ಸಂಜಯ್ ದತ್- ಆಮೀರ್ ಪಾಲಿನ ಸಿಹಿಸುದ್ದಿ, ಕಾಂಗ್ರೆಸ್ ವಾಗ್ದಾಳಿ, ಪಂಚಾಯ್ತಿ ಚುನಾವಣೆ… ಒಟ್ರಾಶಿ ಸುದ್ದಿಗಳೆಲ್ಲ ಒಂದೇ ಕಡೇನೆ

 

ಸಂಜಯ್ ದತ್ ಅವಧಿಗೂ ಮುನ್ನ ಬಿಡುಗಡೆ

1993ರ ಮುಂಬೈ ಸರಣಿ ಸ್ಫೋಟದ ಪ್ರಕರಣದಲ್ಲಿ 5 ವರ್ಷ ಶಿಕ್ಷೆಗೆ ಒಳಗಾಗಿದ್ದ ಬಾಲಿವುಡ್ ನಟ ಸಂಜಯ್ ದತ್, ಶಿಕ್ಷೆಯ ಅವಧಿಗೂ 3 ತಿಂಗಳ ಮುನ್ನವೆ ಬಿಡುಗಡೆಯಾಗಲಿದ್ದಾರೆ. ದತ್ ರವರ ಸನ್ನಡತೆ ಆಧಾರದ ಮೇಲೆ ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸಿ ಫೆಬ್ರವರಿ 27 ರಂದು ಬಿಡುಗಡೆ ಮಾಡುವುದಕ್ಕೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

ನಮ್ಮ ಕಾಮೆಂಟ್: ಯಾವಾಗಲೂ ಪೆರೋಲ್ ಅಂತ ಹೊರಗಡೆಯೇ ಇದ್ದ ಸಂಜಯ್ ಒಳಗಿದ್ದ ಸಮಯವಾದರೂ ಎಷ್ಟು? ದೇಶದ ಜೈಲುಗಳಲ್ಲಿ ಸಹಸ್ರಾರು ಕೈದಿಗಳು ಅಪರಾಧ ಸಾಬೀತಾಗದಿದ್ದರೂ ವಿಚಾರಣಾಧೀನರಾಗಿಯೇ ಕೊಳೆಯುತ್ತಿದ್ದಾರೆ. ನಿಜ, ಎಲ್ರೂ ಸಂಜಯ್ ದತ್ ಆಗೋಕಾಗುತ್ತಾ? ಛೇ..

 

ಕೇಂದ್ರದ ಮೇಲೆ ಕಾಂಗ್ರೆಸ್ ಉಗ್ರ ವಾಗ್ದಾಳಿ

ಪಠಾಣ್ ಕೋಟ್ ನ ಮೇಲೆ ಉಗ್ರರ ದಾಳಿಯಿಂದ ಕೇಂದ್ರ ಸರ್ಕಾರ ಈಗಷ್ಟೇ ಸ್ವಲ್ಪ ಸುಧಾರಿಸಿಕೊಳ್ಳುತ್ತಿದೆ. ಆದರೆ ಬುಧವಾರ ಪ್ರತಿಪಕ್ಷ ಕಾಂಗ್ರೆಸ್ ಮಾತ್ರ ಈ ವಿಷಯ ಇಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಸಖತ್ತಾಗಿಯೇ ವಾಗ್ಯುದ್ಧ ಮಾಡಿತು. ಕಾಂಗ್ರೆಸ್ ವಾಗ್ಝರಿ ಹೀಗಿದೆ- ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸೇನೆಯನ್ನು ಸಮಾಧಿ ಮಾಡಲು ಹೊರಟಿದೆ. ಕಾಂಗ್ರೆಸ್ ಈ ದಾಳಿಯ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊತ್ತುಕೊಳ್ಳಬೇಕು. ಈ ಸರ್ಕಾರ ದೇಶವನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಜತೆ ಮಾತುಕತೆಗೆ ಮುಂದಾದಾಗಲೆಲ್ಲ ಅಣುಕಿಸುತ್ತಿದ್ದವರು ಈಗ ಪಾಕ್ ವಿಚಾರದಲ್ಲಿ ಅತ್ಯಂತ ಗೊಂದಲದ ನೀತಿ ಹೊಂದಿದ್ದಾರೆ. ಇವು ಕಾಂಗ್ರೆಸ್ ನಿಂದ ತೂರಿಬಂದ ವಾಗ್ಬಾಣಗಳು.

ಗೃಹ ಸಚಿವ ರಾಜನಾಥ ಸಿಂಗ್ ಮತ್ತು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ರಾಜಿನಾಮೆ ನೀಡಲಿ ಅಂತ ಗುಡುಗಿದ್ರು ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ.

