ದಿನಕ್ಕೆ ಸಾಕೊಂದೇ ಸುದ್ದಿಮಾತ್ರೆ: ಆಮೀರ್ ಜಾಗಕ್ಕೆ ಅಮಿತಾಭ್?, ಷೇರು ಕಂಪನ, ಪಾಕ್ ಜತೆ ಮಾತುಕತೆ ಡೋಲಾಯಮಾನ….

ಅನನ್ಯ ಭಾರತಕ್ಕೆ ಆಮೀರ್ ಬದಲು ಅಮಿತಾಭ್?

ಇನ್ ಕ್ರೆಡಿಬಲ್ ಇಂಡಿಯಾ ಅಭಿಯಾನಕ್ಕೆ ಆಮೀರ್ ರಾಯಭಾರಿಯಾಗಿ ಮುಂದುವರಿಯೋಲ್ಲ ಎಂಬುದು ಪಕ್ಕಾ ಆಗಿರುವುದಷ್ಟೇ ಅಲ್ಲ, ಆ ಸ್ಥಾನವನ್ನು ಮತ್ತೊಬ್ಬ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತುಂಬಲಿದ್ದಾರೆ ಎಂಬ ಮಾತೂ ದಟ್ಟವಾಗಿದೆ.

ಆಮೀರ್ ಸ್ಥಾನ ಬದಲಾವಣೆಯನ್ನು ಕೇಂದ್ರ ಸರ್ಕಾರ ನಾಜೂಕಾಗಿಯೇ ನಿಭಾಯಿಸಿದೆ. ಏಕೆಂದರೆ ಆಮೀರ್ ಅವರನ್ನು ರಾಯಭಾರಿ ಸ್ಥಾನದಿಂದ ತೆರವುಗೊಳಿಸುತ್ತಿರುವವರು ನಾವಲ್ಲ, ಬದಲಿಗೆ ಪ್ರವಾಸೋದ್ಯಮ ಸಚಿವಾಲಯವು ಒಪ್ಪಂದ ಮಾಡಿಕೊಂಡಿದ್ದ ಜಾಹೀರಾತು ಏಜೆನ್ಸಿಯು ಆಮೀರ್ ರನ್ನು ರಾಯಭಾರಿ ಮಾಡಿತ್ತಷ್ಟೆ. ಈಗ ಗುತ್ತಿಗೆ ಅವಧಿ ಮುಗಿದಿರುವುದರಿಂದ ಅವರನ್ನು ಮುಂದುವರಿಸುತ್ತಿಲ್ಲ ಎಂಬ ನಿಲುವು ಕೇಂದ್ರದ್ದು.

2.96 ಕೋಟಿ ರು ಮೌಲ್ಯದ ಗುತ್ತಿಗೆ ಪಡೆದು ಮೆಕ್ಕಾನ್ ಎಂಬ ಜಾಹಿರಾತು ಸಂಸ್ಥೆ “ಅತಿಥಿ ದೇವೊಭವ” ದ ಪ್ರಚಾರ ಅಭಿಯಾನ ರೂಪಿಸಿತ್ತು.

ಆಮೀರ್ ಖಾನ್ ಸಹ ಇದಕ್ಕೆ ತಣ್ಣನೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ‘ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡರೂ ಸ್ವಾಗತಿಸುತ್ತೇನೆ. ಈ ಪ್ರಚಾರ ಅಭಿಯಾನಕ್ಕೆ ಯಾವುದೇ ಸಂಭಾವನೆ ಪಡೆದಿರಲಿಲ್ಲ. ಇದರ ರಾಯಭಾರಿ ನಾನಾದರೂ, ಇನ್ಯಾರೇ ಆದರೂ ಭಾರತ ಅನನ್ಯ(ಇನ್ ಕ್ರೆಡಿಬಲ್)ವಾಗಿಯೇ ಇರಲಿದೆ. ಹಾಗೆಯೇ ಇರಬೇಕು’ ಎಂದಿದ್ದಾರೆ.

ಸಹಜವಾಗಿಯೇ ಇದರಲ್ಲಿ ವಿವಾದ ಹೆಕ್ಕಿರುವ ಪ್ರತಿಪಕ್ಷಗಳು, ಇದು ಆಮೀರ್ ಅಸಹಿಷ್ಣುತೆ ಮಾತಿಗೆ ಕೇಂದ್ರ ಸರ್ಕಾರದ ಪ್ರತಿಕಾರದ ನಡೆ ಎಂದಿವೆ.

