ಬಸಿರಿನ ಭಾವುಕ ಕಲ್ಪನೆಗೆ ಪುರಾಣ- ಸಂಪ್ರದಾಯಗಳು ತುಂಬಿರುವ ಸತ್ತ್ವ ಎಂಥಾದ್ದು?

author-shamaಬದುಕಿನ ತಾಳ ತಪ್ಪದಂತೆ, ಶ್ರುತಿ ಲಯ ಮೀರದ ಹಾಡಾಗಿ ಕಾಯುವ ಸಂಸ್ಕಾರ ನಮ್ಮ ನೆಲದ ಜೀವನಾಡಿ. ಸಂಸ್ಕೃತದಲ್ಲಿ ‘ಸಂಸ್ಕಾರ’ ಎಂಬುದರ ಅರ್ಥ ಶುದ್ಧೀಕರಣ. ಆದರೆ ಇಂದು ಇದನ್ನು ಉತ್ತಮ ನಡತೆ, ಸಭ್ಯತೆ, ಸಾಮಾಜಿಕವಾಗಿ ‘ಸರಿ’ ಎನಿಸಲ್ಪಟ್ಟ ವ್ಯಕ್ತಿತ್ವ ಎಂಬರ್ಥದಲ್ಲಿ ಬಳಸಲಾಗುತ್ತದೆ. ಧರ್ಮ ಸಿದ್ಧಾಂತಗಳು ಮತ್ತು ಆಚರಣೆಯ ಪ್ರಕಾರ ಸಂಸ್ಕಾರಗಳೆಂದರೆ ಪವಿತ್ರ ಕರ್ಮಗಳು, ಧಾರ್ಮಿಕ ವಿಧಿಗಳು ಮತ್ತು ಆಚರಣೆಗಳ ಸರಣಿ. ಬದುಕಿನ ವಿವಿಧ ಘಟ್ಟಗಳನ್ನು ನಿರ್ಧರಿಸುವ ನಿರ್ಣಾಯಕ ಪಾತ್ರ ವಹಿಸುತ್ತವೆ. ಇವುಗಳನ್ನು ಮಂತ್ರಗಳನ್ನೊಳಗೊಂಡ ಧಾರ್ಮಿಕ ವಿಧಿಪೂರ್ವಕ ಮಾಡುವುದು ಸರ್ವೇ ಸಾಮಾನ್ಯ.

ಮಣ್ಣಿನಾಳದಿಂದ ಬಂದ ಹೊನ್ನಿಗೆ, ಕಲ್ಲಿಂದ ಬಂದ ವಜ್ರಕ್ಕೆ ಪುಟವಿಟ್ಟು ಹೊಳಪು ನೀಡಿದಂತೆ ಸಂಸ್ಕಾರಗಳು ಮನುಷ್ಯನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವಕ್ಕೆ ಮೆರುಗು ತರುತ್ತವೆ ಎಂಬುದನ್ನು ಅಲ್ಲಗಳೆಯಲಾಗದು. “ಕಲಾಕೃತಿಯೊಂದು ವಿವಿಧ ಬಣ್ಣಗಳಿಂದ ಪರಿಪೂರ್ಣವಾಗುವ ತೆರದಲ್ಲಿ ಸರಿಯಾದ ಸಂಸ್ಕಾರಗಳು ಮನುಷ್ಯನನ್ನು ಗುಣಾಢ್ಯನನ್ನಾಗಿಸುತ್ತವೆ” ಎನ್ನುತ್ತಾನೆ ಅಂಗೀರಸ ಮಹಾಮುನಿ. ಮಹರ್ಷಿ ಗೌತಮರ ಪ್ರಕಾರ ಸಂಸ್ಕಾರವು ಆತ್ಮೋನ್ನತಿ ಮತ್ತು ಮೋಕ್ಷದ ಮೆಟ್ಟಿಲುಗಳು.   ವೇದಗಳ ಕಾಲದಿಂದಲೂ ಪ್ರಾಮುಖ್ಯವೆನಿಸಿರುವ ಶೋಡಷ ಸಂಸ್ಕಾರಗಳಲ್ಲಿ ಗರ್ಭ ಸಂಸ್ಕಾರಗಳಿಗೆ ವಿಶೇಷ ಸ್ಥಾನ ನೀಡಲಾಗಿದೆ. ಮೊದಲ ಮೂರು ಆಚರಣೆಗಳಾಗಿರುವ ಗರ್ಭಾದಾನ, ಪುಂಸವನ ಮತ್ತು ಸೀಮಂತೋನ್ನಯನಗಳು ಅಪೂರ್ವವೆನಿಸಿವೆ.

