ಪಠಾಣ್ ಕೋಟ್: ಮಾಧ್ಯಮವನ್ನು ಟೀಕಿಸೋಕಿದೆ ಒಳ್ಳೇ ಕಾರಣ, ಆದರೆ ಕೇಂದ್ರದ ಭಕ್ತರಿಗೂ ಬೇಕಿದೆ ಸ್ವಂತ ಅವಲೋಕನ

ಪ್ರವೀಣ್ ಕುಮಾರ್

ಮುಂಚೂಣಿಯಲ್ಲಿ ನಿಂತು ಎದೆ ತಟ್ಟಿಕೊಳ್ಳುವುದೇ ರಾಷ್ಟ್ರಪ್ರೇಮವಲ್ಲ. ಇಲ್ಲಿ ಭಾವನೆಗಳ ತೀವ್ರತೆ ಜತೆ ತರ್ಕ- ಸಹಜ ಸ್ಪಂದನೆಗಳು ಕೆಲಸ ಮಾಡಿದಾಗ ಮಾತ್ರವೇ ನಿಜವಾದ ದೇಶಕಾಳಜಿಯೊಂದು ರೂಪುಗೊಳ್ಳುತ್ತದೆ.- ಇದು ಪಠಾನ್ ಕೋಟ್ ದಾಳಿ ಸಂದರ್ಭದಲ್ಲಿ ಮಾಧ್ಯಮ ಮತ್ತು ರಾಜಕೀಯ ವರ್ಗಗಳೆರಡೂ ಕಲಿಯಬೇಕಿದ್ದ ಪಾಠವಾಗಿ ತೋರುತ್ತಿದೆ. ಏಕೆಂದು ಗಮನಿಸೋಣ.

  • ಸೆಲೆಬ್ರಿಟಿ ಪತ್ರಕರ್ತರು, ಟಿವಿ ನಿರೂಪಕರು ಮುಂಬೈ ದಾಳಿ ವಿದ್ಯಮಾನದಿಂದ ಯಾವ ಪಾಠವನ್ನೂ ಕಲಿಯದೇ ಈ ಬಾರಿ ಸಹ ಸಂಘರ್ಷದ ನೇರ ಪ್ರಸಾರಕ್ಕೆ ಮುಗಿಬಿದ್ದರು. ಟ್ವೀಟ್ ಗಳಲ್ಲಿ ಈಗ ಹೀಗಾಗ್ತಿದೆ, ಮೂಲಗಳು ಹೀಗೆ ಹೇಳಿವೆ ಎಂದೆಲ್ಲ ವರದಿ ಮಾಡುತ್ತ ಕುಳಿತರು. ಇಂಥ ನೇರ ವರದಿಯ ಲಾಭವನ್ನು ಈ ಹಿಂದೆ ಮುಂಬೈನ ತಾಜ್ ಹೊಟೇಲ್, ಪಾರ್ಸಿ ಬಿಲ್ಡಿಂಗ್ ಗಳನ್ನು ಒತ್ತೆಯಿಟ್ಟುಕೊಂಡಿದ್ದ ಉಗ್ರರು ಚೆನ್ನಾಗಿ ಪಡೆದುಕೊಂಡಿದ್ದರೆಂಬುದನ್ನು ವರದಿಗಳು ಸಾರುತ್ತವೆ. ಈ ಬಾರಿಯೂ ದೇಶಹಿತವೆಂಬುದು ರಾಷ್ಟ್ರೀಯ ವಾಹಿನಿಗಳ ಗಮನದಲ್ಲಿರಲಿಲ್ಲ.
  • ಯುದ್ಧವನ್ನೋ, ಸಂಘರ್ಷವನ್ನೋ ಇನ್ಯಾವುದೋ ಪ್ರಕೃತಿ ವಿಕೋಪವನ್ನೋ ವರದಿ ಮಾಡಬೇಕಾದರೆ ವರದಿಗಾರನೇ ವಸ್ತುವಾಗಿಬಿಡುವ ವಿಕೃತಿಯೊಂದು ಭಾರತೀಯ ಮಾಧ್ಯಮದಲ್ಲಿ ಮಾತ್ರವೇ ಢಾಳಾಗಿದೆ. ಹುತಾತ್ಮ ಯೋಧರ ಅಂತ್ಯ ಸಂಸ್ಕಾರ, ಅವರಿಗೆ ನಮಿಸಲು ಬಂದ ಜನಸಮೂಹ ಇವೆಲ್ಲವನ್ನೂ ಕಟ್ಟಿಕೊಡಲೇಬೇಕು. ಜನರಲ್ಲಿ ಆಮಟ್ಟಿಗಿನ ಅಭಿಮಾನ- ತ್ಯಾಗದ ಅರಿವು ಮೂಡಬೇಕಾದದ್ದೇ. ಆದರೆ ಸೆಲೆಬ್ರಿಟಿ ನಿರೂಪಕರಿಗೆ ತಾವು ಘಟನೆಯ ವರದಿ ಮಾಡುತ್ತಿದ್ದೇವೆ ಎಂಬುದಕ್ಕಿಂತ ಆ ಘಟನೆಯಲ್ಲಿ ಒಂದಾಗುವುದರಲ್ಲೇ ಆಸಕ್ತಿ. ಯೋಧನ ಕುಟುಂಬದವರ ಪಕ್ಕ ಕುಳಿತು ಫೋಟೊ ತೆಗೆಸಿಕೊಳ್ಳುವುದು, ನೋಡಿ ನಾನು ಅವರಿಗೆ ಸಾಂತ್ವನ ಹೇಳಿಬಂದೆ ಅಂತ ಸಾಕ್ಷ್ಯ ತೋರಿಸುವುದು ಇವೆಲ್ಲ ಬರ್ಖಾ ದತ್ ರಂಥ ಸೆಲೆಬ್ರಿಟಿ ಪತ್ರಕರ್ತರಿಗೆ ಸಂವೇದನಾಶೂನ್ಯ ಅಂತ ಅನಿಸುವುದೇ ಇಲ್ಲ. ಖಂಡಿತ, ಯೋಧರ ಕುಟುಂಬದ ಅಭಿಮಾನದ ಮಾತುಗಳು- ವೈಯಕ್ತಿಕ ನಷ್ಟದ ಸಂದರ್ಭದಲ್ಲೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ತಮ್ಮ ಕುಟುಂಬ ಸದಸ್ಯನ ಕುರಿತ ಹೆಮ್ಮೆ ಇವೆಲ್ಲ ಜನಕ್ಕೆ ಮುಟ್ಟಲೇಬೇಕು. ಆದರೆ ಇಲ್ಲೆಲ್ಲ ಪತ್ರಕರ್ತ ಅವರಿಗೆ ಧ್ವನಿಯಾಗಬೇಕೋ ಅಥವಾ ಸಿಕ್ಕಿದ್ದೇ ಚಾನ್ಸು ಅಂತ ತಾನೂ ಪದೇ ಪದೆ ಕೆಮರಾ ಚೌಕಟ್ಟಿನಲ್ಲಿ ತೂರಿಕೊಳ್ಳಬೇಕೋ?

