ಮುಫ್ತಿ ಬಗ್ಗೆ ಮುನಿಯಲು ಏನೇ ಕಾರಣಗಳಿರಬಹುದು, ಆದರೆ ಸಾವಿನ ಸಂದರ್ಭದಲ್ಲಿ ಕಾಣಬೇಕಾದ ಮೃದುಮುಖ ಯಾವುದು?

ಚೈತನ್ಯ ಹೆಗಡೆ

ಗುರುವಾರ ಬೆಳಗ್ಗೆ ನಿಧನರಾದ ಜಮ್ಮು- ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಅವರ ಆತ್ಮಕ್ಕೆ ಶಾಂತಿ ಕೋರಬೇಕಾದ, ಅವರ ಕುಟುಂಬಕ್ಕೆ ಸಾಂತ್ವನ ಹೇಳಬೇಕಾದ ಸಂದರ್ಭ ಇದು.

ಬಿಜೆಪಿ ಜತೆ ಅಧಿಕಾರ ಹಂಚಿಕೊಂಡು ಮುಖ್ಯಮಂತ್ರಿಯಾಗಿದ್ದ ಪಿಡಿಪಿಯ ನೇತಾರನ ಬದುಕನ್ನು ಹೇಗೆ ಗ್ರಹಿಸಬೇಕು ಎಂಬ ಗೊಂದಲ ಕಾಡುವುದು ಸಹಜವೇ.

ಯಾಕಂದ್ರೆ…

2008ರಲ್ಲಿ ಅಮರನಾಥ ಯಾತ್ರಿಗಳಿಗೆ ಯಾತ್ರೆಯ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಟೆಂಟ್ ಕಟ್ಟಿಕೊಳ್ಳುವುದಕ್ಕೆ ಅರಣ್ಯಭೂಮಿ ನೀಡಿದ್ದನ್ನು ವಿರೋಧಿಸಿದವರು ಇದೇ ಮುಫ್ತಿ. ಬಿಜೆಪಿ-ಪಿಡಿಪಿ ಮೈತ್ರಿ ಅಧಿಕಾರಕ್ಕೆ ನಾಂದಿ ಹಾಡಿದ ಚುನಾವಣೆಗೆ ಪೂರ್ವದಲ್ಲಿ, ಕಣಿವೆಯನ್ನು ಹಿಂದುಶಕ್ತಿಗಳು ಆವರಿಸದಂತೆ ಮತದಾರರೆಲ್ಲ ಒಟ್ಟಾಗಿ ಅಂತ ಕರೆ ಕೊಟ್ಟಿದ್ದವರೂ ಇದೇ ಮುಫ್ತಿ.

1999ರಲ್ಲಿ ಪಿಡಿಪಿ ಸ್ಥಾಪಿಸುವುದಕ್ಕಿಂತ ಮೊದಲು ಕಾಂಗ್ರೆಸ್ಸಿಗರಾಗಿದ್ದವರು ಮುಫ್ತಿ. ಆಗಿನಿಂದಲೂ ಅವರು ಮತ್ತವರ ಸಹವರ್ತಿಗಳು ಪ್ರತ್ಯೇಕತಾವಾದಿಗಳ ತಾಳಕ್ಕೆ ಕುಣಿಯುತ್ತ ಬಂದರು ಎಂಬ ಆರೋಪವೂ ದಟ್ಟವಾಗಿಯೇ ಇದೆ. ಈ ನಿಟ್ಟಿನಲ್ಲಿ ಎಲ್ಲರೂ ಉದಾಹರಿಸುವುದು ಅವರು 1989ರಲ್ಲಿ ಕೇಂದ್ರ ಗೃಹ ಸಚಿವರಾಗಿದ್ದಾಗ ನಡೆದ ಘಟನೆಯನ್ನು. ಆ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ನ ಉಗ್ರರು ಇವರ ಕಿರಿ ಮಗಳು ರುಬಿಯಾರನ್ನು ಅಪಹರಿಸಿ, ಐವರು ಉಗ್ರರ ಬಿಡುಗಡೆಗೆ ಷರತ್ತು ವಿಧಿಸಿದರು. ಮಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಅವರು ಉಗ್ರರ ಬಿಡುಗಡೆ ಮಾರ್ಗವನ್ನೇ ಅನುಸರಿಸಿದರು. ಇಲ್ಲಿಂದಲೇ ಪ್ರತ್ಯೇಕತಾವಾದಿಗಳಿಗೆ ತಾವು ದೆಹಲಿಯಲ್ಲಿರುವ ಸರ್ಕಾರವನ್ನು ಹೇಗೆ ಬೇಕಾದರೂ ಆಡಿಸಬಹುದೆಂಬ ಧಿಮಾಕು ಹುಟ್ಟಿಕೊಂಡಿತು ಎಂಬ ಟೀಕೆ ಇದೆ.