ಗರ್ಭಾದಾನವು ವಿವಾಹಾನಂತರದ ಮೊದಲ ಪವಿತ್ರ ವಿಧಿ. ಪತಿಯು ತನ್ನ ದೇಹ ಸಂಪರ್ಕದ ಮೂಲಕ ಪತ್ನಿಗೆ ಗರ್ಭಧಾರಣೆ ನೀಡುವ ಇದನ್ನು ನಿಷೇಕ ಎನ್ನುತ್ತಾರೆ. ಮದುವೆಯ ನಂತರ ಮೊದಲ ಬಾರಿಗೆ ಹೆಣ್ಣು ಋತುಮತಿಯಾದ ನಾಲ್ಕು ದಿನಗಳು ಕಳೆದ ನಂತರ ಗರ್ಭಾದಾನ ಹೋಮವೇ ಮೊದಲಾದ ಹಲವು ಧಾರ್ಮಿಕ ವಿಧಿಗಳನ್ನು ನಡೆಸಲಾಗುತ್ತದೆ. ಹೋಮದ ಮಂತ್ರವೂ ಕೂಡ ಯಾವುದೇ ಊನವಿಲ್ಲದ, ಬಲಿಷ್ಠರಾದ, ಸದ್ಗುಣವಂತರಾದ ಧೀರ್ಘಾಯುಷ್ಯ ಹೊಂದಿದ ಮಕ್ಕಳನ್ನು ಪಡೆಯುವ ಪ್ರಾರ್ಥನೆಯಾಗಿ ಹೊಮ್ಮುತ್ತದೆ. ಗರ್ಭ ಸಂಸ್ಕಾರದ ಈ ಆಚರಣೆಯ ನಂತರವೇ ಪತಿ ಪತ್ನಿಯರು ಕೂಡಬೇಕು; ಸಂಸ್ಕರಿತ ಗರ್ಭದಲ್ಲಿ ಬೀಜ ವಪನಗೊಂಡು ಮೂಡಿದ ಕುಡಿ ಸದ್ಗುಣಿಯಾಗಿ ಬೆಳೆಯುವುದು ಸಾಧ್ಯವೆಂಬ ನಂಬಿಕೆ. ಮುತ್ತೈದೆಯರನ್ನು ಕರೆಸಿ ಉಡಿ ತುಂಬಿಸಿ ಹಿರಿಯ ಮುತ್ತೈದೆಯರಿಂದ ನವವಿವಾಹಿತೆ ಉತ್ತಮ ಸಂತಾನದ ಆಶೀರ್ವಾದ ಪಡೆಯುವುದೂ ಈ ಆಚರಣೆಯ ಭಾಗ. ಇಂದಿನ ಧಾವಂತದ ಬದುಕಿನಲ್ಲಿ ಇಷ್ಟು ಕಾಯುವ ಮತ್ತು ಆಚರಿಸುವ ತಾಳ್ಮೆ, ಪುರುಸೊತ್ತು ನವ ದಂಪತಿಗಳಿಗೂ ಇಲ್ಲ; ಮನೆ ಮಂದಿಗೂ ಇಲ್ಲದ ಕಾರಣ ಮದುವೆಯ ದಿನವೇ ಇವುಗಳನ್ನೆಲ್ಲ ಮುಗಿಸಿಬಿಡುವ ಜಾಣ್ಮೆ ಸಹಜವಾಗಿದೆ.

