ಭಾರತಕ್ಕೆ ಬಂದ ನೆಟ್ ಫ್ಲಿಕ್ಸ್ ನಮ್ಮ ಬದುಕನ್ನು, ಮನರಂಜನೆ ಉದ್ಯಮವನ್ನು ಹೇಗೆ ಬದಲಾಯಿಸಲಿದೆ?

ರವಿ ಎಸ್.

ವಿಷಯ ಗೊತ್ತಿರಲಿ, ಇದು ಜಗತ್ತನಲ್ಲೇ ಅತ್ಯಂತ ದೊಡ್ಡ ಸಿನಿಮಾ ಲೈಬ್ರೆರಿ ಹೊಂದಿರುವ ವಿಡಿಯೋ ಸ್ಟ್ರೀಮಿಂಗ್ ಸರ್ವೀಸ್. ಸ್ಮಾರ್ಟ್ ಫೋನ್ ನಿಂದ ಸ್ಮಾರ್ಟ್ ಟೀವಿ ವರೆಗೆ ಎಲ್ಲೆಲ್ಲೂ ಇದರ ಬಳಕೆ ಸಾಧ್ಯ.

ಅಂತೂ ಇಂತೂ ನೆಟ್ ಫ್ಲಿಕ್ಸ್ ಭಾರತಕ್ಕೆ ಬಂದೇ ಬಿಡ್ತು. ಅದೆಷ್ಟು ದಿನದಿಂದ ಇದನ್ನು ಕಾಯುತ್ತಿದ್ದೆವೋ ಏನೋ. ಇದರಲ್ಲಿ ಏನಿದೆ ಎಂಬುದಂತೂ ಗೊತ್ತಿರಲಿಲ್ಲ. ಆದ್ರೆ, ಇದರ ಬಗ್ಗೆ ಕೇಳಿದ್ದ ಮಾತುಗಳಂತೂ ಮನದಲ್ಲೇ ಓಡಾಡುತ್ತಿದ್ದಂತೂ ಸತ್ಯ. ಏನೇ ಆಗಲಿ, ನೆಟ್ ಫಿಕ್ಸ್ ಭಾರತಕ್ಕೆ ಬಂದ ಕೂಡಲೇ ಆದಷ್ಟು ಬೇಗ ನನಗೇ ಬೇಗ ಗೊತ್ತಾಗಲಿ ಎಂಬ ಕಾರಣಕ್ಕಾಗಿ ಎರಡ್ಮೂರು ಬಾರಿ ರಿಜಿಸ್ಟರ್ ಬೇರೆ ಆಗಿದ್ದೆ. ಇದೀಗ ಬಂದಿದೆ. ಫುಲ್ ಸ್ಟ್ರೀಮಿಂಗ್ ಅಷ್ಟೇ.

ನೆಟ್ ಫ್ಲಿಕ್ಸ್ ಫ್ರೀಯಲ್ಲ. ಇದಕ್ಕೆ ಮಾಸಿಕ ಅಂತ ಒಂದಷ್ಟು ಹಣ ಕೊಡಬೇಕು. ತಿಂಗಳಿಗೆ 500 ರಿಂದ 800 ರೂಪಾಯಿವರೆಗೆ ಶುಲ್ಕವಿದೆ. 500 ಬೇಸಿಕ್. ಹೆಚ್ ಡಿ ಸೇವೆ ಸಿಗಲ್ಲ. ಅಲ್ದೇ ಒಮ್ಮೆಗೆ ಒಬ್ರು ಮಾತ್ರ ಬಳಕೆ ಮಾಡಬಹುದು. ಆದ್ರೆ 650 ರೂಪಾಯಿಯ ಇನ್ನೊಂದು ಪ್ಲಾನ್ ಇದೆ. ಇದರಲ್ಲಿ ಹೆಚ್ ಡಿ ಸಿಗುತ್ತೆ. ಆದ್ರೆ ಇಬ್ಬರು ಮಾತ್ರ ಏಕಕಾಲಕ್ಕೆ ಬಳಕೆ ಮಾಡಬಹುದು. 800 ರೂಪಾಯಿ ಪ್ಲಾನ್ ನಲ್ಲಿ ಅಲ್ಟ್ರಾ ಹೆಚ್ ಡಿ ಸಿಗುತ್ತೆ. ಆದ್ರೆ ಮನೆಯಲ್ಲಿ 4ಕೆ ಹೆಚ್ ಡಿ ಟಿವಿ ಇರ್ಬೇಕು. ಕ್ರೆಡಿಟ್ ಕಾರ್ಡ್ ಅಥವಾ ಪೇಪಲ್ ಮೂಲಕ ಹಣ ಪಾವತಿ ಮಾಡಬಹುದು. ಮೊದಲ ತಿಂಗಳು ಫ್ರೀ. ಎರಡನೇ ತಿಂಗಳಿಂದ ಶುಲ್ಕ ಕಡಿತವಾಗುತ್ತಾ ಹೋಗುತ್ತೆ. ಆರಂಭದಲ್ಲಿ 79 ರೂಪಾಯಿ ತೆಗೆದುಕೊಳ್ತಾರೆ. ಇದು ಇನಿಶಿಯಲ್ ಫೀ ಮಾತ್ರ. ನಿಮಗೆ ಗೊತ್ತಿರಲಿ, ಸದ್ಯ 69 ದಶಲಕ್ಷ ಗ್ರಾಹಕರಿದ್ದಾರೆ ಇದಕ್ಕೆ. 4 ಕೋಟಿ ಮಂದಿ ಅಮೆರಿಕದಲ್ಲೇ ಇದ್ದಾರೆ.

