ಬೆಂಗಳೂರಲ್ಲಿ ಕೆರೆಯಲ್ಲಿ ಮನೆ ಇಲ್ಲದವರು ಕೈ ಎತ್ರಪ್ಪಾ… ಸದನ ಸಮಿತಿ ಹಿಡಿದ ಕನ್ನಡಿಯಲ್ಲಿ ಭಯಾನಕ ಬಿಂಬಗಳು!

 

‘ಸರ್ಕಾರಿ ಸಂಸ್ಥೆಗಳು, ರಾಜಕಾರಣಿಗಳು, ಹೋರಾಟಗಾರರು ಸೇರಿದ ಹಲವು ನಿವೇಶನಗಳು ಒತ್ತುವರಿಯಾಗಿರುವ ಕೆರೆ ಜಮೀನಿನಲ್ಲಿವೆ’

ಇದು ಕೆರೆ ಒತ್ತುವರಿ ಅಧ್ಯಯನ ಜಂಟಿ ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ್ ಅವರು ಶುಕ್ರವಾರ ಸಮಿತಿಯ ವರದಿ ಸಾರಾಂಶವನ್ನು ಬಹಿರಂಗಗೊಳಿಸುತ್ತ ಹೇಳಿದ ಮಾತು. ಇವರ ಪ್ರಕಾರ ಸಿಎಂ ಸಿದ್ದರಾಮಯ್ಯನವರು ಈಗ ಬೇರೆಯವರಿಗೆ ಮಾರಿದ ಸೈಟು, ಕಾಗೋಡು ತಿಮ್ಮಪ್ಪನವರ ಜಮೀನು ಎಲ್ಲವೂ ಒತ್ತುವರಿ ಭೂಮಿಯಲ್ಲೇ ಇದೆ. ಇವರ ವರದಿಯ ಮುಖ್ಯಾಂಶಗಳು:

-ರಾಜಕಾರಣಿಗಳು, ರಿಯಲ್ ಎಸ್ಟೇಟ್‍ನವರು, ಪ್ರಭಾವಿ ಬಿಲ್ಡರ್ ಗಳು ರಾಜಧಾನಿ ಬೆಂಗಳೂರಿನಲ್ಲಿ 1.50 ಲಕ್ಷ ಕೋಟಿ ರೂ. ಮೌಲ್ಯದ 11500 ಎಕರೆ ಭೂಮಿ ಒತ್ತುವರಿ.

-ಜನವರಿ 31 ರೊಳಗೆ ನೋಟಿಸ್‍ಗೆ ಒತ್ತುವರಿದಾರರು ಉತ್ತರ ನೀಡಬೇಕು. ಉತ್ತರ ಸಮಂಜವಿಲ್ಲ ಎಂದರೆ ತೆರವುಗೊಳಿಸಲು ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶವಿದೆ.

-ಶೋಭಾ ಡೆವಲಪರ್ಸ್, ಪ್ರೆಸ್ಟೀಜ್ ಡೆವಲಪರ್ಸ್, ಭಾಗಮನೆ ಟೆಕ್ ಪಾರ್ಕ್, ಡಿಎಸ್ ಮ್ಯಾಕ್ಸ್, ಆದರ್ಶ ಡೆವಲಪರ್ಸ್, ಬ್ರಿಗೇಡ್ ಗ್ರೂಪ್, ಒಬೆರಾಯ್ ಗ್ರೂಪ್, ನಿಸರ್ಗಧಾಮ ಎಸ್ಟೇಟ್, ನಂದಿನಿ ಅಪಾರ್ಟ್‍ಮೆಂಟ್, ಅದ್ವೈತ್ ಗ್ರೂಪ್, ಐಶ್ವರ್ಯ ಡೆವಲಪರ್ಸ್, ಫ್ಯಾಂಟಸಿ ಅಪಾರ್ಟ್‍ಮೆಂಟ್, ಲೇಕ್ ವ್ಯೂ ಅಪಾರ್ಟ್‍ಮೆಂಟ್ ಈ ಎಲ್ಲರ ಹೆಸರುಗಳೂ ವರದಿಯಲ್ಲಿದ್ದು, ಉತ್ತರಿಸಲು ಈ ತಿಂಗಳ ಅಂತ್ಯದವರೆಗೆ ಅವಕಾಶ ನೀಡಲಾಗಿದೆ.

– ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ 4277 ಕೆರೆಗಳು ಒತ್ತುವರಿ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6195 ಕೆರೆಗಳು ಒತ್ತುವರಿ.

– ಒತ್ತುವರಿಯಾದ ಎಲ್ಲವನ್ನೂ ತೆರವುಗೊಳಿಸೋಕೆ ಸಾಧ್ಯವಿಲ್ಲ. ಯಾವುದು ಉಪಯುಕ್ತ ಕೆರೆ, ಇನ್ಯಾವುದಲ್ಲ, ಯಾವೆಲ್ಲ ತೆರವುಗೊಳಿಸುವ ಸ್ಥಿತಿಯಲ್ಲಿದೆ, ಯಾವುದಕ್ಕೆ ದಂಡ ತುಂಬಿಸಬಹುದು ಎಂಬುದೆಲ್ಲ ಇನ್ನಷ್ಟೇ ವಿಮರ್ಶೆಗೆ ಒಳಪಡಿಸಿದೆ.

– ಖಾಸಗಿ ಒತ್ತುವರಿದಾರರು ಮತ್ತು ಸರ್ಕಾರಿ ನೌಕರರ ಸಮ್ಮಿಲನದಿಂದ ಮಾತ್ರವೇ ಇಂಥ ಒತ್ತುವರಿ ಸಾಧ್ಯವಿದ್ದು, ಈ ಬಗ್ಗೆ ತನಿಖೆ ನಡೆದ ನಂತರವಷ್ಟೇ ಕ್ರಮ ಸಾಧ್ಯ ಎಂಬುದು ಕೋಳಿವಾಡರ ಅಭಿಮತ.

Leave a Reply