 

ಆಮೀರ್ ರಾಯಭಾರಿ ಪಟ್ಟಕ್ಕೆ ಕುತ್ತಿಲ್ಲ

ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ಪ್ರವಾಸೋದ್ಯಮ ಇಲಾಖೆಯ “ಇನ್ ಕ್ರೆಡಿಬಲ್ ಇಂಡಿಯಾ” ದ ರಾಯಭಾರಿ ಸ್ಥಾನದಿಂದ ತೆಗೆಯಲಾಗಿದೆ ಎಂಬುದು ಕೇವಲ ವದಂತಿ ಎಂದು ಪ್ರವಾಸೋದ್ಯಮ ಇಲಾಖೆ  ಸ್ಪಷ್ಟಪಡಿಸಿದೆ. ಅಸಹಿಷ್ಣುತೆಯ ವಿಚಾರದಲ್ಲಿ ವಿವಾದ ಸೃಷ್ಟಿಸಿಕೊಂಡಿದ್ದ ಅಮೀರ್ ಅವರನ್ನು ರಾಯಭಾರಿ ಸ್ಥಾನದಿಂದ ತೆಗೆಯಲಾಗಿದೆ ಅಂತ ಬುಧವಾರ ಬೆಳಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ವರ್ಗ ಸಂಭ್ರಮಿಸಿಕೊಂಡಿತ್ತು. ಇಲಾಖೆಯ ಸ್ಪಷ್ಟನೆಯೊಂದಿಗೆ ಈ ಸಂತೋಷದ ಆಯಸ್ಸು ಮೊಟಕಾಯಿತು.

 

ಸಮ-ಬೆಸ ಸಂಚಾರ ನಿಯಮಕ್ಕೆ ಹೈಕೋರ್ಟ್ ಪ್ರಶ್ನೆ

ವಾಯುಮಾಲಿನ್ಯ ತಡೆಗಟ್ಟಲು ದೆಹಲಿ ಸರ್ಕಾರ ಪ್ರಾಯೊಗಿಕವಾಗಿ ಜಾರಿಗೆ ತಂದಿದ್ದ ಸಮ ಬೆಸ ಸಂಖ್ಯೆ ಆಧಾರದ ಪ್ರಯೋಗ ಅವಧಿಗೆ ಒಂದು ವಾರಕ್ಕಿಂತ ಹೆಚ್ಚಿನ ಸಮಯ ಅವಶ್ಯವಿತ್ತೇ ಎಂದು ದೆಹಲಿ ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಿದೆ. ಈಗಾಗಲೆ ಈ ನಿಯಮದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದ್ದು ನಿಯಮ ಜಾರಿಯಿಂದ ದೆಹಲಿಯ ವಿವಿಧ ಭಾಗಗಳ ಮಾಲಿನ್ಯ ಪ್ರಮಾಣ ನಿಜಕ್ಕೂ ತಗ್ಗಿದೆಯೇ ಎಂಬ ಮಾಹಿತಿಯನ್ನು ಪರಿಶೀಲಿಸಿ ಶುಕ್ರವಾರದ ಒಳಗೆ ಕೋರ್ಟ್ ಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ.

 

ಪೊಂಗಲ್ ಹಬ್ಬಕ್ಕೆ ಜಯಲಲಿತ ಬಿಟ್ಟಿಭಾಗ್ಯ

ತಮಿಳುನಾಡಿನ ಜನತೆಗೆ ಮುಖ್ಯಮಂತ್ರಿ ಜಯಲಲಿತ ಅವರು ಪೊಂಗಲ್ ಹಬ್ಬದ ಆಚರಣೆಗೆ ಬರಪೂರ “ಬಿಟ್ಟಿ ಭಾಗ್ಯ” ಘೋಷಿಸಿದ್ದಾರೆ. ಸುಮಾರು 2 ಕೋಟಿ ಪಡಿತರ ಚೀಟಿದಾರರಿಗೆ 100 ರು, ತಲಾ 1 ಕೆ.ಜಿ ಅಕ್ಕಿ ಮತ್ತು ಸಕ್ಕರೆ ಜೊತೆಗೆ ಎರಡು ಅಡಿ ಉದ್ದದ ಕಬ್ಬಿನ ತುಂಡನ್ನು ನೀಡಲಿದ್ದಾರೆ. ಇದರಿಂದ ತಮಿಳುನಾಡಿನ ಸರ್ಕಾರಕ್ಕೆ 319 ಕೋಟಿ ರು ಹೊರೆ ಬಿಳಲಿದೆ. ಉಡುಗೊರೆಯನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ನೀಡಲಿದ್ದಾರೆ.

 

ಸ್ವಚ್ಛ ಭಾರತ ಸಾಕಾರಕ್ಕೇನು ಮಾಡ್ಬೇಕು?

