಿಆರ್ ಸಿನಿಮಾ, ಓರಿಯನ್ ಮಾಲ್ ನ 11 ಪರದೆಗಳು, ಐನಾಕ್ಸ್ನ ನಾಲ್ಕು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿವೆ 60 ದೇಶಗಳ 170 ಚಿತ್ರಗಳು. ಈ ಬಾರಿ ಸಿನಿಮೋತ್ಸವದಲ್ಲಿ ಸಾಕ್ಷ್ಯಚಿತ್ರಗಳೂ ಸೇರಿರುವುದು ವಿಶೇಷ.

ಬುಧವಾರದಿಂದಲೇ ಬಾದಾಮಿ ಹೌಸ್ ಮತ್ತು ಸುಚಿತ್ರಾ ಫಿಲ್ಮ್ ಸೊಸೈಟಿಗಳಲ್ಲಿ ಸಿನಿಮೋತ್ಸವಕ್ಕೆ ಪ್ರವೇಶ ಬಯಸುವವರ ನೋಂದಣಿ ನಡೆಯಲಿದೆ. ಆನ್ ಲೈನ್ ನಲ್ಲೂ ಪ್ರವೇಶ ಶುಲ್ಕ ನೀಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಧನವಾಡೆಯ ರನ್ ಮಳೆ

395 ನಿಮಿಷ, 323 ಎಸೆತ, ಅಜೇಯ 1009 ರನ್ ಗಳು.! ಇದು ಮುಂಬಯಿಯ ಕಲ್ಯಾಣ್ ನ ಕೆ.ಸಿ ಗಾಂಧಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ, 15ರ ಪ್ರಾಯದ ಪ್ರಣವ್ ಧನವಾಡೆ ಮಾಡಿರುವ ವಿಶ್ವದಾಖಲೆ. 16 ವರ್ಷದೊಳಗಿನ ಅಂತರ ಶಾಲಾ ಭಂಡಾರಿ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆರ್ಯ ಗೋಕುಲ ಶಾಲಾ ತಂಡದ ವಿರುದ್ದ ಈ ವಿಶ್ವದಾಖಲೆ ಸೃಷ್ಟಿಯಾಗಿದೆ. ಈ ಹಿಂದೆ 1899 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಪಂದ್ಯದಲ್ಲಿ ಕ್ಲಾರ್ಕ್ ಹೌಸ್ ತಂಡದ ಆಟಗಾರ ಎಇಜೆ ಕೊಲಿನ್ ಅವರ 628 ರನ್ ಗಳ 116 ವರ್ಷಗಳ ದಾಖಲೆಯನ್ನು ಪ್ರಣವ್ ಧನವಾಡೆ ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ. ಕ್ರಿಕೆಟ್ ದೇವರು ಸಚಿನ್, ಬಜ್ಜಿ ಸೇರಿದಂತೆ ಹಲವು ದಿಗ್ಗಜರು ಧನವಾಡೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

 

ಡಿಸೇಲ್ ವಾಹನ ಮಾರಾಟ ನಿಯಂತ್ರಣ: ತಡೆಯಾಜ್ಞೆ ತೆರವಿಗೆ ಸುಪ್ರೀಂ ನಕಾರ

2000 ಸಿಸಿ ಇಂಜಿನ್ ಸಾಮರ್ಥ್ಯದ ಡಿಸೇಲ್ ವಾಹನಗಳ ಮಾರಾಟ ಮತ್ತು ನೋಂದಣಿಗೆ ನೀಡಿದ್ದ ತಡೆಯನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗಿದ್ದ ವಾಹನ ಷೋರೂಂಗಳ ಮಾಲಿಕರಿಗೆ ನಿರಾಸೆ ಮೂಡಿದೆ. ಏಕೆಂದರೆ ಈ ತಡೆಯಾಜ್ಞೆ ತೆರವಿಗೆ ಸುಪ್ರೀಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾ. ಟಿ.ಎಸ್.ಠಾಕೂರ್ ಅವರನ್ನೊಳಗೊಂಡ ಸುಪ್ರೀಂ ಪೀಠ ಈ ಆದೇಶ ಮಾಡಿದೆ. ಜೊತೆಗೆ ವಾಣಿಜ್ಯ ಬಳಕೆಯ ವಾಹನಗಳ ನಗರ ಪ್ರವೇಶ ನಿಷೇಧವನ್ನೂ ಮುಂದುವರೆಸಿದೆ.

 

ಕರ್ನಲ್ ನಿರಂಜನ್ ಅಂತ್ಯಕ್ರಿಯೆ

ಪಠಾಣೆಕೋಟ್ ನಲ್ಲಿ ಭಾನುವಾರ ಉಗ್ರರ ಗಂಡಿಗೆ ಬಲಿಯಾಗಿ ವೀರಮರಣವನ್ನಪ್ಪಿದ ಎನ್.ಎಸ್.ಜಿ ತಂಡದ ಲೆಪ್ಟಿನೆಂಟ್ ಕರ್ನಲ್ ನಿರಂಜನ್ ಅವರ ಅಂತ್ಯಕ್ರಿಯೆ ಹುಟ್ಟುರಾದ ಕೇರಳದ ಯಲಂಬೆಲಸರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು. ಮಲಯಾಳಿ ಹಿಂದೂ ಸಂಪ್ರದಾಯದ ವಿಧಿ ವಿಧಾನಗಳಂತೆ ಅಂತ್ಯ ಸಂಸ್ಕಾರ ನಡೆಸಲಾಯಿತು.

 

ಹಾರ್ದಿಕ್ ವಿರುದ್ಧ ಎಫ್ ಐ ಆರ್ ಗೆ ಅನುಮತಿ

ಗುಜರಾತಿನಲ್ಲಿ ಕಳೆದ ವರ್ಷ ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟದ ನೇತೃತ್ವ ವಹಿಸಿದ್ದ ಹಾರ್ಧಿಕ್ ಪಟೇಲ್ ವಿರುದ್ಧ ಆರೋಪಪಟ್ಟಿ ಸಲ್ಲಿಸುವುದಕ್ಕೆ ಗುಜರಾತ್ ಪೊಲೀಸರಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

ತಮ್ಮ ವಿರುದ್ಧದ ಗುರುತರ ಕ್ರಿಮಿನಲ್ ಆರೋಪಗಳನ್ನು ಹಾರ್ದಿಕ್ ಪಟೇಲ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ವೇಳೆ ಹೈಕೋರ್ಟ್ ಅವರ ವಿರುದ್ಧವಿದ್ದ ದೇಶದ್ರೋಹ, ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಯತ್ನ ಇಂಥ ಅತಿ ಗಂಭೀರ ಆರೋಪಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಇಷ್ಟೇ ಅಲ್ಲದೇ, ತಮ್ಮ ವಿರುದ್ಧದ ಪ್ರಕರಣಗಳನ್ನೇ ವಜಾ ಮಾಡಬೇಕೆಂಬುದು ಹಾರ್ದಿಕ್ ಮನವಿಯಾಗಿತ್ತು.

ಆದರೆ ಇದೀಗ ಸುಪ್ರೀಂಕೋರ್ಟ್ ಅವರ ವಿರುದ್ಧ ಆರೋಪಪಟ್ಟಿ ದಾಖಲಿಸುವುದಕ್ಕೆ ಅನುವು ಮಾಡಿಕೊಟ್ಟು, ವಿಚಾರಣೆಗೆ ಅವಕಾಶ ಕಲ್ಪಿಸಿದೆ.

Leave a Reply