ಸ್ಟಾರ್ಟ್ ಅಪ್ ಸಮ್ಮೋಹದಲ್ಲಿರುವ ಯುವ ಭಾರತಕ್ಕೆ ಫೋರ್ಬ್ಸ್ ಸಾಧಕರ ಪಟ್ಟಿಯಲ್ಲಿರೋ ರಿತೇಶ್ ಅಗರ್ವಾಲ್ ಹೇಳುವ ಪಾಠಗಳೇನು?

ಸೌಮ್ಯ ಸಂದೇಶ್

ಫೋರ್ಬ್ಸ್ ನಿಯತಕಾಲಿಕವು ಪ್ರತಿವರ್ಷ ವಿಶ್ವ ಶ್ರೀಮಂತರ ಪಟ್ಟಿ ಪ್ರಕಟಿಸುವುದು ಗೊತ್ತೇ ಇದೆ. ಅಲ್ಲಿ ಹೆಸರು ಗೊತ್ತಿರುವ ಅದದೇ ಶ್ರೀಮಂತರ ಹೆಸರುಗಳು ಸ್ಥಾನ ಬದಲಾವಣೆ ಹೊಂದಿರುತ್ತವೆ ಅಷ್ಟೆ.

ಆದರೆ, ಮೂವತ್ತು ವರ್ಷಗಳ ಒಳಗಿನ ಸಾಧಕರ ವಾರ್ಷಿಕ ಪಟ್ಟಿ ಯಾವತ್ತೂ ಆಸಕ್ತಿಕರ. ಇಲ್ಲಿ ಹೊಸಬರು ಸ್ಥಾನ ಪಡೆಯುತ್ತಿರುತ್ತಾರೆ, ಹೊಸ ಸ್ಫೂರ್ತಿ, ಆಲೋಚನೆಗಳು ಸಿಗುತ್ತವೆ.

ಫೋರ್ಬ್ಸ್ ನ ಈ ವರ್ಷದ ’30ರೊಳಗಿನ 30′ ಪಟ್ಟಿಯಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿರುವ ಭಾರತೀಯ ರಿತೇಶ್ ಅಗರ್ವಾಲ್. ಭಾರತದ ಆತಿಥ್ಯ ಉದ್ದಿಮೆಯಲ್ಲಿ ಸಂಚಲನ ತಂದ ರಿತೇಶ್ ವಯಸ್ಸು ಕೇವಲ 22. ಈ ವಯಸ್ಸಿನಲ್ಲಿ ಅವರ ಸಾಧನೆ ಎಂದರೆ ಓಯೊ ರೂಮ್ಸ್ ಎಂಬ ಬ್ರಾಂಡ್ ಕಟ್ಟಿ, ದೇಶದ ಸುಮಾರು 100 ನಗರಗಳಲ್ಲಿ 2200 ಸಣ್ಣ ಹೊಟೇಲ್ ಗಳ ಜಾಲವನ್ನು ಹೊಂದಿದ್ದಾರೆ.

ರಿತೇಶ್ ಅಗರ್ವಾಲ್ ಯಶಸ್ಸನ್ನು ಯುವ ಭಾರತ ಏಕೆ ಸಂಭ್ರಮಿಸಬೇಕು ಎಂಬ ಪ್ರಶ್ನೆ ಹಾಕಿಕೊಂಡಾಗ ಸಾಲು ಸಾಲು ಕಾರಣಗಳು ಸಿಗುತ್ತವೆ.