ಮೊದಲು ಕ್ರಮ, ನಂತರವಷ್ಟೇ ಪಾಕ್ ಜತೆ ಮಾತು

ಪಠಾನ್ ಕೋಟ್ ಮೇಲಿನ ಉಗ್ರರ ದಾಳಿಗೆ ಪಾಕಿಸ್ತಾನ ಸರ್ಕಾರ ತೆಗೆದುಕೊಳ್ಳುವ ಕ್ರಮದ ಮೇಲೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯ ಬಗ್ಗೆ ತೀರ್ಮಾನಿಸಲಾಗುವುದು. ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಮಾತು. ಜನವರಿ 15 ರಂದು ಪಾಕಿಸ್ತಾನದಲ್ಲಿ ಉಭಯ ದೇಶಗಳ ಕಾರ್ಯದರ್ಶಿ ಹಂತದ ಮಾತುಕತೆ ನಿಗದಿಯಾಗಿತ್ತು. ಆದರೆ ಉಗ್ರದಾಳಿ ಹಿನ್ನೆಲೆಯಲ್ಲಿ ಭಾರತವು ತನ್ನ ನಿಲುವು ಬದಲಾಯಿಸಿರುವುದು ಇದರಿಂದ ತಿಳಿದುಬಂದಿದೆ. ಮಾತುಕತೆ ಇಲ್ಲವೇ ಇಲ್ಲ ಎಂದೇನೂ ಹೇಳದ ಅಧಿಕಾರಿ ವಿಕಾಸ್ ಸ್ವರೂಪ್, ಪತ್ರಿಕಾಗೋಷ್ಟಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತ ಹೇಳಿದ್ದಿಷ್ಟು- ‘ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿ ಪಾಕ್ ಕೊಂಡಿಗಳ ಬಗ್ಗೆ ಆ ದೇಶಕ್ಕೆ ಸಾಕ್ಷ್ಯ ನೀಡಿದ್ದೇವೆ. ಆ ಬಗ್ಗೆ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳಬೇಕು. ಅದು ಖಾತ್ರಿಯಾದಾಗ ಮಾತ್ರವೇ ಮಾತುಕತೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್ ಪ್ರಧಾನಿ ನವಾಜ್ ಷರೀಫ್ ರವರ ಬಳಿ ಚರ್ಚಿಸಿದ್ದು ಷರೀಫ್ ರವರು ಸಹ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಇನ್ನು 8 ದಿನಗಳ ಒಳಗೆ ಅವರು ತೆಗೆದುಕೊಂಡಿರುವ ಕ್ರಮ ಮತ್ತು ನಿರ್ಧಾರಗಳ ಬಗ್ಗೆ ತಿಳಿಸಬೇಕು. ನಾವು ಇದಕ್ಕಾಗಿ ಕಾಯುತ್ತಿದ್ದೇವೆ ‘ ಎಂದಿದ್ದಾರೆ.

 

ಫೆ. 26ಕ್ಕೆ ವಿಧಾನಮಂಡಲದ ಜಂಟಿ ಅಧಿವೇಶನ

ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜೂಭಾಯಿ ವಾಲಾ ಫೆಬ್ರವರಿ 26 ರಂದು ಭಾಷಣ ಮಾಡಲಿದ್ದಾರೆ.

ಇದಕ್ಕೂ ಮೊದಲೇ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯುವ ಸಾಧ್ಯತೆಗಳಿದ್ದು ಅಧಿವೇಶನ ರಾಜಕೀಯ ರಂಗು ಪಡೆಯಲಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಅಧಿವೇಶನ ನಡೆಯಲಿದ್ದು, ಅಲ್ಪಾವಧಿ ಅಂತರದ ನಂತರ ಬಜೆಟ್ ಅಧಿವೇಶನ ಕೂಡ ನಡೆಯಲಿದೆ.

ರಾಜ್ಯವನ್ನು ಕಾಡುತ್ತಿರುವ ಬರಗಾಲ, ವಿದ್ಯುತ್ ಕ್ಷಾಮ, ಕೇಂದ್ರ ಸರಕಾರದ ಬರಪರಿಹಾರ ನಿಧಿ ಅಸಮರ್ಪಕ ಬಳಕೆ, ಸರ್ಕಾರಿ ಹಾಗೂ ಕೆರೆ ಭೂಮಿ ಒತ್ತುವರಿ ತೆರವಿನಲ್ಲಿ ಅಸಡ್ಡೆ, ಹಾಲು ಬೆಲೆ ಏರಿಕೆ, ಕಬ್ಬು ಬಾಕಿ ಪ್ರತಿಪಕ್ಷಗಳು ಪ್ರಸ್ತಾಪಿಸಲಿರುವ ಪ್ರಮುಖ ವಿಚಾರಗಳು.

