ಇದೀಗ ಮುಖ್ಯಾಂಶಗಳು, ಅಗತ್ಯವಿದ್ದಲ್ಲಿ ಸುದ್ದಿಗೆ ಕಾಮೆಂಟ್ ಗಳು: ಜಲ್ಲಿಕಟ್ಟು, ಹೆಲ್ಮೆಟ್ಟು, ಧೋನಿಗೆ ವಾರೆಂಟು, ಸೆಲೆಬ್ರಿಟಿಗಳಿಗೆ ಭದ್ರತೆ ಕಟ್…

ಜಲ್ಲಿಕಟ್ಟುಗೆ ಕೇಂದ್ರದ ಮೂಗುದಾರಬದ್ಧ ಅನುಮತಿ

ತಮಿಳುನಾಡಿನ ವಿವಾದಿತ ಸಾಂಪ್ರದಾಯಿಕ ಕ್ರೀಡೆ “ಜಲ್ಲಿಕಟ್ಟು” ಆಚರಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ತಮಿಳುಗರ ಪ್ರಮುಖ ಹಬ್ಬ ಪೋಂಗಲ್ ವೇಳೆ ಅಚರಿಸುವ ಗೂಳಿ ಓಟಕ್ಕೆ ಈ ಹಿಂದೆ ಪ್ರಾಣಿದಯಾಸಂಘದವರ ಒತ್ತಾಯದಿಂದ ಜಲ್ಲಿಕಟ್ಟು ಕ್ರೀಡೆಗೆ ನಿಷೇಧ ಹೇರಲಾಗಿತ್ತು.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಅವರು ನಿಷೇಧ ತೆರವು ಮಾಡಿ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಿ ಎಂಬ ಮನವಿಗೆ ಸ್ಪಂದಿಸಿರುವ ಕೇಂದ್ರ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಗೂಳಿ ಓಟಕ್ಕೆ ಉತ್ತಮ ಟ್ಯ್ರಾಕ್ ನಿರ್ಮಾಣ, 2 ಕಿ.ಮೀಗಿಂತ ಹೆಚ್ಚಿನ ಓಟಕ್ಕೆ ನಿಷೇಧ, ಉತ್ತಮ ದೈಹಿಕ ಸಾಮರ್ಥ್ಯದ ಗೂಳಿಗಳನ್ನು ಬಳಸಿಕೊಳ್ಳಬಹುದಾಗಿದೆ.

ಹೆಚ್ಚುವರಿ ಕಾಮೆಂಟ್: ಸುಪ್ರೀಂ ಕೋರ್ಟ್ ನಿರ್ದೇಶನವಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೀಗೊಂದು ರಿಸ್ಕ್ ತೆಗೆದುಕೊಂಡಿರುವುದರ ಹಿಂದೆ ಜನಪ್ರಿಯ ಒತ್ತಡ ಕೆಲಸ ಮಾಡಿದೆ. ವರ್ಷಕ್ಕೊಮ್ಮೆ ಆಚರಿಸುವ ಸಂಪ್ರದಾಯಕ್ಕೆ ಕಾಯ್ದೆ ಏಕೆ ಅಡ್ಡಗಾಲಾಗಬೇಕು ಎಂಬುದು ಸ್ಥಳೀಯರ ವಾದ. ಇದು ಹಿಂದು ಸಂಪ್ರದಾಯವಾಗಿರುವುದರಿಂದಲೇ ಇಂಥ ಪ್ರತಿರೋಧ ಎಂದು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಬಲಪಂಥೀಯರ ಆಕ್ರೋಶ. ಈ ಸಿದ್ಧಾಂತದ ವಿರುದ್ಧ ತುದಿಯಲ್ಲಿರುವವರಿಗೆ ಜಲ್ಲಿಕಟ್ಟು ಹಿಂಸೆಯ ಪ್ರತಿರೂಪವಾಗಿ ಕಾಣುತ್ತಿದೆ. ‘ಸಂಪ್ರದಾಯದ ಹೆಸರಲ್ಲಿ ಜಲ್ಲಿಕಟ್ಟು ಸಮರ್ಥಿಸೋದಾದ್ರೆ ಸತಿ ಪದ್ಧತಿಯೂ ಸರಿಯಾಗಿಬಿಡುತ್ತದಲ್ಲವೇ’ ಅಂತ ಪರ್ತಕರ್ತ ರಾಜ್ ದೀಪ್ ಸರ್ದೇಸಾಯಿ ಟ್ವೀಟಿಸಿದ್ದಾರೆ. ‘ಗೋಹತ್ಯೆ ಬೇಡ ಎಂದಾಗ, ಅದು ಆಹಾರದ ಹಕ್ಕು ಅಂತ ಆರ್ಭಟಿಸುವ ಎಡಪಂಥೀಯರು ಇಲ್ಲಿ ಮಾತ್ರ ಪ್ರಾಣಿಹಿಂಸೆ ರಾಗ ಹಾಡ್ತಿರೋದು ವ್ಯಂಗ್ಯ’ ಅಂತ ಜಲ್ಲಿಕಟ್ಟು ಪರವಿರುವವರ ಪ್ರತಿವಾದ.

