ನಾಯಕಿ ಹಿಂದೆ ಸುತ್ತುವುದೇ ನಾಯಕನ ಕೆಲಸವೆಂಬ ಸೂತ್ರದಿಂದ ಬಿಡಿಸಿಕೊಳ್ತಿದೆಯೇ ಬಾಲಿವುಡ್? ಅಂಥ ಭರವಸೆ ಸಾಲಿಗೆ ಮಾಧವನ್ ಅಭಿನಯದ ಸಾಲಾ ಖಡೂಸ್

 

ಸೌಮ್ಯ ಸಂದೇಶ್

ಅವವೇ ಪ್ರೇಮಕತೆಗಳು, ಕಾಮಿಡಿ ಹೆಸರಿನ ಗೇಲಿಗಳು ಇವನ್ನೆಲ್ಲ ದಾಟುವ ಪ್ರಯತ್ನದಲ್ಲಿದೆಯೇ ಬಾಲಿವುಡ್? ಹೌದೆನಿಸುವುದಕ್ಕೆ ಹಲವು ಕಾರಣಗಳಿವೆ. ಇದೇ ತಿಂಗಳು ನೈಜ ಕತೆ ಆಧರಿಸಿ ಬರುತ್ತಿರುವ ಅಕ್ಷಯ್ ಕುಮಾರ್ ಅಭಿನಯದ ಏರ್ಲಿಫ್ಟ್, ಫೆಬ್ರವರಿಯಲ್ಲಿ ಬಿಡುಗಡೆ ಆಗಲಿರುವ ನೀರಜಾ ಇವೆಲ್ಲ ಅದಾಗಲೇ ನಿರೀಕ್ಷೆ ಹುಟ್ಟುಹಾಕಿವೆಯಲ್ಲದೇ, ಇಂಥ ಚಿತ್ರಗಳನ್ನು ನೋಡುವಂಥದ್ದೇ ದೊಡ್ಡ ವರ್ಗವೊಂದು ರೂಪುಗೊಂಡರೆ ಆಶ್ಚರ್ಯವಿಲ್ಲ. ಈ ಚಿತ್ರಗಳ ಬಗ್ಗೆ ಡಿಜಿಟಲ್ ಕನ್ನಡ ಈ ಮೊದಲೇ ಗಮನ ಹರಿಸಿತ್ತು.

ಜನವರಿ 29ರಂದು ಬಿಡುಗಡೆಯಾಗಲಿರುವ ಸಾಲಾ ಖಡೂಸ್ ಚಿತ್ರದ ಟ್ರೈಲರ್ ಸಹ ಗಮನ ಸೆಳೆಯುತ್ತಿದೆ. ಬಾಕ್ಸಿಂಗ್ ಕಣದಲ್ಲಿ ಕಟ್ಟುನಿಟ್ಟಾಗಿರುವ ನಾಯಕ, ನಾಯಕಿಯೊಬ್ಬಳನ್ನು ಅಖಾಡಕ್ಕೆ ಸಿದ್ಧಪಡಿಸುವ ಕತೆ ಅನ್ನೋದನ್ನು ಟ್ರೈಲರ್ ಸಾರುತ್ತದೆ. ಜತೆಯಲ್ಲೇ ಕ್ರೀಡಾವಲಯದ ಕೆಟ್ಟ ರಾಜಕೀಯಗಳ ಬಗ್ಗೆಯೂ ಚಿತ್ರಣ ಇರುವಂತಿದೆ.