ಆದರೆ… ಅವತ್ತಿಗೆ ಮುಫ್ತಿ ವಿರುದ್ಧ ರೋಷ ಎಷ್ಟೇ ಉಕ್ಕಿರಬಹುದು. ಇಂದು ವಾಸ್ತವಿಕ ನೆಲೆಗಟ್ಟಿನಲ್ಲಿ ಯೋಚಿಸೋಣ. ಅದ್ಯಾವ ‘ದೇಶಭಕ್ತ’ ಪಕ್ಷದ ಸದಸ್ಯನೇ ಆದರೂ… ನನ್ನ ಮಗಳನ್ನು ಬೇಕಾದರೆ ಕೊಲ್ಲಿ, ಉಗ್ರರನ್ನು ಬಿಡೋಲ್ಲ ಅಂತೆಲ್ಲ ಹೇಳುವ ಸಾಧ್ಯತೆ ವಿರಳವೇ.

ಇರಲಿ… ಜಮ್ಮು- ಕಾಶ್ಮೀರದಲ್ಲಿ ಅಧಿಕಾರ ನಡೆಸುವುದಕ್ಕೆ ಯಾವೆಲ್ಲ ತುಷ್ಟೀಕರಣ ನೀತಿಗಳನ್ನು ಅನುಸರಿಸಬೇಕೋ ಅವ್ಯಾವುದರಲ್ಲೂ ಮುಫ್ತಿ ಹಿಂದೆ ಬಿದ್ದಿಲ್ಲ. ಅಷ್ಟರ ಹೊರತಾಗಿಯೂ ರಾಜಕಾರಣಕ್ಕೆ ಮುಫ್ತಿ ಮೊಹಮದ್ ಸಯೀದ್ ರ ದೊಡ್ಡ ಕೊಡುಗೆ ಏನು ಗೊತ್ತಾ? ಜಮ್ಮು-ಕಾಶ್ಮೀರವೆಂದರೆ ತನ್ನ ಕುಟುಂಬದ ಸ್ವತ್ತು ಎಂದುಕೊಂಡಿದ್ದ ಫರೂಕಿಗಳ ‘ನ್ಯಾಷನಲ್ ಕಾನ್ಫರೆನ್ಸ್’ಗೆ ಬಹುದೊಡ್ಡ ಪರ್ಯಾಯವೊಂದನ್ನು ಸೃಷ್ಟಿಸಿದ್ದು. ಇಲ್ಲದಿದ್ದರೆ ಜಮ್ಮು-ಕಾಶ್ಮೀರ ರಾಜಕಾರಣವೆಂದರೆ ನ್ಯಾಷನಲ್ ಕಾನ್ಫರೆನ್ಸ್- ಕಾಂಗ್ರೆಸ್ ಗಳ ಜಂಟಿ ಯೋಚನೆಗಳಿಂದ ಮಾತ್ರ ನಡೆಯುವಂಥದ್ದು ಎಂಬ ಸ್ಥಿತಿ ಮುಂದುವರಿದುಬಿಡುತ್ತಿತ್ತು.

ಉಳಿದಂತೆ ಆರ್ಟಿಕಲ್ 370, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಈ ಎಲ್ಲ ವಿಷಯಗಳಲ್ಲಿ ಎನ್ ಸಿ, ಪಿಡಿಪಿಗಳ ನಿಲುವುಗಳಲ್ಲಿ ತೀರ ವ್ಯತ್ಯಾಸಗಳೇನಿಲ್ಲ. ಆದರೆ ಈ ವಿವಾದಿತ ವಿಷಯಗಳೆಲ್ಲ ಸದ್ಯಕ್ಕೆ ಪಕ್ಕಕ್ಕಿರಲಿ ಎಂದು ಸಾಮಾನ್ಯ ಕಾರ್ಯಕ್ರಮದ ಚೌಕಟ್ಟಲ್ಲಿ ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ್ದನ್ನು ಸಿನಿಕತೆಯಿಂದ ನೋಡಬೇಕಿಲ್ಲ. ಪ್ರಜಾಪ್ರಭುತ್ವದಲ್ಲಿ ಹೀಗಲ್ಲದೇ ಮುಂದುವರಿಯುವ ಇನ್ಯಾವ ಮಾರ್ಗಗಳಿವೆ?