ಸೆಲೆಬ್ರಿಟಿಗಳಿಗೆ ಭದ್ರತೆ ಕಡಿತ

ನಟರಾದ ಶಾರುಕ್ ಖಾನ್, ಅಮೀರ್ ಖಾನ್, ನಿರ್ಮಾಪಕ ವಿನೋದ್ ಚೋಪ್ರಾ ಸೇರಿದಂತೆ ಸುಮಾರು 40 ಬಾಲಿವುಡ್ ನ ಪ್ರಖ್ಯಾತರಿಗೆ ನೀಡಿದ್ದ ಭದ್ರತೆಯನ್ನು ಮುಂಬೈ ಪೊಲೀಸರು ಕಡಿತಗೊಳಿಸಿದ್ದಾರೆ. 25 ಪ್ರಖ್ಯಾತರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ. ಯಾರಿಗೆ ಬೆದರಿಕೆ ಕರೆಗಳು ಕಡಿಮೆ ಆಗಿದೆಯೋ ಅಂತಹವರಿಗೆ ಭದ್ರತೆಯ ಪ್ರಮಾಣವನ್ನು ಕಡಿಮೆಮಾಡಲಾಗಿದೆ. ಪರಾಮರ್ಶೆ ಆಧಾರದಲ್ಲಿ ಈ ಪ್ರಕ್ರಿಯೆ ಆಗಾಗ ನಡೆಸಲಾಗುತ್ತದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಶಾರುಕ್ ಮತ್ತು ಅಮೀರ್ ಖಾನ್ ರವರಿಗೆ ಅಸಹಿಷ್ಣುತೆಯ ಹೇಳಿಕೆ ನೀಡಿದ ಸಂದರ್ಭದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿತ್ತು. ಅಕ್ಷಯ್ ಕುಮಾರ್, ಮಹೇಶ್ ಭಟ್, ಮುಖೇಶ್ ಭಟ್ ರವರಿಗೆ ಭೂಗತ ಪಾತಕಿಗಳಿಂದ ಸುಲಿಗೆ ಮತ್ತು ಬೆದರಿಕೆ ಇರುವುದರಿಂದ ಭದ್ರತೆ ಮುಂದುವರೆಯಲಿದೆ. ಲತಾ ಮಂಗೇಶ್ ಕರ್, ದಿಲೀಪ್ ಕುಮಾರ್ ಮತ್ತು ಅಮಿತಾಭ್ ಬಚ್ಚನ್ ರವರು ಅಪ್ರತಿಮ ಸಾಧಕರಾಗಿರುವುದರಿಂದ ಹೆಚ್ಚಿನ ಭದ್ರತೆ ನೀಡಲಾಗಿದೆ.

