ಈ ಅಜ್ಜಿಗೆ ಮೊಮ್ಮಗಳನ್ನು ಬೆಳೆಸೋ ಬಗ್ಗೆ ಫೇಸ್ಬುಕ್ ನ ಜುಕರ್ ಬರ್ಗ್ ನೀಡಿದ ಸಲಹೆ ಏನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್

ಈ ವರ್ಷಾರಂಭದಲ್ಲಿ ತಮ್ಮ ಗುರಿಯ ಬಗ್ಗೆ ಬರೆದುಕೊಳ್ಳುತ್ತ, ಫೇಸ್ಬುಕ್ ನ ಮಾರ್ಕ್ ಜುಕರ್ ಬರ್ಗ್, 2016ರಲ್ಲಿ ತಾವು ಕೃತಕ ಬುದ್ಧಿಮತ್ತೆಯುಳ್ಳ ರೊಬಾಟ್ ಅಡುಗೆಯವನನ್ನು ಹೊಂದಬೇಕು ಅಂದಿದ್ರು. ಅಲ್ಲದೇ ಇಂಥದೊಂದು ಪ್ರೋಗ್ರಾಂ ಅನ್ನು ನಾನೇ ಕೋಡ್ ಮಾಡ್ತೇನೆ, ಈ ಬೌದ್ಧಿಕ ಸವಾಲನ್ನು ಮುಂದೊಮ್ಮೆ ನಿಮ್ಮ ಜತೆ ಹಂಚಿಕೊಳ್ತೇನೆ ಅಂತಲೂ ಬರೆದುಕೊಂಡಿದ್ರು. ಯಥಾಪ್ರಕಾರ ಇದಕ್ಕೆ ಸಾವಿರಾರು ಕಮೆಂಟ್ ಗಳು ಹರಿದುಬಂದವು. ಭೇಷ್ ಭೇಷ್ ಅಂದ್ರು ಎಲ್ಲರೂ.

ಆದರೆ ಒಬ್ಬಳು ಹಿರಿಯಜ್ಜಿ ಮಾತ್ರ ಈ ಬಗ್ಗೆ ಮೆಚ್ಚುಗೆ ಸೂಚಿಸುತ್ತ ಹೀಗೆ ಕಮೆಂಟ್ ಮಾಡಿದ್ರು- ‘ನನ್ನ ಮೊಮ್ಮಗಳಿಗೂ ನಾನು ಹೇಳ್ತಿರ್ತೇನೆ. ಬೇರೆಲ್ಲ ಆಲೋಚನೆ ಬಿಟ್ಟು ಹಿಂಗೆ ಅನ್ವೇಷಣೆಯ ಹುಚ್ಚು ಹತ್ತಿಸಿಕೊಂಡವರನ್ನೇ ಪ್ರೇಮಿಸು ಅಂತ. ಯಾರಿಗ್ಗೊತ್ತು ಅಂಥವರೇ ಮುಂದೊಮ್ಮೆ ಜುಕರ್ ಬರ್ಗ್ ಆಗಬಹುದು!’

ಈ ಪ್ರತಿಕ್ರಿಯೆಗೆ ಮಾರ್ಕ್ ಜುಕರ್ ಬರ್ಗ್ ದಾಖಲಿಸಿರುವ ಮರುಪ್ರತಿಕ್ರಿಯೆ ಮಾತ್ರ ಅದ್ಭುತವಾಗಿದೆ. ‘ನಿಮ್ಮ ಮೊಮ್ಮಗಳೇ ಶಾಲೆಯಲ್ಲಿ ತಂತ್ರಜ್ಞಾನದ ವ್ಯಾಮೋಹಕ್ಕೆ ಬೀಳುವಂತೆ ರೂಪಿಸಿ. ಆಕೆಯೇ ಮುಂದೊಂದು ದಿನ ಅನ್ವೇಷಕಿ ಆಗಬಹುದು.’ ಎಂದು ರಿಪ್ಲೈ ದಾಖಲಿಸಿದ್ದಾರೆ ಜುಕರ್ ಬರ್ಗ್.

fb

ಈ ಮೂಲಕ ಯಾರೋ ಯಶಸ್ವಿ ಆಗಲಿದ್ದಾರೆ ಅಂತ ಅವರ ಹಿಂದೆ ಹೋಗುವುದಕ್ಕೆ ಪೈಪೋಟಿ ಪಡುವಿರೇಕೆ, ನೀವೇ ಏನಾದರೊಂದನ್ನು ಸೃಷ್ಟಿಸುವುದಕ್ಕೆ ಪ್ರಯತ್ನಿಸಿ ಎಂಬ ಮಹಾಪಾಠವನ್ನು ಜಗತ್ತಿಗೆ ಹೇಳಿದ್ದಾರೆ ಫೇಸ್ಬುಕ್ ಒಡೆಯ. ‘ಯಾರೋ ಶ್ರೀಮಂತನನ್ನು, ತಂತ್ರಜ್ಞಾನ ಪ್ರಮುಖನನ್ನು ಆಕರ್ಷಿಸುವುದಲ್ಲ ಹುಡುಗಿಯರ ಬದುಕಿನುದ್ದೇಶ, ಬದಲಿಗೆ ವೈಯಕ್ತಿಕ ಛಾಪು ಬೆಳೆಸಿಕೊಂಡು ತಾವೇ ಅಂಥ ಸ್ಥಾನಕ್ಕೆ ಏರುವ ಕಾಲ ಇದಾಗಿದೆ’ ಎಂಬ ಬದಲಾವಣೆಯನ್ನು ಸೂಕ್ಷ್ಮವಾಗಿ ಬಿಂಬಿಸಿರುವ ಮಾರ್ಕ್, ಸ್ವಾಭಿಮಾನ- ಸ್ವಂತಿಕೆ ಪಾಠವನ್ನೂ ಹೇಳಿದ್ದಾರೆ.

‘ನಿಂ ಮಗ್ಳು ಇನ್ನೂ ಏನ್ ಮಾಡ್ಕೊಂಡಿದಾಳೆ? ‘ಒಳ್ಳೇ ಕಡೆ’ ನೋಡಿ ಮದ್ವೆ ಮಾಡೋದಲ್ವಾ’ ಅಂತ ರಾಗ ಎಳೆದುಕೊಂಡಿರುವ ಇಲ್ಲಿನ ಹೆಚ್ಚಿನವರಿಗೆ ಇವೆಲ್ಲ ಯಾವಾಗ ಅರ್ಥವಾಗುತ್ತೋ?

Leave a Reply