ನಂತರದ್ದು ಪುಂಸವನ ಕರ್ಮ. ಈ ಕ್ರಿಯೆಯ ಬಗ್ಗೆ ಪ್ರಾಚೀನ ವೈದ್ಯಶಾಸ್ತ್ರವಾದ ಆಯುರ್ವೇದದಲ್ಲಿ ಪ್ರಾಮುಖ್ಯತೆ ನೀಡಿದ್ದರೂ ಬೇರೆ ಬೇರೆ ಅಭಿಪ್ರಾಯಗಳಿವೆ. ಸುಶ್ರುತನು ಗರ್ಭವತಿಯಾದ ಕೂಡಲೇ ಇದನ್ನು ಮಾಡಬೇಕೆಂದರೆ, ವಾಗ್ಭಟನು ಗರ್ಭ ಧರಿಸಿದ ಎರಡು ತಿಂಗಳೊಳಗಾಗಿ ಪುಷ್ಯ ನಕ್ಷತ್ರದ ದಿನದಿಂದ ಮೊದಲ್ಗೊಂಡು ಹನ್ನೆರಡು ದಿನ ಮಾಡಬೇಕು ಎನ್ನುತ್ತಾನೆ. ಡಲ್ಲಣನು ಗರ್ಭವತಿಯಾಗುವ ಮೊದಲು ಗರ್ಭ ಧರಿಸುವುದಕ್ಕಾಗಿ, ಧರಿಸಿದ ತಕ್ಷಣ ಗರ್ಭ ನಿಲ್ಲುವುದಕ್ಕಾಗಿ ಮತ್ತು ತನಗಿಷ್ಟವಾದ ಮಗುವಿನ ಲಿಂಗ ನಿರ್ಧಾರಕ್ಕಾಗಿ ಮೂರನೇ ತಿಂಗಳಲ್ಲಿ ಮಾಡಬೇಕು ಎನ್ನುತ್ತಾನೆ. ಹಲವಾರು ವೃಕ್ಷಗಳ ನಾರು, ಬೇರು, ಚಿಗುರುಗಳನ್ನು ಸೇರಿಸಿ ಪುಂಸವನಕ್ಕಾಗಿ ಬಳಸುವ ಔಷಧಿಯನ್ನು ತಯಾರಿಸುವ ವಿಧಿ ವಿದಾನದ ಬಗ್ಗೆಯೂ ಬಹಳಷ್ಟು ವೈರುಧ್ಯಗಳು, ಅಭಿಪ್ರಾಯಗಳೂ ಇವೆ. ಗಂಡು ಸಂತಾನವೇ ಶ್ರೇಷ್ಠವೆಂಬ ನಂಬಿಕೆ ಬಲವಾಗಿದ್ದ ಆ ಕಾಲದಲ್ಲಿ ಗಂಡು ಮಗುವನ್ನು ಪಡೆಯುವುದಕ್ಕಾಗಿಯೇ ಇದನ್ನು ಆಚರಿಸುತ್ತಿದ್ದರು ಎಂಬುದು ಬಹಳಷ್ಟು ಸಾಹಿತ್ಯಗಳಲ್ಲಿ ಕಂಡು ಬರುವ ಉಲ್ಲೇಖ. ಲಿಂಗ ನಿರ್ಧಾರಕ್ಕೆ ಚೈನಾ ಚಾರ್ಟ್ ಅವಲಂಬಿಸಿರುವ ಕಾಲಘಟ್ಟದಲ್ಲಿ ಇದು ಅಪ್ರಸ್ತುತ ಆಚರಣೆಯೂ ಹೌದು. ಆದರೆ ಗರ್ಭಿಣಿಯು ಸೇವಿಸಬೇಕಾದ ಆಹಾರಗಳ ಬಗ್ಗೆ ಸುಮಾರಾದ ಒಮ್ಮತವೇ ಎಲ್ಲರಲ್ಲಿ ಕಂಡು ಬರುತ್ತದೆ ಮತ್ತು ಇಂದಿನ ವೈದ್ಯಲೋಕ ಕೂಡ ಬಹುತೇಕ ಅವುಗಳನ್ನೇ ಶಿಫಾರಸು ಮಾಡುತ್ತದೆ.