ಇದೆಲ್ಲ ಸರಿ, ನಾವು ಮನರಂಜನೆ ಗ್ರಹಿಸುವ ಬಗೆಯನ್ನು ನೆಟ್ ಫ್ಲಿಕ್ಸ್ ಬದಲು ಮಾಡುತ್ತಾ? ಧಾರಾವಾಹಿಗಳಲ್ಲಿ ಬಿದ್ದಿರುವ ಹಳೆ ತಲೆಮಾರಿನ ವಿಷಯ ಹೇಗೋ ಗೊತ್ತಿಲ್ಲ. ಆದರೆ ಹೊಸ ನಿರೂಪಣೆ, ಹೊಸಬಗೆಯ ವಿಷಯಗಳಿಗಾಗಿ ಕಾತರದಿಂದಿರುವ ಅಂತರ್ಜಾಲ ಮೋಹಿ ಹೊಸ ಜಮಾನಾವನ್ನು ನೆಟ್ ಫ್ಲಿಕ್ಸ್ ಆವರಿಸಿಕೊಳ್ಳುವ ಎಲ್ಲ ಸೂಚನೆಗಳೂ ಇವೆ. ಸದ್ಯಕ್ಕೆ ಇದರ ಒಂದು ಕೊರತೆ ಅಂದ್ರೆ, ಲೋಕಲ್ ಕಂಟೆಂಟ್ ಇರಲ್ಲ. ಹಾಲಿವುಡ್ ಸಿನಿಮಾಗಳು, ಅಮೆರಿಕದ ಶೋಗಳೇ ಹೆಚ್ಚು ಇರುತ್ತವೆ. ಇಂಗ್ಲಿಷ್ ಮೂವಿಗಳ ಮೇಲೆ ಹೆಚ್ಚು ಒಲವಿರುವವರು ಇದರ ಬಳಕೆ ಮಾಡಬಹುದು. ಆದರೂ ಸದ್ಯಕ್ಕೆ ಭಾರತದ ಕೆಲ ಮೂವಿಗಳಿವೆ. ಪೀಕು, ಹಮ್ ಆಪ್ಕೆ ಹೈ ಕೌನ್, ಅಂದಾಜ್ ಅಪ್ನಾ ಅಪ್ನಾ ಸೇರಿ ಕೆಲ ಮೂವಿಗಳಿವೆ. ಆದರೆ ಹಿಂದಿ ಧಾರಾವಾಹಿಗಳಿಲ್ಲ. ಸದ್ಯ ಭಾರತೀಯ ನಿರ್ಮಾಪಕರ ಬಳಿ ಮಾತುಕತೆ ನಡೆಯುತ್ತಿದೆ. ಮುಂದೆ ಇನ್ನಷ್ಟು ಮೂವಿ, ಶೋಗಳು ಬರಬಹುದು.

