ಹಾಲು, ಹೆಲ್ಮೆಟ್, ಲೋಡ್ ಶೆಡ್ಡಿಂಗ್ ನಲ್ಲಿ ಪಂಚಾಯಿತಿ ಮತಮಿಡಿತದ ಗಿಮಿಕ್!

ಡಿಜಿಟಲ್ ಕನ್ನಡ ವಿಶೇಷ

ಯಾವುದೇ ಚುನಾವಣೆ ಬರಲಿ, ಮತದಾರರ ಮನ ಸೆಳೆಯಲು ಸರಕಾರ ಒಂದಷ್ಟು ಆಟಗಳನ್ನು ಆಡುತ್ತದೆ. ಒಂದಷ್ಟು ತಂತ್ರಗಳನ್ನು ತೇಲಿ ಬಿಡುತ್ತದೆ. ಹಾಲಿನ ದರ ಲೀಟರ್ ಗೆ ನಾಲ್ಕು ರುಪಾಯಿ ಹೆಚ್ಚಳ, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಗೆ ಮೂರು ತಿಂಗಳ ಮೌಖಿಕ ಕಾಲಾವಕಾಶ ಕೂಡ ಇಂಥದ್ದೇ ತಂತ್ರಗಳ ಭಾಗವಾಗಿದೆ.

ಇನ್ನು ಒಂದೆರಡು ವಾರದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಆದೇಶ ಹೊರಬೀಳಲಿದೆ. ಫೆಬ್ರವರಿ ಅಂತ್ಯದಲ್ಲಿ ನಡೆಯಲಿರುವ ಈ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಸರಕಾರ ಮತದಾರರಿಗೆ ಹೊಸ ವರ್ಷಾರಂಭದಲ್ಲಿ ನೀಡಿರುವ ಈ ಕೊಡುಗೆ ಮುಂದಾಲೋಚನೆಯಿಂದ ಕೂಡಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಮೂಲಕ ಲೀಟರ್ ಗೆ ನಾಲ್ಕು ರುಪಾಯಿ ಹಾಲಿನ ದರ ಹೆಚ್ಚಳವಾಗಿದೆ. ಇದರಲ್ಲಿ 2.70 ರುಪಾಯಿ ನೇರವಾಗಿ ರೈತರಿಗೇ ಸೇರುತ್ತದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು. ಋಣ ಸಂದಾಯವಾಗಿ ರೈತರು ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬುದು ಸರಕಾರದ ಲೆಕ್ಕಾಚಾರ.

ಅದೇ ರೀತಿ ಹೆಲ್ಮೆಟ್ ವಿಚಾರ. ಸುಪ್ರೀಂ ಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ದ್ವಿಚಕ್ರ ವಾಹನಗಳ ಹಿಂಬದಿ ಸವಾರರಿಗೂ ಜನವರಿ 1 ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶವನ್ನೇನೊ ಹೊರಡಿಸಿದೆ. ಆದರೆ ಮಾರ್ಚ್ 31 ರವರೆಗೆ ಇದಕ್ಕೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ. ಇದಕ್ಕೆ ನೀಡುವ ಕಾರಣ ಹೆಲ್ಮೆಟ್ ಮಾರಾಟಗಾರರು ಕೃತಕ ಅಭಾವ ಸೃಷ್ಟಿಸಿ, ಖರೀದಿದಾರರ ಸುಲಿಗೆ ಮಾಡುತ್ತಾರೆ. ಸಮಯಾವಕಾಶ ನೀಡುವುದರಿಂದ ಇದನ್ನು ತಪ್ಪಿಸಬಹುದು ಎಂಬುದು. ಆದರೆ ನೈಜ ಕಾರಣವೇ ಬೇರೆ. ಮಾರ್ಚ್ 31 ರವರೆಗೆ ವಿನಾಯಿತಿ ನೀಡಿದರೆ, ಅಷ್ಟೊತ್ತಿಗೆ ಪಂಚಾಯಿತಿ ಚುನಾವಣೆ ಮುಗಿದಿರುತ್ತದೆ. ಮತದಾರರು ವೋಟ್ ಹಾಕಿ ಆಗಿರುತ್ತದೆ.

ಇನ್ನು ವಿದ್ಯುತ್ ಪೂರೈಕೆ. ಗ್ರಾಮೀಣ ಭಾಗದಲ್ಲಿ ನಿತ್ಯ 12 ತಾಸು ಲೋಡ್ ಶೆಡ್ಡಿಂಗ್ ಜಾರಿಯಲ್ಲಿತ್ತು. ಇದನ್ನು ಎಂಟು ತಾಸಿಗೆ ಇಳಿಸಲಾಗಿದೆ. ಇಲ್ಲೂ ಕೂಡ ಮೌಖಿಕ ಅದೇಶವೇ. ಚುನಾವಣೆ ಮುಗಿಯುವರೆಗೆ. ಹನ್ನೆರಡು ತಾಸು ಲೋಡ್ ಶೆಡ್ಡಿಂಗ್ ಜಾರಿಯಲ್ಲಿದ್ದರೂ ನಿತ್ಯ 3000 ಮೆ.ವ್ಯಾ. ಕೊರತೆ ಇತ್ತು. ಈಗ ಎಂಟು ತಾಸಿಗೆ ಇಳಿಸಿರುವುದರಿಂದ ಮುಂದಿನ ಬೇಸಿಗೆಯಲ್ಲಿ ಭಾರೀ ಸಮಸ್ಯೆ ಎದುರಾಗುವ ಸಂಭವವಿದೆ.

ನಮ್ಮ ಮತದಾರರು ಕೂಡ ವಿಶಾಲ ಮನೋಭಾವದರು. ತತ್ಕಾಲಕ್ಕೆ ಸಿಗುವ ಸವಲತ್ತುಗಳಿಗೆ ಖುಷಿ ಪಡುವ ಅಲ್ಪತೃಪ್ತರು. ಅವರ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ ಸರಕಾಗಳು ಸಮಯ, ಸಂದರ್ಭಕ್ಕೆ ತಕ್ಕ ಹಾಗೆ ಅವರ ಖುಷಿ ಕಾರಣಗಳನ್ನು ರಬ್ಬರ್ ಬ್ಯಾಂಡಿನಂತೆ ಹಿಗ್ಗಿಸುತ್ತವೆ. ಈ ರಬ್ಬರ್ ಬ್ಯಾಂಡ್ ಮೂಲಸ್ಥಿತಿಗೆ ಬರುವಷ್ಟರಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಮುಗಿದಿರುತ್ತವೆ.

Leave a Reply