ಚೈತನ್ಯ ಹೆಗಡೆ
ಗಡಿಯಾಚೆಗಿಂದ ಉಗ್ರರು ಒಳನುಸುಳಿದ್ದಾದರೂ ಹೇಗೆ, ನಾವು ಎಡವಿದ್ದೆಲ್ಲಿ ಅಂತ ವರದಿ ಕೊಡಿ ಅಂತ ಪಠಾಣ್ ಕೋಟ್ ದಾಳಿಯ ಬೆನ್ನಲ್ಲೇ ಗಡಿ ಭದ್ರತಾ ಪಡೆಯನ್ನು (ಬಿಎಸ್ ಎಫ್) ಕೇಳಿತ್ತು ಕೇಂದ್ರ ಗೃಹ ಸಚಿವಾಲಯ.
ಯಾರೂ ಗಡಿಬೇಲಿಯನ್ನು ದಾಟಿ ಬಂದಿಲ್ಲ. ಆದರೆ ಅಂತಾರಾಷ್ಟ್ರೀಯ ಗಡಿಯಲ್ಲಿ ಕೆಲವು ಭಾಗಗಳು ದುರ್ಬಲ ಕಣ್ಗಾವಲು ಹೊಂದಿವೆ. ಅಲ್ಲಿ ಸ್ಥಾಪಿಸಿರುವ ಎಲೆಕ್ಟ್ರಾನಿಕ್ ಪರಿವೀಕ್ಷಣಾ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ.- ಇದು ಬಿಎಸ್ ಎಫ್ ವರದಿಯ ಸಾರ.
ಈಗ ಇನ್ನೊಂದು ಸುದ್ದಿಯನ್ನು ಗಮನಿಸೋಣ. ಚೀನಾದಂಥ ಬೃಹತ್ ಮಿಲಿಟರಿ ಶಕ್ತಿಯು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಪಾರಮ್ಯಕ್ಕಾಗಿ ಅವಿರತ ಪ್ರಯತ್ನ ನಡೆಸಿರುವುದು ಎಲ್ಲರಿಗೂ ತಿಳಿದ ಸಂಗತಿಯೇ. ಅಂಥ ಸಮುದ್ರ ತೀರದಲ್ಲಿ ತನ್ನದೂ ಒಂದು ಪಾಲಿರಲಿ ಎಂಬಂತೆ ವಿಯೆಟ್ನಾಂನಲ್ಲಿ ಉಪಗ್ರಹ ಪರಿವೀಕ್ಷಣಾ ಕೇಂದ್ರವೊಂದನ್ನು ಹೊಂದಿದೆ ಭಾರತ! ವಿಯೆಟ್ನಾಂನ ದಕ್ಷಿಣಕ್ಕಿರುವ ಹೋಚಿ ಮನ್ ನಗರದಲ್ಲಿ ಮಾಹಿತಿ ಸಂಗ್ರಹ, ಮಾರ್ಗಪತ್ತೆ ಹಾಗೂ ದೂರ ಸಂಚಾರ ಪರಿವೀಕ್ಷಣೆಗೆ ಅನುಕೂಲವಾಗುವಂತೆ ಇಸ್ರೋದ ಮುಂಚೂಣಿಯಲ್ಲಿ ನಿರ್ಮಿಸಲಾಗಿರುವ ಕೇಂದ್ರವು ತನ್ನ ಕಾರ್ಯಾಚರಣೆ ಪ್ರಾರಂಭಿಸುವುದಕ್ಕೆ ದಿನಗಣನೆ ಮಾಡುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 150 ಕೋಟಿ ರುಪಾಯಿಗಳ ವೆಚ್ಚದಲ್ಲಿ ಹೋಚಿ ಮನ್ ನಲ್ಲಿ ನಿರ್ಮಾಣವಾಗಿರುವ ಈ ಕೇಂದ್ರವನ್ನು ಅದಾಗಲೇ ಇಂಡೋನೇಷ್ಯದಲ್ಲಿ ಭಾರತವು ಹೊಂದಿರುವ ಇನ್ನೊಂದು ಕೇಂದ್ರದೊಂದಿಗೆ ಬೆಸೆಯಲಾಗುತ್ತದೆ.