ಮೂರನೇ ಆಚರಣೆ ಸೀಮಂತೋನ್ನಯನ. ಆಯಾ ಪ್ರದೇಶದ ಸಂಪ್ರದಾಯಗಳಂತೆ ಇದನ್ನು ಐದನೇ ತಿಂಗಳ ನಂತರ ಎಂಟನೇ ತಿಂಗಳೊಳಗಾಗಿ ಮಾಡುತ್ತಾರೆ. ತಾಯಿ ಮಗು ಇಬ್ಬರ ಸಂತೋಷ ಮತ್ತು ಆರೋಗ್ಯಕ್ಕಾಗಿ ನಡೆಸುವ ಈ ಆಚರಣೆಯು ಇಂದಿಗೂ ಎಲ್ಲೆಡೆ ಜಾರಿಯಲ್ಲಿದೆ. ಸೀಮಂತದ ವಿಶೇಷವೆಂದರೆ ಗರ್ಭಿಣಿಯ ಕೂದಲಿಗೆ ಸುಗಂಧಯುಕ್ತ ಎಣ್ಣೆ ಹಚ್ಚಿ ಬೈತಲೆ ತೆಗೆದು ಎರಡು ಭಾಗ ಮಾಡಿ ಅರಿಶಿನ ಕುಂಕುಮ ಹಚ್ಚುತ್ತಾರೆ. ಇವುಗಳಿಂದ ಮೆದುಳು ಜಾಗೃತವಾಗಿ ಮಗುವಿನ ಬುದ್ಧಿ ಬೆಳವಣಿಗೆಯೂ ಆಗುತ್ತದೆಂಬ ನಂಬಿಕೆಯಿದೆ. ಅವಳಿಗಿಷ್ಟವಾದ ತಿಂಡಿ ತಿನಿಸುಗಳು, ಬಟ್ಟೆ, ಹೂವು ಹಣ್ಣು ಕೊಡುವ ಮೂಲಕ ತಾಯಿಯಾಗುವ ಜೀವಕ್ಕೆ ಆಹ್ಲಾದ ತುಂಬಿ ಚೈತನ್ಯ ನೀಡುವುದು ಸೀಮಂತದ ಉದ್ದೇಶ. ಜತೆಗೇ ಹೊಸ ಜವಾಬ್ದಾರಿಗೆ ತೆರೆದುಕೊಳ್ಳಲಿರುವವಳಿಗೆ ಜತೆಗೆ ನಾವಿದ್ದೇವೆಂಬ ಭರವಸೆ ನೀಡಿ ಒತ್ತಡಕ್ಕೆ ಒಳಗಾಗದಂತೆ ಅಭಯ ನೀಡಿ ಪ್ರೀತಿ ತೋರಿಸುವುದು ಕೂಡ ಹೌದು.

