ಕುಸಿದ ಚೀನಾ, ಕಪಿಗಳ ಮುಷ್ಟಿಯಲ್ಲಿ ಅಮೆರಿಕ, ಭಾರತದ ರಾಜನ್ ಅಂಥವರಷ್ಟೇ ಜಗಕೆ ದಾರಿ ತೋರಬಲ್ಲರು ಅಂತಾರೆ ಅಮೆರಿಕದ ಉದ್ಯಮ ಗುರು!

 

authors-rangaswamy2015 ರ ವರೆಗೆ ಚೀನಾ ಮಾರುಕಟ್ಟೆ ಹೂಡಿಕೆದಾರರ ಸ್ವರ್ಗ. ಎಲ್ಲರಿಗೂ ಎಲ್ಲಕ್ಕೂ ಚೀನಾವೆ ಬೇಕು ಅನ್ನುವಂತಿತ್ತು. ಏರಿದ್ದು ಇಳಿಯಲೇ ಬೇಕು ಎನ್ನುವುದು ನಿಸರ್ಗ ನಿಯಮ. ತನ್ನ ಸ್ಥಾನ ಕಾಪಾಡಿಕೊಳ್ಳಲು ಚೀನಾ ತನ್ನ ಕರೆನ್ಸಿ ಅಪಮೌಲ್ಯ ಮಾಡಿಕೊಳ್ಳುತ್ತದೆ. ಏಳೆಂಟು ವರ್ಷದಿಂದ ಸೊನ್ನೆ ಇಂದ 0.25 ರಷ್ಟು ಬಡ್ಡಿ ದರ ಹೊಂದಿದ್ದ ಅಮೆರಿಕ ತನ್ನ ಬಡ್ಡಿ ದರ ವರ್ಷಾಂತ್ಯದ ವೇಳೆಗೆ ಹೆಚ್ಚಿಸುತ್ತೆ. ಚೀನಾ ದೇಶ ಇಟ್ಟ ಹೆಜ್ಜೆಗೆ ಪ್ರತಿ ಹೆಜ್ಜೆ ಇಡದೆ  ಅಮೆರಿಕಕ್ಕೆ ಬೇರೆ ದಾರಿ ಕೂಡ ಇರಲಿಲ್ಲ. ಪರಿಣಾಮ ಚೀನಾ ಮಾರುಕಟ್ಟೆ 7 ಪ್ರತಿಶತ ಕುಸಿತ ಕಂಡಿದೆ.

ಚೀನಾ ಮಾರುಕಟ್ಟೆ ಈ ಪ್ರಮಾಣಕ್ಕೆ ಕುಸಿಯಲು ಪ್ರಮುಖ ಕಾರಣ ಹೂಡಿಕೆದಾರರಲ್ಲಿ ಯಾನ್ (ಚೈನೀಸ್ ಹಣ RMB  ಎಂದು ಕೂಡ ಹೇಳಲಾಗುತ್ತೆ ) ನ ಮೇಲಿನ ಕಡಿಮೆಯಾದ ನಂಬಿಕೆ. ನಂಬಿಕೆ ಏಕೆ ಕಡಿಮೆ ಆಗುತ್ತೆ ? ಉದಾಹರಣೆ ನೋಡೋಣ.
2005 ರ ವರೆಗೆ ಚೀನಾ ತನ್ನ ಕರೆನ್ಸಿ ವಿನಿಮಯ ದರವನ್ನು ಅಮೆರಿಕದ ಡಾಲರ್ ಜೊತೆ ನಿಗದಿ ಮಾಡಿಕೊಂಡಿತ್ತು ಅಂದರೆ ಒಂದು ಡಾಲರ್ ಬೆಲೆ 8.27 ಯಾನ್ ಎಂದು ನಿರ್ಧಾರವಾಗಿತ್ತು. 2005 ರಿಂದ ಇದು ನಿಗದಿಯಾಗಿಲ್ಲ. ಅಂದರೆ ಮಾರುಕಟ್ಟೆ ಏರಿಳಿತಕ್ಕೆ ತಕ್ಕಂತೆ ಇದು ಕೂಡ ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ. ಹೀಗಾಗಿ ಚೀನಾ ಮಾರುಕಟ್ಟೆಯಲ್ಲಿ ತನ್ನ ಸಾರ್ವಭೌಮತ್ವ ಉಳಿಸಿಕೊಳ್ಳಲು ತನ್ನ ಹಣ ಅಪಮೌಲ್ಯ ಗೊಳಿಸಿದರೆ, ವಿದೇಶಿ ಹೂಡಿಕೆದಾರರ ವರ್ಷಗಳ ಗಳಿಕೆ ಆವಿಯಾಗಿ ಹೋಗುತ್ತದೆ.