ನಮ್ಮ ಕಾಮೆಂಟ್: ಅಸಹಿಷ್ಣುತೆ ಹೇಳಿಕೆ ನೀಡಿದ್ದಕ್ಕೆ ಹೀಗೆ ಮಾಡಲಾಯಿತು ಎಂಬ ರಾಜಕೀಯ ಪ್ರೇರಿತ ಚರ್ಚೆಗಳ ಅಗತ್ಯ ಇಲ್ಲ. ಇವರೆಲ್ಲರಿಗೂ ಭದ್ರತೆಯನ್ನೇ ಹಿಂತೆಗೆದುಕೊಂಡಿಲ್ಲ, ಪರಿಸ್ಥಿತಿ ಪರಾಮರ್ಶೆ ಆಧಾರದಲ್ಲಿ ಕಡಿತಗೊಳಿಸಲಾಗಿದೆ ಅಷ್ಟೆ. ಕಲಾವಿದರು ದೇಶದ ಸ್ವತ್ತೆಂಬುದು ನಿಜವಾದರೂ, ಅಗತ್ಯವಿರದಿದ್ದ ಸಂದರ್ಭದಲ್ಲಿ ಭದ್ರತೆಯನ್ನು ಬೇರೆಡೆ ಕೇಂದ್ರಿಕರಿಸುವುದಕ್ಕೆ ಈ ಕ್ರಮ ಪೂರಕ.

ಉಗ್ರಶಂಕೆ: ಬೆಂಗಳೂರಿನ ಮದರಸಾ ಶಿಕ್ಷಕನ ಬಂಧನ

ಅಲ್ ಖೈದಾ ಉಗ್ರ ಸಂಘಟನೆಯ ಜೊತೆ ಸಂಪರ್ಕದ ಶಂಕೆಯಿಂದ ಬೆಂಗಳೂರಿನ ಮದರಾಸದ ಶಿಕ್ಷಕ ಮೌಲಾನಾ ಅನ್ಜರ್ ಷಾಹ್ ನನ್ನು ದೆಹಲಿ ಪೊಲೀಸರು ಬುಧವಾರ ರಾತ್ರಿ ನಗರದಲ್ಲಿ ಬಂಧಿಸಿದ್ಜಾರೆ. ಈತ ಬಾಂಗ್ಲಾದೇಶ ಮೂಲದ ಉಗ್ರರಿಗೆ ಸಹಾಯಮಾಡುತ್ತಿದ್ದ ಎಂಬ ಸುಳಿವು ದೊರೆತಿದೆ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದ ಗಲಭೆಯಲ್ಲಿ ಪೊಲೀಸ್ ಠಾಣೆಗೆ ಮತ್ತು ಹತ್ತಾರು ವಾಹನಗಳಿಗೆ ಬೆಂಕಿ ಹಚ್ಚಿ ಲಕ್ಷಾಂತರ ರು ಮೌಲ್ಯದ ಆಸ್ತಿಗೆ ಹಾನಿ ಮಾಡಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯವು ವಿಚಾರಣೆಗಾಗಿ ಜನವರಿ 20 ರ ತನಕ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಹೆಲ್ಮೆಟ್ ಕಡ್ಡಾಯ: ಸರ್ಕಾರಕ್ಕೇಕೆ ಬಯ್ತೀರಿ?

ಜ. 12ರಿಂದ ರಾಜ್ಯದ ಎಲ್ಲ ಭಾಗಗಳಲ್ಲೂ ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಣಯ ತಿಳಿಸುವ ಪತ್ರಿಕಾಗೋಷ್ಟಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇದೇನು ಸರ್ಕಾರದ ಹಿತಾಸಕ್ತಿ ಅಲ್ಲ ಎಂಬ ಸಂದೇಶ ಮುಟ್ಟಿಸಿದರು.