ಆಯುರ್ವೇದದಲ್ಲಿ ಇದನ್ನೇ “ಸುಪ್ರಜಾ ಜನನ”ವೆಂದು ಕರೆಯಲಾಗುತ್ತದೆ. ಇದಕ್ಕಾಗಿ ಪಿಂಡ ಶುದ್ಧಿ ಅಂದರೆ ಗರ್ಭವನ್ನು ಸಂಸ್ಕರಿಸುವುದಕ್ಕಾಗಿ ಕೆಲವು ಔಷಧಿಗಳನ್ನೂ ಹಿಂದಿನ ಕಾಲದ ಪರಿಣತ ವೈದ್ಯರುಗಳು ನೀಡುತ್ತಿದ್ದರು. ಇದರಿಂದಾಗಿ ಸುಪ್ರಜಾ ಜನನವೇ ಖಾತ್ರಿಯಾಗುತ್ತದೆಂಬ ಭರವಸೆಯಿರುತ್ತಿತ್ತು ಎನ್ನುತ್ತಾರೆ. ಮನಸ್ಸು ಆಹ್ಲಾದವಾಗಿದ್ದು ಶಿಶುವಿನ ಬೆಳವಣಿಗೆ ಸರಿಯಾಗಿ ಆಗುವುದಕ್ಕಾಗಿ ಸಾಮವೇದದಲ್ಲಿ ಕೃಷ್ಣನ ಕೊಳಲು ಮತ್ತು ಸರಸ್ವತಿಯ ವೀಣಾದನಿಯನ್ನೊಳಗೊಂಡ ಮಂತ್ರಗಳೂ ಇವೆ.
ಅವಳ ಆತಂಕ, ಗೊಂದಲಗಳನ್ನು ಹೋಗಲಾಡಿಸಿ ಮಾನಸಿಕ ದೃಢತೆಗಾಗಿ ವಿಶೇಷವಾದ ಮಂತ್ರಗಳನ್ನೂ ಪಠಿಸುವ ಪರಿಪಾಠವಿದೆ. ಆತ್ಮವಿಶ್ವಾಸ ಮತ್ತು ಜ್ಞಾನಕ್ಕಾಗಿ ಗಾಯತ್ರಿ ಮಂತ್ರ, ಶಕ್ತಿ ಮತ್ತು ಮನೋಬಲಕ್ಕಾಗಿ ಹನುಮಂತನನ್ನು ಪ್ರಾರ್ಥಿಸುವ ಮನೋಜವಂ, ರಕ್ಷಣೆಗಾಗಿ ದುರ್ಗಾಷ್ಟಕ, ಜ್ಞಾನಕ್ಕಾಗಿ ಸರಸ್ವತಿ ಶ್ಲೋಕ, ಆದರ್ಶ ವ್ಯಕ್ತಿತ್ವಕ್ಕಾಗಿ ವಿಷ್ಣು ಸಹಸ್ರನಾಮ, ಬುದ್ಧಿಬಲಕ್ಕಾಗಿ ಕೃಷ್ಣ ಪ್ರಾರ್ಥನೆಗಳು ರೂಢಿಯಲ್ಲಿವೆ. ತೈತ್ತರೀಯ ಉಪನಿಷತ್ತಿನಲ್ಲಿ ಬುದ್ಧಿವಂತ ಮಗುವನ್ನು ಪಡೆಯುವುದಕ್ಕಾಗಿ ಪಠಿಸಬೇಕಾದ ಮಂತ್ರಗಳನ್ನೂ ಹೇಳಲಾಗಿದೆ. ಸೀಮಂತವೆಂಬುದನ್ನು ಆಚರಣೆಯಲ್ಲಿ ಪ್ರಾದೇಶಿಕ, ಜಾತಿವಾರು ಮತ್ತು ಅನೇಕ ಭಿನ್ನತೆಗಳು ಇಂದು ಕಂಡು ಬಂದರೂ ಮೂಲ ಉದ್ದೇಶ ಒಂದೇ ಆಗಿದೆ. ಮತ್ತು ಮಗುವಿನ ಜತೆ ಸಂಭಾಷಿಸುವುದು, ಒಳ್ಳೆಯ ಸಾಹಿತ್ಯದ ಓದು ಮತ್ತು ಸಂಗೀತವನ್ನು ಕೇಳುವುದರ ಬಗ್ಗೆ ಅಂದಿನ ಋಷಿ ಮುನಿಗಳಿಂದ ಇಂದಿನ ಸಂಶೋಧಕರವರೆಗೆ ಎಲ್ಲ ಎಲ್ಲರೂ ಒತ್ತು ಕೊಡುತ್ತಾರೆ.