ಮಾಧವನ್ ನಾಯಕನಾಗಿರುವ ಈ ಚಿತ್ರದಲ್ಲಿ ಜನಪ್ರಿಯ ಒಗ್ಗರಣೆಗೆ ತಕ್ಕಂತೆ ನಾಯಕ-ನಾಯಕಿಯರ ನಡುವಿನ ಆಕರ್ಷಣೆಗಳ ಸರಕು ಢಾಳಾಗಿರುವ ಸೂಚನೆ ಇದೆ. ಆದರೆ, ಕೆಲಸವಿಲ್ಲದೇ ನಾಯಕಿಯ ಹಿಂದೆ ಸುತ್ತುವವನನ್ನೇ ಹೀರೋ ಅಂತ ಬಿಂಬಿಸಿಕೊಂಡು ಇಷ್ಟೆಲ್ಲ ವರ್ಷಗಳಲ್ಲಿ ಎಷ್ಟೊಂದು ಸಿನಿಮಾಗಳ ಸುರಿಮಳೆ ಆಗಿಹೋಯ್ತು ಎಂಬುದನ್ನು ನೆನಪಿಸಿಕೊಂಡರೆ ಈ ಬದಲಾವಣೆ ಮುಖ್ಯವಾದದ್ದೆನಿಸುತ್ತದೆ. ಅಲ್ಲದೇ, ಮಾಧವನ್ ಅವರಂಥ ಚಾಕಲೇಟ್ ಹೀರೋ ವರ್ಷಗಳ ಶ್ರಮವಹಿಸಿ ಬಾಕ್ಸಿಂಗ್ ಗುರುವಿನ ಪಾತ್ರಕ್ಕೆ ತಯಾರಾಗೋದು, ಅದಕ್ಕೆ ಬೇಕಾದ ಪಾತ್ರ ಪ್ರವೇಶ- ರೂಪು ಇವನ್ನೆಲ್ಲ ಮೈಗೂಡಿಸಿಕೊಳ್ಳುವುದು ಆಪ್ತವಾಗಿ ಕಾಣುತ್ತಿದೆ.

madhavan

ಈ ದ್ವಿಭಾಷಾ ಚಿತ್ರಕ್ಕೆ ಹಣ ಹೂಡಿರುವುದು ರಾಜ್ಕುಮಾರ್ ಹಿರಾನಿ ಎಂಬಂಶ ಗಮನಕ್ಕೆ ತೆಗೆದುಕೊಂಡಾಗ, ಹಾಗೊಂದು ಸೃಜನಾತ್ಮಕ ಯೋಜನೆಗಲ್ಲದೇ ಸುಮ್ಮನೇ ವ್ಯಾಪಾರಿಯಾಗಿ ಹಣ ಹೂಡುವ ಅಸಾಮಿ ಅವರಲ್ಲ ಎಂಬುದೂ ನಿಚ್ಚಳ. ಈ ಕಾರಣದಿಂದಲೇ ಹೊಸ ನಾಯಕಿ ರಿತಿಕಾ ಸಿಂಗ್ ಹಾಗೂ ನಿರ್ದೇಶಕಿ ಸುಧಾ ಕೊಂಗಾರಾ ಅವರ, ಚಿತ್ರ ಆಸಕ್ತಿ ಮೂಡಿಸುತ್ತಿದೆ.

ಶುಕ್ರವಾರ ಬಿಡುಗಡೆಯಾಗಿರುವ ಫರ್ಹಾನ್ ಅಖ್ತರ್, ಅಮಿತಾಭ್ ನಟನೆಯ ವಾಜಿರ್ ಚಿತ್ರ ಸಹ ಭಿನ್ನ ಭೂಮಿಕೆಯದ್ದೇ. ಕೊನೆವರೆಗೂ ಸಸ್ಪೆನ್ಸ್ ಕಾದುಕೊಂಡು ಅತ್ಯದ್ಭುತ ಎನ್ನಿಸದಿದ್ರೂ ಪ್ರಾಮಾಣಿಕ ಪ್ರಯತ್ನದ, ಕೊಟ್ಟ ಹಣಕ್ಕೆ ಮೋಸವೆನಿಸದ ಚಿತ್ರ ಅಂತ ವಿಮರ್ಶಕರು ಷರಾ ಬರೆದಿದ್ದಾರೆ.

Leave a Reply