ಜಾಗತಿಕ ವ್ಯಾಪಾರದ ದೃಷ್ಟಿಯಿಂದ ದಕ್ಷಿಣ ಚೀನಾ ಸಮುದ್ರ ಕಾರ್ಯತಂತ್ರ ಮಹತ್ವವನ್ನು ಹೊಂದಿದೆ. ಇಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸುವುದು ಹಾಗೂ ಸಮುದ್ರದಲ್ಲಿ ತನ್ನ ಅಧಿಕಾರ ವ್ಯಾಪ್ತಿ ಬಗ್ಗೆ ಜಪಾನ್ ನೊಂದಿಗೆ ನಿರಂತರ ಕ್ಯಾತೆ ಇಂಥವೆಲ್ಲವನ್ನೂ ಚೀನಾ ಮಾಡಿಕೊಂಡು ಬರುತ್ತಿದೆ. ಚೀನಾದ ಈ ಕ್ರಮಕ್ಕೆ ಸಹಜವಾಗಿಯೇ ಅಮೆರಿಕ, ಜಪಾನ್, ವಿಯೆಟ್ನಾಂ, ಪಿಲಿಪ್ಪೀನ್ಸ್ ಗಳೆಲ್ಲ ಪ್ರತಿರೋಧ ತೋರಿವೆ. ಈ ಸಮುದ್ರ ಭಾಗವು ಯಾರೊಬ್ಬರ ಸ್ವತ್ತಾಗದೇ ಮುಕ್ತವಾಗಿರಬೇಕು ಎಂಬ ಧೋರಣೆ ಭಾರತದ್ದೂ ಹೌದು. ಈ ನಿಟ್ಟಿನಲ್ಲಿ ವಿಯೆಟ್ನಾಂ ಸಹಯೋಗದಿಂದ ಸ್ಥಾಪನೆಯಾಗಿರುವ ಇಸ್ರೋದ ಪರಿವೀಕ್ಷಣಾ ಕೇಂದ್ರವು ಭವಿಷ್ಯದಲ್ಲಿ ದೇಶಕ್ಕೊಂದು ಕಾರ್ಯತಂತ್ರ ಬಲವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ.
ಈಗ ಮತ್ತೆ ಪಠಾಣ್ ಕೋಟ್ ವಿಷಯಕ್ಕೆ ಮರಳೋಣ…
ಅತಿ ವಿಸ್ತಾರದ ಗಡಿಯನ್ನು ಅನವರತ ಕಣ್ಣಿಟ್ಟು ಕಾಯುವುದು ಆಗದ ಮಾತು. ಆದರೆ ಗಡಿ ಕಾವಲಿನಲ್ಲಿ ತಂತ್ರಜ್ಞಾನ ಕೈಕೊಡುತ್ತಿದೆ ಎಂದು ಬಿಎಸ್ ಎಫ್ ವರದಿ ಸೂಚಿಸುತ್ತಿರುವುದು ಚಿಂತಿಸಬೇಕಾದ ಸಂಗತಿ. ಪಠಾಣ್ ಕೋಟ್ ಗೆ ತಾಗಿಕೊಂಡಂತೆ ಇರುವ ಹಳ್ಳಿ ಬಮಿಯಾಲ್. ಬಿಯಾಸ್ ನದಿಯ ಉಪನದಿಗಳು ಗಡಿ ಪ್ರದೇಶದಲ್ಲಿ ಹರಿದು ಪಾಕಿಸ್ತಾನಕ್ಕೆ ಹೊರಳಿಕೊಳ್ಳುವ ಪ್ರದೇಶ ಇಲ್ಲಿದೆ. ಉಗ್ರರು ಇಲ್ಲಿಂದಲೇ ಭಾರತ ಪ್ರವೇಶಿಸಿದ್ದಿರಬಹುದಾ ಎಂಬುದು ಈಗ ಮಾಡಲಾಗುತ್ತಿರುವ ಊಹೆ. ಈ ಪ್ರದೇಶಗಳಲ್ಲಿ ಎಲ್ಲ ಕಡೆಯೂ ಗಡಿಬೇಲಿ ಇಲ್ಲ. ಆಳೆತ್ತರದ ದಪ್ಪ ಜಾತಿಯ ಹುಲ್ಲು ದಟ್ಟವಾಗಿ ಬೆಳೆದುಕೊಂಡಿರುವ ಜಾಗಗಳು ಇಲ್ಲಿವೆ. ಇಲ್ಲೆಲ್ಲ ಯೋಧರು ದೂರದರ್ಶಕ ಸಲಕರಣೆಗಳನ್ನು ಹಿಡಿದು ಗಡಿಯ ಮೇಲೆ ಕಣ್ಣಿಟ್ಟಿರುವ ಪರಿಪಾಠವಿದೆ. ಇಂಥ ಸಲಕರಣೆಗಳು ಹಾಗೂ ಪರಿವೀಕ್ಷಣಾ ರಡಾರ್ ಗಳು ತಾಂತ್ರಿಕ ದೋಷಗಳಿಂದ ನರಳುತ್ತಿವೆ ಎಂಬ ಮಾಹಿತಿಗಳು ಈಗ ಹೊರಬೀಳುತ್ತಿವೆ.