  • ಅಗರ್ವಾಲ್ ಎಂಬ ಹೆಸರೇ ಸೂಚಿಸುವಂತೆ, ಸಾಂಪ್ರದಾಯಿಕ ವ್ಯಾಪಾರಿ ಕುಟುಂಬದಲ್ಲಿ ರಿತೇಶ್ ಜನಿಸಿದ್ದೇನೋ ನಿಜ. ಆದರೆ ಬದುಕಲ್ಲಿ ಸಾಧಿಸಿರೋದೆಲ್ಲ ಸ್ವಂತದ್ದು. ಅಪ್ಪನ ವ್ಯಾಪಾರ ಮುಂದುವರಿಸಿಕೊಂಡು ಹೋದ ಕತೆ ಅಲ್ಲ ಇದು.
  • ರಿತೇಶ್ ಅಗರ್ವಾಲ್ ಒರಿಸ್ಸಾದ ಸಣ್ಣ ನಗರವೊಂದರಿಂದ ಬಂದು ಇವತ್ತು ದೇಶವ್ಯಾಪಿ ಓಯೊ ಹೋಟೆಲ್ ರೂಮುಗಳ ಮಾಲಿಕರಾಗಿದ್ದಾರೆ. ಹೀಗೊಂದು ಉದ್ಯಮವನ್ನು ಕಟ್ಟಿ ನಿಲ್ಲಿಸುವುದಕ್ಕೆ ಪಿತ್ರಾರ್ಜಿತ ಆಸ್ತಿಯನ್ನೇನೂ ಬಳಸಿಕೊಂಡಿಲ್ಲ. ಸಣ್ಣ ಪ್ರದೇಶಗಳಲ್ಲಿದ್ದುಕೊಂಡು ದೊಡ್ಡ ಕನಸು ಕಾಣುವವರಿಗೆ, ನಡುವೆಯೇ ಇದೆಲ್ಲ ನಂಗೆ ಸಾಧ್ಯವಾ ಅಂತ ಹೆದರುವವರಿಗೆ ರಿತೇಶ್ ಅಗರ್ವಾಲ್ ಸಾಧನೆಯತ್ತ ಮುನ್ನುಗ್ಗಲು ಸ್ಫೂರ್ತಿ ಆಗುತ್ತಾರೆ.
  • ರಿತೇಶರ ಉದ್ಯಮಶೀಲತೆಯ ಪ್ರವಾಸ 17ನೇ ವಯಸ್ಸಿನಲ್ಲೇ ಆರಂಭವಾಗುತ್ತದೆ. ಅವರು ಕಾಲೇಜನ್ನು ಅರ್ಧಕ್ಕೇ ಬಿಟ್ಟವರು. 2012ರಲ್ಲಿ ತಮ್ಮ ಮೊದಲ ನವೋದ್ದಿಮೆ ಒರಾವೆಲ್ ಸ್ಟೇಸ್ ಪ್ರೈವೇಟಿ ಲಿಮಿಟೆಡ್ ಆರಂಭಿಸುತ್ತಾರೆ. ಸ್ವತಃ ಸುತ್ತಾಟದಲ್ಲಿ ಆಸಕ್ತರಾಗಿರುವ ರಿತೇಶ್ ಪ್ರವಾಸದ ಸಮಯದಲ್ಲಿ ಮಿತಬೆಲೆಯ ಉತ್ತಮ ಸೌಕರ್ಯದ ಹೋಟೆಲ್ ಗಳ ಕೊರತೆ ಮನಗಂಡರು. ಅದಕ್ಕಾಗಿ ಆರಂಭಿಸಿದ್ದೇ ಓಯೊ ರೂಮ್ಸ್.

  • ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಓಯೊ ರೂಮ್ಸ್ ಇವೆ. ದಿನಕ್ಕೆ ಸಾವಿರ ರುಪಾಯಿಗಳಿಂದ 4 ಸಾವಿರ ರುಪಾಯಿಗಳವರೆಗಿನ ವಸತಿ ಸೌಲಭ್ಯ ಇಲ್ಲಿ ಲಭ್ಯ. ಮೊಬೈಲ್ ಆ್ಯಪ್ ಮೂಲಕವೇ ಕೊಠಡಿ ಕಾದಿರಿಸಬಹುದು. ವಾತಾನೂಕೂಲ, ಟಿವಿ, ವೈಫೈ, ಉಚಿತ ಉಪಾಹಾರ, ಅಹೋರಾತ್ರಿ ಗ್ರಾಹಕ ಸೇವೆ ಇವೆಲ್ಲ ಓಯೊದ ವಿಶೇಷಗಳು.
  • 2013ರಲ್ಲಿ ರಿತೇಶ್ ರಿಗೆ ಒಂದು ಲಕ್ಷ ಡಾಲರ್ ಗಳ ಫೆಲೊಶಿಪ್ ಸಿಕ್ಕಿದ್ದು ತಮ್ಮ ಸ್ಟಾರ್ಟ್ ಅಪ್ ಐಡಿಯಾವನ್ನು ಬೆಳೆಸುವುದಕ್ಕೆ ಅನುಕೂಲವಾಯಿತು. ಈಗಂತೂ ಓಯೊ ರೂಮ್ಸ್ ಕೋಟ್ಯಂತರ ರುಪಾಯಿಗಳ ಮೌಲ್ಯದ ಸಂಸ್ಥೆ. ಸಾಫ್ಟ್ ಬ್ಯಾಂಕ್ ಗ್ರೂಪ್ಸ್, ಗ್ರೀನ್ ಓಕ್ಸ್ ಕ್ಯಾಪಿಟಲ್ ಸೇರಿದಂತೆ ಹಲವು ದಿಗ್ಗಜ ಹೂಡಿಕೆದಾರರು ಇಲ್ಲಿ ಹಣ ಹೂಡಿದ್ದಾರೆ.
  • ಆಗಿನ್ನೂ ಇಂಟರ್ನೆಟ್ ಎಂದರೆ ಅಪರೂಪದ ಸಂಗತಿ ಆಗಿದ್ದ ಕಾಲದಲ್ಲೂ ತಾವು ಆ ಬಗ್ಗೆ ಉತ್ಸುಕರಾಗಿದ್ದದ್ದಾಗಿ ರಿತೇಶ್ ಹೇಳುತ್ತಾರೆ. ಎಂಟನೇ ವರ್ಷದಲ್ಲೇ ನೀನೇನಾಗುವೆ ಅಂತ ಕೇಳಿದರೆ ಉದ್ಯಮಿ ಅಂತ ಇಂಗ್ಲಿಷ್ ನಲ್ಲಿ ಹೇಳ್ತಿದ್ರಂತೆ ರಿತೇಶ್!
  • ಚಿಕ್ಕಂದಿನಲ್ಲೇ ಪಾಕೆಟ್ ಮನಿಯನ್ನೆಲ್ಲ ಪ್ರವಾಸಕ್ಕೆ ವಿನಿಯೋಗಿಸುತ್ತಿದ್ದ ರಿತೇಶ್, ಹೋಟೆಲ್ -ರೆಸಾರ್ಟ್ ಗಳಿಗೆ ಹೋಗಿ ‘ನೀವು ನಂಗೆ ಪುಕ್ಕಟೆ ಉಳಿದುಕೊಳ್ಳೋಕೆ ಕೊಡ್ತೀರಾ? ಮುಂದೊಂದು ದಿನ ಈ ವಲಯದ ಸಮಸ್ಯೆಗಳನ್ನು ನಾನು ಬಗೆಹರಿಸ್ತೇನೆ’ ಅಂತಿದ್ರಂತೆ. ಕೆಲವರು ಸರಿ ಎಂದರು, ಹೆಚ್ಚಿನವರು ಬಯ್ದರು. ಬಿಡುವಿನ ವೇಳೆ ಎಲ್ಲೆಲ್ಲ ಹಣ ಮಾಡಲಿಕ್ಕಾಗುವುದೋ ಅಲ್ಲೆಲ್ಲ ಪಾರ್ಟ್ ಟೈಮ್ ಕೆಲಸ ಕೇಳ್ತಿದ್ರು.
  • ನಾನು ಎರಡೇ ರೂಮು ಕಟ್ಟುವುದರಲ್ಲಿ ಯಶಸ್ವಿಯಾದ್ರೂ ಪರ್ವಾಗಿಲ್ಲ, ಆದ್ರೆ ಅಲ್ಲಿ ಬಂದವರಿಗೆ ಅನನ್ಯ ಅನುಭವ ಆಗಬೇಕು- ಇದು ಓಯೊ ಕಟ್ಟುವ ಪ್ರಾರಂಭದ ದಿನಗಳಲ್ಲಿ ರಿತೇಶ್ ನೆಚ್ಚಿಕೊಂಡಿದ್ದ ಸ್ಫೂರ್ತಿ. ತಮ್ಮದೇ ಸೌಖ್ಯ ವಲಯದಲ್ಲಿ ಆರಾಮಾಗಿದ್ದ ರಿಯಲ್ ಎಸ್ಟೇಟ್ ಇಂಡಸ್ಟ್ರಿ, ‘ಇವನ್ಯಾವ ಹೊಸಬ, ನಮ್ಮ ನಡುವೆ ಬರ್ತಿದಾನೆ’ ಅಂತ ಅಡ್ಡಗಾಲಿಕ್ಕುವ ಎಲ್ಲ ಪ್ರಯತ್ನ ಮಾಡಿತು. ಆದ್ರೆ ರಿತೇಶ್ ಹೇಳೋದಿಷ್ಟು- ನೀವು ಈ ವಿಶ್ವದಲ್ಲಿ ನಿಮ್ಮದೇ ಛಾಪು ಮೂಡಿಸಲು ಹೊರಟಾಗ ಹಲವರು ಅದನ್ನು ಸಹಿಸದೇ ಇರೋದು ಸಹಜ. ಆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಭಾರತದಲ್ಲಿ ಪ್ರಸಿದ್ಧವಾಗಿರುವ ಓಯೊ ರೂಮ್ಸ್ ಜಾಗತಿಕ ಮಟ್ಟದಲ್ಲಿ ಎದ್ದು ನಿಲ್ಲಬೇಕೆಂಬ ನಿಟ್ಟಿನಲ್ಲಿ ನಮ್ಮ ಪ್ರಯತ್ನವಿದೆ ಅಂತಾರೆ!

ಭಾರತದಲ್ಲಿ ಬೀಸುತ್ತಿರುವ ನವೋದ್ದಿಮೆ (ಸ್ಟಾರ್ಟ್ ಅಪ್) ಅಲೆಯಲ್ಲಿ ಜೀಕಬೇಕೆಂದುಕೊಂಡಿರುವ ಸಾವಿರಾರು ಯುವಕರಿಗೆ ರಿತೇಶ್ ಅಗರ್ವಾಲ್ ಸ್ಫೂರ್ತಿ.

Leave a Reply