ಪುರಾಣಗಳಲ್ಲಿ ಗರ್ಭ ಸಂಸ್ಕಾರ : ನಮ್ಮ ಪುರಾಣ ಪುಣ್ಯಕಥೆಗಳಲ್ಲಿ ಕೂಡ ಗರ್ಭ ಸಂಸ್ಕಾರದ ಸ್ಪಷ್ಟ ಉಲ್ಲೇಖವಿದ್ದು ಅವುಗಳ ಪರಿಣಾಮದ ಬಗ್ಗೆಯೂ ಹೇಳಲಾಗಿದೆ. ಪ್ರಮುಖವಾದವುಗಳೆಂದರೆ ಅಭಿಮನ್ಯು, ಪ್ರಹ್ಲಾದ, ಅಷ್ಟಾವಕ್ರ ಮತ್ತು ಹನುಮಂತ. ಶ್ರೀ ಕೃಷ್ಣನು ತಂಗಿ ಸುಭದ್ರೆಯನ್ನು ರಥದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಅವಳಿಗೆ ಬೇಸರವಾದಂತೆ ಮತ್ತು ಆಯಾಸ ಗೊತ್ತಾಗದಂತಿರಲು ಚಕ್ರವ್ಯೂಹವನ್ನು ಪ್ರವೇಶಿಸುವ ವಿಧಾನವನ್ನು ವಿವರಿಸುತ್ತಾನೆ. ಕೇಳುತ್ತಲೇ ಬಸುರಿ ಸುಭದ್ರೆ ನಿದ್ದೆಗೆ ಜಾರಿರುತ್ತಾಳೆ. ಚಕ್ರವ್ಯೂಹ ಪ್ರವೇಶದ ಬಗ್ಗೆ ಹೇಳಿ ಮುಗಿಸಿದ ಕೃಷ್ಣ ತಿರುಗಿ ನೋಡಿದರೆ ತಂಗಿಗೆ ಗಾಢ ನಿದ್ದೆ. ಅಷ್ಟು ಹೊತ್ತು ತನ್ನ ಕಥೆಗೆ “ಹೂಂ” ಎನ್ನುತ್ತಿದ್ದುದು ತಂಗಿಯ ಒಡಲೊಳಗಿನ ಕುಡಿಯೆಂದು ಗೊತ್ತಾಗುತ್ತದೆ. ಹೊರಬರುವ ವಿಧಾನ ಹೇಳದೆ ತಕ್ಷಣ ಅವನು ವಿವರಣೆಯನ್ನು ನಿಲ್ಲಿಸಿರುತ್ತಾನೆ. ಇದೇ ಕಾರಣದಿಂದ ಮುಂದೆ ಅಭಿಮನ್ಯು ಚಕ್ರವ್ಯೂಹ ಪ್ರವೇಶಿಸಿ ಹೊರ ಬರಲಾರದೆ ವೀರ ಮರಣ ಹೊಂದಿದ ಕಥೆ ಮಹಾಭಾರತದಲ್ಲಿ ಪ್ರಮುಖ ಉಲ್ಲೇಖ.