ಹಾಗೆ ನೋಡಿದರೆ ಕಣಿವೆ ರಾಜಕಾರಣದಲ್ಲಿ ಎನ್ ಸಿ- ಕಾಂಗ್ರೆಸ್ ಗಳದ್ದೇ ಪಾರುಪತ್ಯವಾಗಿದ್ದಾಗ ಅಲ್ಲಿನ ಜನ ತಾವು ಈ ಚುನಾವಣೆಯೆಂಬ ಕಾಯ್ದೆಗೆ ಒಳಪಡುವುದೇ ಇಲ್ಲ ಅಂತ ದೂರ ಉಳಿದಿದ್ದೇ ಹೆಚ್ಚು. ಜಮ್ಮ-ಕಾಶ್ಮೀರದ ಪ್ರತ್ಯೇಕತೆ ಬಗ್ಗೆ ಪಿಡಿಪಿ ಆಂತರ್ಯದಲ್ಲಿ ಆಸೆಗಳಿದ್ದಿರಬಹುದಾದರೂ ಕೊನೆಪಕ್ಷ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತ, ನ್ಯಾಷನಲ್ ಕಾನ್ಫರೆನ್ಸ್ ಗೆ ಪರ್ಯಾಯವಾಗುವ ಮೂಲಕ ಚುನಾವಣೆಗಳಿಗೆ ಮೆರುಗು ಹೆಚ್ಚಿಸಿ, ಮತದಾನದಲ್ಲಿ ಭಾಗವಹಿಸುವವರ ಶೇಕಡವಾರು ಪ್ರಮಾಣ ಏರಿಸಿದ್ದರಲ್ಲಿ ಮುಫ್ತಿ ನೇತೃತ್ವದ ಪಿಡಿಪಿ ಕೊಡುಗೆ ಇದ್ದೇ ಇದೆ.

ಇವೆಲ್ಲವನ್ನೂ ಅವರ ಲಾಭಕ್ಕಾಗಿ ಮಾಡಿದರಷ್ಟೇ ಎಂದು ಎಲ್ಲವನ್ನೂ ಪಕ್ಕಕ್ಕೆ ಸರಿಸಿಬಿಡಬಹುದು. ಆದರೆ ಇವತ್ತಿನ ಯಾವ ರಾಜಕೀಯ ಪಕ್ಷ ತಾನೇ ಹೀಗೆ ತಮ್ಮ ಲಾಭಕ್ಕಾಗಿ ಮುಂದಡಿ ಇಡುವ ವಿಭಾಗಕ್ಕೆ ಸೇರದೇ ಉಳಿಯುತ್ತೆ ಹೇಳಿ?

ಪಿಡಿಪಿ ಸೇರಿದಂತೆ, ಕಣಿವೆ ರಾಜಕಾರಣದಲ್ಲಿ ವಿಭಜಕ ಆಟಗಳನ್ನಾಡುವ ಪಕ್ಷಗಳ ನಡೆಯನ್ನೆಲ್ಲ ಖಂಡಿಸೋಣ, ಎಚ್ಚರಿಕೆಯಿಂದಿರೋಣ. ಆದರೆ ಮುಫ್ತಿ ಮೊಹಮದ್ ಸಯೀದ್ ಇನ್ನಿಲ್ಲವಾಗಿರುವ ಈ ಗಳಿಗೆಯಲ್ಲಿ ಅವರ ಒಳ್ಳೆಯ, ಮೃದು ಮುಖಗಳನ್ನು ಕಾಣುತ್ತ ಗೌರವ ನೀಡೋಣ.

1 COMMENT

  1. None of the political parties or groups at power either at center or at state or at UTs or at Local bodies does anything for middle class. They exist for poor and rich class. It won’t matter to me which joker politicia wins or looses or dies, it won’s matter.

Leave a Reply