ಜಿಎಸ್ಟಿ ಅನುಮೋದನೆಗಾಗಿ ಸೋನಿಯಾ ನಿವಾಸಕ್ಕೆ ವೆಂಕಯ್ಯ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಸರಕು ಮತ್ತು ಸೇವಾ ಹಾಗೂ ರೀಯಲ್ ಎಸ್ಟೇಟ್ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಅಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ನವರ ಮನೆಬಾಗಿಲಿಗೆ ಪದೇ ಪದೇ ತೆರಳಿದರೂ ಪ್ರಯೋಜನ ಆಗುತ್ತಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಗುರುವಾರ ಮತ್ತೆ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಧಿಕೃತ ನಿವಾಸ 10 ಜನಪತ್ ಗೆ ಭೇಟಿ ನೀಡಿ ‘ಜಿ.ಎಸ್.ಟಿ ವಿಚಾರದಲ್ಲಿ ನೀವು ಬಯಸಿದ್ದ 3 ಬದಲಾವಣೆಗಳಿಗೆ ಒಪ್ಪಿಗೆ ಇದೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಜಾರಿಗೆ ಸಹಕರಿಸಿ’ ಎಂದು ಮನವಿ ಮಾಡಿದ್ದಾರೆ.

ಭಾರತದ ಷೇರು ಮಾರುಕಟ್ಟೆಯನ್ನೂ ತಲ್ಲಣಿಸಿದ ಚೀನಾ ಕಂಪನ

ಚೀನಾದ ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಷೇರುಗಳನ್ನು ಮಾರಾಟ ಮಾಡಲು ಜಿದ್ದಿಗಿಳಿದಿದ್ದರಿಂದ ಬಾಂಬೆ ಷೇರು ಪೇಟೆಯ ವಹಿವಾಟಿನಲ್ಲಿ 500 ಕ್ಕೂ ಹೆಚ್ಚು ಅಂಕಗಳು ಕುಸಿತ ಕಂಡು 25000 ಅಂಕಗಳಿಗಿಂತ ಕೆಳಗಿಳಿದರೆ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಪ್ಟಿ ವಹಿವಾಟಿನಲ್ಲಿ 150 ಕ್ಕೂ ಹೆಚ್ಚು ಅಂಕಗಳು ಕುಸಿತ ಕಂಡು 7600 ಅಂಕಗಳಿಗೂ ಕಡಿಮೆ ದಿನದಂತ್ಯಕಂಡಿದೆ. ಗುರುವಾರದ ಬಿ.ಎಸ್.ಇ ವಹಿವಾಟು 554.50 ಅಂಕಗಳು ಕುಸಿತ ಕಂಡು 24851 ಅಂಕಗಳಿಗೆ ಅಂತ್ಯಗೊಂಡರೆ ನಿಪ್ಟಿ ವಹಿವಾಟು 172.70 ಕುಸಿದು 7568.30 ಅಂಕಗಳಿಗೆ ದಿನದಂತ್ಯ ಕಂಡಿದೆ. ಇದು 19 ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ.

ನಿರಂಜನ್ ಕುಟುಂಬಕ್ಕೆ ಪರಿಹಾರ- ಗೌರವ

ಹುತಾತ್ಮ ನಿರಂಜನ್ ಕುಟುಂಬಕ್ಕೆ ಗೌರವಾರ್ಥವಾಗಿ ಕರ್ನಾಟಕ ಸರ್ಕಾರ 30 ಲಕ್ಷ ರು ಪರಿಹಾರ ಘೋಷಿಸಿದ ಬೆನ್ನಲ್ಲೇ ಕೇರಳ ಸರ್ಕಾರ ಕೂಡ ಗುರುವಾರ 50 ಲಕ್ಷ ರು ಪರಿಹಾರ ಘೋಷಿಸಿದೆ. ಜೊತೆಗೆ ಪತ್ನಿ ಡಾ. ರಾಧಿಕ ಅವರು ಒಪ್ಪಿಗೆ ಸೂಚಿಸಿದರೆ ಸರ್ಕಾರಿ ಕೆಲಸ ಕೊಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಭರವಸೆ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಎಲ್ಲಾ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಐಐಟಿ ಕಾಲೇಜು ಮತ್ತು ಕ್ರೀಡಾಂಗಣಕ್ಕೆ ನಿರಂಜನ್ ಹೆಸರನ್ನಿಡಲು ತಿರ್ಮಾನಿಸಲಾಗಿದೆ.

Leave a Reply