ದೇಶಭಕ್ತಿಯ ಭಾಷಣಗಳಲ್ಲಿ ಲೋಪಗಳನ್ನು ಮುಚ್ಚಿಡುವ ಮುನ್ನ, ಆಗಬೇಕಿದೆ ಆಂತರಿಕ ಅವಲೋಕನ

ಪ್ರವೀಣ್ ಕುಮಾರ್

ಪಾಕಿಸ್ತಾನಕ್ಕೆ ಪಾಪಿಸ್ತಾನ, ಉಗ್ರರ ಸ್ವರ್ಗ, ಬೆನ್ನಿಗೆ ಚೂರಿ ಹಾಕೋರು…. ಹಿಂಗೆಲ್ಲ ಪರಿ ಪರಿಯಾಗಿ ಕರೆದಿದ್ದಾಗಿದೆ. ಇನ್ನೂ ನಿಂದಿಸುವುದಕ್ಕೆ ಹೊಸ ಪದಗಳ ಅನ್ವೇಷಣೆ ಮಾಡಬೇಕಷ್ಟೆ. ಆದರೆ ಈಗ ಕೇಳಿಕೊಳ್ಳಬೇಕಿರುವ ಪ್ರಶ್ನೆ, ‘ಪಾಕಿಸ್ತಾನವನ್ನು ಬಯ್ಯೋದೇ ಭಾರತೀಯರ ಕಾಲಕ್ಷೇಪದ ವಿಷಯವಾಗಬೇಕೋ ಅಥವಾ ಆಂತರಿಕ ಅವಲೋಕನ ಆಗಬೇಕೋ..?’

ಪಕ್ಕದ ಮನೆಯವನು ಭಾರಿ ವಿಕ್ಷಿಪ್ತ. ನಿಮ್ಮನೆ ತೋಟಕ್ಕೆ- ಗದ್ದೆಗೆ ಯಾವಾಗ ದನ ನುಗ್ಗಿಸೋದು ಅಂತ ಕಾಯ್ತಾನೇ ಇರ್ತಾನೆ. ಅಂಥವನನ್ನು ಮನಸಾರೆ ಬಯ್ಯೋಣ… ಫೈನ್. ಆದ್ರೆ ಮೊದಲು ಆಗಬೇಕಿರುವ ಕೆಲಸ ಬೇಲಿ ಕಟ್ಟಿಕೊಳ್ಳೋದಲ್ವೇ? ಅದಲ್ಲದೇ ಎಷ್ಟೇ ಬೈದುಕೊಂಡಿದ್ರೂ ಫೇಸ್ ಬುಕ್ ನ ನೂರು ಲೈಕುಗಳಾಚೆಗಿನ ಪ್ರಯೋಜನವೇನು?

ವಿಷಯವಿಷ್ಟೇ. ಪಠಾಣ್ ಕೋಟ್ ಉಗ್ರ ದಾಳಿಯ ಬೆನ್ನಲ್ಲೇ ಪಂಜಾಬ್ ಪೊಲೀಸರು, ಮಾದಕ ವಸ್ತು ಸಾಗಣೆ ಜಾಲದ ಮೂವರನ್ನು ಬಂಧಿಸಿದರು. ಇವರ ಬಳಿ ಪಾಕಿಸ್ತಾನದ ಸಿಮ್ ಕಾರ್ಡುಗಳಿದ್ದವು ಎಂಬುದು ವರದಿಯಾಯಿತು. ನಂತರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ನಿಜಕ್ಕೂ ಬಾಂಬ್ ನಂಥದೇ ಸತ್ಯವೊಂದು ಸ್ಫೋಟಿಸಿತು. ಗಡಿ ಭದ್ರತಾ ಪಡೆ (ಬಿಎಸ್ ಎಫ್) ಯ ಕೆಲವು ಸಿಪಾಯಿಗಳು ದೇಶದ ಭದ್ರತೆಗೆ ಕೊಳ್ಳಿ ಇಡುವ ಕಾರ್ಯದಲ್ಲಿ ಹೇಗೆ ಭಾಗಿಯಾಗಿದ್ದಾರೆ ಎಂಬ ವಿವರಗಳವು! ಬಿಎಸ್ ಎಫ್ ನ 52ನೇ ಬಟಾಲಿಯನ್ ನ ಕಾನ್ ಸ್ಟೆಬಲ್ ಅನಿಲ್ ಎಂಬುವವರ ಬಂಧನವಾಗಿದೆ. ಭಾರತದೊಳಗೆ ಹೆರಾಯಿನ್, ಅಫೀಮು ಮತ್ತು ಶಸ್ತ್ರಗಳನ್ನು ತರುವ ವ್ಯೂಹಕ್ಕೆ ಎಲ್ಲ ಬಗೆಯ ಸಹಕಾರ ನೀಡುತ್ತಿದ್ದರೆಂಬುದು ಅನಿಲ್ ಮೇಲಿನ ಆರೋಪ. ಅನಿಲ್ ನನ್ನು ಮೊಹಾಲಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ ಸಂದರ್ಭದಲ್ಲಿ ‘ಮೇಲ್ ಟುಡೆ’ ಪತ್ರಿಕೆ ಆತನ ಪ್ರತಿಕ್ರಿಯೆ ಪಡೆಯುವಲ್ಲಿ ಸಫಲವಾಯಿತು. ಆತ ಹೇಳಿದ್ದು- ‘ಮದುವೆ ಸಮಾರಂಭವೊಂದರಲ್ಲಿ ಕೆಲವರು ನನ್ನ ಬಳಿ ಬಂದು, ನೀನೇಕೆ ಇನ್ನೂ ಮನೆ ಕಟ್ಟಿಸಿಕೊಳ್ಳದೇ ಬಡವನಾಗಿಯೇ ಇದ್ದೀಯಾ? ನಾವು ನಿನ್ನನ್ನು ಶ್ರೀಮಂತನನ್ನಾಗಿಸ್ತೇವೆ ಅಂದ್ರು. ಎರಡು ಸಿಮ್ ಕಾರ್ಡ್ ಕೊಟ್ಟು ಲಾಹೋರ್ ನಿಂದ ಇಮ್ತಿಯಾಜ್ ಎಂಬಾತ ಕರೆ ಮಾಡ್ತಾರೆ ಅಂತ ತಿಳಿಸಿದ್ರು.’