 ಯಾವತ್ತೂ ದೇವತೆಗಳಿಗೆ ಕಾಟ ಕೊಡುತ್ತ ಅಟ್ಟಹಾಸ ಮೆರೆಯುತ್ತಿದ್ದ ಪ್ರಹ್ಲಾದನ ತಂದೆ ಕ್ರೂರ ರಾಕ್ಷಸನಾಗಿದ್ದರೂ ತಾಯಿ ಕಯಾಧು ಗಂಡನ ಇಂಥ ನಡವಳಿಕೆಗಳಿಂದ ಬೇಸತ್ತು ಹುಟ್ಟುವ ಮಗು ತಂದೆಯಂತಾಗದೇ ಸದ್ಗುಣ ಸಂಪನ್ನನಾಗಲೆಂಬ ಆಸೆ ಹೊಂದಿರುತ್ತಾಳೆ. ಅದಕ್ಕಾಗಿಯೇ ಗರ್ಭಿಣಿಯಾಗಿದ್ದಾಗ ಪ್ರತಿದಿನವೂ ಮಹಾವಿಷ್ಣುವಿನ ಕಥೆ ಕೇಳುತ್ತ ಶ್ಲೋಕಗಳನ್ನು ಪಠಿಸುತ್ತಿರುತ್ತಾಳೆ. ಪರಿಣಾಮವಾಗಿ ಪ್ರಹ್ಲಾದ ಮಹಾನ್ ವಿಷ್ಣು ಭಕ್ತನಾಗುತ್ತಾನೆ ಅಲ್ಲದೇ ತಂದೆಯ ರಾಕ್ಷಸ ರಾಜ್ಯಕ್ಕೆ  ತಿಲಾಂಜಲಿಯಿತ್ತು ಉತ್ತಮ ಪ್ರಜಾಪಾಲಕನೂ ಧರ್ಮ ಭೀರುವೂ ಆಗುತ್ತಾನೆ ಎನ್ನುತ್ತವೆ  ಪುರಾಣಗಳು.

 ರಾಮ ಭಕ್ತ ಹನುಮಂತನು ತಾಯಿ ಅಂಜನಾದೇವಿಯ ಗರ್ಭದೊಳಗಿದ್ದಾಗ ಪರಮ ಶಿವ ಭಕ್ತೆಯಾದ ಆಕೆಯು ದೈವಿಕವಾದ ಮಗುವಿಗಾಗಿ ಇರುವಂಥ ಫಲ ಸೇವಿಸಿದ್ದರ ಪರಿಣಾಮ ಹನುಮಂತನು ಅಸಾಧ್ಯ ಶಕ್ತಿವಂತನೂ ದೈವ ಭಕ್ತನೂ, ಪರಮ ಶೌರ್ಯವುಳ್ಳವನೂ ಆಗಿ ಹುಟ್ಟಿತ್ತಾನೆ. ಈ ಕಾರಣದಿಂದಲೇ ಅವನು ಯಾವತ್ತೂ ಕೆಟ್ಟದ್ದರ ವಿರುದ್ಧ ಹೊರಾಡುತ್ತ ಒಳ್ಳೆಯದನ್ನೇ ಮಾಡುತ್ತ ರಾಮ ಸೀತೆಯರ ಪರಮ ಭಕ್ತನಾಗಿ ಅಜರಾಮರನಾಗುತ್ತಾನೆ.

ಅಷ್ಟಾವಕ್ರನು ಹೊಟ್ಟೆಯೊಳಗಿದ್ದಾಗ ಅವನ ತಾಯಿ ಸುಜಾತಳಿಗೆ ತನ್ನ ಗರ್ಭ ಸಂಜಾತನು ಜಗತ್ತಿನ ಪರಮ ಜ್ಞಾನಿಯಾಗಬೇಕೆಂಬ ಹಂಬಲ. ಅದಕ್ಕಾಗಿ ತನ್ನ ತಂದೆ ಮತ್ತು ಗಂಡ ನಡೆಸುತ್ತಿದ್ದ ಪಾಠಗಳನ್ನು ನಿರಂತರ ಕೇಳುತ್ತಿರುತ್ತಾಳೆ. ಹೀಗಿರುವಾಗ ಒಮ್ಮೆ ಅವಳ ಕಹೋದನ ತಪ್ಪು ಉಚ್ಛಾರಣೆಯೊಂದನ್ನು ಹೊಟ್ಟೆಯೊಳಗಿನ ಕೂಸು ಸರಿಪಡಿಸುತ್ತದೆ. ಇದರಿಂದ ಎಲ್ಲರೆದುರು ಅಪಮಾನಿತನಾದ ಕಹೋದನು ಅಷ್ಟಾವಕ್ರನಾಗೆಂದು ಶಾಪ ಕೊಡುತ್ತಾನೆ. ಇದರಿಂದಾಗಿ ಅಂಗವೈಕಲ್ಯವನ್ನು ಹೊಂದಿ ಹುಟ್ಟಿದರೂ ಮಗು ಗರ್ಭದೊಳಗಿದ್ದಾಗಲೇ ಆಗಾಧ ಪಾಂಡಿತ್ಯ ಪಡೆದ ಪರಮ ಜ್ಞಾನಿಯಾಗಿರುತ್ತಾನೆ. ಮುಂದೆ ಜ್ಞಾನವನ್ನೇ ಬಳಸಿಕೊಂಡು ಅವನು ಅಂಗವೈಕಲ್ಯವನ್ನು ಸರಿಪಡಿಸಿಕೊಳ್ಳುತ್ತಾನೆಂಬುದು ಪುರಾಣಗಳ ಉಲ್ಲೇಖ.