ಈ ಬಗ್ಗೆ ಅದಾಗಲೇ ಸರ್ವೋಚ್ಚ ನ್ಯಾಯಾಲಯದ ಆದೇಶವಿತ್ತು. ಇದನ್ನು ಹದಿನೈದು ದಿನಗಳ ಒಳಗೆ ಕಡ್ಡಾಯವಾಗಿ ಜಾರಿಗೊಳಿಸುವಂತೆ ನಿರ್ದೇಶಿಸಿರುವುದರಿಂದ ಅದರ ಪಾಲನೆ ಆಗದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದರು ಸಚಿವರು.

ಹೆಲ್ಮೆಟ್ ಕಂಪನಿಗಳ ಲಾಬಿಗೆ ಮಣಿದಿದ್ದೇವೆ ಎಂಬ ಮಾತುಗಳಲ್ಲಿ ಹುರುಳಿಲ್ಲ. ಆದರೆ ಮಾರುಕಟ್ಟೆಯಲ್ಲಿ ತ್ವರಿತವಾಗಿ ಎಲ್ಲ ವಯೋಮಾನದವರಿಗೆ ಒಪ್ಪುವ ಶಿರಸ್ತ್ರಾಣಗಳು ಲಭ್ಯವಾಗುವುದು ಕಷ್ಟ. ಹೀಗಾಗಿ ಹೆಲ್ಮೆಟ್ ಕಡ್ಡಾಯ ಜಾರಿಗೆ ಬಂದ ನಂತರವೂ ಖರೀದಿಗಾಗಿ ಇನ್ನೆರಡು ತಿಂಗಳು ಕಾಲಾವಕಾಶ ನೀಡುವ ಇಂಗಿತ ಅವರದ್ದು.

ಧೋನಿಗೆ ಜಾಮೀನು ರಹಿತ ವಾರೆಂಟ್

ವಿಷ್ಣುವಿನ ಅವತಾರದಲ್ಲಿ ಶೂಗಳು ಸೇರಿದಂತೆ ಇನ್ನೀತರ ವಸ್ತುಗಳನ್ನು ಹಿಡಿದ ಜಾಹಿರಾತಿಲ್ಲಿ ಕಾಣಿಸಿಕೊಂಡು ಹಿಂದುಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಆರೋಪಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಆಂಧ್ರ ಪ್ರದೇಶದ ಅನಂತಪುರ ಪಟ್ಟಣದ ಸ್ಥಳೀಯ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. ಆಂಗ್ಲ ನಿಯತಕಾಲಿಕೆ ಒಂದರ ಮುಖಪುಟದಲ್ಲಿ 2013 ಏಪ್ರಿಲ್ 13 ರಂದು ವಿಷ್ಣು ಅವತಾರದಲ್ಲಿ ಶೂಗಳನ್ನು ಹಿಡಿದುಕೊಂಡಿದ್ದ ಜಾಹಿರಾತು ಪ್ರಕಟವಾಗಿತ್ತು. ಈ ವಿಚಾರಕ್ಕೆ ಕರ್ನಾಟಕ, ಆಂಧ್ರ ಸೇರಿದಂತೆ ದೇಶದ ಹಲವು ಕಡೆ ಧೋನಿ ವಿರುದ್ಧ ಪ್ರಕರಣಗಳು ದಾಖಲಾದವು. ಆಂಧ್ರದ  ವಿಶ್ವ ಹಿಂದೂ ಪರಿಷತ್ ನ ಶ್ಯಾಂ ಸುಂದರ್ ಎಂಬುವರು ಅನಂತಪುರದಲ್ಲಿ ದಾಖಲಿಸಿದ್ದ ದೂರಿನನ್ವಯ ಇಲ್ಲಿನ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಸುಪ್ರಿಯಾ ಹೇಳಿಕೆ ವಿವಾದ