ಇದಕ್ಕೊಪ್ಪಿದ ಅನಿಲ್ ಗೆ 50 ಸಾವಿರ ರುಪಾಯಿಗಳು ಮೊದಲ ಕಂತಲ್ಲಿ ಸಿಕ್ಕಿವೆ. ಇಮ್ತಿಯಾಜ್ ಜತೆ ಮಾತಾಗುತ್ತಲೇ ಅನಿಲ್ ಹೆಂಡತಿಯ ಬ್ಯಾಂಕ್ ಖಾತೆಗೆ 36 ಸಾವಿರ ರುಪಾಯಿಗಳು ಬಂದು ಬಿದ್ದಿವೆ.

ವಾಟ್ಸ್ ಆ್ಯಪ್, ಗೂಗಲ್ ಮ್ಯಾಪ್ ಗಳನ್ನು ಉಪಯೋಗಿಸಿ ಗಡಿಯಲ್ಲಿ  ಭ್ರಷ್ಟ ಅಧಿಕಾರಿ ಎಲ್ಲಿದ್ದಾರೆ, ಎಲ್ಲಿ ನುಸುಳಬಹುದು ಎಂಬೆಲ್ಲ ಮಾಹಿತಿಗಳನ್ನು ಡ್ರಗ್ ಮಾಫಿಯಾ ಪಡೆದುಕೊಳ್ಳುತ್ತದೆ. ಚಳಿಗಾಲದಲ್ಲೇ ಈ ಮಾಫಿಯಾದ ಕಾರುಬಾರು ಅಧಿಕ. ಏಕೆಂದರೆ ಮಂಜು ಕವಿದ ವಾತಾವರಣ ನುಸುಳುವಿಕೆಗೆ ಇನ್ನಷ್ಟು ಪೂರಕ.

ಇವೆಲ್ಲ ಈಗ ಹೊರಬರುತ್ತಿರುವ ಸಂಗತಿಗಳು. ಪಂಜಾಬ್ ವಿಷಯದಲ್ಲಿ ಇದನ್ನು ತಳ್ಳಿಹಾಕುವಂತೆಯೇ ಇಲ್ಲ. ಏಕೆಂದರೆ ಅಲ್ಲಿನ ಯುವಕರು ಡ್ರಗ್ ಅಮಲಲ್ಲಿ ತಾರುಣ್ಯವನ್ನೇ ಬಲಿಗೊಟ್ಟಿರುವುದು, ಇವರಿಗೆ ಬೇಕಾಗುವ ಸರಕು ಅಫ್ಘಾನಿನಿಂದ ಪ್ರಯಾಣ ಬೆಳೆಸಿ, ವಾಯಾ ಪಾಕಿಸ್ತಾನದ ಮೂಲಕ ಭಾರತ ಪಂಜಾಬ್ ಗಡಿಯಲ್ಲಿ ಭಾರತ ತಲುಪುವುದು ಇವೆಲ್ಲ ಬಿಚ್ಚಿಟ್ಟ ರಹಸ್ಯ. ಪಂಜಾಬ್ ನಲ್ಲಿ ಅಂದಾಜಿಸಲಾಗುತ್ತಿರುವ 700 ಕೋಟಿ ರುಪಾಯಿಗಳ ಡ್ರಗ್ ಮಾಫಿಯಾದಲ್ಲಿ ಬಾದಲ್ ಸಂಪುಟದಲ್ಲಿರುವ ಪ್ರಭಾವಿಗಳೇ ಭಾಗಿಯಾಗಿರುವ ಆರೋಪ ಆ ರಾಜ್ಯದಲ್ಲಿ ಪದೇ ಪದೆ ಕೇಳಿಬರೋದು ಸಹ ವಿಶೇಷ ವಿದ್ಯಮಾನ ಅಲ್ಲ.