ವೀರ ವಿನಾಯಕ ದಾಮೋದರ ಸಾವರ್ಕರ್ ಅವರ ತಾಯಿ, ಭಗತ್ ಸಿಂಗ್ ತಾಯಿಯೂ ಗರ್ಭಾವಸ್ಥೆಯಲ್ಲಿ ಶೌರ್ಯದ ಕಥೆಗಳನ್ನು ಜತೆಗೇ ರಾಮಾಯಣ ಮಹಾಭಾರತಗಳನ್ನು ಪ್ರಜ್ಞಾಪೂರ್ವಕ ಓದುತ್ತಿದ್ದರು ಎಂಬುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಒಟ್ಟಿನಲ್ಲಿ ಜನನವೆಂಬುದು ಹೇಗೆ ನಿರಂತರ ಪ್ರಕ್ರಿಯೆಯೋ ಗರ್ಭ ಸಂಸ್ಕಾರಗಳು ಮತ್ತು ಉತ್ತಮ ಸಂತಾನದ ಬಯಕೆಯೂ ಅನಾದಿ ಕಾಲದಿಂದ ಅನೂಚಾನವಾಗಿ ನಡೆದುಬಂದವುಗಳು. ಚೆಂದದ ಬದುಕಿಗೆ ಭರತನ ಪ್ರೀತಿ, ರಾಮನ ನೀತಿ ಕೂಡ ಕೃಷ್ಣನ ಜಾಣ್ಮೆಯಷ್ಟೇ ಮುಖ್ಯ. ಇಂದಿನ ಆಧುನಿಕತೆಯ ಸುಳಿಗಾಳಿಗೆ ಸಿಲುಕಿ ಹಿಂದಿನ ಆಚಾರ ವಿಚಾರಗಳನ್ನು ಬರಿಯ ಮೂಢ ನಂಬಿಕೆಗಳೆಂದು ತಳ್ಳಿ ನಡೆಯಬಾರದಷ್ಟೆ.

2 COMMENTS

  1. ನೀವು ಇಲ್ಲಿ ನೀಡಿರುವ ಪೌರಾಣಿಕ ವಿಚಾರದ ವ್ಯಾಪ್ತಿ ಬೆರಗು ಹುಟ್ಟಿಸುವಷ್ಟು ವ್ಯಾಪ್ತಿಯಿಂದ ಕೂಡಿದ್ದು ಕಥಾನಕ ಮೌಲ್ಯಗಳಿಂದ ತುಂಬಿಕೊಂಡಿದೆ. ನಿಮ್ಮ ಅಧ್ಯಯನ ನಿಷ್ಠೆ ಮತ್ತು ಪ್ರಸ್ತುತೆಯ ಸುಲಲಿತತೆ ಮೆಚ್ಚುವಂತದ್ದು.

  2. ನಿಮ್ಮ ಅನಿಸಿಕೆಗಳಿಗೆ ಧನ್ಯವಾದ. ನಿಮ್ಮ ಓದು ಪ್ರೀತಿಗೆ ನನ್ನಿ

Leave a Reply