jim-rogers
ಜಿಮ್ ರೋಜರ್, ಅಮೆರಿಕ ಮೂಲದ ಉದ್ಯಮಿ. ಸರಕುಗಳ (ಕಮಾಡಿಟಿ ) ಮೇಲಿನ ಹೂಡಿಕೆಗಳ ಹಾಗೂ ಹೆಡ್ಜ್ ಫಂಡ್ ಗುರು ಎಂದು ಈತನನ್ನು ಕರೆಯಲಾಗುತ್ತೆ. ಸದ್ಯ ಸಿಂಗಪುರದಲ್ಲಿ ವಾಸ. ಇಡೀ ಪ್ರಪಂಚವೇ ಚೀನಾ ತನ್ನ ಉಳಿವಿಗಾಗಿ ಪ್ರಪಂಚದ ಮಾರುಕಟ್ಟೆಯನ್ನು ಬಲಿ ಕೊಡುತ್ತಿದೆ ಎಂದು ಕೂಗುತ್ತಿರುವಾಗ, ಈತ ಹೇಳುತ್ತಾನೆ- ‘ಒಂದು ದೇಶ ಏಳೆಂಟು ವರ್ಷ ತನ್ನ ಬಡ್ಡಿ ಬದಲಿಸದೆ ಹೇಗೆ ನಡೆಯಬಲ್ಲದು? ಲೆಕ್ಕ ಪತ್ರವಿಲ್ಲದೆ ಡಾಲರ್ ಮುದ್ರಿಸಿದ್ದು, ಕಳೆದ ಏಳೆಂಟು ವರ್ಷಗಳಿಂದ ಶೇಖರವಾದ ಸಾಲ ಇವು ಅಮೆರಿಕ ಮಾಡಿದ ಬಹು ದೊಡ್ಡ ತಪ್ಪುಗಳು. ಅವೇ ಇಂದು ಜಗತ್ತಿನ ಆರ್ಥಿಕತೆಗೆ ತಲ್ಲಣ ಉಂಟು ಮಾಡಿವೆ. ಚೀನಾ ದೂಷಿಸುವ ಮೊದಲು ನಾವು ದೂಷಿಸಬೇಕಾಗಿರುವುದು ಅಮೆರಿಕದ ಫೆಡರಲ್ ಬ್ಯಾಂಕರ್ ಗಳನ್ನು’ ಎಂದು ಯಾವ ಮುಲಾಜು ಇಲ್ಲದೆ ಹೇಳುತ್ತಾನೆ. ಮುಂದುವರಿದು ಖಡಾಖಡಿಯಾಗಿ ಹೇಳ್ತಾರೆ-

‘ನಿಮ್ಮ (ಭಾರತದ) ಸೆಂಟ್ರಲ್ ಬ್ಯಾಂಕ್ ನಮ್ಮ ಫೆಡರಲ್ ಬ್ಯಾಂಕ್ ನಡೆಸುವಂತೆ ಇದ್ದಿದ್ದರೆ ಎಷ್ಟು ಚಂದ ಇತ್ತು. ರಾಜನ್ ಫೆಡರಲ್ ಬ್ಯಾಂಕ್ ನಡೆಸುವ ಹೊಣೆ ಹೊತ್ತಿದ್ದರೆ ಜಗತ್ತಿಗೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ನಮ್ಮ ದುರ್ದೈವ. ಫೆಡರಲ್ ಬ್ಯಾಂಕ್ ನಡೆಸುತ್ತಿರುವರು ಮಂಗಗಳು (ಬಬೂನ್)’