ಸಂಸತ್ತಿನ ಆಧಿವೇಶನದಲ್ಲಿ ಧೀರ್ಘಾವಧಿ ಚರ್ಚೆಗಳು ನಡೆಯುವಾಗ ಬೇಜಾರಾದರೆ ಸೀರೆ, ಮೇಕಪ್, ಗಾಸಿಪ್ಸ್ ನಂತಹ ವಿಚಾರಗಳ ಬಗ್ಗೆ ಮಾತನಾಡಿಕೊಳ್ಳುತ್ತೇವೆ ಎಂದು ಹೇಳಿದ್ದ ಎಲ್ ಸಿ ಪಿ ಸಂಸದೆ ಶರದ್ ಪವಾರ್ ರ ಪುತ್ರಿ ಸುಪ್ರಿಯಾ ಸುಳೆ, ವಿವಾದವಾದ ಬಳಿಕ ಸೀರೆಯ ವಿಷಯ ತಪ್ಪಾಗಿ ಅರ್ಥೈಸಲಾಗಿದೆ ಎಂದು ಉಲ್ಟಾ ಹೊಡದಿದ್ದಾರೆ. ನಾಸಿಕ್ ನ ಸೇಹ ಸಮ್ಮೇಳನದಲ್ಲಿ ಭಾಗವಹಿಸಿದ್ದ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ ನೀವು ತರಗತಿಯಲ್ಲಿ ಪಾಠಗಳು ಹೇಗೆ ಬೇಜಾರಾದಾಗ ಗಾಸಿಪ್ಸ್, ಜೋಕ್ಸ್ ಬಗ್ಗೆ ಮಾತನಾಡುತ್ತಿರೋ ಹಾಗೆ ನಾವು ಕೂಡ ಸಂಸತ್ತಿನಲ್ಲಿ ಬೇಜಾರಾದಾಗ ಸೀರೆ ಎಲ್ಲಿ ತಗೊಂಡಿದ್ದು, ಮೇಕಪ್, ಫೇಸ್ ವಾಷ್, ಗಾಸಿಪ್ಸ್ ಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಇಂತಹ ಚರ್ಚೆಯನ್ನು ನೀವು ಟಿವಿಯಲ್ಲಿ ನೋಡಿ ಯಾವುದೋ ಅಭಿವೃದ್ಧಿಯ ಬಗ್ಗೆ ಮಾತಾನಾಡುತ್ತಿರಬಹುದು ಎಂದುಕೊಳ್ಳುತ್ತೀರಿ. ಅಲ್ಲಿ ನಾವು ಚೆನ್ನೈನ ಸಂಸದೆಯೊಂದಿಗೆ ಮಾತನಾಡುತ್ತಿದ್ದರೆ ನೀವು ಅದನ್ನು ಚೆನ್ನೈನ ಪ್ರವಾಹದ ಬಗ್ಗೆ ಮಾತಾಡುತ್ತಿರಬಹುದು ಎಂದುಕೊಳ್ತೀರಿ ಅಂತೆಲ್ಲ ಹೇಳಿದ್ರು ಸುಳೆ.

ನಮ್ಮ ಕಾಮೆಂಟ್: ಕೇಳಲು ಸುಪ್ರಿಯವೆನಿಸದಿದ್ದರೂ ಕೊನೆಪಕ್ಷ ಸತ್ಯ ಹೇಳಿದ್ದಾರೆ ಸುಳೆ! ಇತ್ತೀಚಿನ ದಿನಗಳಲ್ಲಿ ಸಂಸದರು ಸಂಸತ್ ಕಲಾಪದಲ್ಲಿ ಗಹನ ಚರ್ಚೆಯಲ್ಲಿರುತ್ತಾರೆ ಎಂಬ ಭ್ರಮೆಯನ್ನು ಸಾರ್ವಜನಿಕರೂ ಬಿಟ್ಟಿದ್ದಾರೆ. ಇರಲಿ. ಸೀರೆ- ಆಭರಣ ವಿಷಯಗಳಲ್ಲಿ ಜಗಳವನ್ನೆಲ್ಲ ಬದಿಗಿಟ್ಟು ಪರಸ್ಪರ ಚರ್ಚಿಸುವಂತೆಯೇ ಮಸೂದೆಗಳ ಕುರಿತೂ ಚರ್ಚಿಸಲಿ. ಏನು- ಎತ್ತ ಗೊತ್ತಿಲ್ಲದೇ ಮಸೂದೆಗಳು ಸುಮ್ಮನೇ ಪಾಸಾಗುವುದಾದರೂ ತಪ್ಪುತ್ತದೆ.

