ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಸುಬ್ರಮಣಿಯನ್ ಸ್ವಾಮಿ ಪೌರೋಹಿತ್ಯ, ಮಥುರೆಯ ಕೃಷ್ಣ- ಕಾಶಿಯ ವಿಶ್ವನಾಥ ಪರವಾಗಿಯೂ ಹೋರಾಡುವ ಇಂಗಿತ

ಡಿಜಿಟಲ್ ಕನ್ನಡ ಟೀಮ್

2016ರ ಹೋರಾಟದ ಅವಧಿಯನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ವ್ಯಯಿಸುವುದಾಗಿ ಸುಬ್ರಮಣಿಯನ್ ಸ್ವಾಮಿ ಕೆಲದಿನಗಳ ಹಿಂದೆಯೇ ಹೇಳಿದ್ದರು. ದೆಹಲಿ ವಿಶ್ವವಿದ್ಯಾಲಯದಲ್ಲಿ ರಾಮ ಮಂದಿರ ನಿರ್ಮಾಣದ ಸಂಬಂಧ ಶನಿವಾರ ಸೆಮಿನಾರ್ ಹಮ್ಮಿಕೊಂಡು ಅದರಲ್ಲಿ ಮುಖ್ಯ ಭಾಷಣ ಮಾಡುವ ಮೂಲಕ ಸ್ವಾಮಿ ಇದರ ಆರಂಭ ಸೂಚಿಸಿದರು.

ರಾಮ ಮಂದಿರದಂಥ ಧಾರ್ಮಿಕ ವಿಷಯವನ್ನು ವಿಶ್ವವಿದ್ಯಾಲಯದಲ್ಲಿ ಚರ್ಚಿಸುವುದಕ್ಕೆ ಎಡಪಂಥ ಬೆಂಬಲಿತ ವಿದ್ಯಾರ್ಥಿಗಳ ಗುಂಪಿನಿಂದ ಭಾರಿ ಪ್ರತಿಭಟನೆಯೂ ವ್ಯಕ್ತವಾಯಿತು. ಅದು ವಿಚಾರಗೋಷ್ಟಿಗೇನೂ ಕುತ್ತು ತರಲಿಲ್ಲ. ‘ಇವರು ಕಾರ್ಲ್ ಮಾರ್ಕ್ಸ್ ಬಗ್ಗೆ, ಕ್ರೈಸ್ತ ಮತದ ಕುರಿತು ಇದೇ ವಿಶ್ವವಿದ್ಯಾಲಯದಲ್ಲಿ ಚಿಂತನಾಕೂಟಗಳನ್ನು ಈ ಹಿಂದೆ ಆಯೋಜಿಸಿರಲಿಲ್ಲವೇ? ಆಗಿಲ್ಲದ ಆಕ್ಷೇಪ ಈಗೇಕೆ?’ ಅಂತ ಚಾಟಿ ಬೀಸಿದರು ಸ್ವಾಮಿ. ಅವರೇ ಟ್ವೀಟ್ ನಲ್ಲಿ ಸಾರಿರುವಂತೆ- ರಾಮ ಮಂದಿರ ನಿರ್ಮಾಣದ ಕುರಿತು ಕೇಸರಿ ಬಣದ ಚಿಂತಕರನ್ನು ವಾಸ್ತವಾಂಶಗಳ ಮೇಲೆ ಸಜ್ಜುಗೊಳಿಸುವುದಕ್ಕಾಗಿ ಈ ವಿಚಾರಕೂಟ. ಇಲ್ಲಿ ಸುಬ್ರಮಣಿಯನ್ ಸ್ವಾಮಿ ಪ್ರಸ್ತಾಪಿಸಿದ ಸಂಗತಿಗಳು ಇವು.

swamy

(ಚಿತ್ರಕೃಪೆ- ಸುಬ್ರಮಣಿಯನ್ ಸ್ವಾಮಿಯವರ ಟ್ವಿಟರ್ ಖಾತೆ)

– ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಏಕೆಂದರೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ರಾಜೀವ್ ಗಾಂಧಿ ಬದ್ಧತೆ ತೋರಿಸಿದ್ದರು. ಅವರ ಕಾಲದಲ್ಲಿ ರಾಮಾಯಣ ಧಾರಾವಾಹಿ ಪ್ರಸಾರಕ್ಕೂ ಪಕ್ಷದಲ್ಲಿ ಆಕ್ಷೇಪವಿತ್ತು. ಆದರೆ ರಾಜೀವ್ ಅದಕ್ಕೆ ಮನ್ನಣೆ ನೀಡದೇ ಜನರಿಗೆ ರಾಮಾಯಣ ವೀಕ್ಷಣೆಯ ಹೊಸ ಪುಳಕ ಕೊಟ್ಟರು.

– ಸಂಸ್ಕೃತಿಯ ಪುನರುತ್ಥಾನಕ್ಕೆ ರಾಮ ಮಂದಿರ ನಿರ್ಮಾಣ ಅತ್ಯಗತ್ಯ. ಹಾಗಂತ ಕಾನೂನಿಗೆ ವಿರುದ್ಧವಾಗಿ, ಬಲವಂತವಾಗಿ ಏನನ್ನೂ ಮಾಡುವುದಿಲ್ಲ. ಮಂದಿರ ನಿರ್ಮಾಣಕ್ಕೆ ನ್ಯಾಯಾಲಯದಿಂದ ಒಪ್ಪಿಗೆ ಪಡೆದುಕೊಳ್ಳುವ ಅದಮ್ಯ ವಿಶ್ವಾಸವಿದೆ. ಮುಸ್ಲಿಮರಲ್ಲಿ ಸಹಮತ ಮೂಡಿಸಿಯೇ ಈ ವರ್ಷಾಂತ್ಯದಲ್ಲಿ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗುವುದು.

– ದೇಶದಲ್ಲಿ ಸುಮಾರು 40 ಸಾವಿರ ಮಂದಿರಗಳನ್ನು ನಾಶಪಡಿಸಲಾಗಿದೆ. ಅವೆಲ್ಲವನ್ನೂ ಮತ್ತೆ ಕಟ್ಟಬೇಕೆಂದು ನಾವು ಹೇಳುತ್ತಿಲ್ಲ. ಆದರೆ, ಅಯೋಧ್ಯೆಯ ರಾಮಮಂದಿರ, ಮಥುರೆಯ ಕೃಷ್ಣ ದೇವಾಲಯ ಹಾಗೂ ಕಾಶಿಯ ವಿಶ್ವನಾಥ ದೇವಾಲಯಗಳ ವಿಷಯದಲ್ಲಿ ರಾಜಿಯೇ ಇಲ್ಲ. ಈ ಬಗ್ಗೆ ಸಂವಾದಕ್ಕೆ ಸಿದ್ಧವೇ ಹೊರತು ರಾಜಿಗಲ್ಲ.

Leave a Reply