ಇಡೀ ಜಗತ್ತಿನಲ್ಲಿ ನಿಮ್ಮ (ಭಾರತದ) ಸೆಂಟ್ರಲ್ ಬ್ಯಾಂಕ್  ಅತಿ ಕಡಿಮೆ ಕೆಟ್ಟದ್ದು ಎನ್ನುವ ಈತನ ಅಣಿಮುತ್ತು ನಮಗೆ ತಾತ್ಕಾಲಿಕ ನೆಮ್ಮದಿ ತರುತ್ತದೆ ಅಷ್ಟೇ. ಏಕೆಂದರೆ ಇದು ಪ್ರಾರಂಭವಷ್ಟೆ. ನಮ್ಮ ಷೇರು ಮಾರುಕಟ್ಟೆ ಇರಬಹುದು ಅಥವಾ ಜಗತ್ತಿನ ಮತ್ತ್ಯಾವುದೇ ದೇಶದ ಷೇರು ಮಾರುಕಟ್ಟೆ ಇರಬಹುದು. 5-7-10 ಪರ್ಸೆಂಟ್ ಕುಸಿದರೆ ಅದು ಕುಸಿತ. ಅವುಗಳ ಪರಿಣಾಮ ಉತ್ತಮವೇನಲ್ಲ, ಆದರೆ ಮಾರುಕಟ್ಟೆಯಲ್ಲಿ ಇವು ಸಹಜ. ಒಂದೆರಡು ವರ್ಷಗಳಲ್ಲಿ ಮತ್ತೆ ಸಹಜತೆಯತ್ತ ಮಾರುಕಟ್ಟೆ ಬರುತ್ತದೆ, ಮತ್ತದೇ ಪುನರಾವರ್ತನೆ. ಆದರೆ ಈ ಬಾರಿ ಮಾರುಕಟ್ಟೆ ಅಲ್ಲೋಲಕಲ್ಲೋಲವೇ ಆಗುವ ಸಾಧ್ಯತೆ ಇದೆ. ಮಾರುಕಟ್ಟೆಯ ಕುಸಿತ ಶೇ. 70-80 ಮುಟ್ಟಿದರೆ ಅದು ಪ್ಯಾನಿಕ್ ಸ್ಥಿತಿ ಎಂದು ವಿಶ್ಲೇಷಿಸಬಹುದು.
ಚೀನಾ ಮಾರುಕಟ್ಟೆಗೆ ತಿದ್ದುಪಡಿ (ಕರೆಕ್ಷನ್ ) ಅಗತ್ಯ ಇತ್ತು. ಈಗಿನ ಕುಸಿತವನ್ನು ತಿದ್ದುಪಡಿ ಎಂದು ವ್ಯಾಖ್ಯಾನಿಸಬಹುದು. ಆದರೆ ಅದು ಮುಂದೆ ಬರುವ ಮಹಾ ಕುಸಿತದ ಒಂದು ತುಣುಕು ಅಲ್ಲ ಎಂದು ಹೇಳುವುದು ಹೇಗೆ?  ಚೀನಾ ಎಷ್ಟು ಹೊತ್ತು ಜಗತ್ತಿನ ಭಾರ ಹೊತ್ತು ಇರಬಲ್ಲದು? ಚೀನಾ ತನ್ನ ಮಾರುಕಟ್ಟೆ ಕುಸಿಯಲು ಬಿಟ್ಟರೆ ಎಮರ್ಜಿಂಗ್ ಮಾರ್ಕೆಟ್ಗಳು ಪ್ಯಾನಿಕ್ ಸ್ಥಿತಿಗೆ ಬಂದೆ ಬರುತ್ತವೆ. ಸದ್ಯಕ್ಕೆ ಪ್ಯಾನಿಕ್ ಆಗುವ ರೀತಿ ಏನೂ ಆಗಿಲ್ಲ. ಆದ್ರೆ ನಾಳೆ ಆ ಸ್ಥಿತಿ ಬರುವುದಿಲ್ಲ ಎಂದು ಹೇಳಲಾಗದು.
ಕೊಸರು: ಜಿಮ್ ರೋಜೆರ್ ಭಾರತದಲ್ಲಿ ಹೂಡಿಕೆ ಮಾಡಿದ್ದ ತನ್ನ ಕೊನೆಯ ಪೈಸವನ್ನೂ ಬಿಡದೆ ಹಿಂದಕ್ಕೆ ತೆಗೆದುಕೊಂಡಿದ್ದಾನೆ.

Leave a Reply