ಪಠಾಣ್ ಕೋಟ್: ಪಾಕ್ ಪ್ರಧಾನಿ ಫೋನ್, ಪರ್ರಿಕರ್ ಹೇಳಿಕೆ, ನೀವು ತಿಳಿಯಬೇಕಿರುವ ಎಲ್ಲ ಚುಟುಕು ಅಪ್ ಡೇಟ್ಸ್..

  • ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ, ಉಗ್ರವಾದದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
  • ರಕ್ಷಣಾ ಮಂತ್ರಿ ಮನೋಹರ್ ಪಾರ್ರಿಕರ್ ಮಂಗಳವಾರ ಪಠಾನ್ ಕೋಟ್ ವಾಯುನೆಲೆಗೆ ಭೇಟಿ ನೀಡಿದ್ದರು. ಅವರು ಹೇಳಿದ್ದಿಷ್ಟು- ಯೋಧರ ತ್ಯಾಗ ಅತ್ಯುನ್ನತವಾದದ್ದು. ಆದರೆ, ಉಗ್ರರು ವಾಯುನೆಲೆ ಒಳಗೆ ನುಸುಳುವುದಕ್ಕೆ ಹೇಗೆ ಸಮರ್ಥರಾದರೆಂಬುದು ಆತಂಕದ ವಿಷಯ. ಎಲ್ಲ ಆರು ಉಗ್ರರನ್ನು ಕೊಲ್ಲಲಾಗಿದೆ. ಆದರೆ 1900 ಎಕರೆ ವಿಸ್ತೀರ್ಣದ ವಾಯುನೆಲೆ ಆವರಣದಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸುವ ದೃಷ್ಟಿಯಿಂದ ಕೂಂಬಿಂಗ್ ಕಾರ್ಯಾಚರಣೆ ಜಾರಿಯಲ್ಲಿದೆ. ಹತ ಉಗ್ರರ ವಂಶವಾಹಿ ಪರೀಕ್ಷೆ ನಂತರ ಇನ್ನಷ್ಟು ವಿವರ ಸಿಗಲಿದೆ. ಸದ್ಯಕ್ಕೆ ಭಯೋತ್ಪಾದಕರಿಂದ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳು ಪಾಕಿಸ್ತಾನ ಮೂಲದ್ದಾಗಿ ಕಂಡುಬಂದಿವೆ. ಆದರೂ ಈಗಲೇ ಅಂತಿಮ ತೀರ್ಮಾನಕ್ಕೆ ಬರುವಂತಿಲ್ಲ.
  • ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಅವರು ಗೃಹ ಸಚಿವಾಲಯ, ಗುಪ್ತಚರ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದರು. ಈ ಸಭೆಯಲ್ಲಿ ಚರ್ಚೆಯಾದ ಅಂಶಗಳ ಬಗ್ಗೆ ಅಧಿಕೃತ ಪ್ರಕಟಣೆಗಳೇನೂ ಹೊರಬಿದ್ದಿಲ್ಲ. ಆದರೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಜತೆ ದಾಳಿಗೆ ಸಂಬಂಧಿಸಿದಂತೆ ಮಾತನಾಡಲಾಗಿದೆ ಎಂಬುದು ತಿಳಿದುಬಂದಿದೆ. ಮುಂಬಯಿ ದಾಳಿಯ ವಿಷಯದಲ್ಲಾದಂತೆ ಪಾಕಿಸ್ತಾನ ಈ ಸಂಬಂಧ ಕಟು ಧೋರಣೆ ತೋರಿಸುತ್ತಿಲ್ಲವಾದರೂ, ದಾಳಿಗೆ ಸಂಬಂಧಿಸಿದ ಸಾಕ್ಷ್ಯ ನೀಡಿದರೆ ಪರಿಶೀಲಿಸುತ್ತೇವೆ ಎಂಬ ಹಳೆಯ ಮಾತೇ ಅತ್ತಲಿನಿಂದ ವ್ಯಕ್ತವಾಗಿದೆ.
  • ಪಾಕಿಸ್ತಾನವು ತನ್ನ ದೇಶದೊಳಗಿನ ಉಗ್ರ ಜಾಲಗಳನ್ನು ನಿವಾರಿಸಬೇಕು ಎಂದು ಅಮೆರಿಕ ಸಹ ಎಚ್ಚರಿಕೆ ನೀಡಿದೆ.
  • ಪಠಾನ್ ಕೋಟ್ ದಾಳಿಕೋರರನ್ನು ಪ್ರಾರಂಭದಲ್ಲೇ ಮುಖಾಮುಖಿ ಆಗಿದ್ದ ಗುರುದಾಸ್ಪುರ ಎಸ್ ಪಿ ಸಲ್ವಿಂದರ್ ಕುರಿತು ಪ್ರಶ್ನೆಗಳೆದ್ದಿವೆ. ಇವರ ಕಾರನ್ನೇ ಉಗ್ರರು ಅಡ್ಡಗಟ್ಟಿ ವಶಪಡಿಸಿಕೊಂಡಿದ್ದರು. ನಂತರ ಅವರಿಂದ ಬಿಡುಗಡೆ ಆದ ಎಸ್ ಪಿ, ಇದರ ಗಂಭೀರತೆ ಅರ್ಥ ಮಾಡಿಕೊಂಡು ತ್ವರಿತವಾಗಿ ಭದ್ರತಾ ಏಜೆನ್ಸಿಗಳನ್ನು ಸಂಪರ್ಕಿಸಲು ವಿಫಲರಾದರೇ… ಅವರೇಕೆ ಗನ್ ಮ್ಯಾನ್ ರಹಿತರಾಗಿ ಆ ಪ್ರದೇಶದಲ್ಲಿ ಸಂಚರಿಸುತ್ತಿದ್ದರು ಎಂಬೆಲ್ಲ ಪ್ರಶ್ನೆಗಳೆದ್ದಿವೆ. ಆದರೆ ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಎಸ್ ಪಿ ಸಲ್ವಿಂದರ್ ಸಿಂಗ್, ತಾವು ತಮ್ಮ ಕರ್ತವ್ಯ ನೆರವೇರಿಸಿದ್ದಾಗಿ ಹೇಳಿದ್ದಾರೆ. ಎ. ಕೆ. 47 ನಂಥ ಮಾರಕಾಸ್ತ್ರಗಳನ್ನು ಹೊಂದಿದ್ದ ಉಗ್ರರೊಂದಿಗೆ ತಾವು ಸೆಣೆಸುವ ಸ್ಥಿತಿಯಲ್ಲಿ ಇರಲಿಲ್ಲ ಅಂತಲೂ ಹೇಳಿದ್ದಾರೆ.

Leave a Reply