barkha1

  • barkhaಪಠಾಣ್ ಕೋಟ್ ಕಾರ್ಯಾಚರಣೆ ಬಗ್ಗೆ ಏನಾದರೂ ಎಕ್ಸ್ ಕ್ಲೂಸಿವ್ ಚಿತ್ರಣ ಕೊಟ್ಟುಬಿಡಬೇಕು ಎಂಬ ಹಪಾಹಪಿ ಹೇಗಿತ್ತೆಂದರೆ ಸಿರಿಯಾದಲ್ಲಿ ಸೈನಿಕರು ಸತ್ತು ಮಲಗಿರುವ ಚಿತ್ರವನ್ನು ತೋರಿಸಿ ಇದೋ ಪಠಾಣ್ ಕೋಟ್ ನಲ್ಲಿ ಉಗ್ರರೆಲ್ಲ ಹತರಾಗಿದ್ದಾರೆ ಅಂತ ಸಾರಲಾಯಿತು. ಮೊದಲಿಗೆ ಸಿಎನ್ ಎನ್- ಐಬಿಎನ್ ನಿಂದಾದ ಈ ಎಕ್ಸ್ ಕ್ಲೂಸಿವ್ ಕಾರ್ಯವನ್ನು ನಂತರ ಇಂಡಿಯಾ ಟುಡೆ ಕಾಪಿ ಮಾಡಿತು. ಮಾಧ್ಯಮ ವಿಮರ್ಶೆಗೆ ಹೆಸರಾಗಿರುವ ‘ನ್ಯೂಸ್ ಲಾಂಡ್ರಿ’ ಜಾಲತಾಣ ಈ ಬಗ್ಗೆ ಸಂಬಂಧಪಟ್ಟವರನ್ನು ಪ್ರಶ್ನಿಸಿದಾಗ ಬಂದ ಉತ್ತರ- ‘ವಾಟ್ಸಾಪಿನಲ್ಲಿ ಬಂದ ಚಿತ್ರ ನಿಜವಿರಬಹುದೆಂದು ಹಾಕಿಕೊಂಡೆವು. ಏಕೆಂದರೆ ಆ ವಾಟ್ಸಾಪ್ ಗುಂಪಿನಲ್ಲಿ ನಿವೃತ್ತ ಸೇನಾಧಿಕಾರಿಗಳು, ರಕ್ಷಣಾ ಪರಿಣತರು ಇದ್ದರು…’