fbನೆಟ್ ಫ್ಲಿಕ್ಸ್ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಆಚೆಗೆ ಪ್ರಾದೇಶಿಕ ಭಾಷೆಗಳ ಖಾಸಾ ಖಾಸಾ ಮನರಂಜನೆ ಪ್ರದರ್ಶನಗಳಿಗೆ ನೆಟ್ ಫ್ಲಿಕ್ಸ್ ವೇದಿಕೆ ಆಗಬೇಕು ಎಂಬ ಆಗ್ರಹದ ಧ್ವನಿಗಳು ಈಗಲೇ ಕೇಳಿಬರುತ್ತಿವೆ. ‘ರಂಗಿತರಂಗದಂಥ ಚಿತ್ರ ಅಮೆರಿಕದ ಥಿಯೇಟರ್ ಗಳಲ್ಲಿ 2 ಕೋಟಿ ರುಪಾಯಿ ದುಡಿಯೋದು ಸಾಧ್ಯವಾದರೆ, ನೆಟ್ ಫ್ಲಿಕ್ಸ್ ನಂಥ ವೇದಿಕೆ ಮೂಲಕ ಕನ್ನಡದ ಮನರಂಜನೆಯನ್ನು ತಲುಪಿಸುವ ವಿಧಾನಕ್ಕೆ ಎಂಥ ಮಾರುಕಟ್ಟೆ ಸಿಗಬಹುದು ಯೋಚಿಸಿ. ಇದರ ಲಾಭ ಯಾವುದೋ ಕಂಪನಿಗೆ ಮಾತ್ರವಾಗದೇ ಕನ್ನಡದ ಚಲನಚಿತ್ರ, ಮನರಂಜನಾ ಉದ್ಯಮಕ್ಕೆ ಲಾಭವಾಗುವಂತೆ ಅರಿವು ಮೂಡಬೇಕಿದೆ’ ಅಂತ ಪ್ರಾದೇಶಿಕ ಸಂದರ್ಭದಲ್ಲಿ ನೆಟ್ ಫ್ಲಿಕ್ಸ್ ಸವಾಲುಗಳನ್ನು ವಿವರಿಸುತ್ತಾರೆ ಕನ್ನಡ ಸಂಬಂಧಿ ಹೋರಾಟ- ಅರಿವು ಅಭಿಯಾನಗಳಲ್ಲಿ ತೊಡಗಿಸಿಕೊಂಡಿರುವ ವಸಂತ್ ಶೆಟ್ಟಿ.

ಪ್ರಾದೇಶಿಕ ಭಾಷೆಗಳಲ್ಲಿ ಬಹುದೊಡ್ಡ ಮಾರುಕಟ್ಟೆಯೂ ಇರುವುದರಿಂದ ಈ ಆಗ್ರಹವನ್ನು ನೆಟ್ ಫ್ಲಿಕ್ಸ್ ಕಡೆಗಣಿಸುವಂತಿಲ್ಲ. ಈ ವಲಯಕ್ಕೆ ಅವರು ಕೈಯಿಟ್ಟಿದ್ದೇ ಆದರೆ ಇವತ್ತಿನ ಟಿವಿ ಚಾನೆಲ್ ಗಳೆಲ್ಲ ಮನರಂಜನೆಯ ಹೊಸ ವಿಧಾನಕ್ಕೆ ತಮ್ಮನ್ನೂ ಒಗ್ಗಿಕೊಳ್ಳಿಸಬೇಕಾದ ಒತ್ತಡಕ್ಕೆ ಬೀಳಬಹುದು.

ನೆಟ್ ಫ್ಲಿಕ್ಸ್ ನ ದೊಡ್ಡ ಬಲ ಎಂದರೆ ಅದು ಕಾರ್ಯಕ್ರಮದ ನಡುವೆ ಜಾಹೀರಾತು ಕೊಡುವುದಿಲ್ಲ. ಇಡಿ ಇಡಿಯಾಗಿ ಕಾರ್ಯಕ್ರಮ, ಮೂವಿ, ಮನರಂಜನೆಯನ್ನು ಸವಿಯಬಹುದು.

