ಗೋವಿಂದೇಗೌಡರ ಬದುಕಿಂದ ಕಲಿಯಬಹುದಾದ 3 ಪಾಠಗಳು

ಡಿಜಿಟಲ್ ಕನ್ನಡ ವಿಶೇಷ

ಬುಧವಾರ ನಾಡನ್ನು ಅಗಲಿದ ‘ಮಲೆನಾಡ ಗಾಂಧಿ’  ಎಚ್. ಜಿ. ಗೋವಿಂದೇಗೌಡ (90) ಅವರ ಬದುಕಿನಿಂದ ನಾವು ಹೀರಿಕೊಳ್ಳಬಹುದಾದ ಅಂಶಗಳು ಯಾವವು ಅಂತ ಯೋಚಿಸುವುದು ಅವರಿಗೆ ಸಲ್ಲಿಸಬಹುದಾದ ಶ್ರದ್ಧಾಂಜಲಿ.

ವ್ಯವಸ್ಥೆಯೇ ಇಷ್ಟು ಎಂಬ ಸೋಗು ಬೇಕಿಲ್ಲ: ರಾಜಕಾರಣ ಅಂದ್ರೆ ಇಷ್ಟೇ, ಅಧಿಕಾರಕ್ಕೆ ಹೋದಾಗ ಅಲ್ಲಿರುವ ಎಲ್ಲರಂತೆ ಆಗಬೇಕಾಗುತ್ತೆ ಅನ್ನೋದು ಹೊರಗೆ ನಿಂತು ಟೀಕೆ ಮಾಡಿಕೊಂಡಿರುವ ನಮ್ಮೆಲ್ಲರ ಕೂಗು. ಅಂಥ ವ್ಯವಸ್ಥೆಯಲ್ಲಿದ್ದುಕೊಂಡೂ ಅದರದ್ದೇ ಪರಿಮಿತಿಯಲ್ಲಿ ಸುಧಾರಣೆ ಸಾಧ್ಯ ಎಂಬ ಭರವಸೆಯನ್ನು ಗೋವಿಂದೇಗೌಡರು ಮೂಡಿಸಿ ಹೋಗಿದ್ದಾರೆ ಎಂಬುದಕ್ಕೆ ಅವರು ಮುಖ್ಯರಾಗುತ್ತಾರೆ. ಶಿಕ್ಷಣ ಸಚಿವರಾಗಿ ಟಿಸಿಎಚ್- ಬಿಎಡ್ ನಂಥ ಕೋರ್ಸುಗಳಿಗೆ ಮೆರಗು ತಂದವರು ಎಂದು ಅವರನ್ನು ನೆನಪಿಸಿಕೊಳ್ಳುವಂತಿದೆ ಎಂಬುದೇ ಮಹತ್ವದ ಅಂಶ. ಸಾಮಾನ್ಯ ವರ್ಗದ ಬಹಳಷ್ಟು ಜನರ ಬದುಕನ್ನು ಆ ಕಾಲಘಟ್ಟದಲ್ಲಿ ಪ್ರಭಾವಿಸಿದ ಸುಧಾರಣೆಗಳು ಅವಾಗಿದ್ದವು.

ಬದುಕಿಗೆ ಬೇಕು ನಿಲುವು: ಇಂದಿರಾ ಗಾಂಧಿಯವರು ಆ ಕಾಲಕ್ಕೆ ಮಹೋನ್ನತ ನಾಯಕರೇ ಆಗಿದ್ದಿರಬಹುದು. ಆದರೆ, ಅವರ ಧೋರಣೆಗಳು ಹಿಡಿಸದಿದ್ದಾಗ ಆ ಬಗ್ಗೆ ಪ್ರತಿರೋಧ ವ್ಯಕ್ತಪಡಿಸುವುದಕ್ಕೆ, ಕಾಂಗ್ರೆಸ್ ನಿಂದ ಹೊರಬರುವುದಕ್ಕೆ ಗೋವಿಂದೇಗೌಡರಿಗೆ ಕಷ್ಟವಾಗಲಿಲ್ಲ.

ಎದ್ದು ನಿಂತು, ನಿಲುವು ವ್ಯಕ್ತಪಡಿಸಿ. ಅದರಿಂದ ಹಣಕಾಸು ಲಾಭಗಳಾಗದೇ ಇರಬಹುದು. ದೊಡ್ಡ ಪಕ್ಷವೊಂದರಿಂದ ಹೊರಬಂದು ವೃತ್ತಿ ಕಳೆಗುಂದಬಹುದು, ಸೋಲೂ ಎದುರಾಗಬಹುದು. ಆದರೆ ದೀರ್ಘಾವಧಿಯಲ್ಲಿ ನಿಮ್ಮ ವ್ಯಕ್ತಿತ್ವ ಮತ್ತು ನಿಲುವನ್ನು ಇತಿಹಾಸ ನೆನಪಿಡುತ್ತದೆ.

ಸಾಕೆಂಬುದು ಗೊತ್ತಿರಬೇಕು, ಬೇರು ಕಳಚಿರಬಾರದು: ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅಂತ ಗೋವಿಂದೇಗೌಡರು ಹೇಳಿದ್ದು ಅಧಿಕಾರದಲ್ಲಿದ್ದಾಗಲೇ. ಅದರಂತೆ ನಂತರ ರಾಜಕೀಯದ ಯಾವ ಸ್ಪರ್ಶಗಳನ್ನಿಟ್ಟುಕೊಳ್ಳದೇ ಬೇರಿಗೆ ಅರ್ಥಾತ್ ತಮ್ಮ ತೋಟಕ್ಕೆ ಮರಳಿದರು.

ಗೋವಿಂದೇಗೌಡರಿಗೆ ಶ್ರದ್ಧಾಂಜಲಿ ಹೇಳುತ್ತ, ರಾಜಕೀಯದಲ್ಲಿ ಪ್ರಾಮಾಣಿಕತೆ ಮರುಸ್ಥಾಪನೆ ಆಗಲಿ ಅಂತಷ್ಟೇ ಬಯಸೋದೇಕೆ? ಯಾರು ಯಾವುದೇ ಕ್ಷೇತ್ರದಲ್ಲಿದ್ದರೂ ಮೇಲಿನ ಮೂರು ಅಂಶಗಳನ್ನು ಅಳವಡಿಸಿಕೊಂಡರೇ ಅದು ಗೌಡರಿಗೆ ಸಲ್ಲಿಸಬಹುದಾದ ದೊಡ್ಡ ನಮನ, ಅಲ್ವೇ?

Leave a Reply