tw

tw1

  •  ಕೇಂದ್ರ ಸರ್ಕಾರ ಸಹ ಪಠಾಣ್ ಕೋಟ್ ಕಾರ್ಯಾಚರಣೆಯಲ್ಲಿ ಗೊಂದಲದಲ್ಲೇ ಮುಳುಗಿತ್ತು. ‘ಇಲ್ಲ, ಇಲ್ಲ. ಸರ್ಕಾರ ತ್ವರಿತ ಕ್ರಮ ಕೈಗೊಂಡಿದ್ದರಿಂದಲೇ ಸಾವು-ನೋವು ತಪ್ಪಿತು. ಕೈಗೊಂಡ ಕ್ರಮಗಳ ಬಗ್ಗೆ ಮಾಧ್ಯಮಕ್ಕೆ ವಿವರಿಸಬೇಕಾದ ಅಗತ್ಯವಿಲ್ಲ’ ಅನ್ನೋದು ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಬಿಜೆಪಿ ಬೆಂಬಲಿಗರ ಸಮರ್ಥನಾ ಧಾಟಿ. ಇವರೇ ಈ ಹಿಂದೆ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಯುಪಿಎ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದ ‘ದೇಶಭಕ್ತರು’ ಎಂಬುದನ್ನು ಮರೆಯಬಾರದು. ಇರಲಿ. ಮಿಲಿಟರಿ ಕಾರ್ಯಾಚರಣೆ ಬಗ್ಗೆ ವಿವರ ಕೊಡದೇ ಇರುವುದೇ ಈ ಸರ್ಕಾರದ ನೀತಿ ಎನ್ನುವುದಾದರೆ, ಅದನ್ನೇ ಮಂತ್ರಿಗಳೆಲ್ಲ ಕಟ್ಟುನಿಟ್ಟಾಗಿ ಪಾಲಿಸಬೇಕಿತ್ತು. ಆದರೆ ಶನಿವಾರ ಸಂಜೆಯೇ ಟ್ವೀಟ್ ಮಾಡುವ ಕೇಂದ್ರ ಗೃಹ ಸಚಿವರು, ‘ಪಠಾಣ್ ಕೋಟ್ ಕಾರ್ಯಾಚರಣೆ ಮುಗಿದಿದೆ. ಶೌರ್ಯ ಮೆರೆದ ಸೈನಿಕರಿಗೆ ಸೆಲ್ಯೂಟ್’ ಎನ್ನುತ್ತಾರೆ. ಅದಾಗಿ, ಮಂಗಳವಾರದವರೆಗೂ ಕಾರ್ಯಾಚರಣೆ ಮುಂದುವರಿದಿದ್ದು ಎಲ್ಲರಿಗೂ ತಿಳಿದಿರುವಂಥದ್ದೇ.

ನಿಜ. ಇಂಥ ಘಟನೆಗಳಾದಾಗ ಮಾಧ್ಯಮಗಳಿಗೆ ನೇರ ಪ್ರಸಾರಕ್ಕೆ ನಿರ್ಬಂಧವಿರಲಿ ಎಂಬ ಆಶಯ ಸಕಾರಣದ್ದೇ. ಆದರೆ ಸರ್ಕಾರವೂ ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿಲ್ಲ. ‘ಏನೂ ಆಗಿಲ್ಲ, ಸುಮ್ನಿರ್ರೀ’ ಅಂತ ತನ್ನ ಇಮೇಜು ಕಾಪಾಡಿಕೊಳ್ಳುವ ಧಾವಂತವಷ್ಟೇ ಕಾಣುತ್ತಿದೆಯೇ ಹೊರತು, ವಾಯುನೆಲೆಯಂಥ ಸೂಕ್ಷ್ಮ ಪ್ರದೇಶಕ್ಕೆ ಉಗ್ರರ ಒಳನುಸುಳುವಿಕೆ ಹೇಗೆ ಸಾಧ್ಯವಾಯ್ತು?, ಪಂಜಾಬ್ ನ ಡ್ರಗ್ ಮಾಫಿಯಾ ಸಹಾಯವೇನಾದರೂ ಇಲ್ಲಿದೆಯಾ, ಮಿಲಿಟರಿ ಆವಾರದೊಳಗೇ ಐದು ಉಗ್ರರು ಪ್ರವೇಶಿಸುತ್ತಾರೆ ಎಂದರೆ ಅದು ಸುರಕ್ಷತೆ ಕುರಿತ ಬಹುದೊಡ್ಡ ಆತಂಕ ಅಲ್ಲವೇ… ಇಂಥ ಎಲ್ಲ ಪ್ರಶ್ನೆಗಳಿಗೆ ಒಳಗಾಗುವುದು ಕೇಂದ್ರ ಸರ್ಕಾರಕ್ಕೂ ಇಷ್ಟವಿಲ್ಲ; ಎಲ್ಲವಕ್ಕೂ ದೇಶಭಕ್ತಿಯ ಭಾವನೆ ಬಂಡವಾಳ ಮಾಡಿಕೊಂಡು ಕೇಂದ್ರವನ್ನು ಬೆಂಬಲಿಸುವ ಭಕ್ತರಿಗೂ ಇವೆಲ್ಲ ಬೇಕಿಲ್ಲ.

Leave a Reply