ಅಲ್ಲದೇ ಇಂಥದ್ದೇ ಸಮಯಕ್ಕೆ ಟಿವಿ ಪೆಟ್ಟಿಗೆ ಎದುರು ಇರಬೇಕು ಅಂತಿಲ್ಲ. ಪುರಸೊತ್ತಿದ್ದಾಗ ನೋಡಿ. ಅರ್ಧ ನೋಡಿ, ಆಮೋಲೆ ಬೇಕಾದ್ರೆ ಮುಂದುವರಿಸಿ. ಟಿವಿ ಎಂಬುದು ಸಾಮೂಹಿಕ ನೋಟಕ್ಕೆ ಒಗ್ಗೋದಾದ್ರೆ, ನೆಟ್ ಫ್ಲಿಕ್ಸ್ ವೈಯಕ್ತಿಕ ಆಸ್ವಾದನೆ ಅನುಭವವನ್ನು ಕಟ್ಟಿಕೊಡುವಂಥದ್ದು.

ಹೇಗೆ ನೋಡಬಹುದು ಅಂತಂದ್ರೆ…

ಪಿಸಿ, ಲ್ಯಾಪ್ ಟಾಪ್, ಟ್ಯಾಬ್ಲೆಟ್, ಮೊಬೈಲ್ ಗಳಲ್ಲಿ ನೋಡಲು ಚೆನ್ನ. ಟಿವಿ ಇದ್ದರೆ ಇನ್ನೂ ಚೆನ್ನ. ಮನೆಯಲ್ಲಿ ಇಂಟರ್ನೆಟ್ ಇರ್ಬೇಕು, ಅದೂ ವೈಫೈ ಇರ್ಬೇಕು ಅನ್ನೋದನ್ನು ಯಾರೂ ಮರೆಯಬಾರದು. ಗೂಗಲ್ ಗ್ರೋಮ್ ಕಾಸ್ಟ್, ಆಪಲ್ ಟಿವಿ, ಆಂಡ್ರಾಯ್ಡ್ ಟಿವಿ ಇದ್ದರೆ ನೋಡಲು ಇನ್ನಷ್ಟು ಸೊಗಸು.

ಇಂಟರ್ನೆಟ್ ನಲ್ಲಿ ಟಿವಿ ನೋಡಲು ಮಿನಿಮಮ್ 1 ಎಂಬಿಪಿಎಸ್ ಆದ್ರೂ ಸ್ಪೀಡ್ ಇರಲೇಬೇಕು. ಮೊಬೈಲ್ ನಲ್ಲಿ 4ಜಿ ಅಥವಾ ಅಟ್ ಲೀಸ್ಟ್ 3ಜಿಯಾದ್ರೂ ಇರ್ಬೇಕು. 1 ಎಂಬಿಪಿಎಸ್ ಇದ್ರೆ ಮೊದಲು ಬಫರ್ ಆಗಿ, ಬಳಿಕ ಒಳ್ಳೇ ಕ್ವಾಲಿಟಿಯ ಫಿಲ್ಮ್ ನೋಡಬಹುದು.

ಭಾರತದಲ್ಲಿ ನೆಟ್ ಫಿಕ್ಸ್ ಒಂದೇ ಆಪ್ಶನ್ನಾ

ಇಲ್ಲ, ಇಂಥದ್ದೇ ಸರ್ವೀಸ್ ಇರೋ ಬೇರೆ ಬೇರೆ ವೆಬ್ ಸೈಟ್ ಗಳಿವೆ. ಹೂಕ್ ಮತ್ತು ಬಾಕ್ಸ್ ಟಿವಿಗಳಿವೆ. ಇದರಲ್ಲಿ ನೆಟ್ ಫಿಕ್ಸ್ ಗಿಂತಲೂ ಕಡಿಮೆ ಹಣಕ್ಕೆ ಸೇವೆ ಸಿಗುತ್ತೆ. ಇದಷ್ಟೇ ಅಲ್ಲ ಹಾಟ್ ಸ್ಟಾರ್ ಇದೆ. ಇದರಲ್ಲಿ ಫ್ರೀಯಾಗಿಯೇ ನೋಡಬಹುದು. ಆದರೆ ನೆಟ್ ಫಿಕ್ಸ್ ನಲ್ಲಿ ಸಿಗೋ ಲೈಬ್ರೆರಿ ಬೇರೆ ಎಲ್ಲೂ ಇಲ್ಲ.. ಅಲ್ಲದೇ ಜಾಹೀರಾತಿಲ್ಲದ ಪ್ರಪಂಚವಿದು.

Leave a Reply