ಒಂದಂಶವನ್ನಂತೂ ಒಪ್ಪಿಕೊಳ್ಳಲೇಬೇಕು. ಪಂಜಾಬ್ ನ ಗಡಿ ಅತಿ ಕಟ್ಟುನಿಟ್ಟಿನಿಂದೇನೂ ಕೂಡಿಲ್ಲ ಎಂಬುದಕ್ಕೆ ಆ ರಾಜ್ಯವನ್ನು ವ್ಯಾಪಕವಾಗಿ ಆವರಿಸಿಕೊಂಡಿರುವ ‘ಮಾದಕ ದ್ರವ್ಯ ಮಾಫಿಯಾ’ವೇ ಸಾಕ್ಷ್ಯ ಹೇಳುತ್ತದೆ. ಕೆಲ ವರ್ಷಗಳ ಹಿಂದೆ ವಿಶ್ವಸಂಸ್ಥೆಯು ಸ್ಥಳೀಯ ವಿಶ್ವವಿದ್ಯಾಲಯದ ಸಹಾಯದಿಂದ ಮಾಡಿದ್ದ ಸಮೀಕ್ಷೆ ಪ್ರಕಾರ ಪಂಜಾಬ್ ನ ಶೇ. 73ರಷ್ಟು ಯುವಜನತೆ ಮಾದಕ ವ್ಯಸನಿಗಳು. ಬಾಬಾ ರಾಮ್ ದೇವ್ ಅವರ ಅಂದಾಜಿನ ಪ್ರಕಾರ ಈ ಪ್ರಮಾಣ ಶೇ. 80. ಪಂಜಾಬ್ ನಲ್ಲಿ ದೇಶದ ಸಶಸ್ತ್ರ ಪಡೆಯನ್ನು ಸೇರುತ್ತಿದ್ದವರ ಪ್ರಮಾಣ ಶೇ. 17ರಿಂದ ಶೇ. 0.75ಕ್ಕೆ ಇಳಿದಿದೆ ಹಾಗೂ ಇದಕ್ಕೆ ಮಾದಕ ವ್ಯಸನವೇ ಕಾರಣ ಎಂದಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ ಪ್ರತಿಪಾದನೆ ಗಮನಿಸಿದಾಗ ವಾಸ್ತವ ಎಷ್ಟು ಭೀಕರವಾಗಿದೆ ಎಂಬುದು ಮನದಟ್ಟಾಗುತ್ತದೆ.
ಈ ಮಾದಕ ಪದಾರ್ಥಗಳ ಕೆಲವು ಭಾಗವಾದರೂ ಬರುವುದು ಆಫೀಮು ಸ್ವರ್ಗ ಅಫ್ಘಾನಿಸ್ತಾನದಿಂದ. ಇದು ಪಂಜಾಬ್ ಪ್ರವೇಶಿಸಬೇಕಾದರೆ ಗಡಿಯಲ್ಲಿ ಕೈ ಬದಲಾಯಿಸಲೇಬೇಕು. ಇಂಥ ನುಣುಚು ದಾರಿಗಳೇ ಇವತ್ತು ದೇಶಕ್ಕೆ ಉಗ್ರರನ್ನು ಒಳಬಿಟ್ಟುಕೊಳ್ಳುತ್ತಿವೆಯಾ? ಡ್ರಗ್ ಮಾಫಿಯಾ ಭ್ರಷ್ಟಾಚಾರ ದೇಶದ ಭದ್ರತೆಗೇ ಆತಂಕ ಒಡ್ಡುವ ಸ್ಥಿತಿಗೆ ಬೆಳೆದಿದೆಯೇ?
ಒಂದೆಡೆ ಮಂಗಳಯಾನ, ಮಿಲಿಟರಿ ಸರ್ವೇಕ್ಷಣೆಗಳಲ್ಲಿ ಜಾಗತಿಕ ಛಾಪು ತೋರಿಸುತ್ತಿರುವ ನಮ್ಮ ದೇಶ, ಇನ್ನೊಂದು ವ್ಯತಿರಿಕ್ತ ತುದಿಯಲ್ಲಿ ಎಲ್ಲ ರಾಜಿಗಳಿಗೂ ಸಿದ್ಧವಾಗಿ ನಿಂತಿದೆಯೇ? ಹೀಗಾದರೆ ಇಸ್ರೋದಂಥ ಸಂಸ್ಥೆಗಳ ಅದ್ಭುತ ಪ್ರಯತ್ನಗಳಿಗೆ ಬೆಲೆ ಸಿಗೋದು ಹೇಗೆ?