ಸ್ವಚ್ಛ ಭಾರತ ಎಂದು ಮಾತನಾಡೋದು, ಪೊರಕೆ ಹಿಡಿದು ಪೋಸ್ ಕೊಡೋದು ಎಲ್ಲರಿಗೂ ಖಯಾಲಿಯಾಗಿದೆ. ಆದರೆ ಇದರ ಸಾಕಾರಕ್ಕೆ ನಿಜಕ್ಕೂ ಆಗಬೇಕಿರುವುದೇನು? ದೇಶದಲ್ಲಿ ಶೌಚಾಲಯ ಕ್ರಾಂತಿ ಮಾಡಿದ ಬಿಂದೇಶ್ವರ ಪಾಠಕ್ ಅವರು ಮೈಸೂರಿನಲ್ಲಿ ನಡೆಯುತ್ತಿರುವ 103 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನ ಅಧಿವೇಶನಲ್ಲಿ “ಸ್ವಚ್ಚ ಭಾರತ ಮಿಷನ್”ನ ಉಪನ್ಯಾಸದಲ್ಲಿ ಹೇಳಿದ್ದು-  “ತೆರೆದ ಮಲವಿರ್ಸಜನೆಯ ಮುಕ್ತ ಭಾರತ” ವಾಗಬೇಕಾದರೆ 2019 ರ ಒಳಗೆ 12 ಕೋಟಿ ಯಷ್ಟು ಶೌಚಾಲಯಗಳು ಭಾರತದಲ್ಲಿ ನಿರ್ಮಾಣ ಮಾಡುವ ಗುರಿ ಹೊಂದಿರಬೇಕು. ದೇಶದಲ್ಲಿ ಸಮುದಾಯ ನೈರ್ಮಲ್ಯ ಉತ್ತೇಜಿಸಬೇಕು ಮತ್ತು ಸೂಕ್ತ ನೈರ್ಮಲ್ಯ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಜನಸಂಖ್ಯೆಯ ಆಧಾರದಲ್ಲಿ ವೈಯುಕ್ತಿಕ ಮತ್ತು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು.

 

ಪಂಚಾಯ್ತಿ ಚುನಾವಣೆ: ನೀವು ತಿಳಿಬೇಕಿರೋ ಪಾಯಿಂಟ್ಸ್

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಫೆಬ್ರವರಿ 13 ಹಾಗೂ 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಚುನಾವಣೆ ಕುರಿತ ಪಕ್ಷಿನೋಟ…

  • ಚುನಾವಣೆ ನಡೆಯೋದು-30 ಜಿಲ್ಲಾ ಪಂಚಾಯಿತಿಯ 1082 ಕ್ಷೇತ್ರಗಳಿಗೆ ಹಾಗೂ 175 ತಾಲ್ಲೂಕು ಪಂಚಾಯಿತಿಯ 3903  ಕ್ಷೇತ್ರಗಳಿಗೆ.
  • ಗೃಹ ಇಲಾಖೆಯ ಅನುಮತಿ ದೊರೆತ ನಂತರ ಮೊದಲ ಹಂತ, ಎರಡನೇ ಹಂತಗಳಲ್ಲಿ ಚುನಾವಣೆ ನಡೆಯಬೇಕಿರುವ ಪ್ರದೇಶಗಳ ನಿರ್ಧಾರ.
  •  ಪೂರ್ವ ಸಿದ್ಧತೆ ಹಾಗೂ ಸಿಬ್ಬಂದಿ ಬಳಕೆಗೆ ಅನುವು ಮಾಡಿಕೊಳ್ಳುವ ಉದ್ದೇಶದಿಂದ ಮೊದಲನೇ ಹಂತಕ್ಕೂ, ಎರಡನೇ ಹಂತಕ್ಕೂ ಎಂಟು ದಿನಗಳ ಕಾಲಾವಕಾಶ.
  • ಫೆಬ್ರವರಿ ಅಂತ್ಯದೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದಿದ್ದರೆ, ಪಂಚಾಯತ್ ವ್ಯವಸ್ಥೆಗೆ ಕೇಂದ್ರ ನೀಡುವ ಮೂರು ಸಾವಿರ ಕೋಟಿ ರೂ. ಅನುದಾನವನ್ನು ಸ್ಥಗಿತಗೊಳಿಸುವುದಾಗಿ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
  • ತಾಲ್ಲೂಕು ಪಂಚಾಯಿತಿ ಅಭ್ಯರ್ಥಿಗೆ 50 ಸಾವಿರ, ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗೆ ಒಂದು ಲಕ್ಷ ರು ವೆಚ್ಚ ನಿಗದಿ.
  • ರಾಜಕೀಯ ಪಕ್ಷಗಳ ಚಿಹ್ನೆಯಡಿ ಚುನಾವಣೆ ಜರುಗುವುದರಿಂದ ವಿದ್ಯುನ್ಮಾನ ಮತ ಯಂತ್ರಗಳ ಬಳಕೆ

Leave a Reply