ಡಿಡಿಸಿಎ: ಕೇಜ್ರಿವಾಲರ ಜತೆ ಮುಂದುವರಿದ ಕೇಂದ್ರದ ಸಂಘರ್ಷ

ಡಿಡಿಸಿಎ ವಿಚಾರದಲ್ಲಿ ದೆಹಲಿಯಲ್ಲಿ ಕೇಂದ್ರ-ರಾಜ್ಯಗಳ ಸಂಘರ್ಷ ಮುಂದುವರಿದಿದೆ. ಡಿಡಿಸಿಎ ತನಿಖೆಗಾಗಿ ಅರವಿಂದ ಕೇಜ್ರಿವಾಲರ ಸರ್ಕಾರ ನೇಮಿಸಿದ್ದ ಸಮಿತಿಯೇ ಕಾನೂನುಬದ್ಧವಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.

ಇದು ವಿತ್ತ ಸಚಿವ ಅರುಣ್ ಜೇಟ್ಲಿಯವರನ್ನು ರಕ್ಷಿಸಿಕೊಳ್ಳಲು ಮಾಡುತ್ತಿರುವ ಸ್ಪಷ್ಟ ಪ್ರಯತ್ನ ಎಂದು ಆಪ್ ಪ್ರತಿಕ್ರಿಯಿಸಿದೆ. ಈ ವಿಚಾರವನ್ನು ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳುತ್ತೇವೆ ಎಂದು ಗುಟುರು ಹಾಕಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕೇಂದ್ರದ ವಿರುದ್ಧ ಸಮರವನ್ನು ಮುಂದುವರಿಸುವುದರಲ್ಲಿ ತಾವು ಒಂದಿನಿತೂ ಉತ್ಸಾಹ ಕಳೆದುಕೊಂಡಿಲ್ಲ ಎಂಬುದನ್ನು ಸೂಚಿಸಿದ್ದಾರೆ.

ಹೀಗೆಲ್ಲ ಸಮರೋತ್ಸಾಹ ಮುಂದುವರಿದಿರುವಾಗ, ಕೇಜ್ರಿವಾಲ್ ಮತ್ತು ಜೇಟ್ಲಿ ಅವರನ್ನು ಒಂದೇ ವೇದಿಕೆಯಲ್ಲಿ ಕಾಣುವುದಕ್ಕೆ ಶುಕ್ರವಾರ ಕೋಲ್ಕತಾದಲ್ಲಿ ನಡೆದ ಕಾರ್ಯಕ್ರಮವೊಂದು ಕಾರಣವಾಗಿದ್ದು ಸ್ವಾರಸ್ಯಕರವಾಗಿತ್ತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಕೊ ಟೂರಿಸಂ ಪಾರ್ಕ್ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭ ಅದಾಗಿತ್ತು. ಆದರೆ ಜೇಟ್ಲಿ- ಕೇಜ್ರಿವಾಲ್ ನಡುವೆ ವೇದಿಕೆಯಲ್ಲಿ ಹಲವು ಖುರ್ಚಿಗಳ ಅಂತರವಿತ್ತು. ‘ಸಮ-ಬೆಸ ಸಂಚಾರ ನಿಯಮದಂಥ ಕಾಯ್ದೆಗಳು ಗೆಲ್ಲುವುದಕ್ಕೆ ಸಾಧ್ಯ ಎಂದು ದೆಹಲಿ ಜನತೆ ತೋರಿಸಿಕೊಟ್ಟಿದ್ದಾರೆ’ ಎಂದು ವೇದಿಕೆಯಲ್ಲಿ ಹೇಳುವುದಕ್ಕೆ ಕೇಜ್ರಿವಾಲ್ ಮರೆಯಲಿಲ್ಲ.

Leave a Reply