‘ಪಾಕ್- ಪಂಜಾಬ್ ಮತ್ತು ಬಾಂಗ್ಲಾದೇಶ- ಪಶ್ಚಿಮ ಬಂಗಾಳ/ಅಸ್ಸಾಂ ಗಡಿಗಳಲ್ಲಿ ಬಿಎಸ್ ಎಫ್ ಭ್ರಷ್ಟಾಚಾರ ಹತ್ತಿಕ್ಕಲೇಬೇಕು. ಅದು ಪರಿಹಾರವಾಗುವುದಕ್ಕಿಂತ ಸಮಸ್ಯೆಯೇ ಆಗುತ್ತಿದೆ.’ ವಿಶ್ಲೇಷಕ ಅಶೋಕ್ ಮಲಿಕ್ ಟ್ವೀಟ್.

tw

ಇದೇ  ಮಾದಕ ದ್ರವ್ಯದ ದಾರಿ ಬಳಸಿಕೊಂಡೇ ಉಗ್ರರಿಗೆ ಪಠಾಣ್ ಕೋಟ್ ದಾಳಿ ನಡೆಸಲು ಶಕ್ಯವಾಯಿತೇ? ಅಡ್ಡಾದಿಡ್ಡಿ ಗುಂಡು ಹಾರಿಸಿ ನೂರು ಜನರನ್ನು ಕೊಲ್ಲುವ ಕೆಲಸ ಜಿಹಾದಿ ಹುಚ್ಚನದು ಅಂತ ವ್ಯಾಖ್ಯಾನಿಸಬಹುದು. ಆದರೆ ವಾಯುನೆಲೆ ಒಳಗೆ ನುಗ್ಗಿ, ಮೂರು ದಿನಗಳ ಕಾಲ ದೇಶವನ್ನು ಆತಂಕದಲ್ಲಿ ನಿಲ್ಲಿಸುವುದಕ್ಕೆ ಪಕ್ಕಾ ಯೋಜನೆ- ಹಲವರ ಬೆಂಬಲಗಳೆಲ್ಲ ಬೇಕೇ ಬೇಕಾಗುತ್ತವೆ. ಪಠಾಣ್ ಕೋಟ್ ಹಿನ್ನೆಲೆಯಲ್ಲಿ ಪಂಜಾಬಿಗೆ ಇನ್ನಷ್ಟು ಬಿಎಸ್ ಎಫ್ ನಿಯೋಜನೆ ಬೇಕು ಅಂತ ಅಲ್ಲಿನ ಮುಖ್ಯಮಂತ್ರಿ ಕೇಳುತ್ತಿದ್ದಾರೆ. ಆದರೆ ಬಿಎಸ್ ಎಫ್ ನಲ್ಲೇ ಆತಂಕಕಾರಿ ಅಂಶಗಳಿರೋದು ಈಗ ನಿಚ್ಚಳವಾಗುತ್ತಿರುವ ಆಯಾಮ. ಇವನ್ನೆಲ್ಲ ದೇಶಭಕ್ತಿಯ ಭಾಷಣಗಳಲ್ಲಿ ಮುಚ್ಚಿಡುವುದಕ್ಕೆ ಹೋದರೆ ಕೊನೆಗೂ ಬೆಲೆ ತೆರಬೇಕಾದದ್ದು ಭಾರತವೇ. ಪಾಕಿಸ್ತಾನವನ್ನು ಪರಿ ಪರಿಯಾಗಿ ಬಯ್ಯುವುದರಲ್ಲಿ ತೋರುತ್ತಿರುವ ಶ್ರಮದ ತುಸು ಭಾಗವನ್ನಾದರೂ ಸ್ವಂತದ ಅವಲೋಕನಕ್ಕೆ ತೋರಬೇಕಿದೆ ಭಾರತ.

Leave a Reply